ಪುನೀತ್ ಕೆರೆಹಳ್ಳಿ ಬಂಧಮುಕ್ತ ಪ್ರಕರಣ; ಕಡತ ಒದಗಿಸಲು ನಿರಾಕರಿಸಿ, ಮಾಹಿತಿಯೇ ರಹಸ್ಯವೆಂದ ಸರ್ಕಾರ

ಬೆಂಗಳೂರು; ಮಾಹಿತಿ ನಿರಾಕರಿಸಲು ಅಥವಾ ಬಹಿರಂಗಪಡಿಸಲು ನ್ಯಾಯಾಲಯದ ಯಾವುದೇ ನಿರ್ಬಂಧ, ನಿಷೇಧವಿಲ್ಲದಿದ್ದರೂ ಪುನೀತ್‌ ಕೆರೆಹಳ್ಳಿ ಎಂಬಾತನನ್ನು ಬಂಧಮುಕ್ತಗೊಳಿಸಿರುವ ಸಂಬಂಧ ತೆರೆದಿರುವ ಸಮಗ್ರ ಕಡತವನ್ನು ಒದಗಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿರಾಕರಿಸಿದೆ.

 

ಬಂಧಮುಕ್ತಗೊಂಡ ನಂತರ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದು ಕಾಂಗ್ರೆಸ್‌ ಸರ್ಕಾರಕ್ಕೆ ಸವಾಲು ಎಸೆದಿರುವ ಪುನೀತ್‌ ಕೆರೆಹಳ್ಳಿ ಕೈಗೊಂಡಿದ್ದ ಉಪವಾಸವನ್ನು ಕೈ ಬಿಟ್ಟಿರುವ  ಬೆನ್ನಲ್ಲೇ ಆತನಿಗೆ ಸಂಬಂಧಿಸಿದ ಕಡತವನ್ನು ಮಾಹಿತಿ ಹಕ್ಕಿನಡಿಯಲ್ಲಿ ಒದಗಿಸಲು ರಾಜ್ಯ ಕಾಂಗ್ರೆಸ್‌  ಸರ್ಕಾರವು ನಿರಾಕರಿಸಿರುವುದು ಮುನ್ನೆಲೆಗೆ ಬಂದಿದೆ.

 

ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಆ ನಂತರ ಆತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ಆತನನನ್ನು ಬಂಧಮಕ್ತಗೊಳಿಸಿ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತವನ್ನು ಪಡೆಯಲು ಮಾಹಿತಿ ಹಕ್ಕಿನ ಅಡಿಯಲ್ಲಿ ‘ದಿ ಫೈಲ್‌’ ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಗೆ 2023ರ ಅಕ್ಟೋಬರ್‍‌ 6ರಂದು ಉತ್ತರ ನೀಡಿರುವ ಒಳಾಡಳಿತ ಇಲಾಖೆ (ಕಾನೂನು ಸುವ್ಯವಸ್ಥೆ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್‌ ಆರ್‍‌ ಅವರು ಮಾಹಿತಿ ಹಕ್ಕು ಕಾಯ್ದೆ ಕಲಂ 8(ಬಿ) ಮತ್ತು Karnataka Prevention Activities of Bootleggers, Goondas, Immoral Traffic Offenders, Slum Grabbers And Video Pirates Act 1985 ಕಲಂ 11(4)ನ್ನು ಮುಂದಿರಿಸಿ ಕಡತವನ್ನು ಒದಗಿಸಲು ಅವಕಾಶವಿಲ್ಲ ಎಂದು ಹಿಂಬರಹ ನೀಡಿದ್ದಾರೆ.

 

ಹಿಂಬರಹದಲ್ಲೇನಿದೆ?

 

ಮಾಹಿತಿ ಹಕ್ಕು ಅಧಿನಿಯಮ, 2005ರಡಿ ಸಲ್ಲಿಸಿರುವ ಉಲ್ಲೇಖಿತ ತಮ್ಮ ಅರ್ಜಿಯನ್ನು ಪರಿಶೀಲಿಸಲಾಗಿ ತಾವು ಗೂಂಡಾಬಂಧಿ ಪುನೀತ್‌ ಕೆರೆಹಳ್ಳಿಗೆ ಸಂಬಂಧಪಟ್ಟ ಕಡತ ಸಂಖ್ಯೆ ಹೆಚ್‌ಡಿ 396 ಎಸ್‌ಎಸ್‌ಟಿ 2023ರ ಬಗ್ಗೆ ಮಾಹಿತಿ ಕೋರಿದ್ದು ಸದರಿ ಕಡತವು ಗೂಂಡಾ ಕಾಯ್ದೆಯಡಿ ರಚಿಸಲ್ಪಟ್ಟ ಸಲಹಾ ಮಂಡಳಿ, ಕರ್ನಾಟಕ ಉಚ್ಛ ನ್ಯಾಯಾಲಯದ ನಡವಳಿಯನ್ನು ಒಳಗೊಂಡಿದ್ದು ಸದರಿ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ 8(ಬಿ) ಅಡಿಯಲ್ಲಿ ಬರುವುದರಿಂದ ಹಾಗೂ ಮತ್ತು Karnataka Prevention Activities of Bootleggers, Goondas, Immoral Traffic Offenders, Slum Grabbers And Video Pirates Act 1985 ಕಲಂ 11(4)ರಡಿಯಲ್ಲಿ ರಹಸ್ಯ ದಾಖಲೆಯಾಗಿರುವುದು ಸ್ಪಷ್ಟವಾಗಿರುವುದರಿಂದ ಈ ಮಾಹಿತಿ ನೀಡಲು ಅವಕಾಶವಿರುವುದಿಲ್ಲ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್‌ ಆರ್‍‌ ಅವರು ಉತ್ತರ ನೀಡಿದ್ದಾರೆ.

 

ಕರ್ನಾಟಕ ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ, ವಿಡಿಯೋ ಅಥವಾ ಆಡಿಯೋ ಪೈರೇಟ್ಸ್‌ ಚಟುವಟಿಕೆಗಳ ತಡೆ ಅಧಿನಿಯಮ 1985 ಅಡಿಯಲ್ಲಿ ಪುನೀತ್‌ ಕೆರೆಹಳ್ಳಿಯನ್ನು  ಬಂಧಿಸಲಾಗಿತ್ತು. ಈ ಸಂಬಂಧ 2023ರ ಸೆ.16ರಂದು ಬಂಧಮುಕ್ತಗೊಳಿಸಿ ಆದೇಶವನ್ನೂ ಹೊರಡಿಸಿದೆ.

 

ಒಮ್ಮೆ ಸರ್ಕಾರಿ ಆದೇಶ ಹೊರಬಿದ್ದ ನಂತರ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಸಾರ್ವಜನಿಕ ದಾಖಲೆ. ಅಲ್ಲದೇ ಈ ಸಾರ್ವಜನಿಕ ದಾಖಲೆಯನ್ನು ಬಹಿರಂಗಪಡಿಸಬಾರದು ಎಂದು ಯಾವ ನ್ಯಾಯಾಲಯವೂ ನಿರ್ಬಂಧಿಸಿಲ್ಲ ಮತ್ತು ನಿಷೇಧಿಸಿಯೂ ಇಲ್ಲ. ಹೀಗಿದ್ದರೂ ಒಳಾಡಳಿತ ಇಲಾಖೆಯು ಮಾಹಿತಿ ಹಕ್ಕು ಅಧಿನಿಯಮದ ಕಲಂ 8(ಬಿ)ಯನ್ನು ಉಲ್ಲೇಖಿಸಿ ಒದಗಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಕಲಂ 8 (ಬಿ) ಯಲ್ಲೇನಿದೆ?

 

ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧೀಕರಣವು ಯಾವ ಮಾಹಿತಿ ಪ್ರಕಟಣೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆಯೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ನ್ಯಾಯಾಲಯ ನಿಂದನೆಯಾಗಬಹುದೋ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ವ್ಯಾಪ್ತಿಗೆ ಒಳಪಡಿಸಿದೆ.

 

‘ಕಲಂ 8(1) (ಬಿ) ಯ ಪರಿಮಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಕೋರಿದ ಮಾಹಿತಿಯನ್ನು ನಿರಾಕರಿಸಲು ಒಂದೋ ಯಾವುದೇ ಸಕ್ಷಮ ನ್ಯಾಯಾಲಯದ ನಿರ್ದಿಷ್ಟವಾದ ಆದೇಶವಿರಬೇಕು ಅಥವಾ ಅದನ್ನು ಬಹಿರಂಗಪಡಿಸುವುದರ ಪರಿಣಾಮ ಸ್ವರೂಪವಾಗಿ ನ್ಯಾಯಾಲಯದ ನಿಂದನೆಯಾಗುವ ಸಾಧ್ಯತೆಯಿರಬೇಕು. ಈ ಎರಡೂ ಸಂದರ್ಭಗಳು ಉತ್ಪನ್ನವಾಗುವ ಸಾಧ್ಯತೆ ಇಲ್ಲದಿದ್ದ ಪಕ್ಷದಲ್ಲಿ ಕೋರಿದ ಮಾಹಿತಿಯನ್ನು ಈ ಕಲಮಿನಡಿಯಲ್ಲಿ ನಿರಾಕರಿಸುವುದು ಕಾನೂನುಬಾಹಿರವಾದ ನಿರ್ಣಯವಾಗುತ್ತದೆ,’ ಎನ್ನುತ್ತಾರೆ ಅಂಕಣಕಾರ ಹಾಗೂ ಮಾಹಿತಿ ಹಕ್ಕು ಚಳವಳಿಗಾರ ವೆಂಕಟೇಶ್‌ ನಾಯಕ್‌.

 

ಸಾಕ್ಷ್ಯಾಧಾರಗಳ ಕೊರತೆ ಮತ್ತು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ಬಂಧಮುಕ್ತಗೊಳಿಸಿದ ನಂತರ ಪುನೀತ್‌ ಕೆರೆಹಳ್ಳಿ ಎಂಬಾತ ಕಾಂಗ್ರೆಸ್‌ ಸರ್ಕಾರಕ್ಕೇ ಸವಾಲು ಎಸೆದಿದ್ದ. ಅಲ್ಲದೇ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ. ಆ ನಂತರ ಪೊಲೀಸರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಮಾಜಿ ಶಾಸಕ ಸಿ ಟಿ ರವಿ ಸೇರಿದಂತೆ ಬಿಜೆಪಿಯ ಹಲವರು ಭೇಟಿ ನೀಡಿದ್ದರು. ಆ ವೇಳೆಯಲ್ಲಿಯೂ ಬಸ್‌ಗಳಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು.

 

‘ಕರ್ನಾಟಕ ಸರ್ಕಾರದ ಗೃಹ ಇಲಾಖೆಯಲ್ಲಿ ಕಡತ ಸಂಖ್ಯೆ 396 ರ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕುಕಾಯ್ದೆ 2005, 8 ಬಿ ಪ್ರಕಾರ ಕೊಡಲು ನಿರಾಕರಿಸಿರುವುದು ಮಾಹಿತಿ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಒಂದು ವೇಳೆ ಗೃಹ ಇಲಾಖೆ ಈ ಕಡತದಲ್ಲಿ ಉಗ್ರಗಾಮಿಗಳ ಬಗ್ಗೆ ಯಾವುದಾದರೂ ಮಾಹಿತಿ ಇದ್ದರೆ ಅಥವಾ ನ್ಯಾಯಾಲಯದ ನಿರ್ದೇಶನ ವಿದ್ದರೆ 8 ಬಿ ಕೆಳಗೆ ಕೊಡಲು ಸಾಧ್ಯವಾಗದಿರಬಹುದು.

 

ಉಗ್ರಗಾಮಿಗಳ ವಿಷಯದ ಕಡತ ಅಲ್ಲದೇ ಇರುವುದರಿಂದ ಮತ್ತು ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿಲ್ಲದೆ ಇರುವುದರಿಂದ ಗೃಹ ಇಲಾಖೆಯು ಯಾವುದೋ ಒಂದು ಮಾಹಿತಿಯನ್ನು ಗುಪ್ತವಾಗಿ ಇಟ್ಟಿದೆ ಮತ್ತು ಬಹಿರಂಗಗೊಳಿಸಿದರೆ ಆಡಳಿತದ ವೈಖರಿಯನ್ನು ಜನರು ಪ್ರಶ್ನಿಸುತ್ತಾರೆ, ಇದರಿಂದ ತಪ್ಪಿಸಿಕೊಳ್ಳುವ ತಂತ್ರವನ್ನು ಗೃಹ ಇಲಾಖೆ ಮಾಡಿದೆ,’ ಎನ್ನುತ್ತಾರೆ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌.

 

‘ಮಾಹಿತಿಯನ್ನು ಒದಗಿಸುವುದನ್ನು ತಡೆಯಲು ಸರ್ಕಾರಿ ಇಲಾಖೆಗಳು ನಾನಾ ತಂತ್ರಗಾರಿಕೆಗಳನ್ನು ಹೂಡುತ್ತಲೇ ಇವೆ. ಕೆಲ ಮಾಹಿತಿ ಹಕ್ಕು ಅಧಿಕಾರಿಗಳು ಒಮ್ಮೊಮ್ಮೆ ಅಸಂಬದ್ಧ ಕಾರಣಗಳನ್ನು ಹುಡುಕಿ ಮಾಹಿತಿ ನಿರಾಕರಿಸುತ್ತಾರೆ. ಇದಕ್ಕೆ ಪುನೀತ್ ಕೆರೆಹಳ್ಳಿ ಪ್ರಕರಣ ಸ್ಪಷ್ಟ ಉದಾಹರಣೆ. ಈತನಿಗೆ ಸಂಬಂಧಿಸಿದ ಕಡತವನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಒದಗಿಸಿದರೆ ನ್ಯಾಯಾಲಯದ ನಿಂದನೆ ಆಗಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಆ ಆದೇಶ ಎಲ್ಲಿದೆ, ಅಂತಹ ಆದೇಶವಿದ್ದರೇ ಅದನ್ನು ಸ್ಪಷ್ಟವಾಗಿ ಹಿಂಬರಹದಲ್ಲಿ ನಮೂದಿಸಬೇಕಿತ್ತು. ಕೇವಲ ನಿಂದನೆ, ನಿಷೇಧ ಎಂಬ ಪದ ಬಳಕೆ ಮಾಡಿ ಸಾರ್ವಜನಿಕ ದಾಖಲೆಯನ್ನು ಮುಚ್ಚಿಡುವ ತಂತ್ರಗಾರಿಕೆಯಷ್ಟೇ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್‌ ದೀಪಕ್‌.

 

ಸರ್ಕಾರಿ ಭೂಮಿಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸಿದ ಹಿಂದೂಪರ ಕಾರ್ಯಕರ್ತನಿಗೆ ಪೊಲೀಸರು ನೋಟಿಸ್ ನೀಡಿದ್ದನ್ನು  ಗೃಹ ಸಚಿವ ಜಿ ಪರಮೇಶ್ವರ ಅವರು  ಸಮರ್ಥಿಸಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts