ಮೈಸೂರ್‍‌ ಸ್ಯಾಂಡಲ್‌ ಉತ್ಪನ್ನ ನೇರ ಖರೀದಿ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಮುಜುಗರಕ್ಕೀಡಾದ ಸರ್ಕಾರದಿಂದ ತೇಪೆ

ಬೆಂಗಳೂರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿಎಂಟಿಸಿಯೂ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳು, ನಿಗಮ ಮತ್ತು ಮಂಡಳಿಗಳು ಮೈಸೂರ್‍‌ ಸ್ಯಾಂಡಲ್‌ ಸೋಪ್‌ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ನೇರವಾಗಿ ಕೆಎಸ್‌ಡಿಎಲ್‌ನಿಂದ ಖರೀದಿಸಲು ಅವಕಾಶ ನೀಡಿಲ್ಲ ಎಂದು ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸುತ್ತಿದ್ದಂತೆ ಮುಜುಗರದಿಂದ ಪಾರಾಗಲು ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅದಕ್ಕೆ ತೇಪೆ ಹಾಕಲು ಮುಂದಾಗಿದೆ.

 

ವಸತಿ ಶಾಲೆಗಳಿಗೆ ಕೆಎಸ್‌ಡಿಎಲ್‌ ಉತ್ಪನ್ನಗಳನ್ನು ಒದಗಿಸಲು 87.65 ಕೋಟಿ ರು. ಒದಗಿಸಲಾಗಿದೆ ಎಂದು ಆರ್ಥಿಕ ಇಲಾಖೆಯ (ವೆಚ್ಚ- 12)  ಸರ್ಕಾರದ ಅಧೀನ ಕಾರ್ಯದರ್ಶಿ 2023ರ ಅಕ್ಟೊಬರ್‍‌ 17,  19 ಮತ್ತು 20 ರಂದು ಹೊರಡಿಸಿರುವ  ಅಧಿಸೂಚನೆಗಳನ್ನು ರಾಜ್ಯ ಸರ್ಕಾರವು   DIPR ಹೆಸರಿನಲ್ಲಿ  ಹೊಂದಿರುವ X ಟ್ವಿಟರ್‍‌ ನಲ್ಲಿ ಅಧಿಕೃತ ಖಾತೆಯಲ್ಲಿ  ಅಕ್ಟೋಬರ್‍‌ 28ರ ಸಂಜೆ 6.47ಕ್ಕೆ ಪ್ರಕಟಿಸುವ ಮೂಲಕ ಸೆ.19ರಂದು ನೀಡಿದ್ದ ಅಭಿಪ್ರಾಯವನ್ನು ಬದಿಗೆ ಸರಿಸುವ ಯತ್ನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

 

ಆರ್ಥಿಕ ಇಲಾಖೆಯ ವೆಚ್ಚ (1)ರ ಸರ್ಕಾರದ ಅಧೀನ ಕಾರ್ಯದರ್ಶಿಯು ಸೆ.19ಂದು ನೀಡಿದ್ದ ಅಭಿಪ್ರಾಯವು ಮುನ್ನೆಲೆಗೆ ಬಾರದಂತೆ ನೋಡಿಕೊಂಡಿರುವ ಸರ್ಕಾರವು, ಇಲಾಖೆಯ ವೆಚ್ಚ (12) ಅಧೀನ ಕಾರ್ಯದರ್ಶಿ ಹೊರಡಿಸಿರುವ ಅಧಿಸೂಚನೆಗಳನ್ನು ಪ್ರಕಟಿಸುವ ಮೂಲಕ  ದಾರಿತಪ್ಪಿಸಲು ಯತ್ನಿಸಿರುವುದು  ಮೇಲ್ನೋಟಕ್ಕೆ ಕಂಡು ಬಂದಿದೆ. ಇಲಾಖೆಯ ವೆಚ್ಚ-1 ಮತ್ತು ವೆಚ್ಚ 12 ಶಾಖೆಯ ಅಧೀನ ಕಾರ್ಯದರ್ಶಿಗಳಿಬ್ಬರು ಹೊರಡಿಸಿದ್ದ ಅಧಿಸೂಚನೆ ಮತ್ತು ನೀಡಿದ್ದ ಅಭಿಪ್ರಾಯಗಳನ್ನು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಅನುಮೋದಿಸಿದ್ದರು ಎಂದು ಗೊತ್ತಾಗಿದೆ.

 

2023-24ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್‌, ನಿರ್ಮಲ ಕಿಟ್‌ ಮತ್ತು ಸ್ಪೂರ್ತಿ ಕಿಟ್‌, ಸಿರಿಗಂಧ ಕಿಟ್‌ಗಳನ್ನು ಕರ್ನಾಟಕ ಸಾಬೂನು ಮಾರ್ಜಕ ನಿಗಮದಿಂದ ಖರೀದಿಸಲು ಸುಮಾರು 87.65 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಾಲ್ಕು ಅಧಿಸೂಚನೆಗಳನ್ನು ಅಕ್ಟೋಬರ್‍‌ 28ರ ಸಂಜೆ 6.47ಕ್ಕೆ ಪ್ರಕಟಿಸಿದೆ.

 

2023-24ನೇ ಸಾಲಿನ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶುಚಿ ಸಂಭ್ರಮ ಕಿಟ್‌, ಸಿರಿಗಂಧ ಕಿಟ್‌ಗಳನ್ನು 2309.40 ಲಕ್ಷ ರು.ಗಳ ವೆಚ್ಚದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಿಂದ ಖರೀದಿಸಲು 4(ಜಿ) ವಿನಾಯಿತಿ ನೀಡಿ ಸಮಾಜ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಆಇ 435 ವೆಚ್ಚ -12/2023)  2023ರ ಅಕ್ಟೋಬರ್‍‌ 17ರಂದು ಹೊರಡಿಸಿರುವ ಅಧಿಸೂಚನೆಯನ್ನು ಡಿಐಪಿಆರ್‍‌ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

 

ಅದೇ ರೀತಿ 4,46,76,234 ರ. ವೆಚ್ಚದಲ್ಲಿ ನಿರ್ಮಲ,  ಸಿರಿಗಂಧ ಕಿಟ್‌ಗಳನ್ನು 2309.40 ಲಕ್ಷ ರು.ಗಳ ವೆಚ್ಚದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಿಂದ ಖರೀದಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ  4(ಜಿ) ವಿನಾಯಿತಿ ನೀಡಿ 2023ರ ಅಕ್ಟೋಬರ್‍‌ 19ರಂದು ಹೊರಡಿಸಿರುವ ಅಧಿಸೂಚನೆಯನ್ನು (ಆಇ 490 ವೆಚ್ಚ-12/2023)  ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ವಾಲ್ಮಿಕಿ ಆಶ್ರಮ ಶಾಲೆಗಳು ಹಾಗೂ ಮೆಟ್ರಿಕ್‌ ಪೂರ್ವ/ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ 2023-24ನೇ ಸಾಲಿಗೆ ಶುಚಿ ಸಂಭ್ರಮ ಕಿಟ್‌ಗಳನ್ನು 459.26 ಲಕ್ಷ ರು. ವೆಚ್ಚದಲ್ಲಿ ಕೆಎಸ್‌ಡಿಎಲ್‌ನಿಂದ ಖರೀದಿಸಲು ಆರ್ಥಿಕ ಇಲಾಖೆಯ (ಆಇ 465 ವೆಚ್ಚ-12/2023) ಸರ್ಕಾರದ ಅಧೀನ ಕಾರ್ಯದರ್ಶಿ 2023ರ ಅಕ್ಟೋಬರ್‍‌ 19ರಂದು  ಹೊರಡಿಸಿದ್ದ ಅಧಿಸೂಚನೆಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

 

ಹಾಗೆಯೇ 27,06,21,477  ರು. ವೆಚ್ಚದಲ್ಲಿ   ನಿರ್ಮಲ, ಸ್ಫೂರ್ತಿ  ಕಿಟ್‌ಗಳನ್ನು ಕೆಎಸ್‌ಡಿಎಲ್‌ನಿಂದ  ಖರೀದಿಸಲು ಸಮಾಜ ಕಲ್ಯಾಣ ಇಲಾಖೆಗೆ 4(ಜಿ) ವಿನಾಯಿತಿ ನೀಡಿ 2023ರ ಅಕ್ಟೋಬರ್‍‌ 20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಜಾಲತಾಣದಲ್ಲಿ ಪ್ರಕಟಿಸಿದೆ.

 

ಕೆಎಸ್‌ಡಿಎಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು 2023ರ ಆಗಸ್ಟ್‌ 28ರಂದು ನೀಡಿದ್ದ ಮನವಿ ಆಧರಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಇಲಾಖೆಯ (ವೆಚ್ಚ -1) ಅಧೀನ ಕಾರ್ಯದರ್ಶಿಯು ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯ ನೀಡಿತ್ತು. ಇದನ್ನಾಧರಿಸಿ ಆರ್‍‌ಟಿಐ ಅಡಿಯಲ್ಲಿ ದಾಖಲೆಗಳನ್ನು ಪಡೆದಿದ್ದ ‘ದಿ ಫೈಲ್‌’ 2023ರ ಅಕ್ಟೋಬರ್‍‌ 28ರಂದು  ವರದಿಯನ್ನು ಪ್ರಕಟಿಸಿತ್ತು.

ಮೈಸೂರ್‍‌ ಸ್ಯಾಂಡಲ್‌ ಉತ್ಪನ್ನಗಳ ನೇರ ಸರಬರಾಜಿಗಿಲ್ಲ ಅನುಮತಿ; ಖಾಸಗಿ ಲಾಬಿಗೆ ಮಣಿದ ಸರ್ಕಾರ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿಎಂಟಿಸಿಯೂ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳು, ನಿಗಮ ಮತ್ತು ಮಂಡಳಿಗಳು ಮೈಸೂರ್‍‌ ಸ್ಯಾಂಡಲ್‌ ಸೋಪ್‌ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ನೇರವಾಗಿ ಕೆಎಸ್‌ಡಿಎಲ್‌ನಿಂದ ಖರೀದಿಸಲು ಉತ್ಸುಕವಾಗಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದಕ್ಕೆ ಅವಕಾಶ ನೀಡದೇ ಇರುವುದಕ್ಕೆ ಸೂಕ್ತ ಸಮರ್ಥನೆ ನೀಡದೇ ಇದ್ದದ್ದು ಚರ್ಚೆಗೆ ಗ್ರಾಸವಾಗಿತ್ತು.

 

ಕೆಎಸ್‌ಡಿಎಲ್‌ ಸಂಸ್ಥೆಯು ಉತ್ಪಾದಿಸುತ್ತಿರುವ ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಿದೆ. ಹೀಗಾಗಿಯೇ ಐಎಸ್‌ಓ 9001-2015 ಪ್ರಮಾಣಪತ್ರ ಹಾಗೂ ಪರಿಸರ ನೀತಿಗಾಗಿ 14001-2015 ಪ್ರಮಾಣ ಪತ್ರ ಹಾಗೂ 2017-18 ಹಾಗೂ 2018-19ರಲ್ಲಿ ಮುಖ್ಯಮಂತ್ರಿಯ ವಾರ್ಷಿಕ ರತ್ನ ಪ್ರಶಸ್ತಿಗೆ ಭಾಜನವಾಗಿರುವ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ಗೆ 4(ಜಿ) ವಿನಾಯಿತಿ ನೀಡದೇ ಇರುವುದರ ಹಿಂದೆ ಖಾಸಗಿ ಕಂಪನಿಗಳ ಲಾಬಿ ಇರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.

 

ಕೆಎಸ್‌ಡಿಎಲ್‌ ಸಂಸ್ಥೆಗೆ ಸಂಪೂರ್ಣ ಹೊಸ ರೂಪ ನೀಡಿ ಕಾರ್ಪೊರೇಟ್ ಶೈಲಿಯಲ್ಲಿ ಅದರ ಚಟುವಟಿಕೆಗಳು ಇರುವ ಹಾಗೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿಕೆ ನೀಡಿದ್ದರು. ಆದರೀಗ ಕೆಎಸ್‌ಡಿಎಲ್‌ ಗೆ  4 (ಜಿ) ವಿನಾಯಿತಿ ಪ್ರಸ್ತಾಪವನ್ನು ಆರ್ಥಿಕ ಇಲಾಖೆಯು  ತಿರಸ್ಕೃತಗೊಳಿಸಿರುವುದು ಸಾರ್ವಜನಿಕ ಉದ್ಯಮಗಳಿಗೆ ಬೆಂಬಲ ನೀಡುವುದಾಗಿ ಹೇಳಿದ್ದ ಸಚಿವರ ಮಾತು ಕೇವಲ ಕಾಗದದ ಮೇಲಷ್ಟೆ ಉಳಿದಂತಾಗಿತ್ತು.

 

ಮೈಸೂರ್‍‌ ಸ್ಯಾಂಡಲ್‌ ಹರ್ಬಲ್‌ ಕೇರ್‍‌ ಸೋಪ್‌, ಮೈಸೂರ್‍‌ ಕಾರ್ಬಾಲಿಕ್‌ ಸೋಪ್‌, ವಾಷಿಂಗ್‌ ಹಾಫ್‌ ಬಾರ್‍‌ ಸೋಪ್‌, ಮೈಸೂರ್‍‌ ಡಿಟರ್ಜೆಂಟ್‌ ಪೌಡರ್‍‌, ಮೈಸೂರ್‍‌ ಸ್ಯಾಂಡಲ್‌ ಕೊಬ್ಬರಿ ಎಣ್ಣೆ, ಮೈಸೂರು ಸ್ಯಾಂಡಲ್‌ ಟಾಲ್ಕಂ ಪೌಡರ್‍‌, ಫ್ರೆಷ್‌ ನಾಲ್‌ (ಪೆನಾಯಿಲ್‌), ಹ್ಯಾಂಡ್‌ ವಾಷ್‌, ಹ್ಯಾಂಡ್‌ ಸ್ಯಾನಿಟೈಜರ್‍‌, ರೂಮ್‌ ಫ್ರೆಶ್ನರ್‍‌, ಕ್ಲೀನಾಲ್‌ (ಬಹು ಉಪಯೋಗಿ ಲಿಕ್ವಿಡ್‌ ಡಿಟರ್ಜೆಂಟ್‌) ಹಾಗೂ ಇತರೆ ಉತ್ಪನ್ನಗಳನ್ನು ಕರ್ನಾಟಕ ಸರ್ಕಾರದ ಇತರೆ ಇಲಾಖೆಗಳಿಗೆ ಹಾಗೂ ನಿಗಮ ಮಂಡಳಿಗಳಿಗೆ ಸರಬರಾಜು ಮಾಡಲು ಸಿದ್ಧವಿತ್ತು.

 

 

ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಾಭಿವೃದ್ಧಿ, ಪೌರಾಡಳಿತ, ಕರ್ನಾಟಕ ಸರ್ಕಾರದ ಸಚಿವಾಲಯ, ಕೆಎಸ್‌ಆರ್‍‌ಟಿಸಿ, ಬಿಎಂಟಿಸಿ, ಕೆಎಂಎಫ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಬಿಎಂಪಿ ಹಾಗೂ ಇತರೆ ಸಂಘ ಸಂಸ್ಥೆಗಳು ಸಹ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ ಲಿಮಿಟೆಡ್‌ನ ಉತ್ಪನ್ನಗಳನ್ನು ಖರೀದಿಸಲು ಉತ್ಸುಕವಾಗಿದ್ದವು. ಹೀಗಾಗಿಯೇ ನಿಗಮವು 4(ಜಿ) ವಿನಾಯಿತಿ ಕೋರಿತ್ತು ಎಂಬುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

‘ಸರ್ಕಾರದ ಇತರೆ ಸಂಸ್ಥೆಗಳಾದ ಎಂ ಸಿ ಅಂಡ್‌ ಎ ಮತ್ತು ಕಿಯೋನಿಕ್ಸ್‌ ಮತ್ತು ಇತರೆ ಸಂಸ್ಥೆಗಳಿಗೆ ನೀಡಿರುವಂತೆ ಕೆಎಸ್‌ಡಿಎಲ್‌ ಸಂಸ್ಥೆಯು ಉತ್ಪಾದಿಸುತ್ತಿರುವ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಹಾಗೂ ನಿಗಮ, ಮಂಡಳಿಗಳಿಗೆ ಪ್ರತಿ ಸರಬರಾಜು ಆದೇಶಕ್ಕೆ 50 ಲಕ್ಷ ರು.ಗಳಿಗೆ ನೇರವಾಗಿ ಸರಬರಾಜು ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 4(ಜಿ) ವಿನಾಯಿತಿ ನೀಡಿ ನೇರವಾಗಿ ಇಲಾಖೆಗಳಿಗೆ ಹಾಗೂ ನಿಗಮ, ಮಂಳಿಗಳಿಗೆ ಸರಬರಾಜು ಮಾಡುವಂತೆ ಆದೇಶ ಹೊರಡಿಸಲು ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು,’ ಎಂದು ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 2023ರ ಆಗಸ್ಟ್‌ 28ರಂದು ಪತ್ರ ಮುಖೇನ  ಕೋರಿದ್ದರು.

 

 

 

‘ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್‌ ಲಿಮಿಟೆಡ್‌ ಉತ್ಪನ್ನಗಳ ಸರಬರಾಜು ಮಾಡಲು ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ನೀಡುವ ಕುರಿತು ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವಾಗುವುದಿಲ್ಲವೆಂದು ಹಾಗೂ ಸಂಗ್ರಹಣಾ ಪ್ರಾಧಿಕಾರಗಳು ಕೇಸ್‌ ಟು ಕೇಸ್‌ ಆಧಾರದಲ್ಲಿ ಕೆಎಸ್‌ಡಿಎಲ್‌ ಸಂಸ್ಥೆ ಸೇವೆಯನ್ನು ಪಡೆಯುವ ಕುರಿತು ಸೂಕ್ತ ಸಮರ್ಥನೆಗಳೊಂದಿಗೆ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಲಾಗುತ್ತದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ 2023ರ ಸೆ.19ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ತಿಳಿಸಿತ್ತು.

 

 

ಡಾಬರ್, ಹಿಂದೂಸ್ಥಾನ್‌ ಲಿವರ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಮಾರುಕಟ್ಟೆಯಲ್ಲಿ ಸಿಂಹಪಾಲು ಪಡೆದಿವೆ. ಈ ಕಂಪನಿಗಳ ಉತ್ಪನ್ನಗಳೊಂದಿಗೆ ಕೆಎಸ್‌ಡಿಎಲ್‌ ಮಾರುಕಟ್ಟೆಯಲ್ಲಿ ಸೆಣಸಬೇಕಿದೆ. ಹಲವು ಬ್ರ್ಯಾಂಡ್‌ಗಳನ್ನು ಹೊಂದಿರುವ ಕೆಎಸ್‌ಡಿಎಲ್‌ ಸಂಸ್ಥೆಯು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಭಾಗವಾಗಿಯೇ 4 (ಜಿ) ವಿನಾಯಿತಿ ಕೋರಿತ್ತು. ಈ ವಿನಾಯಿತಿ ನೀಡಿದ್ದಲ್ಲಿ ಕೆಎಸ್‌ಡಿಎಲ್‌ನ ಮಾರುಕಟ್ಟೆ ಜಾಲ ವಿಸ್ತರಣೆಗೆ ಅವಕಾಶವಾಗುತ್ತಿತ್ತು. ಆದರೇ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿಯನ್ನು ನೀಡುವ ಪ್ರಸ್ತಾವನೆಯನ್ನೇ ತಿರಸ್ಕರಿಸಿರುವುದು ಅದರ ಮಾರುಕಟ್ಟೆ ಜಾಲ ವಿಸ್ತರಣೆಗೆ ತೊಡಕಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಕೆಎಸ್‌ಡಿಎಲ್‌ ಉತ್ಪನ್ನಗಳ ಸರಬರಾಜು; 4 (ಜಿ) ವಿನಾಯಿತಿ ಪ್ರಸ್ತಾವ ತಿರಸ್ಕರಿಸಿದ ಸರ್ಕಾರ

 

‘ಕೆಎಸ್‌ಡಿಎಲ್ ಅನ್ನು ಕೇವಲ ಸರಕಾರಿ ಉದ್ದಿಮೆಯಾಗಿ ನೋಡುವ ದೃಷ್ಟಿಕೋನಕ್ಕೆ ವಿದಾಯ ಹೇಳಲಾಗುವುದು. ಈ ಸಂಸ್ಥೆ ತಯಾರಿಸುವ ಮೈಸೋಪು, ಊದುಗಡ್ಡಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಹಿಡಿದು ಮಾಲ್‌ವರೆಗೆ ಎಲ್ಲೆಡೆಯೂ ಸಿಗುವಂತೆ ಮಾಡಲಾಗುವುದು. ಒಟ್ಟಿನಲ್ಲಿ, ಇಡೀ ಭಾರತದಾದ್ಯಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎನ್ನುವುದು ಈಗಿನ ಗುರಿಯಾಗಿದೆ,” ಎಂದು ಸಚಿವ ಎಂ ಬಿ ಪಾಟೀಲ್‌ ಅವರು ಆಡಳಿತ ಮಂಡಳಿ ಸಭೆಯಲ್ಲಿ ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts