ಅಂಬೇಡ್ಕರ್‍‌ ಸಹಾಯ ಹಸ್ತ ಯೋಜನೆಯ ಕಾರ್ಮಿಕ ಬಂಧು ಸೇವೆ ರದ್ದುಗೊಳಿಸಿದ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು; ‘ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ‍್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ”ರನ್ನು ಒಳಗೊಂಡಿದ್ದ ಅಂಬೇಡ್ಕರ್‍‌ ಸಹಾಯ ಹಸ್ತ ಯೋಜನೆಯಡಿ ಕಾರ್ಮಿಕ ಬಂಧುಗಳ ಸೇವೆಯನ್ನು ಈಗಿನ ಕಾಂಗ್ರೆಸ್‌ ಸರ್ಕಾರವು ರದ್ದುಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

 

ಕಾರ್ಮಿಕ ಬಂಧುಗಳ ಸೇವೆಯನ್ನು ರದ್ದುಗೊಳಿಸಬೇಕು ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು 2021ರಲ್ಲೇ ಸಲ್ಲಿಸಿದ್ದ ಪ್ರಸ್ತಾವನೆಗೆ ಹಿಂದಿನ ಬಿಜೆಪಿ ಸರ್ಕಾರವು ಒಪ್ಪಿರಲಿಲ್ಲ. ಆದರೀಗ ಕಾಂಗ್ರೆಸ್‌ ಸರ್ಕಾರವು 2 ವರ್ಷಗಳ ಹಿಂದಿನ ಪ್ರಸ್ತಾವನೆಯನ್ನು ಒಪ್ಪಿದೆಯಲ್ಲದೇ ಅಂಬೇಡ್ಕರ್‍‌ ಸಹಾಯ ಹಸ್ತ ಯೋಜನೆಯಡಿಯಲ್ಲಿದ್ದ ಕಾರ್ಮಿಕ ಬಂಧುಗಳ ಸೇವೆಯನ್ನೇ ರದ್ದುಗೊಳಿಸಿ ಆದೇಶಿಸಿದೆ.

 

ವಿಶೇಷವೆಂದರೇ 2013-18ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರವೇ  ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕಾರ್ಮಿಕ ಬಂಧು ಮೂಲಕ ಅನುಷ್ಠಾನಗೊಳಿಸಿತ್ತು. ಆದರೀಗ 5 ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಕಾರ್ಮಿಕ ಬಂಧುಗಳ ಸೇವೆಯನ್ನೇ ರದ್ದುಗೊಳಿಸಿ 2023ರ ಆಗಸ್ಟ್‌ 21ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗಳಲ್ಲಿನ ಅಂಬೇಡ್ಕರ್‍‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಕಾರ್ಮಿಕ ಬಂಧುಗಳ ಸೇವೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ,’ ಎಂದು 2023ರ ಆಗಸ್ಟ್‌ 21ರಂದು ಕಾರ್ಮಿಕ ಇಲಾಖೆಯು ಆದೇಶ ಹೊರಡಿಸಿದೆ.

 

ಈ ಆದೇಶಕ್ಕೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

 

ಕಾರ್ಮಿಕ ಇಲಾಖೆಯಲ್ಲಿದ್ದ  ವಿವಿಧ ಯೋಜನೆಗಳನ್ನು ವಿಲೀನಗೊಳಿಸಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕಾರ್ಮಿಕ ಬಂಧು ಮುಖಾಂತರ ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಪ್ಪಿಗೆ ನೀಡಿದ್ದರು. ಈಗ ಸಿದ್ದರಾಮಯ್ಯ ಅವರು  ಎರಡನೇ ಬಾರಿ ಮುಖ್ಯಮಂತ್ರಿಯಾಗಿ 100 ದಿನಗಳಾದ ನಂತರ ಕಾರ್ಮಿಕ ಬಂಧುಗಳ ಸೇವೆಯನ್ನೇ ರದ್ದುಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಈ ಯೋಜನೆಯಡಿ “ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ‍್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ”ರನ್ನು ಏಕ ಶೀರ್ಷಿಕೆ ಮತ್ತು ಏಕ ಚಿಹ್ನೆಯಡಿ ನೋಂದಾಯಿಸಿ “ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ”ಯಡಿ ಸ್ಮಾರ್ಟ್ ಕಾರ್ಡ್ ನೀಡಲು ಕ್ರಮಕೈಗೊಂಡಿತ್ತು.

 

ಕಾರ್ಮಿಕ ಇಲಾಖೆ ಅಂಬೇಡ್ಕರ್‍‌ ಸಹಾಯ ಹಸ್ತ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕ ಬಂಧುಗಳ ಸೇವೆಯನ್ನು ರದ್ದುಗೊಳಿಸುವ ಸಂಬಂಧ ಕರ್ನಾಟಕ ಕಟ್ಟಡ ಮತ್ತು  ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2021ರ ಜುಲೈ 1ರಂದು  ತನ್ನ  33ನೇ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು.

 

‘ಕಾರ್ಮಿಕ ಬಂಧುಗಳು ಮಂಡಳಿಯ ಸೇವಾ ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರಿಗೆ ಒದಗಿಸುವಲ್ಲಿ ರಾಜ್ಯಾದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಅವರುಗಳ ಕಾರ್ಯವು ಸಮರ್ಪಕವಾಗಿರುವುದಿಲ್ಲವಾದ್ದರಿಂದ ಇವರ ಸೇವೆಯನ್ನು ರದ್ದುಗೊಳಿಸಬೇಕು,’ ಎಂದು ಮಂಡಳಿ ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಿತ್ತು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

 

ಮಂಡಳಿಯ ನಿರ್ಣಯದಂತೆ ಕಾರ್ಮಿಕ ಬಂಧುಗಳ ಸೇವೆಯನ್ನು ರದ್ದುಗೊಳಿಸಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಹಿಂದಿನ ಸರ್ಕಾರವು ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ಕಾರ್ಮಿಕ ಬಂಧುಗಳ ಸೇವೆಯನ್ನು ರದ್ದುಗೊಳಿಸಿರಲಿಲ್ಲ.

 

ಮತ್ತೊಂದು ವಿಶೇಷವೆಂದರೆ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿಯಲ್ಲಿ ಹಂಚಿಕೆಯಾಗಿದ್ದ 24.44 ಕೋಟಿ ರು.ಗಳನ್ನು ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿಟ್ಟಿದ್ದ ಅಧಿಕಾರಿಗಳು ಯೋಜನೆಯ ಹಣವನ್ನು ನಿರ್ಬಂಧಿಸಿದ್ದರು ಎಂಬ ಮಾಹಿತಿಯನ್ನೂ ಸಿಎಜಿ ಬಯಲು ಮಾಡಿತ್ತು.

 

ಸ್ಮಾರ್ಟ್‌ ಕಾರ್ಡ್‌ಗಳನ್ನು ಒದಗಿಸುವ ಮೂಲಕ ಅಪಘಾತ ಪರಿಹಾರ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ 2017-18ರಲ್ಲಿ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನುಷ್ಠಾನಗೊಂಡಿತ್ತು.

 

2017-18 ಮತ್ತು 2018-19ರಲ್ಲಿ 37.78 ಕೋಟಿ ಒಟ್ಟು ಆಯವ್ಯಯ ಹಂಚಿಕೆಗೆ ಪ್ರತಿಯಾಗಿ 30.83 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಸ್ಮಾರ್ಟ್‌ ಕಾರ್ಡ್‌ಗಳನ್ನು ಮುದ್ರಿಸಲು ಹಾಗೂ ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಲು 6.39 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿತ್ತು.  ಉಳಿದ 24.44 ಕೋಟಿಗಳನ್ನು ಮಂಡಳಿಯ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ಇಟ್ಟಿದ್ದರಿಂದಾಗಿ ಸರ್ಕಾರದ ಹಣವನ್ನು ನಿರ್ಬಂಧಿಸಿದಂತಾಗಿತ್ತು,’ ಎಂದು ಸಿಎಜಿ ವರದಿ ವಿವರಿಸಿತ್ತು. 

ಅಂಬೇಡ್ಕರ್‌ ಸಹಾಯ ಹಸ್ತ ಯೋಜನೆ ಹಣ ಖರ್ಚು ಮಾಡದೇ ನಿರ್ಬಂಧ; ಬೆಳಗಲಿಲ್ಲ ‘ಆಶಾದೀಪ’

 

ಸರ್ವರಿಗೂ ಕೌಶಲ್ಯಕ್ಕಾಗಿ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಯೋಜನೆ ಮಾದರಿಯಲ್ಲಿ 2015-16ರಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಕೇಂದ್ರಕ್ಕೆ ಬಿಡುಗಡೆ ಮಾಡಿದ್ದ 10 ಕೋಟಿ ರು.ಗಳನ್ನು ಖರ್ಚೇ ಮಾಡಿಲ್ಲ. ಈ ಹಣವನ್ನು 2 ವರ್ಷಗಳ ಕಾಲ ಉಳಿತಾಯ ಖಾತೆಯಲ್ಲಿಡಲಾಗಿತ್ತು.

the fil favicon

SUPPORT THE FILE

Latest News

Related Posts