ಏಕರೂಪ ನಾಗರಿಕ ಸಂಹಿತೆ; ಇಲಾಖೆಗಳಿಂದ ಅಭಿಪ್ರಾಯ, ಸಲಹೆ ಸಂಗ್ರಹಕ್ಕೆ ಮುಂದಾದ ಸರ್ಕಾರ

ಬೆಂಗಳೂರು; ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಇಲಾಖೆಗಳಿಂದ ಅಭಿಪ್ರಾಯ, ಸಲಹೆ, ಟಿಪ್ಪಣಿಗಳನ್ನು ಕ್ರೋಢೀಕರಿಸಲು ಮುಂದಾಗಿದೆ.

 

ಏಕರೂಪ ನಾಗರಿಕ ಸಂಹಿತೆಗೆ ನಮ್ಮ ಸರ್ಕಾರವು ವಿರೋಧ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರ ಬೆನ್ನಲ್ಲೇ ಇದೀಗ ಅಭಿಪ್ರಾಯ, ಸಲಹೆ, ಟಿಪ್ಪಣಿ ಕ್ರೋಢೀಕರಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಭಿಪ್ರಾಯ, ಸಲಹೆ, ಟಿಪ್ಪಣಿ ಕ್ರೋಢೀಕರಿಸಲು ಉನ್ನತ ಶಿಕ್ಷಣ ಇಲಾಖೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂಬಂಧ 2023ರ ಅಕ್ಟೋಬರ್‍‌ 18ರಂದು ಇಲಾಖೆಯ ಉನ್ನತ ಶಿಕ್ಷಣ ಇಲಾಖೆಯ ನಂದಕುಮಾರ್‍‌ ಬಿ ಅವರು ಅನಧಿಕೃತ ಟಿಪ್ಪಣಿ (ಸಂಖ್ಯೆ; ಇಡಿ 83 ವಿವಿಧ 2023) ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟಿಪ್ಪಣಿಯಲ್ಲೇನಿದೆ?

 

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಭಾರತದ ಕಾನೂನು ಆಯೋಗವು ರಾಜ್ಯ ಸರ್ಕಾರಗಳಿಂದ ಸಲಹೆ, ಅಭಿಪ್ರಾಯಗಳನ್ನು ನೀಡುವಂತೆ ಕೋರಿದೆ. ಏಕರೂಪ ನಾಗರಿಕ ಸಂಹಿತೆ ರಚಿಸುವ ಸಂದರ್ಭದಲ್ಲಿ ಮದುವೆ, ವಿಚ್ಛೇಧನ, ದತ್ತು, ನಿರ್ವಹಣೆ, ಉತ್ತರಾಧಿಕಾರ, ರಕ್ಷಕತ್ವ, ಕೊಡುಗೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಕ್ರೋಢೀಕೃತ ಅಭಿಪ್ರಾಯವನ್ನು 22ನೇ ಭಾರತದ ಕಾನೂನು ಆಯೋಗಕ್ಕೆ ಕಳಿಸಬೇಕಾಗಿದೆ. ಅದರಂತೆ ಕರ್ನಾಟಕ ಸರ್ಕಾರ (ಕೆಲಸಗಳು ಹಂಚಿಕೆ) ನಿಯಮಗಳು, 1977ರ ಅನ್ವಯ ಸಂಬಂಧಿಸಿದ ಇಲಾಖೆಗಳ ಅಭಿಪ್ರಾಯವನ್ನು ಒಂದು ವಾರದೊಳಗಾಗಿ ಕಳಿಸಬೇಕು ಎಂದು ಅನಧಿಕೃತ ಟಿಪ್ಪಣಿಯಲ್ಲಿ ಅಧೀನ ಕಾರ್ಯದರ್ಶಿಯು ಕೋರಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ

 

ಬೆಂಗಳೂರಿನಲ್ಲಿ ರಾಜ್ಯ ವಕೀಲರ ಪರಿಷತ್ ಇತ್ತೀಚೆಗಷ್ಟೇ ಆಯೋಜಿಸಿದ್ದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸರ್ಕಾರವು ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದರು.

 

ಕೇಂದ್ರ ಸರ್ಕಾರ ಐಪಿಸಿ ಸೆಕ್ಷನ್ ಗಳ ಹೆಸರನ್ನು ಬದಲಾಯಿಸಿದೆ. 1861 ರಲ್ಲಿ ಜಾರಿಯಾದ ಕಾನೂನುಗಳನ್ನು ಬದಲಾಯಿಸಲು ಹೊರಟಿದೆ. ಏನು ಮಾಡಲಿದ್ದಾರೆ ಕಾದು ನೋಡೋಣ ಇವರು ಬದಲಾಯಿಸುವ ಮೊದಲು ತಿದ್ದುಪಡಿ ಮಾಡಬೇಕಿತ್ತು ಎಂದು ಹೇಳಿಕೆ ನೀಡಿದ್ದರು.

 

ಅಲ್ಲದೇ ಜುಲೈ 26ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲೂ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ನ ಪ್ರತಿನಿಧಿಗಳು ಸಹ ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮುಸ್ಲಿಮರು, ಆದಿವಾಸಿ, ಬುಡಕಟ್ಟು ಹಾಗೂ ಇನ್ನಿತರೆ ಅಲ್ಪಸಂಖ್ಯಾತ ಹಕ್ಕುಗಳಿಗೆ, ಕಾನೂನಿಗೆ ಧಕ್ಕೆಯಾಗುವ ಕುರಿತು ಆತಂಕ ವ್ಯಕ್ತಪಡಿಸಿದ್ದರು.

 

ಹಿಂದಿನ ಕಾನೂನು ಆಯೋಗವು ವೈವಿಧ್ಯತೆ ಇರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ಕಾರ್ಯ ಸಾಧುವಲ್ಲ ಎಂದು ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದೀಗ ಮತ್ತೆ ಈ ಕುರಿತು ಪರಿಶೀಲಿಸುವಂತೆ ಪ್ರಸಕ್ತ ಕಾನೂನು ಆಯೋಗಕ್ಕೆ ಕೇಂದ್ರ ಸರ್ಕಾರ ತಿಳಿಸಿತ್ತು.

 

ಅದರಂತೆ ಕಾನೂನು ಆಯೋಗವು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ತಮ್ಮ ಬೋರ್ಡ್‌ನ ವತಿಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ಒಂದು ಕೋಟಿಗೂ ಹೆಚ್ಚು ಸಹಿ ಸಂಗ್ರಹ ಮಾಡಿ ಕಾನೂನು ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ.

 

ಅಲ್ಪಸಂಖ್ಯಾತರ ಹಕ್ಕುಗಳ ದಮನಕ್ಕೆ ತಮ್ಮ ಸರ್ಕಾರ ಎಂದಿಗೂ ಅವಕಾಶ ನೀಡದು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿವಾದ ಸೃಷ್ಟಿಸುತ್ತಿದೆ.ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ತರುವ ಸಂಬಂಧ ವ್ಯಾಪಕ ಚರ್ಚೆ ನಡೆಯಬೇಕಿದೆ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಿಸಿದ್ದರು.

 

”ಸಂವಿಧಾನದ 44 ನೇ ವಿಧಿ ಅನ್ವಯ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ತರಲು ಕೇಂದ್ರ ಸರಕಾರ ಮುಂದಾಗಿದೆ. ಈ ಕುರಿತು ಕಾನೂನು ತಜ್ಞರ ಸಲಹೆಯನ್ನೂ ಕೇಳಿದೆ. ಆದರೆ, ಈ ಕುರಿತು ವಿಸ್ತ್ರತ ಚರ್ಚೆಯ ಅಗತ್ಯವಿದೆ,” ಎಂದು ಪ್ರತಿಪಾದಿಸಿದ್ದರು.

the fil favicon

SUPPORT THE FILE

Latest News

Related Posts