ವಿಧಾನಸೌಧ, ವಿಕಾಸ ಸೌಧದಲ್ಲಿ ಹೆಚ್ಚಿದ ಡೆಂಗಿ ಸೊಳ್ಳೆ ಸಂತಾನೋತ್ಪತ್ತಿ; 28 ಸಿಬ್ಬಂದಿಯಿಂದ ಸಮೀಕ್ಷೆ

ಬೆಂಗಳೂರು; ರಾಜ್ಯಾದ್ಯಂತ ದಿನೇ ದಿನೆ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ ವಿಧಾನಸೌಧ ಸೇರಿದಂತೆ ಸಚಿವಾಲಯದ ಕಟ್ಟಡಗಳಲ್ಲಿಯೂ ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳ ಹಾವಳಿಯೂ ಹೆಚ್ಚಿದೆ.

 

ಸಚಿವಾಲಯದ ಕಟ್ಟಡಗಳಲ್ಲಿ ಡೆಂಗಿ  ಸಂತಾನೋತ್ಪತ್ತಿ ಸೊಳ್ಳೆಗಳ ಹಾವಳಿ ಸಮೀಕ್ಷೆ ಕುರಿತಂತೆ 28 ಜನ ಸಿಬ್ಬಂದಿಗಳೊಂದಿಗೆ ಲಾರ್ವಾ ಸಮೀಕ್ಷೆ ನಡೆಸಿತ್ತು ಎಂಬುದು ತಿಳಿದು ಬಂದಿದೆ.

 

ಪ್ರಮುಖವಾಗಿ ವಿಧಾನಸೌಧ, ವಿಕಾಸಸೌಧ ಕಟ್ಟಡ ಮತ್ತು ಇದಕ್ಕೆ ಹೊಂದಿಕೊಂಡಿರುವ ಜಾಗಗಳಲ್ಲಿ ಅತಿ ಹೆಚ್ಚು ನೀರು ನಿಲ್ಲುತ್ತಿರುವುದರಿಂದಾಗಿ ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಧಿಕಾರಿಗಳಿಗೆ ಪತ್ರ (ಸಿಆಸುಇ 131 ಡಿಬಿಎಂ 2023) ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಸಚಿವಾಲಯದ ಕಟ್ಟಡಗಳಲ್ಲಿ ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳ ನಿಯಂತ್ರಣದ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 28 ಜನ ಸಿಬ್ಬಂದಿಗಳೊಂದಿಗೆ ಸಮೀಕ್ಷೆ ನಡೆಸಲಾಗಿತ್ತು. ವಿಧಾನಸೌಧ, ವಿಕಾಸಸೌಧ ಸ್ಥಳವು ಪಾಸಿಟಿವ್‌ ಪ್ರದೇಶಗಳಾಗಿವೆ. ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳನ್ನು ನಿಯಂತ್ರಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ.

 

ವಿಧಾನಸೌಧದ ಪೂರ್ವ ದ್ವಾರದ ಬಳಿ ಎರಡು ಕಾರಂಜಿಗಳಲ್ಲಿ ನಿಂತ ನೀರು, ಪ್ರವೇಶದ್ವಾರದ ಬಳಿ ಭದ್ರತಾ ನಾಯಿಗಳಿಗಾಗಿ 06 ನೀರಿನ ಕ್ಯಾನ್‌ಗಳನ್ನು ಇರಿಸಿರುವುದು, ಕಚೇರಿ ಆವರಣದ ಒಳಗೆ 13+/93 ಕಾರಿಡಾರ್‍‌, ಗ್ರಂಥಾಲಯದಲ್ಲಿ 6+/25 ಒಳಾಂಗಣದ ಕುಂಡದಲ್ಲಿ ಸಸ್ಯಗಳು ಪಾಸಿಟಿವ್ ಪ್ರದೇಶಗಳಾಗಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ವಿಧಾನಸೌಧದ ಉಪ ಪೊಲೀಸ್‌ ಆಯುಕ್ತರು, ಹಿರಿಯ ಆರೋಗ್ಯ ಪರಿವೀಕ್ಷಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ತೋಟಗಾರಿಕೆ ನಿರ್ದೇಶಕರು ಸೇರಿದಂತೆ ಹಲವು ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

 

‘ವಿಧಾನಸೌಧ, ವಿಕಾಸಸೌಧ ಬಳಿ ನೀರು ನಿಲ್ಲದಂತೆ ಕ್ರಮ ಕೈಗೊಂಡು ಡೆಂಗಿ ಸಂತಾನೋತ್ಪತ್ತಿ ಸೊಳ್ಳೆಗಳನ್ನು ನಿಯಂತ್ರಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

ಕಳೆದ 20 ದಿನದಲ್ಲಿ ಬೆಂಗಳೂರಿನಲ್ಲಿ 1,404 ಪ್ರಕರಣಗಳು ಡೆಂಗಿ  ಎಂದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಈ ವರ್ಷದ ಅ.1 ರವರೆಗೆ ಬೆಂಗಳೂರಿನಲ್ಲಿ 5,767 ಪ್ರಕರಣಗಳು ವರದಿಯಾಗಿದ್ದವು.

 

ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿಯೂ 4,505 ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರಿನಲ್ಲಿ 372 ಪ್ರಕರಣ ಹೆಚ್ಚಾಗಿದ್ದು, ಇದೀಗ ಒಟ್ಟು 6,139 ಡೆಂಗಿ  ಪ್ರಕರಣಗಳು ಕಂಡುಬಂದಿವೆ.

 

ರಾಜ್ಯದ ನಾನಾ ಭಾಗಗಳಲ್ಲಿ 4,505 ರಷ್ಟಿದ್ದ ಪ್ರಕರಣಗಳು 20 ದಿನಗಳಲ್ಲಿ 1,066 ಏರಿಕೆ ಕಂಡಿದೆ. ಒಟ್ಟು 5,571 ಪ್ರಕರಣಗಳು ವರದಿಯಾಗಿವೆ.

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ ಈ ವರ್ಷ ಪುರಸಭೆ ವ್ಯಾಪ್ತಿಯಲ್ಲಿ ಡೆಂಗಿ  ಪ್ರಕರಣಗಳು ಹೆಚ್ಚುತ್ತಿವೆ. ಬಿಬಿಎಂಪಿಯಿಂದ 4,323 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

 

 

ಜೂನ್‌ನಲ್ಲಿ 689 ಪ್ರಕರಣಗಳಿದ್ದರೆ, ಇದು ಆಗಸ್ಟ್‌ನಲ್ಲಿ 1,589 ಕ್ಕೆ ಏರಿದೆ. ಜುಲೈ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,629 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಪಾಲಿಕೆಯಿಂದ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 8 ರವರೆಗೆ 416 ಡೆಂಗಿ  ಪ್ರಕರಣಗಳು ವರದಿಯಾಗಿವೆ.

 

2019 ರಲ್ಲಿ 44,863  ಡೆಂಗಿ ಪ್ರಕರಣಗಳಿದ್ದರೆ, 2020 ರಲ್ಲಿ 6,679 ಕ್ಕೆ ಇಳಿದಿದೆ . ಅಂತೆಯೇ, 2021 ರಲ್ಲಿ 6,166 ಪ್ರಕರಣಗಳು ಮತ್ತು 2022 ರಲ್ಲಿ 5,589 ಪ್ರಕರಣಗಳು ಕಂಡುಬಂದಿದ್ದವು.

the fil favicon

SUPPORT THE FILE

Latest News

Related Posts