ಕಳಂಕಿತ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಖಾತೆ; ಗಾಳಿಗೆ ತೂರಲಾಗಿದೆಯೇ ಎಸ್ಕ್ರೋ ಮಹತ್ವ?

ಬೆಂಗಳೂರು; ಗ್ರಾಹಕರ ಖಾತೆಗಳಿಂದ ಹಣವನ್ನು ಕದಿಯಲು ತನ್ನ ಏಜೆಂಟ್‌ಗಳಿಗೆ ಸರಳ ಮತ್ತು ಸುಲಭ ಮಾರ್ಗ ಹಾಕಿಕೊಟ್ಟು ಅವಕಾಶ ಕಲ್ಪಿಸಿದೆ ಎಂಬ ಗುರುತರವಾದ ಆರೋಪಕ್ಕೆ ಈಗಾಗಲೇ ಗುರಿಯಾಗಿರುವ ಬ್ಯಾಂಕ್‌ ಆಫ್‌ ಬರೋಡಾದಲ್ಲಿಯೇ ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ಸಿಟಿಜನ್‌ ವಾಟರ್‍‌ ವೇ ಯೋಜನೆಯ ಖಾತೆ ತೆರೆದಿರುವುದು ಇದೀಗ ಬಹಿರಂಗವಾಗಿದೆ.

 

ಬ್ಯಾಂಕ್‌ ಆಫ್‌ ಬರೋಡಾದಲ್ಲಿನ ಕೆಲವರು 362 ಗ್ರಾಹಕರಿಂದ 2.2 ಮಿಲಿಯನ್ ರೂಪಾಯಿಗಳನ್ನು ($27,000) ಕದ್ದಿದ್ದಾರೆ ಎಂದು ಬ್ಯಾಂಕ್‌ನ ಆಂತರಿಕ ಲೆಕ್ಕಪರಿಶೋಧನಾ ವರದಿಗಳು ಮತ್ತು ದಾಖಲೆಗಳು ಇತ್ತೀಚೆಗಷ್ಟೇ ಬಹಿರಂಗಗೊಂಡಿದ್ದವು.

 

 

ಬ್ಯಾಂಕ್‌ನ ವಿಶ್ವಾಸರ್ಹತೆ ಬಗೆಗಿನ ಪ್ರಶ್ನೆಗಳು ಎದ್ದಿದ್ದರ ಬೆನ್ನಲ್ಲೇ ಇದೀಗ ಬಿಬಿಎಂಪಿಯು ಸಹ ತನ್ನ ಮಹತ್ವದ ಯೋಜನೆಗೆ ಸಂಬಂಧಿಸಿದ ಎಸ್ಕ್ರೋ ಖಾತೆಯನ್ನು ತೆರೆಯಲು ಹಿಂದಿನ ಬಿಜೆಪಿ ಸರ್ಕಾರವು ನಿರ್ದೇಶನದಂತೆ ಬ್ಯಾಂಕ್‌ ಆಫ್‌ ಬರೋಡಾದಲ್ಲಿಯೇ ಎಸ್ಕ್ರೋ ಖಾತೆ ತೆರೆದಿದ್ದು ಮುನ್ನೆಲೆಗೆ ಬಂದಿದೆ.

 

ಹಿಂದಿನ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ನಗರಾಭಿವೃದ್ದಿ ಇಲಾಖೆಯ ಹೊಣೆ ಹೊತ್ತಿದ್ದರಲ್ಲದೇ ಬ್ಯಾಂಕ್‌ ಆಫ್‌ ಬರೋಡಾದ ಶಾಖೆಯಲ್ಲಿಯೇ ಎಸ್ಕ್ರೋ ಖಾತೆ ತೆರೆಯಲು ಅನುಮೋದಿಸಿದ್ದರು ಎಂಬುದು ಗೊತ್ತಾಗಿದೆ.

 

ಅಲ್ಲದೇ   ನಿರ್ದಿಷ್ಟ ಬ್ಯಾಂಕಿನ ನಿರ್ದಿಷ್ಟ ಶಾಖೆಯಲ್ಲಿ ಎಸ್ಕ್ರೋ ಖಾತೆಯನ್ನು ತೆರೆಯಲು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ  ಆದೇಶಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಸಿಟಿಜನ್‌ ವಾಟರ್‍‌ ವೇ ಯೋಜನೆಗೆ ಸಂಬಂಧಿಸಿದಂತೆ ಎಸ್ಕ್ರೋ ಖಾತೆಯನ್ನು ಬೆಂಗಳೂರು ನಗರದ ಗಾಂಧಿ ಬಜಾರ್‍‌ನಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ ತೆರೆಯಲು ಕ್ರಮಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ ಅವರಿಗೆ 2021ರ ಜುಲೈ 16ರಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ ನಿರ್ದೇಶನದಂತೆ ಅಂದಾಜು 180 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು ಎಂಬುದು ತಿಳಿದು ಬಂದಿದೆ.

 

 

ಪತ್ರದಲ್ಲೇನಿದೆ?

 

ಬ್ಯಾಂಕ್‌ ಬರೋಡಾ ಸಂಸ್ಥೆಯು ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ವಿಲೀನದೊಂದಿಗೆ ಬೃಹತ್‌ ಸಾರ್ವಜನಿಕ ಬ್ಯಾಂಕ್‌ ಆಗಿರುತ್ತದೆ. ಬ್ಯಾಂಕ್‌ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್‌ ಮೊದಲಾದ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳಿಗೆ ಆರ್ಥಿಕ ಸೇವೆಯನ್ನು ನೀಡುತ್ತಿದೆ.

 

ಅಲ್ಲದೇ ಬ್ಯಾಂಕ್‌ ವಿಶ್ವಮಟ್ಟದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು ಡಿಜಿಟಲ್‌ ಬ್ಯಾಂಕಿಂಗ್‌, ಜಿಎಸ್‌ಟಿಐಎನ್‌, ಪಿಎಫ್‌ಎಂಎಸ್‌, ಎನ್‌ಟಿಆರ್‍‌ಪಿ ಮತ್ತು ಜೆಮ್‌ಗಳನ್ನು ಕೈಗೊಳ್ಳಲಾಗಿದೆ ಎಂದು ಇತ್ತೀಚೆಗೆ ಪಿಎಂಒ ಕಚೇರಿಯಿಂದ ಅಧಿಕೃತವಾಗಿದ್ದು ಸರ್ಕಾರದ ಇ-ಮಾರ್ಕೆಟ್‌ ಪೋರ್ಟಲ್‌ ಸಹಾ ಸದರಿ ಬ್ಯಾಂಕ್‌ನಲ್ಲಿ ಪೂಲ್‌ ಅಕೌಂಟ್‌ ಹೊಂದಿದೆ.

 

ಟ್ರೆಡಿಷನಲ್‌ ಪ್ರೊಡಕ್ಟ್‌, ಸರ್ವಿಸ್‌, ಎಲೆಕ್ಟ್ರಾನಿಕ್‌ ಪ್ರೊಡಕ್ಟ್‌, ಪ್ರೊಡಕ್ಟ್‌ ಆಫರಿಂಗ್ಸ್‌ ಫಾರ್‍‌ ದಿ ಎಂಪ್ಲಾಯಿಸ್‌ ಆಫ್‌ ಬಿಬಿಎಂಪಿ ಸೇವೆಗಳನ್ನು ಒದಗಿಸುತ್ತಿದೆ. ಹೀಗಾಗಿ ಬಿಬಿಎಂಪಿಯ ಉದ್ದೇಶಿತ ಯೋಜನೆಯಾದ ಸಿಟಿಜನ್‌ ವಾಟರ್‍‌ ವೇ ಪ್ರಾಜೆಕ್ಟರ್‍‌ ಯೋಜನೆಯ ಎಸ್ಕ್ರೋ ಖಾತೆಯನ್ನು ಗಾಂಧಿ ಬಜಾರ್‍‌ನಲ್ಲಿರುವ ಬ್ಯಾಂಕ್‌ ಬರೋಡಾ ಶಾಖೆಯಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸುವಂತೆ ಕೋರಿದೆ.

 

ಈ ಮನವಿಯಲ್ಲಿ ಕೋರಿರುವ ವಿಷಯದ ಕುರಿತು ಪರಿಶೀಲಿಸಿ ಸರ್ಕಾರದ ಮತ್ತು ಬಿಬಿಎಂಪಿಯ ಪ್ರತಿಷ್ಠಿತ ಯೋಜನೆಯಾದ ಸಿಟಿಜನ್‌ ವಾಟರ್‍‌ ವೇ ಪ್ರಾಜೆಕ್ಟ್‌ ಅನ್ನು ಅನುಷ್ಠಾನಗೊಳಿಸುವ ಕುರಿತು ಸದರಿ ಯೋಜನೆಗೆ ಸಂಬಂಧಿಸಿದಂತೆ ಗಾಂಧಿ ಬಜಾರ್‍‌ನಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ ಎಸ್ಕ್ರೋ ಖಾತೆಯಲ್ಲಿ ಖಾತೆ ತೆರೆಯುವ ಕುರಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.

 

ಏನದು ಎಸ್ಕ್ರೋ ಖಾತೆ?

 

ಎಸ್ಕ್ರೊ ಖಾತೆಯು ಕಾನೂನು-ಹಣಕಾಸಿನ ವ್ಯವಸ್ಥೆಯಾಗಿದೆ.  ಅದರ ಅಡಿಯಲ್ಲಿ ಮೂರನೇ ವ್ಯಕ್ತಿಯು ವಹಿವಾಟಿನಲ್ಲಿ ತೊಡಗಿರುವ ಎರಡು ಪಕ್ಷಗಳಿಗೆ ಸ್ವತ್ತುಗಳ ನಿಧಿಗಳನ್ನು ಹಿಡಿದಿಟ್ಟುಕೊಳ್ಳುತ್ತದೆಯಲ್ಲದೇ ಅದನ್ನು  ನಿಯಂತ್ರಿಸುತ್ತದೆ. ಹಾಗೆಯೇ  ಮತ್ತು ಪೂರ್ವ-ನಿಶ್ಚಿತ ಒಪ್ಪಂದದಲ್ಲಿ ನಮೂದಿಸಲಾದ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಿದ ನಂತರ ಅದನ್ನು ತೆಗೆದುಕೊಳ್ಳುವವರ ಹೆಸರಿನಲ್ಲಿ ಬಿಡುಗಡೆ ಮಾಡುತ್ತದೆ.

 

 

ಬ್ಯಾಂಕ್‌ ಆಫ್‌ ಬರೋಡಾದ ವಿರುದ್ಧ ಆರೋಪವೇನು?

 

ಭಾರತೀಯ ರಿಸರ್ವ್‌ ಬ್ಯಾಂಕ್‌, ಬ್ಯಾಂಕ್‌ ಅಫ್‌ ಬರೋಡಾದ ಮೊಬೈಲ್‌ ಅಪ್ಲಿಕೇಷನ್‌ ಬಾಬ್‌ ವರ್ಲ್ಡ್‌ನಲ್ಲಿ ಹೊಸ ಗ್ರಾಹಕರು ಆನ್‌ ಬೋರ್ಡ್‌ ಮಾಡುವುದನ್ನು ಬ್ಯಾಂಕ್ ಆಫ್ ಬರೋಡಾ ಅವರ ಮೊಬೈಲ್ ಅಪ್ಲಿಕೇಶನ್ ‘ಬಾಬ್ ವರ್ಲ್ಡ್ ‘ ನಲ್ಲಿ ಹೊಸ ಗ್ರಾಹಕರನ್ನು ಆನ್‌ಬೋರ್ಡ್ ಮಾಡುವುದನ್ನು ಅಕ್ಟೋಬರ್ 10 ರಂದು ಆರ್‌ಬಿಐ  ನಿಷೇಧಿಸಿತ್ತು.

 

ಸರ್ಕಾರಿ ಸ್ವಾಮ್ಯದ ಈ  ಬ್ಯಾಂಕ್ ದೇಶದ 7,000 ಶಾಖೆಗಳಲ್ಲಿ ಆಂತರಿಕ ಲೆಕ್ಕಪರಿಶೋಧನೆ ನಡೆಸಿತ್ತು.  ಬ್ಯಾಂಕ್‌ನ ಏಜೆಂಟ್‌ಗಳು ಗ್ರಾಹಕರ ಖಾತೆಗಳಿಂದ ರಹಸ್ಯವಾಗಿ ₹ 22 ಲಕ್ಷಗಳನ್ನು ಹಿಂಪಡೆದಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಲೆಕ್ಕ ಪರಿಶೋಧನೆಯು ಬಹಿರಂಗಪಡಿಸಿತ್ತು.

 

ಸರಾಸರಿ 47 ಖಾತೆಗಳು ಮೊಬೈಲ್‌ ಸಂಖ್ಯೆಗೆ ಲಿಂಕ್‌ ಆಗಿತ್ತು. ಹೀಗಾಗಿ ಬ್ಯಾಂಕ್‌ ಖಾತೆಗೆ ಸುಲಭವಾಗಿ ಪ್ರವೇಶಿಸಲು ದಾರಿಮಾಡಿಕೊಟ್ಟಂತಾಗಿತ್ತು. ಸುಲಭವಾಗಿ ಹಣ ವರ್ಗಾಯಿಸಬಹುದು ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಈ ಸೇವೆ ಅನುಕೂಲ ಮಾಡಿಕೊಟ್ಟಿತ್ತು. ಇದರಿಂದಾಗಿ ಸದ್ದಿಲ್ಲದೇ ಗ್ರಾಹಕರ ಖಾತೆಯಲ್ಲಿದ್ದ 22 ಲಕ್ಷ ರು.ಗಳನ್ನು ಅನಾಮತ್ತಾಗಿ ಎತ್ತಿದ್ದರು.

 

ಸಿಬ್ಬಂದಿ ಅನುಮತಿಯಿಲ್ಲದೆ ಖಾತೆ ತೆರೆದು, ನಕಲಿ ಸಹಿ ಮತ್ತು ಗುರುತಿನ ಸಂಖ್ಯೆಗಳನ್ನು ಹಾಕಲಾಗಿತ್ತು. ನಂತರ ಕೆಲವರು ಇನ್ನೂ  ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರ ಖಾತೆಯಿಂದಲೂ ಹಣವನ್ನು ದೋಚಿದ್ದರು.   ತದನಂತರ ಉನ್ನತ ಅಧಿಕಾರಿಗಳು ಈ ಎಲ್ಲಾ ಸಂಶಯಾಸ್ಪದ ಚಟುವಟಿಕೆಗಳನ್ನು ಮರೆಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.

 

ಬ್ಯಾಂಕ್‌  ಏಜೆಂಟ್‌ಗಳು ಅನಧಿಕೃತ ಮೊಬೈಲ್ ಸಂಖ್ಯೆಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆಯ ಕೊರತೆಯಿರುವ ಗ್ರಾಹಕರ ಖಾತೆಗಳಿಗೆ ಅಕ್ರಮವಾಗಿ ಲಿಂಕ್ ಮಾಡಿರುವುದು ಬ್ಯಾಂಕ್‌ನ ಹೊಸ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ “ಬಾಬ್ ವರ್ಲ್ಡ್” ಗೆ ಆನ್-ಬೋರ್ಡ್ ಮಾಡಲಾಗಿತ್ತು ಎಂಬುದು  ತನಿಖೆಯಿಂದ ತಿಳಿದುಬಂದಿದೆ . ಈ ಅನಧಿಕೃತ ಸಂಖ್ಯೆಗಳು ಅಪರಿಚಿತರು ಅಥವಾ ದೂರದ ಪ್ರದೇಶಗಳಲ್ಲಿನ ಬ್ಯಾಂಕ್ ಏಜೆಂಟ್‌ಗಳನ್ನು ಒಳಗೊಂಡಿವೆ ಎನ್ನಲಾಗಿದೆ.

 

ಹಗರಣ ಬೆಳಕಿಗೆ ಬಂದ ನಂತರ, ಬ್ಯಾಂಕ್ ಆಫ್ ಬರೋಡಾ ರಾಷ್ಟ್ರವ್ಯಾಪಿ ಲೆಕ್ಕಪರಿಶೋಧನೆ ನಡೆಸಿತ್ತು.  ಸರಿ ಸುಮಾರು 422,000 ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಪರಿಶೀಲಿಸಿತು. ಆದಾಗ್ಯೂ, ಈ ಲೆಕ್ಕ ಪರಿಶೋಧನೆಯು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು  ಎಂದು ಬ್ಯಾಂಕ್ ಉದ್ಯೋಗಿಗಳು ಹೇಳಿಕೊಂಡಿದ್ದರು.

 

ಆಂತರಿಕ ಲೆಕ್ಕ ಪರಿಶೋಧಕರು ತಮ್ಮ ಫೋನ್‌ಗಳಲ್ಲಿ ಅಪ್ಲಿಕೇಶನ್ ಸೇವೆಗಾಗಿ ಗ್ರಾಹಕರ ವಿನಂತಿಗಳನ್ನು ತೋರಿಸುವ “ಬಾಬ್ ವರ್ಲ್ಡ್” ವಿನಂತಿ ಪತ್ರಗಳು ಮತ್ತು ಫಾರ್ಮ್‌ಗಳನ್ನು ಹುಡುಕಲು ಪ್ರಾಥಮಿಕವಾಗಿ ಸೂಚಿಸಲಾಗಿತ್ತು.

 

ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಈ ದಾಖಲೆಗಳು ಕಂಡುಬಂದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿನ ಸ್ವತಂತ್ರ ಏಜೆಂಟ್ ಆಗಿರುವ ಅಪರಿಚಿತರು ಅಥವಾ “ವ್ಯಾಪಾರ ವರದಿಗಾರರ” ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಖಾತೆಗಳ ಅನೇಕ ನಿದರ್ಶನಗಳನ್ನು ವರದಿಗಳು ಬಹಿರಂಗಪಡಿಸಿದ್ದವು.

 

ಈ ಕೆಲವು ಖಾತೆಗಳಿಗೆ ಅನಧಿಕೃತ ಮೊಬೈಲ್ ಸಂಖ್ಯೆಗಳನ್ನು ಲಿಂಕ್ ಮಾಡಲಾಗಿದೆ ಮತ್ತು ನಂತರ ಬ್ಯಾಕ್-ಎಂಡ್‌ನಿಂದ ತೆಗೆದುಹಾಕಲಾಗಿದೆ ಎಂದು ರಿಪೋರ್ಟರ್ಸ್‌ ಕಲೆಕ್ಟಿವ್‌ ಮತ್ತ ಅಲ್‌ ಜಜೀರಾದ ವರದಿ ಬಹಿರಂಗಪಡಿಸಿತ್ತು.

 

ಕೆಲವು ಸಂದರ್ಭಗಳಲ್ಲಿ, ಗ್ರಾಹಕರು ಖಾತೆ ತೆರೆಯುವ ರೂಪದಲ್ಲಿ ಒಂದು ಮೊಬೈಲ್ ಸಂಖ್ಯೆಯನ್ನು ಒದಗಿಸಿದ್ದಾರೆ, ಆದರೆ ಬೇರೆ ಸಂಖ್ಯೆಯನ್ನು ಅವರ ಖಾತೆಗೆ ಲಿಂಕ್ ಮಾಡಲಾಗಿದೆ ಮತ್ತು “ಬಾಬ್ ವರ್ಲ್ಡ್” ನಲ್ಲಿ ನೋಂದಾಯಿಸಲಾಗಿತ್ತು.  ಪ್ರಾಸಂಗಿಕವಾಗಿ, ಬ್ಯಾಂಕ್ ಒಂದೇ ಮೊಬೈಲ್ ಸಂಖ್ಯೆಯನ್ನು ಗರಿಷ್ಠ ಎಂಟು ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಲು ಒಂದೇ ಕುಟುಂಬದವರಾಗಿದ್ದರೆ ಮಾತ್ರ ಅನುಮತಿ ನೀಡುತ್ತದೆ.  ಆದಾಗ್ಯೂ, ಲೆಕ್ಕಪರಿಶೋಧನೆಯ ಪ್ರಕಾರ  ಅನೇಕ ಮೊಬೈಲ್ ಸಂಖ್ಯೆಗಳು 10-60 ಖಾತೆಗಳೊಂದಿಗೆ ಲಿಂಕ್ ಆಗಿದ್ದವು ಎಂಬುದು ತಿಳಿದು ಬಂದಿತ್ತು.

 

ಅನಕ್ಷರಸ್ಥ ಮತ್ತು ಅಪ್ರಾಪ್ತ ಗ್ರಾಹಕರು ಆ್ಯಪ್‌ನಲ್ಲಿ ತಪ್ಪಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಆಡಿಟ್ ಬಹಿರಂಗಪಡಿಸಿತ್ತು. ಪರಿಶೀಲನೆಯಲ್ಲಿರುವ ಹಲವು ಖಾತೆಗಳನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾಗಿದೆ ಮತ್ತು ಕೇಂದ್ರದಿಂದ ನೇರವಾಗಿ ಸಬ್ಸಿಡಿಗಳನ್ನು ಸ್ವೀಕರಿಸಲು ಬಳಸಲಾಗಿತ್ತು. ಇದರಿಂದ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಏಜೆಂಟರು ಕದ್ದಿರುವ ಪ್ರಕರಣಗಳು ಇರಬಹುದು ಎಂಬ ಅನುಮಾನ ಮೂಡಿತ್ತು.

 

ಈ ಹಗರಣವನ್ನು ಮುಚ್ಚಿಹಾಕಲು ನಕಲಿ ದಾಖಲೆಗಳನ್ನು ಸೃಷ್ಟಿಸಲು ಬ್ಯಾಂಕ್ ವ್ಯವಸ್ಥಾಪಕರಿಂದ ಒತ್ತಡ ಹೇರಲಾಗಿತ್ತು ಎಂದು ಬ್ಯಾಂಕ್ ನೌಕರರು ಆರೋಪಿಸಿದ್ದಾರೆ. ಕೆಲವು ತಂತ್ರಗಳು ನಕಲಿ ಸಹಿಗಳು ಮತ್ತು ಹೆಬ್ಬೆರಳು ಮುದ್ರೆಗಳನ್ನು ಬ್ಯಾಕ್‌ಡೇಟ್ ಮಾಡಿದ ದಿನಾಂಕಗಳೊಂದಿಗೆ ಖಾತೆ-ಲಿಂಕ್ ಮಾಡುವ ಸಮ್ಮತಿ ನಮೂನೆಗಳಿಗೆ ಸೇರಿಸುವುದನ್ನು ಒಳಗೊಂಡಿವೆ.

 

ತಮ್ಮ ಖಾತೆಗಳನ್ನು ಮುಚ್ಚಬಹುದು ಅಥವಾ ಸಬ್ಸಿಡಿಗಳನ್ನು ನಿಲ್ಲಿಸಬಹುದು ಎಂದು ತಪ್ಪಾಗಿ ಹೇಳುವ ಮೂಲಕ ಒಪ್ಪಿಗೆ ನಮೂನೆಗಳಿಗೆ ಸಹಿ ಹಾಕುವಂತೆ ಗ್ರಾಹಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನೌಕರರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts