ಕಿರ್ಲೋಸ್ಕರ್‌ನಿಂದ 29 ಎಕರೆ ಸರ್ಕಾರಿ ಜಮೀನು ಪರಭಾರೆ; ಸರ್ಕಾರದ ವಶಕ್ಕೆ ಪಡೆಯಲು ಮೀನಮೇಷ

ಬೆಂಗಳೂರು; ಕೈಗಾರಿಕೆ ಉದ್ದೇಶಕ್ಕಾಗಿ ಮಂಜೂರಾಗಿದ್ದ ಸರ್ಕಾರಿ ಜಮೀನಿನ ಪೈಕಿ 29 ಎಕರೆ 20 ಗುಂಟೆ ಜಮೀನನ್ನು ಕಿಲೋಸ್ಕರ್‌ ಎಲೆಕ್ಟ್ರಿಕಲ್‌ ಕಂಪನಿಯು ಷರತ್ತುಗಳನ್ನು ಉಲ್ಲಂಘಿಸಿ ಮತ್ತೊಂದು ಖಾಸಗಿ ಕಂಪನಿಗೆ ಪರಭಾರೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಕಾನೂನುಬಾಹಿರವಾಗಿ ಜಮೀನು ಪರಭಾರೆ ಮಾಡಿ ಷರತ್ತುಗಳನ್ನು ಉಲ್ಲಂಘಿಸಿರುವ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ಪ್ರಾಧಿಕಾರದ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದರೂ ಕಳೆದ ಒಂದು ವರ್ಷದಿಂದ ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ಕಂದಾಯ ಇಲಾಖೆಯು ಕಾಲಹರಣ ಮಾಡುತ್ತಿದೆಯೇ ವಿನಃ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಶಂಕರಪಾಟೀಲ ಮುನೇನಕೊಪ್ಪ ಅವರೇ ನೇರವಾಗಿ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಕಂದಾಯ ಇಲಾಖೆಯು ಇದೀಗ ಕಾನೂನು ಇಲಾಖೆಯ ಅಭಿಪ್ರಾಯ ಕೋರಿ ಪತ್ರ ಬರೆದಿದೆ. ಈ ಸಂಬಂಧ ಟಿಪ್ಪಣಿ (RD/56/LDG/2022 Computer number 821088) ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಹುಬ್ಬಳ್ಳಿ ತಾಲೂಕು ರಾಯನಾಳ ಗ್ರಾಮದ ಸರ್ವೆ ನಂಬರ್‌ 88 ಬ ದಲ್ಲಿ 80 ಎಕರೆ 27 ಗುಂಟೆ, ಸರ್ವೆ ನಂಬರ್‌ 89ರಲ್ಲಿ 8 ಎಕರೆ 36 ಗುಂಟೆ ಸರ್ಕಾರಿ ಜಮೀನು ಕಿರ್ಲೋಸ್ಕರ್‌ ಎಲೆಕ್ಟ್ರಿಕಲ್‌ ಕಂಪನಿಗೆ ಮಂಜೂರಾಗಿತ್ತು. ಈ ಜಮೀನಿನ ಪೈಕಿ 29 ಎಕರೆ 20 ಗುಂಟೆ ಜಮೀನನ್ನು ಮಾರ್ವೆಲ್‌ ಪ್ರಾಪರ್ಟಿಸ್‌ ಮತ್ತು ಆಸ್ಮಾಕಂ ಇನ್‌ ಫ್ರಾ ಪ್ರೊಜೆಕ್ಟ್‌ ಪ್ರೈವೈಟ್‌ ಲಿಮಿಟೆಡ್‌ಗೆ ಷರತ್ತು ಉಲ್ಲಂಘಿಸಿ ಮಾರಾಟ ಮಾಡಲಾಗಿದೆ ಎಂದು ಶಂಕರ ಪಾಟೀಲ್‌ ಮುನೇನಕೊಪ್ಪ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

 

‘ಕಂಪನಿಯವರು ಷರತ್ತುಗಳನ್ನು ಉಲ್ಲಂಘಿಸಿ ಪರಭಾರೆ ಮಾಡಿದ್ದು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸಿರುತ್ತದೆ. ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು,’ ಎಂದು ದೂರಿನಲ್ಲಿ ವಿವರಿಸಿದ್ದರು.

 

ಆದರೆ ಮಾರ್ವೇಲ್‌ ಪ್ರಾಪರ್ಟಿಸ್‌ ಮತ್ತು ಆಸ್ಮಾಕಂ ಇನ್‌ ಫ್ರಾ ಪ್ರೊಜೆಕ್ಟ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ತಮ್ಮ ಹೆಸರಿಗೆ ಪರಭಾರೆ ಮಾಡಿರುವ ಜಮೀನು ಸಂಬಂಧ ಯಾವುದೇ ಷರತ್ತುಗಳು ಉಲ್ಲಂಘನೆಯಾಗಿಲ್ಲ ಎಂದು ಪ್ರತಿಪಾದಿಸಿತ್ತು.

 

ಶಂಕರ ಪಾಟೀಲ ಮುನೇಕೊಪ್ಪ ಅವರು ಮಾಡಿದ್ದ ಆರೋಪ ಮತ್ತು ಕಂಪನಿಯ ಸಮರ್ಥನೆಯನ್ನು ಪರಿಶೀಲಿಸಿರುವ ಕಂದಾಯ ಇಲಾಖೆಯು ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

‘ಈ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಪರಭಾರೆ ಮಾಡಲು ಶಾಮೀಲಾಗಿರುವ ಹುಬ್ಬಳ್ಳಿ ಧಾರವಾಡ ಪ್ರಾಧಿಕಾರದ ಅಧಿಕಾರಿ, ನೌಕರರು ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳ ವಿವರಗಳನ್ನು ಪಡೆಯುವುದು ಸೂಕ್ತವಾಗಿರುತ್ತದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಹೀಗಾಗಿ ಕಾಂಗ್ರೆಸ್‌ ಸರ್ಕಾರವು ಇದೀಗ ಅಭಿಪ್ರಾಯ ಕೋರಿ ಕಾನೂನು ಇಲಾಖೆಗೆ ಕಡತ ಕಳಿಸಿದೆ ಎಂದು ಗೊತ್ತಾಗಿದೆ.

 

ಪ್ರಕರಣದ ವಿವರ

 

ಕಿರ್ಲೋಸ್ಕರ್‌ ಎಲೆಕ್ಟ್ರಿಕಲ್‌ ಕಂಪನಿ ಲಿಮಟಿಎಡ್‌ ಯುನಿಟ್‌ -2 ಗೆ ಹುಬ್ಬಳ್ಳಿ ತಾಲೂಕು ರಾಯನಾಳ ಗ್ರಾಮದ ಸರ್ವೆ ನಂಬರ್‌ 88/ಬ ರಲ್ಲಿ 81 ಎಕರೆ 12 ಗುಂಟೆ ಹಾಊ ಹಾಗೂ ಸರ್ವೆ ನಂಬರ್‌ 89ರಲ್ಲಿ 8 ಎಕರೆ 26 ಗುಂಟೆ ಜಮೀನುಗಳನ್ನು ಕೈಗಾರಿಕೆ ಉದ್ದೇಶಕ್ಕಾಗಿ 1965ರಲ್ಲಿ ಸರ್ಕಾರವು ಮಂಜೂರು ಮಾಡಿತ್ತು. ಮೂಲತಃ ಈ ಜಮೀನು ಸರ್ಕಾರಿ ಬಿ ಖರಾಬು ಆಗಿತ್ತು. ಅಲ್ಲದೇ 11 ಜನರಿಗೆ ಕೃಷಿಗಾಗಿ ಮಂಜೂರು ಮಾಡಿದ್ದ ಜಮೀನಾಗಿತ್ತು.

 

ಹುಬ್ಬಳ್ಳಿ ಧಾರವಾಡದ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಈ 11 ಜನ ರೈತರಿಂದ ಹಕ್ಕು ಬಿಟ್ಟ ಪತ್ರ ಪಡೆದು ಅವರಿಗೆ ಬೇರೆಡೆಗೆ ಜಮೀನು ಮಂಜೂರು ಮಾಡಿ, ಕಿರ್ಲೋಸ್ಕರ್‌ ಗೆ ಕೈಗಾರಿಕೆ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಿತ್ತು.

 

‘ಮಂಜೂರಾದ ಜಮೀನಿನ ಆದೇಶದಲ್ಲಿ The Grantee Should Not alienate the land for a periorof 15 years fromd the date of this order ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು 15 ವರ್ಷಗಳ ನಂತರ ಪ್ರತಿ ಎಕರೆಗೆ 2,000 ರು.ನಂತೆ ಭರಣ ಮಾಡಿದ್ದರಿಂದ ಪರಭಾರೆ ಮಾಡಿದ್ದರಿಂದ ಪರಭಾರೆ ಮಾಡಬಾರದೆಂಬ ಷರತ್ತನ್ನು ಕಡಿಮೆ ಮಾಡಲು ಕಂಪನಿಯು ಕೋರಿಕೆ ಸಲ್ಲಿಸಿತ್ತು,’ ಎಂಬುದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ವರದಿಯಿಂದ ಗೊತ್ತಾಗಿದೆ.

 

ಷರತ್ತನ್ನು ಕಡಿಮೆ ಮಾಡಲು ಸಲ್ಲಿಸಿದ್ದ ಕಂಪನಿಯ ಕೋರಿಕೆಯನ್ನು ಪರಿಶೀಲಿಸಿದ್ದ ಜಿಲ್ಲಾಡಳಿತವು ಬಿನ್‌ ಶೇತ್ಕಿ (02-07-1965) ಆದೇಶ ಮಾಡಿತ್ತು. ಆದರೆ ಕಂಪನಿಯು ಅವಧಿ ಮುಗಿದ ನಂತರವೂ ಭೂ ಮೌಲ್ಯವನ್ನು ಪಾವತಿಸಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

1983 ಮತ್ತು 1988ರಲ್ಲಿ ನಗರ ಭೂ ಪರಿಮಿತಿ ಕಾಯ್ದೆ ಜಾರಿಗೆ ಬಂದಿದ್ದರಿಂದ 1982ರ ಡಿಸೆಂಬರ್‌ 9ರ ಆದೇಶ ಹಾಗೂ 1988ರ ಮಾರ್ಚ್‌ 2ರಂದು ಆದೇಶದ ಅನ್ವಯ ಕೈಗಾರಿಕೆ ಉದ್ಧೇಶಕ್ಕಾಗಿ ಮುಂದುವರೆಸಲು ವಿನಾಯಿತಿ ನೀಡಲಾಗಿತ್ತು. ನಂತರ ಕಂಪನಿಯ ಕೋರಿಕೆ ಮೇರೆಗೆ 2015ರ ಅಕ್ಟೋಬರ್‌ 28ರಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು 80 ಎಕರೆ 27 ಗುಂಟೆ ಜಮೀನಿನ ಪೈಕಿ 20 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶದಿಂದ ವಸತಿ ಉದ್ದೇಶಕ್ಕಾಗಿ ಭೂ ಉಪಯೋಗ ಬದಲಾವಣೆ ಮಾಡಿ ಆದೇಶ ಹೊರಡಿಸಿತ್ತು.

 

ಇದಾದ ನಂತರ ಜಿಲ್ಲಾಧಿಕಾರಿಗಳು 2017ರ ಜೂನ್‌ 8ರಂದು ಮತ್ತೊಂದು ಪತ್ರವನ್ನು ಬರೆದಿದ್ದರು.ಕಂಪನಿಯ ಕೋರಿಕೆ ಮೇರೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದ್ದರು. ಅದರಂತೆ 2017ರ ಆಗಸ್ಟ್‌ 3 ಮತ್ತು 2017ರ ಸೆ.20ರಂದು ಸರ್ಕಾರವು ಕಂಪನಿಯ ಷರತ್ತು ಉಲ್ಲಂಘನೆಯಾಗಿರುವ ಬಗ್ಗೆ ನೋಟೀಸ್‌ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.

 

ಸರ್ಕಾರದ ಈ ನಿರ್ದೇಶನವನ್ನು ಪ್ರಶ್ನಿಸಿದ್ದ ಕಿರ್ಲೋಸ್ಕರ್‌ ಕಂಪನಿಯು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಅರ್ಜಿ (ಡಬ್ಲ್ಯೂಪಿ ನಂ 106705/2019) ದಾಖಲಿಸಿತ್ತು. ಕಿರ್ಲೋಸ್ಕರ್‌ ಕಂಪನಿಯು ದಾಖಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಅರ್ಜಿದಾರರು ದಾಖಲಿಸಿದ ಪ್ರಕರಣವು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯುವುದಕ್ಕಾಗಿ ಮಾತ್ರ ಇದೆ. ಈ ಜಮೀನನ್ನು ಮಾರಾಟ ಮಾಡಲು ಅನುಮತಿ ನೀಡಲು ಕೋರುವುದಕ್ಕಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅಲ್ಲದೇ ಜಮೀನಿನ ಮಾರಾಟಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂದು ನಿರ್ದೇಶನ ನೀಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅದರಂತೆ ಕಂಪನಿಯು 2016ರ ಜೂನ್‌ 15ರಂದು ವಸತಿ ವಿನ್ಯಾಸ ಅನುಮೋದನೆಗಾಗಿ ಪ್ರಾಧಿಕಾರದ ಆಯುಕ್ತರಿಗೆ ವಿನಂತಿಸಿತ್ತು. ಜಿಲ್ಲಾಧಿಕಾರಿಗಳಿಂದ ವಸತಿ ಉದ್ದೇಶಕ್ಕಾಗಿ ಬಿನ್‌ ಶೇತ್ಕಿ ಆದೇಶದ ಉದ್ದೇಶ ಬದಲಾವಣೆ ಆದೇಶದ ಪ್ರತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹಿಂಬರಹ ನೀಡಿದ್ದರು. ಹೀಗಾಗಿ ಕಂಪನಿಯು ಹುಬ್ಬಳ್ಳಿ ಧಾರವಾಡ ಪ್ರಾಧಿಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಪಿಟೀಷನ್‌ ಅರ್ಜಿ ದಾಖಲಿಸಿತ್ತು.

210 ಎಕರೆ ಸರ್ಕಾರಿ ಜಮೀನು ಮಾರಾಟ, 1,000 ಕೋಟಿ ನಷ್ಟ; ವರದಿ ಸಲ್ಲಿಸಲು ನಿರ್ದೇಶನ

ಈ ವೇಳೆ ‘ ಪ್ರಸ್ತಾಪಿತ ಜಮೀನನ್ನು ಹುಬ್ಬಳ್ಳಿ ಧಾರವಾಡ ಜನತೆಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ನೀಡಲಾಗಿದೆಯೇ ವಿನಃ ರಿಯಲ್‌ ಎಸ್ಟೇಟ್‌ ಉದ್ಯಮಕ್ಕಾಗಿ ನೀಡಿಲ್ಲ,’ ಎಂದು ಸರ್ಕಾರಿ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಹೀಗಾಗಿ ಈ ಸಂಬಂಧ ಸರ್ಕಾರದ ಮಟ್ಟದಲ್ಲಿಯೇ ಸೂಕ್ತ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು.

 

ಹಾಗೆಯೇ ಮಂಜೂರಾತಿ ಆದೇಶದಲ್ಲಿನ ಷರತ್ತುಗಳು ಮತ್ತು ವಿನಾಯಿತಿ ಆದೇಶದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿ ಜಮೀನನ್ನು ಬಡಾವಣೆಗಳನ್ನಾಗಿ ಮಾಡಿ ವಸತಿ ಉದ್ದೇಶಕ್ಕೆ ಉಪಯೋಗಿಸಲು ಭೂ ಉಪಯೋಗ ಬದಲಾವಣೆ ಮಾಡಿಕೊಂಡಿದೆ. ಹಾಗೂ ಈಗಾಗಲೇ 29 ಎಕರೆ 20 ಗುಂಟೆ ಜಮೀನನ್ನು ಮಾರಾಟ ಮಾಡಿರುವದುರಿಂದ ಬಾಕಿ ಉಳಿದಿರುವ ಜಮೀನನ್ನೂ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸರ್ವೆ ನಂಬರ್‌ 88 / ಬ ಮತ್ತು 89ರಲ್ಲಿನ ಜಮೀನುಗಳನ್ನು ಸರ್ಕಾರಕ್ಕೆ ಕೂಡಲೇ ವಶಕ್ಕೆ ಪಡೆಯಬೇಕು ಎಂದು ಪ್ರಾದೇಶಿಕ ಆಯುಕ್ತರು ಅಭಿಪ್ರಾಯ ನೀಡಿದ್ದರು.

the fil favicon

SUPPORT THE FILE

Latest News

Related Posts