ಬೆಂಗಳೂರು; ರಾಜ್ಯದಲ್ಲಿ ಜೂನ್ 1ರಿಂದ ಸೆಪ್ಟಂಬರ್ 25ರವರೆಗೆ ಹೊರಡಿಸಿರುವ ಕೆಎಎಸ್ ಗ್ರೂಪ್ ಎ ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶಗಳು ‘ವೈಯಕ್ತಿಕ ಮಾಹಿತಿ’ ಎಂದು ಹೇಳಿರುವ ಕಾಂಗ್ರೆಸ್ ಸರ್ಕಾರವು ಆ ಎಲ್ಲಾ ಆದೇಶಗಳನ್ನು ರಹಸ್ಯವಾಗಿರಿಸಿದೆ.
ಸಿದ್ದರಾಮಯ್ಯ ಅವರು 2023ರ ಮೇನಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ದಿನದಿಂದಲೇ ಕೆಎಎಸ್ ಸೇರಿದಂತೆ ಇತರೆ ವೃಂದದ ಅಧಿಕಾರಿಗಳನ್ನು ನಿರಂತರವಾಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲದೇ ಈ ಎಲ್ಲಾ ಆದೇಶಗಳು ಅಧಿಕಾರಿಗಳ ವಲಯ ಮತ್ತು ಸಾರ್ವಜನಿಕವಾಗಿ ಲಭ್ಯವಾಗಿದ್ದವು. ಹಾಗೆಯೇ ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣದಲ್ಲಿಯೂ ಆದೇಶಗಳೆಲ್ಲವನ್ನೂ ಅಪ್‌ಲೋಡ್ ಮಾಡಿದೆ. ಆದರೀಗ ಇವೇ ವರ್ಗಾವಣೆ ಆದೇಶಗಳನ್ನು ಆರ್‍ಟಿಐ ಅಡಿಯಲ್ಲಿ ಒದಗಿಸಲು ನಿರಾಕರಿಸಿರುವ ಕಾಂಗ್ರೆಸ್ ಸರ್ಕಾರವು ಈ ಮಾಹಿತಿಯು ಅಧಿಕಾರಿಗಳ ವೈಯಕ್ತಿಕ ಮಾಹಿತಿಯಾಗಿರುತ್ತದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
2023ರ ಜೂನ್ 1ರಿಂದ ಸೆಪ್ಟಂಬರ್ 25ರವರೆಗೆ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿದ್ದ ಎಲ್ಲಾ ಆದೇಶಗಳಿಗಾಗಿ ‘ದಿ ಫೈಲ್’ 2023ರ ಸೆ.25ರಂದು ಆರ್‍ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ಆಕ್ಟೋಬರ್ 7ರಂದು ಉತ್ತರ ಒದಗಿಸಿದೆ. ವಿಶೇಷವೆಂದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಭಾಯಿಸುತ್ತಿದ್ದಾರೆ. ಹಾಗೆಯೇ ಕೆಎಎಸ್ ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಪಕ್ಷಗಳೂ ವಾಗ್ದಾಳಿ ನಡೆಸಿದ್ದವು.
ಉತ್ತರದಲ್ಲೇನಿದೆ?
ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ 2023ರ ಜೂನ್ 1ರಿಂದ 2023ರ ಸೆಪ್ಟಂಬರ್ 25ರವರೆಗೆ ಗ್ರೂಪ್ ಎ, ಬಿ ವೃಂದದ ಕೆಎಎಸ್ ಅಧಿಕಾರಿಗಳ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಒದಗಿಸುವಂತೆ ಕೋರಿರುತ್ತೀರಿ.
ಪ್ರಸ್ತುತ ಶಾಖೆಯಲ್ಲಿ ಕರ್ನಾಟಕ ಆಡಳಿತ ಸೇವೆಗೆ ಸಂಬಂಧಿಸಿದ ಗ್ರೂಪ್ ಎ ಅಧಿಕಾರಿಗಳ ಸೇವಾ ವಿಷಯವನ್ನು ಮಾತ್ರ ಪ್ರಸ್ತುತ ಶಾಖೆಯಲ್ಲಿ ನಿರ್ವಹಿಸಲಾಗುತ್ತಿದೆ. ತಾವು ಕೋರಿರುವ ಮಾಹಿತಿಯು ಅಧಿಕಾರಿಗಳ ವೈಯಕ್ತಿಕ ಮಾಹಿತಿಯಾಗಿರುತ್ತದೆ.
ಮಾಹಿತಿ ಆಯೋಗದ ಪ್ರಕರಣ ಸಂಖ್ಯೆ ಕಮಾಅ 10338 ಎಪಿಎಲ್ 2016, ದಿನಾಂಕ 3 0-10-2017ರ ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ 34085/2011, 08-07-2015 ಮತ್ತು ಸುಪ್ರೀಂ ಕೋರ್ಟ್‌ನ ಸಿವಿಲ್ ಅಪೀಲ್ ಸಂಖ್ಯೆ 22/2009 ಕೆನರಾ ಬ್ಯಾಂಕ್/ ಶ್ಯಾಮ್ ಮತ್ತಿತರರ ಪ್ರಕರಣದಲ್ಲಿ ಎಸ್‌ಎಲ್‌ಪಿ ಸಂಖ್ಯೆ 27734/2012ನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಉಲ್ಲೇಖಿಸಿದೆ.
ನೇಮಕಾತಿ ಆದೇಶ, ಬಡ್ತಿ, ಎಲ್ಲಾ ವರ್ಗಾವಣೆಯ ಆದೇಶಗಳು, ವೇತನ ವಿವರಗಳೂ, ಮೆಮೋ, ಇಪಿಎಫ್, ಹೂಡಿಕೆ ವಿವರಗಳು, ಕೊಡುಗೆಗಳ ವಿವರ, ಸ್ಥಿರ ಮತ್ತು ಚರಾಸ್ತಿ ವಿವರಗಳು, ದೋಷಾರೋಪಣೆ ಪಟ್ಟಿಯ ಪ್ರತಿ, ವಿಚಾರಣೆಯ ನಡವಳಿಗಳು ಇತ್ಯಾದಿಗಳು ಖಾಸಗಿಯದ್ದಾಗಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ ಎಂದು 2012ರಲ್ಲಿ ಹೊರಡಿಸಿದ್ದ ಆದೇಶವನ್ನು ಮುಂದಿರಿಸಿದೆ.
ಮಾಹಿತಿ ಹಕ್ಕು ಅಧಿನಿಯಮ 8(1)(ಜೆ)ಯಲ್ಲೇನಿದೆ?
ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಯ ಗೌಪ್ಯತೆಯನ್ನು ಅನಗತ್ಯವಾಗಿ ಆಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭಾನುಸಾರ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಿಗೆ ಅಂತ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾದ ಹೊರತು ಅಂಥ ಮಾಹಿತಿಯನ್ನು ಒದಗಿಸಲು ಯಾವುದೇ ಬಾಧ್ಯತೆ ಇರತಕ್ಕದ್ದಲ್ಲ ಎಂದು ಹೇಳಿದೆ.
ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಳಿ ಬಂದಿದ್ದ ಆರೋಪಗಳ ಸಂಬಂಧ ಕಾಸಿಗಾಗಿ ಪೋಸ್ಟಿಂಗ್ ಎಂದು ಜೆಡಿಎಸ್‌ನ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಸದನದ ಹೊರಗೆ ಮತ್ತು ಒಳಗೆ ಟೀಕಾಸ್ತ್ರಗಳನ್ನೇ ಎಸೆದಿದ್ದರು. ಇದು ವಿಧಾನಸಭೆ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ನಡುವೆ ವಾಕ್ಸಮರವೇ ನಡೆದಿದ್ದನ್ನು ಸ್ಮರಿಸಬಹುದು.
‘ದೇಶದ ನಾಗರಿಕರಿಗೆ ಪಾರದರ್ಶಕ ಆಡಳಿತವನ್ನು ನೀಡಲು ಹಿಂದಿನ ಯುಪಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದು ನಾವು ಪಾರದರ್ಶಿಕವಾಗಿದ್ದೇವೆ ಎಂಬುದನ್ನು ಸಾರಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಈ ಮಾಹಿತಿ ಹಕ್ಕು ಕಾಯ್ದೆಯನ್ನು ಮೊಟಕು ಗೊಳಿಸುವ ಎಲ್ಲ ಪ್ರಯತ್ನವೂ ಮಾಡಿತ್ತು. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಆಡಳಿತದಲ್ಲಿರುವ ಕಾರ್ಯಾಂಗದ ಕೆಲವು ಅಧಿಕಾರಿ ವರ್ಗದವರು ಮಾಹಿತಿಗಳನ್ನು ಸರಿಯಾಗಿ ಒದಗಿಸದೆ ಹಲವಾರು ನೆಪಗಳನ್ನು ಒಡ್ಡಿ ಮಾಹಿತಿಯನ್ನು ನೀಡದೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ,’ ಎಂದು ಅನುಮಾನಿಸುತ್ತಾರೆ ಹೆಚ್ ಎಂ ವೆಂಕಟೇಶ್.
‘ಬಹುಶಃ ವಿರೋಧ ಪಕ್ಷದ ರಾಜಕಾರಣಿಗಳೊಂದಿಗೆ ಅಧಿಕಾರಿಗಳು ಸೇರಿ ಆಡಳಿತ ರೂಡ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಈ ಪ್ರಕರಣದಲ್ಲಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ವರ್ಗಾವಣೆಯ ಪ್ರತಿಯನ್ನು ಗೌಪ್ಯವಾಗಿಟ್ಟಿದ್ದೇವೆ ಎಂಬುದು ಒಂದು ಮೂರ್ಖತನದ ಪರಮಾವಧಿಯೇ ಸರಿ. ಉದಾರಣೆಗೆ ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ತುಮಕೂರಿಗೆ ವರ್ಗಾಯಿಸಿದ್ದು ಗೌಪ್ಯತೆ ಹೇಗಾಗುತ್ತದೆ ? ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಷಡ್ಯಂತ್ರವನ್ನು ಕಾರ್ಯಾಂಗ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ . ಈ ಪ್ರಕರಣದಲ್ಲಿ ಅಧಿಕಾರಿಗಳ ವರ್ಗಾವಣೆಯ ಪಟ್ಟಿಯನ್ನು ಕೊಡಲು ನಿರಾಕರಿಸಿರುವುದು ಮೂರ್ಖತನ,’ ಎನ್ನುತ್ತಾರೆ ನೈಜ ಹೋರಾಟಗಾರಾರ ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರು.
‘ಸರ್ಕಾರವು ವರ್ಗಾವಣೆ ದಂಧೆಯಲ್ಲಿ ಮುಳುಗಿ ಹೋಗಿದೆ. ಆದ್ದರಿಂದ ಇಂತಹ ಮಾಹಿತಿಯು ಬಹಿರಂಗವಾಗುವುದರಿಂದ ತನ್ನ ಮಾನ ಹರಾಜಾಗುವುದನ್ನು ತಡೆಯಲು ಮಾಹಿತಿ ನಿರಾಕರಿಸುತ್ತಿದೆ. ಒಂದೊಮ್ಮೆ ವರ್ಗಾವಣೆ ಆದೇಶಗಳು ವೈಯಕ್ತಿಕ ಮಾಹಿತಿ ಆಗುವುದಾದರೆ ಮತ್ತು ಆ ಬಗ್ಗೆ ನ್ಯಾಯಾಲಯಗಳು ಆದೇಶ ನೀಡಿದ್ದರೇ ಯಾವ ಕಾರಣಕ್ಕೆ ಸರ್ಕಾರವೇ ಅಧಿಸೂಚನೆ ಹೊರಡಿಸಿ ಅವುಗಳನ್ನು ರಾಜ್ಯಪತ್ರಗಳಲ್ಲಿ ಪ್ರಕಟಿಸುತ್ತದೆ. ಮತ್ತು ತನ್ನದೇ ಅಧಿಕೃತ ಜಾಲತಾಣದಲ್ಲಿಯೂ ಪ್ರಕಟಿಸಿರುತ್ತದೆ. ಹಾಗಾದರೆ ಈ ಎಲ್ಲವೂ ವೈಯಕ್ತಿಕ ಮಾಹಿತಿಗಳನ್ನು ಸರ್ಕಾರವೇ ಬಹಿರಂಗಪಡಿಸಿದಂತಲ್ಲವೇ,’ ಎಂದು ಪ್ರಶ್ನಿಸುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ.
ಅದೇ ರೀತಿ ‘ಈ ಮಾಹಿತಿಯನ್ನು ಸರ್ಕಾರವೇ ತನ್ನ ಅಧಿಸೂಚನೆ, ಸರ್ಕಾರದ ಅಧಿಕೃತ ಜಾಲತಾಣಗಳಲ್ಲಿ ವರ್ಗಾವಣೆ ಆದೇಶಗಳನ್ನು ಪ್ರಕಟಿಸಿರುವುದನ್ನು ನೋಡಿದರೆ ಆರ್‍ಟಿಐನಲ್ಲಿ ನೀಡಿರುವ ಹಿಂಬರಹದಲ್ಲಿ ಉಲ್ಲೇಖಿಸಿರುವ ನ್ಯಾಯಾಲಯದ ಆದೇಶಗಳನ್ನೂ ಉಲ್ಲಂಘಿಸಿದಂತಾಗುತ್ತದೆ. ಈ ಮೂಲಕ ನ್ಯಾಯಾಂಗ ನಿಂದನೆಗೂ ಗುರಿಯಾಗಬೇಕಾಗುತ್ತದೆ. ಈ ಸರ್ಕಾರವು ಮಾಹಿತಿಯನ್ನು ನಿರಾಕರಿಸುವುದಕ್ಕೆ ಆಧಾರವಿಲ್ಲದ ಕಾರಣಗಳನ್ನು ನೀಡಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಈ ಧೋರಣೆ ನಿಲ್ಲಬೇಕು ಹಾಗೂ ಸಂಪೂರ್ಣ ಮಾಹಿತಿಯನ್ನು ತನ್ನ ಜಾಲತಾಣಗಳ ಮೂಲಕ ಸುಲಭವಾಗಿ ಲಭ್ಯವಾಗುವಂತೆ ಕ್ರಮ ವಹಿಸಬೇಕು, ‘ ಎನ್ನುತ್ತಾರೆ ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಭಟ್ಟರಹಳ್ಳಿ.