ವೇತನ, ಪ್ರಯಾಣ, ಭತ್ಯೆ ವಿವರ ಮುಚ್ಚಿಟ್ಟ ಸಿಎಂ ಮಾಧ್ಯಮ ಸಲಹೆಗಾರ; ವಿವರಗಳೇನು ವೈಯಕ್ತಿಕ ಮಾಹಿತಿಯೇ?

ಬೆಂಗಳೂರು; ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾಗಿ ನೇಮಕವಾಗಿರುವ ಕೆ ವಿ ಪ್ರಭಾಕರ್‌ ಅವರು ಪಡೆಯುತ್ತಿರುವ ವೇತನ, ಪ್ರಯಾಣದ ವಿವರ ಮತ್ತು ಪ್ರಯಾಣ ಭತ್ಯೆ ವಿವರಗಳನ್ನು ವೈಯಕ್ತಿಕ ಮಾಹಿತಿ ಹೆಸರಿನಲ್ಲಿ  ಮಾಧ್ಯಮ ಸಲಹೆಗಾರರ ಕಚೇರಿಯು  ಬಹಿರಂಗಪಡಿಸಿಲ್ಲ.

 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಬ್ಬರೂ ನೀಡಿದ್ದ ಸಲಹೆಗಳನ್ನು ಗೌಪ್ಯವಾದ ದಾಖಲೆ ಎಂದು ಮುಚ್ಚಿಟ್ಟಿರುವ ಬೆನ್ನಲ್ಲೇ ಇದೀಗ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‌ ಅವರೂ ಸಹ ವೇತನ, ಪ್ರಯಾಣ ಭತ್ಯೆಗಳನ್ನೂ ವೈಯಕ್ತಿಕ ಮಾಹಿತಿ ಹೆಸರಿನಲ್ಲಿ ಮುಚ್ಚಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಮುಖ್ಯಮಂತ್ರಿಗಳು ಕೈಗೊಳ್ಳುವ ಪ್ರವಾಸದಲ್ಲಿಯೇ ಮಾಧ್ಯಮ ಸಲಹೆಗಾರರೂ ಭಾಗವಹಿಸಿದ್ದರೂ ಕೆ ವಿ ಪ್ರಭಾಕರ್‌ ಅವರು ಅದರ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ವಿಶೇಷವೆಂದರೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅವರು ಮಾಧ್ಯಮ ಸಲಹೆಗಾರರಾಗಿದ್ದ ಅವಧಿಯಲ್ಲಿ ಅವರು ಪಡೆದಿದ್ದ  ವೇತನ, ಪ್ರಯಾಣ ಭತ್ಯೆ ಮತ್ತು ಪ್ರಯಾಣ ಬೆಳೆಸಿದ್ದ ಸ್ಥಳಗಳ ವಿವರವನ್ನು ಮುಖ್ಯಮಂತ್ರಿಗಳ ಸಚಿವಾಲಯವು  ದಿನಾಂಕಗಳ ಸಮೇತ ಮಾಹಿತಿ ಹಕ್ಕಿನಡಿಯಲ್ಲಿ ಬಹಿರಂಗಪಡಿಸಿತ್ತು.  ಆದರೆ ಅದೇ ಮುಖ್ಯಮಂತ್ರಿಗಳ ಸಚಿವಾಲಯವು ಈಗಿನ ಮಾಧ್ಯಮ ಸಲಹೆಗಾರರಿಗೆ ನೀಡುತ್ತಿರುವ ವೇತನ, ಪ್ರಯಾಣ ಭತ್ಯೆ, ಪ್ರಯಾಣ ಬೆಳೆಸಿರುವ ಸ್ಥಳದ ವಿವರಗಳನ್ನು ವೈಯಕ್ತಿಕ ಮಾಹಿತಿ ಎಂದು ನೀಡದಿರುವುದು ಹಲವು  ಸಂಶಯಗಳಿಗೆ ಕಾರಣವಾಗಿದೆ.

 

ಕೆ ವಿ ಪ್ರಭಾಕರ್‌ ಅವರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ನೇಮಕವಾದ ದಿನಾಂಕದಿಂದ ಇದುವರೆಗೂ ಪಡೆದಿರುವ ವೇತನ, ಪ್ರಯಾಣ ಭತ್ಯೆ, ಪ್ರಯಾಣ ಬೆಳೆಸಿದ್ದ ವಿವರ ಮತ್ತು ನೀಡಿದ್ದ ಸಲಹೆಗಳ ಕುರಿತಾಗಿ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೋರಿತ್ತು.

 

ಈ ಸಂಬಂಧ ಅವರ ಆಪ್ತ ಕಾರ್ಯದರ್ಶಿಯು ವೇತನ, ಪ್ರಯಾಣ ಭತ್ಯೆ ವಿವರಗಳು ಮಾಹಿತಿ ಹಕ್ಕು ಅಧಿನಿಯಮ 8(ಜೆ) ಅಡಿಯಲ್ಲಿ ವೈಯಕ್ತಿಕ ಮಾಹಿತಿಯನ್ನು ನೀಡಲು ಅವಕಾಶವಿರುವುದಿಲ್ಲ ಎಂದು ಉತ್ತರಿಸಿದ್ದಾರೆ.

 

 

ಹಾಗೆಯೇ ಕೆ ವಿ ಪ್ರಭಾಕರ್‌ ಅವರು ನೇಮಕವಾದ ದಿನಾಂಕದಿಂದ ಇದುವರೆಗೂ ಹೊರಡಿಸಿರುವ ಟಿಪ್ಪಣಿ, ಅಧಿಕೃತ ಜ್ಞಾಪನ, ಜ್ಞಾಪನ ಸೇರಿದಂತೆ ಎಲ್ಲಾ ಪತ್ರಗಳನ್ನು ಒದಗಿಸಬೇಕು ಎಂದ ನಿರ್ದಿಷ್ಟವಾಗಿ ಮಾಹಿತಿ ಕೋರಿದ್ದರೂ ಸಹ ಈ ಮಾಹಿತಿಯು ಸ್ಪಷ್ಟವಾಗಿಲ್ಲ  ಮತ್ತು ನಿರ್ದಿಷ್ಟವಾಗಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

 

ಅಲ್ಲದೇ ಮುಖ್ಯಮಂತ್ರಿಯವರಿಗೆ ಸಂದರ್ಭಾನುಸಾರ ಮೌಖಿಕವಾಗಿ ಸಲಹೆಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

 

 

ಕೆ ವಿ. ಪ್ರಭಾಕರ್ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನೂ ಸಹ ನೀಡಲಾಗಿದೆ. ಸಚಿವರಿಗೆ ಸಿಗುವ ಎಲ್ಲ ಸೌಲಭ್ಯಗಳು ಅವರಿಗೆ ಸಿಗಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಟಿವಿ ಸುನಂದಮ್ಮ ಅವರು ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು.

 

ಮಾಹಿತಿ ಹಕ್ಕು ಅಧಿನಿಯಮ 8(ಜೆ)ಯಲ್ಲೇನಿದೆ?

 

ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಯ ಗೌಪ್ಯತೆ ಅನಗತ್ಯ ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ನಿರ್ಬಂಧವಿದೆ.

 

ಆದರೆ ಕೆ ವಿ ಪ್ರಭಾಕರ್‌ ಅವರಿಗೆ  ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹಾಗೂ ಅವರಿಗೆ ವೇತನ ಸಹಿತ ಎಲ್ಲಾ ಬಗೆಯ ಸೌಲಭ್ಯಗಳನ್ನೂ ಸರ್ಕಾರವೇ ನೀಡುತ್ತಿದೆ. ಹೀಗಾಗಿ  ಇದು ವೈಯಕ್ತಿಕ ಮಾಹಿತಿಯಾಗಿರುವುದಿಲ್ಲ ಎಂಬುದು ಕಾಯ್ದೆಯಿಂದಲೇ ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಹಾಗೆಯೇ ಇವರ ವೇತನ, ಪ್ರಯಾಣ ಬೆಳೆಸಿರುವ ಸ್ಥಳದ ವಿವರಗಳನ್ನು ಬಹಿರಂಗಪಡಿಸುವುದರಿಂದ ಅವರ ಗೌಪ್ಯತೆಯನ್ನು ಅನಗತ್ಯವಾಗಿ ಅತಿಕ್ರಮಿಸಿದಂತಾಗುವುದಿಲ್ಲ. ಮುಖ್ಯಮಂತ್ರಿಗಳು ಕೈಗೊಳ್ಳುವ ಪ್ರವಾಸದಲ್ಲಿಯೇ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್‌ ಅವರೂ ಸಹ ಭಾಗವಹಿಸುವುದರಿಂದ ಇದು ಸಹ ವೈಯಕ್ತಿಕ ಮಾಹಿತಿಯಾಗಿರುವುದಿಲ್ಲ. ಬದಲಿಗೆ ಇದೊಂದು ಸಾರ್ವಜನಿಕ ಮಾಹಿತಿಯಾಗಿರುತ್ತದೆ. ಆದರೂ ಕೆ ವಿ ಪ್ರಭಾಕರ್‌ ಅವರು ವೇತನ ಮತ್ತು ಪ್ರಯಾಣ ಬೆಳೆಸಿರುವ ಸ್ಥಳದ ವಿವರವನ್ನು ಬಹಿರಂಗಪಡಿಸದೇ ಇರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಅದೇ ರೀತಿ ಮಾಹಿತಿ ಹಕ್ಕು ಅಧಿನಿಯಮದ 8(ಜೆ) ಅಡಿಯಲ್ಲಿ ಈ ಕೆಳಗಿನಂತೆ ವಿನಾಯಿತಿ ನೀಡಲು ಅವಕಾಶವಿದೆ.

 

ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಭಾರತದ ಸಾರ್ವಭೌಮತ್ವಕ್ಕೆ ಮತ್ತು ಏಕತೆಗೆ, ರಾಷ್ಟ್ರದ ಭದ್ರತೆಗೆ, ಕಾರ್ಯ ತಂತ್ರಕ್ಕೆ, ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳಿಗೆ, ವಿದೇಶದೊಂದಿಗೆ ಸಂಬಂಧ ಇವುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೋ ಅಥವಾ ಒಂದು ಅಪರಾಧಕ್ಕೆ ಪ್ರೇರಣೆ ನೀಡುತ್ತದೋ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ.

 

ಅದೇ ರೀತಿ ಯಾವುದೇ ನ್ಯಾಯಾಲಯವು ಅಥವಾ ನ್ಯಾಯಾಧೀಕರಣವು ಯಾವ ಮಾಹಿತಿಯ ಪ್ರಕಟಣೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆಯೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ನ್ಯಾಯಾಲಯ ನಿಂದನೆಯಾಗಬಹದೋ ಅಂಥ ಮಾಹಿತಿ, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸಂಸತ್ತು ಅಥವಾ ರಾಜ್ಯ ವಿಧಾನ ಮಂಡಲದ ಹಕ್ಕುಚ್ಯುತಿ ಉಂಟಾಗುವುದೋ ಅಂಥ ಮಾಹಿತಿಯನ್ನು ಕಾಯ್ದೆ ಅನುಸಾರ ಒದಗಿಸಲು ನಿರ್ಬಂಧವಿದೆ.

 

ಇನ್ನು, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೇ ಪಕ್ಷಕಾರನ ಸ್ಪರ್ಧಾತ್ಮಕ ಸ್ಥಾನಮಾನಕ್ಕೆ ಅಪಾಯವುಂಟಾಗುವುದೋ ಅಂಥ ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಗಳು ಅಥವಾ ಬೌದ್ಧಿಕ ಆಸ್ತಿಯನ್ನೊಳಗೊಂಡ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹೆಚ್ಚಿನ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು ಅಂಥ ಮಾಹಿತಿ, ಯನ್ನು ಒದಗಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ.

 

ಹಾಗೆಯೇ ತನ್ನ ವಿಶ್ವಾಸ ಆಧಾರಿತ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ದೊರಕುವ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹೆಚ್ಚಿನ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು ಅಂಥ ಮಾಹಿತಿಯನ್ನು, ವಿದೇಶಿ ಸರ್ಕಾರದಿಂದ ರಹಸ್ಯವಾಗಿ ಪಡೆದ ಮಾಹಿತಿಯನ್ನು, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಯಾರೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತಿದೆಯೋ ಅಂಥ ಮಾಹಿತಿಯನ್ನು ಅಥವಾ ಕಾನೂನು ಜಾರಿಯ ಅಥವಾ ಭದ್ರತೆ ಉದ್ದೇಶಗಳಿಗಾಗಿ ರಹಸ್ಯವಾಗಿ ನೀಡಿದ ಮಾಹಿತಿಯ ಅಥವಾ ಸಹಾಯದ ಮೂಲವನ್ನು ಗುರುತಿಸುವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಿದೆ.

 

ಇನ್ನು, ತನಿಖಾ ಪ್ರಕ್ರಿಯೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂಥ ಮಾಹಿತಿಯನ್ನು, ಮಂತ್ರಿಮಂಡಲದ, ಕಾರ್ಯದರ್ಶಿಗಳ ಮತ್ತು ಇತರ ಅಧಿಕಾರಿಗಳ ಚರ್ಚೆಗಳ ದಾಖಲೆಗಳು ಸೇರಿದಂತೆ ಸಚಿವ ಸಂಪುಟದ ಕಾಗದ ಪತ್ರಗಳನ್ನು, ಮಂತ್ರಿ ಮಂಡಳದ ನಿರ್ಣಯಗಳು, ಆ ನಿರ್ಣಯಗಳಿಗೆ ಕಾರಣಗಳು ಮತ್ತು ತೆಗೆದುಕೊಂಡ ನಿರ್ಣಯಗಳಿಗೆ ಆಧರಿಸಿದ ವಿಷಯ ಸಾಮಗ್ರಿ ಇವುಗಳನ್ನು ನಿರ್ಣಯ ತೆಗೆದುಕೊಂಡ ಮತ್ತು ಆ ವಿಷಯ ಪೂರ್ಣಗೊಂಡ ಅಥವಾ ಮುಕ್ತಾಯಗೊಂಡ ತರುವಾ ಸಾರ್ವಜನಿಕರಿಗೆ ತಿಳಿಯಪಡಿಸತಕ್ಕದ್ದು, ಮತ್ತೂ ಪರಂತು, ಬಹಿರಂಗಪಡಿಸಬಾರದೆಂದು ಈ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳನ್ನು ಬಹಿರಂಗಪಡಿಸತಕ್ಕದ್ದಲ್ಲಎಂದು ಕಾಯ್ದೆ ಹೇಳಿದೆ.

 

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭಾನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಿಗೆ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಿನ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂಧು ಮನದಟ್ಟಾದ ಹೊರತು ಅಂತ ಮಾಹಿತಿಯನ್ನು ಒದಗಿಸಲು ಯಾವುದೇ ಮಾಹಿತಿಯನ್ನು ಒದಗಿಸಲು ಯಾವುದೇ ಬಾಧ್ಯತೆ ಇರತಕ್ಕದ್ದಲ್ಲ ಎಂದೂ ಹೇಳಿದೆ.

the fil favicon

SUPPORT THE FILE

Latest News

Related Posts