ಕೋಟ್ಯಂತರ ರುಪಾಯಿ ಭ್ರಷ್ಟಾಚಾರ; ಸಚಿವರ ಒಎಸ್‌ಡಿ ವಿರುದ್ಧವೇ ಇಲಾಖೆ ಉಪ ನಿರ್ದೇಶಕರಿಂದ ದೂರು

ಬೆಂಗಳೂರು; ಅಧಿಕಾರಿ, ನೌಕರರ ವರ್ಗಾವಣೆ, ಮುಂಬಡ್ತಿ, ನಿಯಮಬಾಹಿರವಾಗಿ ನಿಯೋಜನೆ ಮಾಡಲು ಅಧಿಕಾರಿ ನೌಕರರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ವಿಶೇಷ ಕರ್ತವ್ಯಾಧಿಕಾರಿ ಬಿ ಹೆಚ್‌ ನಿಶ್ಚಲ್‌ ಎಂಬುವರು ಕೋಟ್ಯಂತರ ರುಪಾಯಿ ವಸೂಲಿ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೇ ಆರೋಪಿಸಿರುವುದು ಇದೀಗ ಬಹಿರಂಗವಾಗಿದೆ.

 

ಇಲಾಖೆಯಲ್ಲಿ ಉಪ ನಿರ್ದೇಶಕರಾಗಿರುವ ಎಸ್‌ ಪಿ ಪದ್ಮರಾಜು ಎಂಬುವರು ಇದೀಗ ಉಪ ಲೋಕಾಯುಕ್ತರಿಗೆ 2023ರ ನವೆಂಬರ್‍‌ 16ರಂದು (COMPT/UPLOK/BCD/6340/2023)ದೂರು ಸಲ್ಲಿಸಿದ್ದಾರೆ. ಅಲ್ಲದೇ ಇದೇ ದೂರನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಬಿ ಹೆಚ್‌ ನಿಶ್ಚಲ್‌ ಎಂಬುವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರಿಗೂ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು. ಇದೇ ನಿಶ್ಚಲ್‌ ಅವರನ್ನೇ ಈಗಿನ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರೂ ಸಹ ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿ ಮುಂದುವರೆಸಿದ್ದಾರೆ.

 

ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಲ್ಲಿದ್ದುಕೊಂಡೇ ಇಲಾಖೆಯಲ್ಲಿ ಪ್ರಮುಖವಾದ ಮೂರು ಹುದ್ದೆಗಳಲ್ಲಿಯೂ ಬಿ ಹೆಚ್‌ ನಿಶ್ಚಲ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂರೂ ಹುದ್ದೆಗಳ ಪ್ರಭಾವದಿಂದ ಗುತ್ತಿಗೆದಾರರು ಮತ್ತು ಖಾಸಗಿ ವ್ಯಕ್ತಿಗಳಿಂದಲೂ ಕೋಟ್ಯಂತರ ರುಪಾಯಿ ವಸೂಲಿ ಮಾಡುತ್ತಿದ್ದಾರೆ ಎಂಬುದು ಉಪ ನಿರ್ದೇಶಕ ಎಸ್‌ ಪಿ ಪದ್ಮರಾಜು ಅವರು ಸಲ್ಲಿಸಿರುವ ದೂರಿನಿಂದ ಗೊತ್ತಾಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಮತ್ತು ಇವರ ಸೋದರ ಹಾಗೂ ವಿಧಾನಪರಿಷತ್‌ನ ಹಾಲಿ ಸದಸ್ಯ ಬಿ ಎಸ್‌ ಹಟ್ಟಿಹೊಳಿ ಅವರ ಹೆಸರನ್ನೂ ಮುಂದಿರಿಸಿ ನಿರಂತರವಾಗಿ ಹಣ ವಸೂಲಿಗಿಳಿದಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

 

ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ

 

ಸಾರ್ವತ್ರಿಕ ವರ್ಗಾವಣೆಯಲ್ಲಿ ಸರ್ಕಾರದ ಸುತ್ತೋಲೆ, ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ನಿಶ್ಚಲ್‌ ಅವರು ಉಲ್ಲಂಘಿಸುವ ಮೂಲಕ ಕೋಟ್ಯಂತರ ರುಪಾಯಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸರ್ಕಾರದ ವರ್ಗಾವಣೆ ಮಾರ್ಗಸೂಚಿಯಲ್ಲಿ ಒಂದು ವೃಂದದ ಕಾರ್ಯನಿರತ ಸಂಖ್ಯೆಗೆ ಅನುಗುಣವಾಗಿ ಶೇ. 6ಕ್ಕೆ ಮೀರದಂತೆ ವರ್ಗಾವಣೆ ಮಾಡಲು ಸೂಚನೆ ಇದೆ. ಆದರೆ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ನಿಶ್ಚಲ್‌, ಸಚಿವರಿಗೆ ತಪ್ಪು ಸಲಹೆ ನೀಡಿ ಶೇ.6ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆ ಮಾಡಿಸಿದ್ದಾರೆ. ಇದು ನಿಯಮಗಳ ಉಲ್ಲಂಘನೆ ಎಂದು ದೂರುದಾರ ಉಪ ನಿರ್ದೇಶಕ ಎಸ್‌ ಪಿ ಪದ್ಮರಾಜು ಅವರು ಆರೋಪಿಸಿದ್ದಾರೆ.

 

‘ವರ್ಗಾವಣೆಗೆ ಅರ್ಹತೆ ಇಲ್ಲದಿದ್ದರೂ ಸಹ ಲಂಚ ಪಡೆದು ಅನೇಕ ಅಧಿಕಾರಿ, ನೌಕರರನ್ನು ವರ್ಗಾವಣೆ ಮಾಡಿಸಿದ್ದಾರೆ. ಅವಧಿ ಪೂರ್ವ ವರ್ಗಾವಣೆಯಿಂದ ತೊಂದರೆಗೆ ಒಳಗಾದ ಅಧಿಕಾರಿ, ಸಿಬ್ಬಂದಿಗಳು ಹಣ ನೀಡದೇ ಇದ್ದಲ್ಲಿ ಅವರನ್ನು ಹಲವು ತಿಂಗಳುಗಳ ಕಾಲ ಸ್ಥಳ ನಿಯುಕ್ತಿಗೊಳಿಸದೇ ಸತಾಯಿಸಲಾಗುತ್ತಿದೆ. ಸ್ವಂತ ವೇತನ ಶ್ರೇಣಿಯಲ್ಲಿ ಮೇಲಿನ ದರ್ಜೆಯ ಹುದ್ದೆಗಳಿಗಗೆ ನಿಯಮಬಾಹಿರವಾಗಿ ನಿಯೋಜನೆ ಮಾಡಿಸಿದ್ದಾರೆ,’ ಎಂದು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 

ವರ್ಗಾವಣೆಗೆ ಸಿಎಂ ಪೂರ್ವಾನುಮತಿಯೇ ಇಲ್ಲ

 

ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದಿದ್ದರೂ ಅವಧಿ ಪೂರ್ವ ವರ್ಗಾವಣೆ ಮಾಡಿರುವ ಪ್ರಕರಣಗಳ ವಿವರಗಳನ್ನೂ ಪದ್ಮರಾಜು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವರ್ಗಾವಣೆಗಳನ್ನು ನಿಯಮಾನುಸಾರ ಇಲಾಖೆ ನಿರ್ದೇಶಕರು ಮತ್ತು ಕಾರ್ಯದರ್ಶಿ ಮುಖಾಂತರ ಕಡತದಲ್ಲಿ ಪ್ರಸ್ತಾವನೆಗಳನ್ನು ಪಡೆದು ಇಲಾಖೆ ಸಚಿವರಿಂದ ಅನುಮೋದನೆ ಪಡೆದು ಸಲ್ಲಿಸಬೇಕು. ಅಲ್ಲದೇ ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ತದನಂತರ ಆದೇಶಗಳನ್ನು ಹೊರಡಿಸಬೇಕು.

 

ಆದರೆ ನಿಶ್ಚಲ್‌ ಅವರು ಈ ಪ್ರಕ್ರಿಯೆಯನ್ನು ಉಲ್ಲಂಘಿಸಿ ತಾವೇ ಸ್ವತಃ ಕಡತಗಳನ್ನು ಸಿದ್ಧಪಡಿಸಿದ್ದಾರೆ. ಈ ಕಡತಗಳಿಗೆ ಸಚಿವರಿಂದಲೇ ನೇರವಾಗಿ ಅನುಮೋದಿಸಿ ವರ್ಗಾವಣೆ ಮಾಡುವಂತೆ ಸಂಬಂಧಪಟ್ಟ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ವರ್ಗಾವಣೆ ಮತ್ತು ಮುಂಬಡ್ತಿ ಹಗರಣದಲ್ಲಿ ಗ್ರೂಪ್‌ ಡಿ ನಿಂದ ಹಿಡಿದು ಗ್ರೂಪ್‌ ಎ ಅಧಿಕಾರಿಗಳವರೆಗೆ ಕನಿಷ್ಟ 02 ಲಕ್ಷ ರು.ಗಳಿಂದ 80 ಲಕ್ಷ ರು. ದವರೆಗೆ ಲಂಚದ ರೂಪದಲ್ಲಿ ಹಣ ಪಡೆದು ಕೋಟ್ಯಂತರ ರುಪಾಯಿ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

‘ವರ್ಗಾವಣೆ ಮತ್ತು ಮುಂಬಡ್ತಿಗಳಿಗೆ ಲಕ್ಷಾಂತರ ರುಪಾಯಿ ಹಣ ನೀಡಿ ಸ್ಥಳ ನಿಯುಕ್ತಿಗೊಳಿಸುತ್ತಿದ್ದಾರೆ. ಇಲಾಖೆಯಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬಡ್ತಿ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಅರ್ಹ ಅಧಿಕಾರಿ, ನೌಕರರಿಗೆ ಮುಂಬಡ್ತಿ ಸಿಗದಂತಾಗಿದೆ. ಉದಾಹರಣೆಗೆ ದಲಿತ ಅಧಿಕಾರಿಯಾಗಿರುವ ಪಾಪಬೋವಿ ಎಂಬುವರಿರು ಜಂಟಿ ನಿರ್ದೇಶಕರಹುದ್ದೆಗೆ ಅರ್ಹತೆ ಇದ್ದರೂ ಸಹ ನಿವೃತ್ತಿ ಅಂಚಿನಲ್ಲಿದ್ದರೂ ಸಹ ಹಣ ನೀಡದ ಕಾರಣ ಅವರಿಗೆ ಮುಂಬಡ್ತಿ ನೀಡಿಲ್ಲ. ಹೀಗಾಗಿ ಮುಂಬಡ್ತಿಯಿಂದಲೇ ವಂಚನೆಗೊಳಗಾಗಿ ಕಡೆಯಲ್ಲಿ ನಿವೃತ್ತಿ ಹೊಂದಿದ್ದಾರೆ,’ ಎಂದು ದೂರಿನಲ್ಲಿ ನಿದರ್ಶನವನ್ನು ಒದಗಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಮಂಜುನಾಥ್‌ ಎಂಬುವರು ಹಿರಿಯ ಸಹಾಯಕ ನಿರ್ದೇಶಕರಿಂದ ಉಪ ನಿರ್ದೇಶಕರ ಹುದ್ದೆಗೆ ಅರ್ಹರಿದ್ದರೂ ಸಹ ಹಣ ನೀಡದ ಕಾರಣ ಮುಂಬಡ್ತಿ ನೀಡದೇ ವಿಳಂಬ ಮಾಡಿದ್ದಾರೆ. ಅಲ್ಲದೆ ಅವರಿಗೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಲ್ಪಾವಧಿಯಲ್ಲಿ ಹಲವು ಬಾರಿ ವರ್ಗಾವಣೆ ಮಾಡಿ ವಿಜಯನಗರ ಜಿಲ್ಲೆಗೆ ಉಪ ನಿರ್ದೇಶಕರ ಹುದ್ದೆಗೆ ನಿಯುಕ್ತಿಗೊಳಿಸಿ ನಂತರ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗಿಂತ ಕಿರಿಯ ಅಧಿಕಾರಿಗೆ ಉಪ ನಿರ್ದೇಶಕರ ಹುದ್ದೆಗೆ ಪ್ರಭಾರ ನೀಡಿ ಇವರಿಗೆ ಮುಂಬಡ್ತಿ ಮತ್ತು ಸ್ಥಳ ನಿಯುಕ್ತಿಗೊಳಿಸದೇ ಅತಂತ್ರ ಸ್ಥಿತಿಯಲ್ಲಿಟ್ಟಿದ್ದಾರೆ ಎಂಬ ಸಂಗತಿಯನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

‘ಯಾವುದೇ ಕ್ರಿಮಿನಲ್‌ , ಇಲಾಖೆ ವಿಚಾರಣೆಗಳು ಬಾಕಿ ಇಲ್ಲದಿದ್ದರೂ ಸಹ ನಿಯಮಾನುಸಾರ ಅರ್ಹವಿರುವ 3 ಮುಂಬಡ್ತಿ ಮತ್ತು ಸ್ಥಳ ನಿಯುಕ್ತಿಗಾಗಿ ಮನವಿ ಸಲ್ಲಿಸಿದ್ದರೂ 50 ಲಕ್ಷ ರು. ನೀಡದ ಕಾರಣ ಇದುವರೆಗೂ ನ್ಯಾಯಯುತ ಮುಂಬಡ್ತಿ ಮತ್ತು ಸ್ಥಳ ನಿಯುಕ್ತಿಗೊಳಿಸಿಲ್ಲ,’ ಎಂದು ಉಪ ನಿರ್ದೇಶಕ ಪದ್ಮರಾಜು ಅವರು ನೇರವಾಗಿ ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.

 

ಪಿಎಫ್‌ಎಂಎಸ್‌ ಮಾರ್ಗಸೂಚಿಯೂ ಉಲ್ಲಂಘನೆ

 

ಪಿಎಫ್‌ಎಮ್‌ಎಸ್‌ ಮಾರ್ಗಸೂಚಿ ಮೂಲಕ ಇಡೀ ರಾಜ್ಯದ ಪೌಷ್ಠಿಕ ಆಹಾರ ಮತ್ತು ಇತರೆ ಬಿಲ್‌ಗಳ ಮೇಲು ಸಹಿ ಮಾಡುವ ಸಂಬಂಧ ಅಪಾರ ಪ್ರಮಾಣದಲ್ಲಿ ಹಣ ವಸೂಲಿ ಮತ್ತು ಅವ್ಯವಹಾರ ಎಸಗಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

69,000 ಅಂಗನವಾಡಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಇದರ ವಾರ್ಷಿಕ ಅನುದಾನ ಸುಮಾರು 2,000 ಕೋಟಿ ರು.ಗಳಷ್ಟಿದೆ. ಆಹಾರ ವಿತರಣೆ ಮಾಡುವ ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಯದ್ದು. ಅಲ್ಲದೇ ಈ ಸಂಬಂಧ ಬಿಲ್‌ ಮಾಡುವ ಅಧಿಕಾರವು ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ್ದು. ಆದರೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ್‌ ಅವರ ಪ್ರಭಾವದಿಂದ ಈ ಅಧಿಕಾರವನ್ನು ಇಲಾಖೆಯೇ ಹಿಂಪಡೆದಿದೆ ಎಂಬ ಸಂಗತಿಯನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

ಅಧಿಕಾರ ಹಿಂಪಡೆದಿರುವುದರ ಹಿಂದೆ ಇದೆಯೇ ಕಮಿಷನ್‌ ವ್ಯವಹಾರ?

 

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಿಲ್‌ ತಯಾರಿಸಿ ಮೇಲು ಸಹಿಗಾಗಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿದ್ದ ಅಧಿಕಾರವನ್ನು ಹಿಂಪಡೆದಿರುವುದರ ಹಿಂದೆ ಕಮಿಷನ್‌ ವ್ಯವಹಾರವೂ ಇದೆ ಎಂದು ದೂರಿನಲ್ಲಿ ಪದ್ಮರಾಜು ಅವರು ಪ್ರಸ್ತಾವಿಸಿದ್ದಾರೆ. ಅಲ್ಲದೇ ಇವರ ವಿರುದ್ಧ ದೂರುಗಳಿದ್ದರೂ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇದೇ ಹುದ್ದೆಯಲ್ಲಿಯೇ ಮುಂದುವರೆಸಿದರೆ ಸಾಕ್ಷ್ಯ, ದಾಖಲೆಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ನಿಶ್ಚಲ್‌ ಅವರನ್ನು ಸರ್ಕಾರಿ ಸೇವೆಯಿಂದಲೇ ಅಮಾನತುಗೊಳಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದೂ ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

 

‘ಬಿಲ್‌ಗಳ ಕಮಿಷನ್‌ ಪಡೆಯುವ ದೃಷ್ಟಿಯಿಂದ ಕೇಂದ್ರ ಕಚೇರಿಯ ಬಿ ಹೆಚ್‌ ನಿಶ್ಚಲ್‌ ಮತ್ತು ಐಸಿಡಿಎಸ್‌ ವಿಭಾಗದ ಎಲ್ಲರೂ ಸೇರಿ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಧಿಕಾರ ಕೇಂದ್ರೀಕರಿಸಿಕಂಡು ಬಿಲ್‌ ತಯಾರಿಸುವ ಜವಾಬ್ದಾರಿಯನ್ನು ಜಿಲ್ಲಾ ಉಪ ನಿರ್ದೇಶಕರಿಗೆ ಕೊಟ್ಟು ಮೇಲು ಸಹಿ ಮಾಡುವ ಅಧಿಕಾರವನ್ನು ಇಲಾಖೆಯ ನಿರ್ದೇಶಕರಲ್ಲಿಯೇ ಇರುವಂತೆ ಮಾಡಿರುತ್ತಾರೆ. ಇದು ಸರಬರಾಜುದಾರರಿಂದ ಕಮಿಷನ್‌ ಪಡೆಯುವ ದುರುದ್ದೇಶ ಹೊಂದಿದೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts