210 ಎಕರೆ ಸರ್ಕಾರಿ ಜಮೀನು ಮಾರಾಟ, 1,000 ಕೋಟಿ ನಷ್ಟ; ವರದಿ ಸಲ್ಲಿಸಲು ನಿರ್ದೇಶನ

ಬೆಂಗಳೂರು; ಸುಮಾರು 210 ಎಕರೆ ವಿಸ್ತೀರ್ಣದ ಕೈಗಾರಿಕೆ ಜಮೀನುಗಳನ್ನು ಮೋಸದಿಂದ ಮಾರಾಟ ಮಾಡಿ ಸರ್ಕಾರಕ್ಕೆ 1,000 ಕೋಟಿ ರು. ನಷ್ಟವುಂಟು ಮಾಡಲಾಗಿದೆ ಎಂಬ ದೂರಿನ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.

 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಮೈಸೂರು ಕಿರ್ಲೋಸ್ಕರ್‌ ಕಂಪನಿಗೆ 1950ರಲ್ಲಿ 210 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು. ಆದರೆ ಆ ಜಮೀನುಗಳನ್ನು 2008ರಲ್ಲಿ ಮೋಸದಿಂದ ಮಾರಾಟ ಮಾಡಲಾಗಿದೆ ಎಂದು ಮಲ್ಲಾರಿ ಆರ್‌ ಎನ್‌ ಎಂಬುವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

 

ಈ ದೂರನ್ನಾಧರಿಸಿ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು 2022ರ ಸೆ.21ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸುಮಾರು 210 ಎಕರೆ ವಿಸ್ತೀರ್ಣದ ಕೈಗಾರಿಕೆ ಜಮೀನುಗಳನ್ನು 2008ರಲ್ಲಿ ಮೋಸದಿಂದ ಮಾರಿ ಸರ್ಕಾರಕ್ಕೆ ಸುಮಾರು 1,000 ಕೋಟಿ ನಷ್ಟ ಮಾಡಲಾಗಿದೆ. ಇದು 1894 ಭೂಸ್ವಾಧೀನ ಕಾಯ್ದೆ ಹಾಗೂ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಉಲ್ಲಂಘನೆ ಆಗಿದೆ. ಇದು ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು , ದಾವಣಗೆರೆ ಜಿಲ್ಲಾಧಿಕಾರಿ, ಉಪ ಆಯುಕ್ತರು, ಹರಿಹರ ನಗರದ ತಹಶೀಲ್ದಾರ್‌ ಇವರ ಕರ್ತವ್ಯಲೋಪ, ನಿರ್ಲಕ್ಷ್ಯತೆ ಕಂಡು ಬಂದಿದೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದೇ ದೂರನ್ನು ಕಂದಾಯ ಸಚಿವ ಆರ್‌ ಅಶೋಕ್‌ ಅವರಿಗೂ ಖುದ್ದು ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ಅಲ್ಲದೆ ‘ಈ ಸಂಬಂಧ ಹಲವಾರು ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಿಲ್ಲ. ಹಗರಣ ಮುಚ್ಚಿ ಹಾಕಲು ಕೋಟಿಗಟ್ಟಲೇ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಸರ್ಕಾರ ಜಮೀನುಗಳನ್ನು ವಶಪಡಿಸಿಕೊಳ್ಳಲು ವಿಫಲವಾದಲ್ಲಿ ರೈತರಿಗೆ ಜಮೀನುಗಳನ್ನು ವಾಪಸ್‌ ಕೊಡಿಸಬೇಕು ಅಥವಾ ಇಂದಿನ ಮಾರುಕಟ್ಟೆ ದರದಲ್ಲಿ ಪರಿಹಾರಕೊಡಬೇಕು,’ ಎಂದೂ ದೂರಿನಲ್ಲಿ ಕೋರಿದ್ದಾರೆ.

 

ಪ್ರಕರಣದ ವಿವರ

 

1941-42ರಲ್ಲಿ ಮೈಸೂರು ಸರ್ಕಾರವು 1894 ರ ಭೂಸ್ವಾಧೀನ ಕಾಯ್ದೆಯ ಸಾರ್ವಜನಿಕ ಉದ್ದೇಶದ ಷರತ್ತಿನಡಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಹರಿಹರ ಪಟ್ಟಣದಲ್ಲಿ (ಹಿಂದಿನ ಚಿತ್ರದುರ್ಗ) ಜಿಲ್ಲೆಯ ದಾವಣಗೆರೆ ಕರ್ನಾಟಕದಲ್ಲಿ ಸುಮಾರು 500 ಎಕರೆ ಕೃಷಿ ಭೂಮಿಯನ್ನು ಸಾರ್ವಜನಿಕರಿಂದ ಸ್ವಾಧೀನಪಡಿಸಿಕೊಂಡಿತ್ತು.

 

 

ಮೈಸೂರು ಸರ್ಕಾರ ಮತ್ತು ಮೈಸೂರ್‌ ಕಿರ್ಲೋಸ್ಕರ್ ಕಂಪೆನಿ ಲಿಮಿಟೆಡ್ ನಡುವಿನ ನಿಯಮಗಳು ಮತ್ತು ಷರತ್ತುಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಮತ್ತು ಈ ಒಪ್ಪಂದದ 6 ನೇ ಷರತ್ತಿನ ಪ್ರಕಾರ ಉದ್ಯಮವನ್ನು ಮುಚ್ಚುವ ಸಂದರ್ಭದಲ್ಲಿ ಎಲ್ಲಾ ಭೂಮಿ ಮತ್ತು ಕಟ್ಟಡಗಳನ್ನು ಸರ್ಕಾರವು ಪುನರಾರಂಭಿಸಬೇಕು ಎಂದು ಹೇಳಿದೆ.

 

 

ಈ ಪೈಕಿ ಸುಮಾರು 203 ಎಕರೆ ವಿಸ್ತೀರ್ಣದ ಭೂಮಿ ಮತ್ತು ಅದಲ್ಲಿರುವ ಕಟ್ಟಡಗಳು ಕಂಪನಿಯ ಒಡೆತನದಲ್ಲಿವೆ. ಮತ್ತು ಅವುಗಳನ್ನು ಸಾರ್ವಜನಿಕ ಹರಾಜಿನಿಂದ ಅಕ್ರಮವಾಗಿ ಮಾರಾಟ ಮಾಡಿದೆ ಎಂದು ಅಧಿಕೃತ ಲಿಕ್ವಿಡೇಟರ್ ಕರ್ನಾಟಕದ ಹೈಕೋರ್ಟ್‌ಗೆ ತಪ್ಪಾಗಿ ನಿರೂಪಿಸಿದ್ದಾರೆ ಮತ್ತು ಇದು ಕಾನೂನುಬಾಹಿರ ಎಂದಿರುವ ದೂರುದಾರರು ಗೆಜೆಟೆಡ್ ಒಪ್ಪಂದದ 6 ನೇ ಷರತ್ತುಗಳಲ್ಲಿ ಕಂಪನಿಯನ್ನು ಮುಚ್ಚಿದ ನಂತರ ಭೂಮಿ ಮತ್ತು ಕಟ್ಟಡಗಳನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

 

 

‘ಮೈಸೂರ್ ಕಿರ್ಲೋಸ್ಕರ್ ಕಂಪನಿಯ ಅಧಿಕೃತ ಲಿಕ್ವಿಡೇಟರ್ ಮತ್ತು ನಿರ್ವಹಣೆಯು ಈ ಒಪ್ಪಂದದ ಬಗ್ಗೆ ತಿಳಿದಿತ್ತು. ಆದರೆ ಕಾನೂನು ಉಲ್ಲಂಘಿಸಿರುವುದಲ್ಲದೇ ಮತ್ತು ಕರ್ನಾಟಕ ಸರ್ಕಾರಕ್ಕೆ ಮೋಸ ಮಾಡಿದೆ. ಅಧಿಕೃತ ಲಿಕ್ವಿಡೇಟರ್ ಕಾನೂನುಬಾಹಿರವಾಗಿ ಸುಮಾರು 156 ಎಕರೆಗಳನ್ನು ಮಾರಾಟ ಮಾಡಿ ನೋಂದಾಯಿಸಿದೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

 

ಕೋಟ್ಯಂತರ ರೂಪಾಯಿ ಮೌಲ್ಯದ ಕಟ್ಟಡಗಳನ್ನು ನೆಲಸಮಗೊಳಿಸುವ ಮತ್ತು ಕಟ್ಟಡಗಳಲ್ಲಿರುವ ಸ್ಕ್ರ್ಯಾಪ್ ಅನ್ನು ಹೊರಹಾಕುವುದು ಕಾನೂನುಬಾಹಿರವೆಂದು ಮಾರಾಟ ಸೂಚನೆಯಲ್ಲಿ ಸೇರಿಸಿದೆ. ಕಂಪನಿಯನ್ನು ಮುಚ್ಚಿದ ನಂತರ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಬೇಕಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಹಿಸಿಲ್ಲ.

 

 

ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನುಂಟಾಗಿದೆ. ಭೂಮಿ ಮತ್ತು ಕಟ್ಟಡಗಳು ಸರ್ಕಾರಿ ಮತ್ತು ಅಧಿಕೃತ ಲಿಕ್ವಿಡೇಟರ್‌ಗೆ ಸೇರಿದ್ದರೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಭೂಮಿ ಮತ್ತು ಕಟ್ಟಡಗಳು ಮಾರಾಟವಾಗಿ ನೋಂದಣಿಯೂ ಆಗಿವೆ.

 

 

40 ರಿಂದ 50 ವರ್ಷ ವಯಸ್ಸಿನ ಬಹು ಕೋಟಿ ಮೌಲ್ಯದ ಸಾವಿರಾರು ಮರಗಳನ್ನು   ನಿಜಿನಾಯ್  ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಉಚಿತವಾಗಿ ನೀಡಲಾಗಿದೆ. ಹಾಗೆಯೇ ನಿಜಿನಾಯ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಈ ಭೂಮಿಯನ್ನು (25/04/2011) ರಂದು ಮತ್ತೊಬ್ಬರಿಗೆ ಮರು ಮಾರಾಟ ಮಾಡಿದೆ.  ಮೈಸೂರ್‌ ಕಿರ್ಲೋಸ್ಕರ್ ಕಂಪನಿ ಲಿಮಿಟೆಡ್ ಹೆಸರಿನಲ್ಲಿ ಯಾವುದೇ ಖಾತೆ ಇಲ್ಲದಿದ್ದರೂ ಸಹ ಈ ಆಸ್ತಿಗಳನ್ನು ಹಲವು ಬಾರಿ ನೋಂದಾಯಿಸಲಾಗಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

 

 

2005 ರಲ್ಲಿ ಪ್ರಕರಣವೊಂದರಲ್ಲಿ ಅಧಿಕೃತ ಲಿಕ್ವಿಡೇಟರ್ ಇಲ್ಲದಿದ್ದರೆ ಎಲ್ಲಾ ನೋಂದಣಿಗಳು ಕಾನೂನುಬಾಹಿರ ಎಂದು ಹೈಕೋರ್ಟ್‌ ಹೇಳಿದ್ದರೂ ನೇರಾನೇರ ಉಲ್ಲಂಘಿಸಲಾಗಿದೆ. ಹರಿಹರ ಪುರಸಭೆಯು ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯದೆ ಕಾನೂನುಬಾಹಿರವಾಗಿ 156 ಎಕರೆ ಭೂಮಿಗೆ ಖಾತೆಗಳನ್ನುಮಾಡಿದೆ. ಅದೇ ರೀತಿ ದಾವಣಗೆರೆ ಮತ್ತು ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ಸರ್ವೆ ನಂಬರ್‌ 50ರಲ್ಲಿ ವಸತಿ ಬಡಾವಣೆ ವಿನ್ಯಾಸಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಿದೆ.ನಗರಾಭಿವೃದ್ಧಿ ಸಚಿವಾಲಯದಿಂದ ಅನುಮೋದನೆ ಇರದಿದ್ದರೂ ಕೈಗಾರಿಕಾ ಭೂಮಿಯಲ್ಲಿ  36 ಗುಂಟೆಯಲ್ಲಿ ವಸತಿ ಬಡಾವಣೆ ಕೆಲಸಗಳು ಪ್ರಾರಂಭವಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

 

1894 ರ ಸೆಕ್ಷನ್ 44 ಎ ಪ್ರಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಯಾವುದೇ ಭೂಮಿಯನ್ನು ವರ್ಗಾವಣೆ ಮಾಡಲು ಅಥವಾ ಮಾರಾಟ ಮಾಡಲು ನಿರ್ಬಂಧಿಸಿದೆ. ಆದರೂ ಇದನ್ನು ಉಲ್ಲಂಘಿಸಿ 203 ಎಕರೆ ಮತ್ತು ಅದರಲ್ಲಿರುವ ಕಟ್ಟಡಗಳನ್ನು ಮಾರಾಟ ಮಾಡಲಾಗಿದೆ. ಅರ್ಜಿದಾರರ ಆಕ್ಷೇಪಣೆಗಳು ಬಾಕಿ ಇರುವಾಗ, ಪ್ರತಿವಾದಿಗಳಿಗೆ ಕೈಗಾರಿಕಾ ಭೂಮಿಯಲ್ಲಿ ಸುಮಾರು 50 ಎಕರೆ ಮತ್ತು 36 ಗುಂಟೆ ವಿಸ್ತೀರ್ಣದ ಕೈಗಾರಿಕಾ ಭೂಮಿಯಲ್ಲಿ ವಸತಿ ವಿನ್ಯಾಸವನ್ನು ರೂಪಿಸಲು ಮತ್ತು ಕಾನೂನುಬಾಹಿರವಾಗಿ ಅನುಮೋದನೆ ನೀಡಿರುವುದು ಸರಿಯಲ್ಲ ಎಂದು ದೂರುದಾರರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

the fil favicon

SUPPORT THE FILE

Latest News

Related Posts