ಅಲ್ಪಸಂಖ್ಯಾತರ ಕಲ್ಯಾಣ ಸೇರಿ 14 ಇಲಾಖೆಗಳಿಗೆ ತನ್ನ ಪಾಲಿನಲ್ಲಿ ಬಿಡಿಗಾಸೂ ನೀಡದ ರಾಜ್ಯ ಸರ್ಕಾರ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಒಟ್ಟು 14 ಇಲಾಖೆಗಳಿಗೆ ರಾಜ್ಯ ಸರ್ಕಾರವು ತನ್ನ ಪಾಲಿನಲ್ಲಿ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

2023-24ರ ಸಾಲಿಗೆ ಸಂಬಂಧಿಸಿದಂತೆ 2023ರ ಆಗಸ್ಟ್‌ 1ರಂದು ನಡೆದಿದ್ದ ಕೆಡಿಪಿ ಸಭೆಗೆ ಇಲಾಖಾವಾರು ಸಾಧಿಸಿರುವ ಆರ್ಥಿಕ ಪ್ರಗತಿ ಕುರಿತು ಅಂಕಿ ಅಂಶಗಳನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಮಂಡಿಸಿದೆ.

 

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಅನುದಾನದ ವಿವರಗಳನ್ನು ಸಭೆಗೆ ಮಂಡಿಸಿರುವ ಅಂಕಿ ಅಂಶಗಳ ಪ್ರಕಾರ 14 ಇಲಾಖೆಗಳಿಗೆ 6,371.34 ಕೋಟಿ ರು. ಅನುದಾನ ಲಭ್ಯವಾಗಿದ್ದರೂ ರಾಜ್ಯ ಸರ್ಕಾರವು ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರವು ತನ್ನ ಪಾಲಿನಲ್ಲಿ 3 ಇಲಾಖೆಗಳಿಗೆ ಒಟ್ಟು ಅನುದಾನದಲ್ಲಿ ಕೇವಲ 1,841.27 ಕೋಟಿ ರು. ಬಿಡುಗಡೆ ಮಾಡಿದೆ ಎಂಬ ಸಂಗತಿಯು ಗೊತ್ತಾಗಿದೆ. ಅಂಕಿ ಅಂಶಗಳ ಪ್ರತಿಯು ”ದಿ ಫೈಲ್‌’ಗೆ ಲಭ್ಯವಾಗಿದೆ.

 

2023-24ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯದ ಅನುದಾನವು 20,545.15 ಕೋಟಿ ರು. ಇದ್ದರೆ ಕೇಂದ್ರದ ಅನುದಾನವು 18,716.06 ಕೋಟಿಗಳಷ್ಟಿದೆ. ಇದರಲ್ಲಿ ಪ್ರಾಥಮಿಕ ಶಿಲ್ಕು 9,932.31 ಕೋಟಿ ರು. ಸೇರಿ ಒಟ್ಟಾರೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 49,193.51 ಕೋಟಿ ರು. ಅನುದಾನ ಲಭ್ಯವಿದೆ ಎಂಬುದು ದಾಖಲೆಗಳಿಂದ ಗೊತ್ತಾಗಿದೆ.

 

ಒಟ್ಟು 49,193.51 ಕೋಟಿ ರು ಪೈಕಿ ರಾಜ್ಯ ಸರ್ಕಾರವು 4,562.22 ಕೋಟಿ ರು, ಕೇಂದ್ರ ಸರ್ಕಾರವು 2,856.08 ಕೋಟಿ ರು ಬಿಡುಗಡೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಒಟ್ಟಾರೆಯಾಗಿ ಕೇಂದ್ರ ಪುರಸ್ಕೃತ ಯೋಜನೆಗಳಡಿ 7,418.30 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಕೇಂದ್ರದ ಬಿಡುಗಡೆಗೆ ಒಟ್ಟಾರೆ ಶೇ.15.26ರಷ್ಟು ಆರ್ಥಿಕ ಪ್ರಗತಿಯಾಗಿದ್ದರೇ ಒಟ್ಟು ವೆಚ್ಚಕ್ಕೆ ಶೇ. 36.31ರಷ್ಟಿದೆ ಎಂದು ಅಂಕಿ ಅಂಶಗಳನ್ನು ಯೋಜನೆ ಇಲಾಖೆಯು ಮಂಡಿಸಿರುವುದು ತಿಳಿದು ಬಂದಿದೆ.

 

ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್‌ ಖರ್ಗೆ, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌, ಅರಣ್ಯ ಸಚಿವ ಈಶ್ವರ್‍‌ ಖಂಡ್ರೆ, ಸತೀಶ್‌ ಜಾರಕಿಹೊಳಿ ಸೇರಿದಂತೆ ಇನ್ನಿತರೆ ಸಚಿವರು ಈ ಬಗ್ಗೆ ಇನ್ನಷ್ಟೇ ಸಭೆ ನಡೆಸಬೇಕಿದೆ ಎಂದು ಗೊತ್ತಾಗಿದೆ.

 

ನಯಾ ಪೈಸೆ ಬಿಡುಗಡೆಯಾಗದ ಇಲಾಖೆಗಳಿವು

 

ಕೇಂದ್ರ ಪುರಸ್ಕೃತ ಯೋಜನೆಗಳಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯವು 33.00 ಕೋಟಿ ರು, ಕೇಂದ್ರ ಸರ್ಕಾರವು 50 ಕೋಟಿ ರು. ಸೇರಿ ಒಟ್ಟಾರೆ 83.00 ಕೋಟಿ ರು.ಗಳ ಅನುದಾನ ಲಭ್ಯವಾಗಿತ್ತು. ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ವೆಚ್ಚವನ್ನು ಶೂನ್ಯ ಎಂದು ತೋರಿಸಲಾಗಿದೆ.

 

ಕೌಶಲ್ಯಾಭಿವೃದ್ದಿ ಇಲಾಖೆಗೆ 98 ಕೋಟಿ ರು., ತೋಟಗಾರಿಕೆ ಇಲಾಖೆಗೆ 293.62 ಕೋಟಿ ರು., ನಗರಾಭಿವೃದ್ಧಿ ಇಲಾಖೆಗೆ 960 ಕೋಟಿ ರು., ರೇಷ್ಮೆ 12.25 ಕೋಟಿ ರು., ವಸತಿ ಇಲಾಖೆಗೆ 200 ಕೋಟಿ ರು., ಹಿಂದುಳಿದ ವರ್ಗ ಇಲಾಖೆಗೆ 216.01 ಕೋಟಿ ರು., ಲೋಕೋಪಯೋಗಿ ಇಲಾಖೆಗೆ 105 ಕೋಟಿ ರು., ಅರಣ್ಯ ಇಲಾಖೆಗೆ 41.81 ಕೋಟಿ ರು., ಗ್ರಾಮೀಣಾಭಿವೃದ್ಧಿಗೆ 4,411.65 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಆದರೆ ಈ ಇಲಾಖೆಗಳಿಗೆ ರಾಜ್ಯ ಸರ್ಕಾರವು ತನ್ನ ಪಾಲಿನಲ್ಲಿ ಬಿಡಿಗಾಸನ್ನೂ ಕೊಟ್ಟಿಲ್ಲ ಎಂಬುದು ಯೋಜನೆ ಇಲಾಖೆಯ ಅಂಕಿ ಅಂಶಗಳಿಂದ ಗೊತ್ತಾಗಿದೆ.

 

ಲೋಕೋಪಯೋಗಿ ಇಲಾಖೆಗೆ 105.00 ಕೋಟಿ ರು., ಕೇಂದ್ರ ಸರ್ಕಾರದ ಪಾಲಿನಲ್ಲಿ 1,500 ಕೋಟಿ ರು. ಅನುದಾನ ಲಭ್ಯವಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರವು ಕೇವಲ 12.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ  ಅರಣ್ಯ ಇಲಾಖೆಗೆ ಕೇಂದ್ರ ಸರ್ಕಾರವು 58.89 ಕೋಟಿ ರು. ಪೈಕಿ ಕೇವಲ 3 ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಂದ್ರ ಸರ್ಕಾರದ 8,812.62 ಕೋಟಿ ರು ಪೈಕಿ 1,826.27 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.

 

ಜನವರಿ 2023 ಅಂತ್ಯಕ್ಕೂ ಕೇಂದ್ರ ಸರ್ಕಾರವು ತನ್ನ ಪಾಲಿನಲ್ಲಿ 8,199 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ 122 ಕಾರ್ಯಕ್ರಮಗಳಿಗೆ ಚಾಲನೆಯೇ ಸಿಕ್ಕಿರಲಿಲ್ಲ.

 

ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ

 

ವಸತಿ ಸೇರಿದಂತೆ 8 ಇಲಾಖೆಗಳಿಗೂ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನ ನೀಡಿರಲಿಲ್ಲ.

ಕೇಂದ್ರ ಪುರಸ್ಕೃತ ಯೋಜನೆ; 8 ಇಲಾಖೆಗಳಿಗಿಲ್ಲ ಬಿಡಿಗಾಸು, ಕೇಂದ್ರದಿಂದಲೇ 16,534 ಕೋಟಿ ಬಾಕಿ

ಅಲ್ಲದೇ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ತನ್ನ ಪಾಲಿನ ಅನುದಾನದಲ್ಲಿಯೂ ಇಳಿಕೆ ಮಾಡಿತ್ತು.

ಕೇಂದ್ರ ಅನುದಾನದಲ್ಲಿ ಶೇ.17.55ರಷ್ಟು ಇಳಿಕೆ; ಉಸಿರೆತ್ತದ ಬಿಜೆಪಿ ಸರ್ಕಾರ

ಕೇಂದ್ರ ಪುರಸ್ಕೃತ ಯೋಜನೆಯ ಕಾರ್ಯಕ್ರಮಗಳಡಿ 2,948 ಕೋಟಿ ರು.ನಲ್ಲಿ ಕೇವಲ 523 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಆಗಲೂ ಸಹ ಹಿಂದಿನ ರಾಜ್ಯ ಸರ್ಕಾರವು ತುಟಿಬಿಚ್ಚಿರಲಿಲ್ಲ.

ಕೇಂದ್ರ ಪುರಸ್ಕೃತ ಯೋಜನೆ; 2,948 ಕೋಟಿಯಲ್ಲಿ 523 ಕೋಟಿ ಕೊಟ್ಟರೂ ತುಟಿಬಿಚ್ಚದ ಸರ್ಕಾರ

ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸದಿದ್ದರೂ ಹಿಂದಿನ ರಾಜ್ಯ ಸರ್ಕಾರವು ಕೇಂದ್ರದ ಅನುದಾನವನ್ನು ನಿರೀಕ್ಷಿಸಿ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts