ಶಕ್ತಿ; ರಾಜ್ಯದ ಗಡಿಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಹೆಚ್ಚುವರಿ ಸಹಾಯವಿಲ್ಲವೆಂದ ಸರ್ಕಾರ

ಬೆಂಗಳೂರು: ಶಕ್ತಿ ಯೋಜನೆಯಡಿ  ಅಂತರರಾಜ್ಯ ಸಾರಿಗೆಗಳಲ್ಲಿ ರಾಜ್ಯದ ಗಡಿಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಈಗಾಗಲೇ  ಆಡಳಿತ ಇಲಾಖೆ ಹಂತದಲ್ಲಿ ಅವಕಾಶ ನೀಡಲಾಗಿದ್ದರೂ ಸಹ ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸುವುದಿಲ್ಲ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ಅಂತರರಾಜ್ಯ ಸಾರಿಗೆಗಳಲ್ಲಿ ರಾಜ್ಯದ ಗಡಿಯವರೆಗೆ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆಗೆ ಆಯವ್ಯಯದಲ್ಲಿ ನಿಗದಿ ಮಾಡಿದ ಮೊತ್ತದ ಮಿತಿಯಲ್ಲಿಯೇ ಕ್ರಮ ವಹಿಸಬೇಕು ಎಂಬ ಷರತ್ತನ್ನೂ ವಿಧಿಸಿರುವ ಆರ್ಥಿಕ ಇಲಾಖೆಯು ಇದಕ್ಕೆ ಸಹಮತಿ ನೀಡಿದೆ.

 

ಅದೇ ರೀತಿ ಶಕ್ತಿ ಯೋಜನೆಯ  ಸ್ಮಾರ್ಟ್‌ ಕಾರ್ಡ್‌ಗಳ ವಿತರಣೆಗೆ ಕಾಲಾವಧಿಯನ್ನು ವಿಸ್ತರಿಸಲು ಸಾರಿಗೆ ಇಲಾಖೆಗೆ ಸಹಮತಿ ನೀಡಿದೆಯಾದರೂ ಎಷ್ಟು ತಿಂಗಳವರೆಗೆ ವಿಸ್ತರಣೆಗೆ ಸಹಮತಿ ನೀಡಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ ಎಂದು ಗೊತ್ತಾಗಿದೆ.

 

ಈ ಕುರಿತು ಆರ್ಥಿಕ ಇಲಾಖೆಯು ಸಾರಿಗೆ ಇಲಾಖೆಗೆ ತನ್ನ ಅಭಿಪ್ರಾಯ (ಆ ಇ 304 ವೆಚ್ಚ-11/2023 )(E) (TD 18 TCB 2023 (P-1)(E) ತಿಳಿಸಿದೆ ಎಂದು ಗೊತ್ತಾಗಿದೆ.

 

ಶಕ್ತಿ ಯೋಜನೆಯಡಿ ಅಂತರರಾಜ್ಯ ಸಾರಿಗೆಗಳಲ್ಲಿ ರಾಜ್ಯದ ಗಡಿಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಆಡಳಿತ ಇಲಾಖೆಯು ತನ್ನ ಹಂತದಲ್ಲೇ  ಅವಕಾಶ ನೀಡಿತ್ತು. ಇದನ್ನು ಪ್ರಸಕ್ತ ಘಟನೋತ್ತರ ಅನುಮೋದನೆಗಾಗಿ ಮತ್ತು ಹೆಚ್ಚುವರಿ ಸಹಾಯಕ್ಕಾಗಿ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಇದನ್ನು ಪರಿಶೀಲಿಸಿದ್ದ ಸಾರಿಗೆ ಇಲಾಖೆಯು ಸಹಮತಿಗಾಗಿ ಆರ್ಥಿಕ ಇಲಾಖೆಯನ್ನು ಕೋರಿತ್ತು. ಇದೀಗ ಆರ್ಥಿಕ ಇಲಾಖೆಯು ‘ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸುವುದಿಲ್ಲ,’ ಎಂದು ಕಠಿಣ ನಿಲುವು ತಳೆದಿರುವುದರಿಂದ ಸಾರಿಗೆ ನಿಗಮಗಳು ಇನ್ನಷ್ಟು ಸಂಕಷ್ಟಕ್ಕೆ ಬೀಳುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದ ಕುರಿತು ಸಾರಿಗೆ ಇಲಾಖೆಯು ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಇನ್ನಷ್ಟೇ ಚರ್ಚಿಸಬೇಕಿದೆ. ಹೆಚ್ಚುವರಿ ಸಹಾಯ ಪಡೆದುಕೊಳ್ಳುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

 

ಆರ್ಥಿಕ ಇಲಾಖೆ ಅಭಿಪ್ರಾಯದಲ್ಲೇನಿದೆ?

 

ಅಂತರರಾಜ್ಯ ಸಾರಿಗೆಯಲ್ಲಿ ರಾಜ್ಯದ ಗಡಿಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಈಗಾಗಲೇ ಆಡಳಿತ ಇಲಾಖೆ ಹಂತದಲ್ಲಿ ಅವಕಾಶ ನೀಡಿ ಪ್ರಸಕ್ತ ಘಟನೋತ್ತರ ಅನುಮೋದನೆಗಾಗಿ ಸಲ್ಲಿಸಲಾಗಿರುತ್ತದೆ. ಈ ಕುರಿತು ಆರ್ಥಿಕ ಇಲಾಖೆಯು ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸಲಾಗುವುದಿಲ್ಲವೆಂದು ಮತ್ತು ಈಗಾಗಲೇ ಶಕ್ತಿ ಯೋಜನೆಗೆ ಆಯವ್ಯಯದಲ್ಲಿ ನಿಗದಿ ಮಾಡಿದ ಮೊತ್ತದ ಮಿತಿಯಲ್ಲಿಯೇ ಕ್ರಮ ವಹಿಸುವ ಷರತ್ತಿನೊಂದಿಗೆ ಸಹಮತಿ ನೀಡಿದೆ.

 

ಈಗಾಗಲೇ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಿದ ಮೊತ್ತಕ್ಕೆ ಸೀಮಿತಗೊಳಿಸಿ ಬಿಡುಗಡೆ ಮಾಡುತ್ತಿರುವುದರಿಂದ ಶಕ್ತಿ ಕಾರ್ಡ್‌ ವಿತರಣೆ ಸಂಬಂಧ ಪ್ರಸ್ತಾಪಿಸಿರುವ ಕಾಲಾವಧಿ ವಿಸ್ತರಣೆ ಕುರಿತು ಸಹಮತಿ ನೀಡಿದೆ.

 

ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಗ್ರಾಮ ಒನ್‌/ಬೆಂಗಳೂರು ಒನ್‌/ ಕರ್ನಾಟಕ -1 ಅರ್ಜಿ ನೋಂದಣಿಗೆ 10 ರು., ಪ್ರತಿ ಗುರುತಿನ ಚೀಟಿ ಮುದ್ರಿಸಲು 2 ರನಂತೆ ಒಟ್ಟು 12 ರು, ಜಿಎಸ್‌ಟಿ ಸೇರಿ 14.16 ಸೇವಾ ಶುಲ್ಕ ನಿಗದಿಪಡಿಸಲು ಸಹಮತಿಸಿದೆ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ಸಾರಿಗೆ ಇಲಾಖೆಗೆ 2023ರ ಸೆ.4ರಂದು  ತಿಳಿಸಿದೆ ಎಂದು ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಗೊಳಿಸಿದಲ್ಲಿ ನಗದು ಹರಿವಿನಲ್ಲಿ ಕೋಟ್ಯಂತರ ರುಪಾಯಿ ಕೊರತೆ, ಸಾರಿಗೆ ನಿಗಮಗಳಿಗೆ ಚಾಲ್ತಿಯಲ್ಲಿರುವ ಆದಾಯ ಖೋತಾದಂತಹ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಪಾವತಿಗೂ ಅಡಚಣೆಯಾಗಲಿದೆ.

 

ಉಚಿತ ಪ್ರಯಾಣದ ‘ಶಕ್ತಿ’; ಆದಾಯ ಖೋತಾ, ಸಿಬ್ಬಂದಿ ವೇತನಕ್ಕೆ ಅಡಚಣೆ, ಪ್ರಯಾಣ ದರ ಪರಿಷ್ಕರಣೆ?

 

ಅದೇ ರೀತಿ ಡೀಸೆಲ್‌ ದರ, ಸಿಬ್ಬಂದಿಗೆ ಪಾವತಿಸುವ ತುಟ್ಟಿಭತ್ಯೆ ಹೆಚ್ಚಳ, ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಏರಿಕೆಯಾಗುವುದಲ್ಲದೇ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ಅನಿವಾರ್ಯತೆಗೂ ಸರ್ಕಾರವು ಸಿಲುಕಲಿದೆ ಎಂದು ‘ದಿ ಫೈಲ್‌’ ಆರಂಭದಲ್ಲೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಿಸಲಿರುವ ಸ್ಮಾರ್ಟ್‌ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಒದಗಿಸಬೇಕು ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

 

 

ಇನ್ನು, ಶಕ್ತಿ ಯೋಜನೆ ಜಾರಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾರಿಗೆ ಬಸ್‌ಗಳಿಗೆ ಆದ್ಯತೆ ನೀಡಲಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಹೆಚ್ಚುವರಿ ಸೇವೆಗಳಲ್ಲಿ ಕಾರ್ಯಾಚರಿಸಬೇಕು. ಅಲ್ಲದೇ ನೆರೆ ರಾಜ್ಯದ ಗಡಿಭಾಗಗಳಲ್ಲಿ ವಾಸವಿದ್ದು ಕರ್ನಾಟಕದಲ್ಲಿ ಹೆಚ್ಚಿನ ಸಮಯ ಪ್ರಯಾಣಿಸುವ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಬೇಡಿಕೆ ಇಡುವ ಸಾಧ್ಯತೆಗಳೂ ಇವೆ. ಕರ್ನಾಟಕ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಪಾಸ್‌ ವಿತರಿಸುವುದು ಮತ್ತು ನಿರ್ವಾಹಕರು ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಯೋಜನೆಯ ನಿಬಂಧನೆಗಳನ್ನು ಪರಿಶೀಲಿಸಿ ಇಟಿಎಂ ಮೂಲಕ ಟಿಕೆಟ್‌ ವಿತರಿಸಲು ಸಮಯಾವಕಾಶದ ಅಗತ್ಯವಿದೆ ಎಂದೂ ಪ್ರಸ್ತಾವನೆಯಲ್ಲಿ ತಿಳಿಸಿತ್ತು.

SUPPORT THE FILE

Latest News

Related Posts