ನಿವೃತ್ತಿ ಅಂಚಿನ ಅಧಿಕಾರಿಗಳಿಗೆ ಸಿಗದ ಪದೋನ್ನತಿ, ಸಂವಿಧಾನದ ಅನುಚ್ಛೇಧ 309ರ ಅವಕಾಶ ನಿರಾಕರಣೆ!

ಬೆಂಗಳೂರು; ಖಜಾನೆ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ ಹುದ್ದೆಗೆ ಪದನ್ನೋತಿಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆರ್ಥಿಕ ಇಲಾಖೆಯು ಮಾಡಿದ್ದ ವಿಳಂಬದಿಂದಾಗಿ ಹಲವು ಸಹಾಯಕ ಖಜಾನಾಧಿಕಾರಿಗಳಿಗೆ ಪದೋನ್ನತಿ ದೊರೆತಿಲ್ಲ.  ಪದನ್ನೋತಿ ಪಟ್ಟಿಯಲ್ಲಿದ್ದರೂ ಪದನ್ನೋತಿ ಪಡೆಯದೇ ಸಹಾಯಕ ಖಜಾನಾಧಿಕಾರಿಗಳು ನಿವೃತ್ತರಾಗಿರುವುದು ಇದೀಗ ಬಹಿರಂಗವಾಗಿದೆ.

 

ಸಕಾಲದಲ್ಲಿ ಪದನ್ನೋತಿ ನೀಡದೇ ಪದನ್ನೋತಿ ಅವಕಾಶವನ್ನೂ ಕಸಿದುಕೊಂಡು ಸಂವಿಧಾನದ ಅನುಚ್ಛೇಧ 14 ಮತ್ತು 309ರ ಅವಕಾಶಗಳನ್ನು ನಿರಾಕರಿಸಿದೆ ಎಂಬ  ಗುರುತರವಾದ ಆರೋಪಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಗುರಿಯಾಗಿದೆ.

 

ವಿಶ್ವ ಪ್ರಜಾಪ್ರಭುತ್ವ ದಿನದಂದು ಸಂವಿಧಾನದ ಪೀಠಿಕೆಯನ್ನು ಓದುವ ಅಭಿಯಾನವನ್ನು ರಾಜ್ಯ ಸರ್ಕಾರವು ಆರಂಭಿಸಿರುವ ಬೆನ್ನಲ್ಲೇ ನಿವೃತ್ತಿ ಅಂಚಿನ ಅಧಿಕಾರಿಗಳಿಗೆ ಪದೋನ್ನತಿ ನೀಡದೆ ಸಂವಿಧಾನದ ಅನುಚ್ಛೇಧ 309ನ್ನು ನಿರಾಕರಿಸಲಾಗಿದೆ ಎಂದು ಸಹಾಯಕ ಖಜಾನಾಧಿಕಾರಿಗಳು ಸಲ್ಲಿಸಿರುವ ದೂರುಗಳು ಮುನ್ನೆಲೆಗೆ ಬಂದಿವೆ.

 

ಖಜಾನೆ ಇಲಾಖೆಯಲ್ಲಿ 2022-23ನೇ ಸಾಲಿನಲ್ಲಿ ಸಹಾಯಕ ಖಜಾನಾಧಿಕಾರಿಗಳ ಹುದ್ದೆಯಿಂದ ಸಹಾಯಕ ಖಜಾನೆ ನಿರ್ದೇಶಕರ ಹುದ್ದೆಗೆ ಪದೋನ್ನತಿ  ನೀಡುವ ಸಂದರ್ಭದಲ್ಲಿ ಆಗಿರುವ ವಿಳಂಬದಿಂದಾಗಿ ಪದನ್ನೋತಿ ಸೌಲಭ್ಯದಿಂದಲೇ ವಂಚಿತರಾಗಿರುವ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ದೂರುಗಳು ಸಲ್ಲಿಕೆಯಾಗಿವೆ. ಈ ಪೈಕಿ ಹಲವು ದೂರುಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪದೋನ್ನತಿ ನೀಡುವ ಸಂಬಂಧ ಆರ್ಥಿಕ ಇಲಾಖೆಯ ಕೆಲ ಉನ್ನತ ಅಧಿಕಾರಿಗಳು ಲಕ್ಷಾಂತರ ರುಪಾಯಿ ವಸೂಲಿ ಮಾಡಿದ್ದಾರೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿದ್ದವು.  ಸಹಾಯಕ ನಿರ್ದೇಶಕರ ಹುದ್ದೆಯ ಪದೋನ್ನತಿಕರಣದಲ್ಲಿನ ವಿಳಂಬದಿಂದ ಪದೋನ್ನತಿ ಪಟ್ಟಿಯಲ್ಲಿದ್ದರೂ ಈ ಸೌಲಭ್ಯ ದೊರಕದೇ ನಿವೃತ್ತಿಯಾಗಿರುವುದು ಮುನ್ನೆಲೆಗೆ ಬಂದಿದೆ.

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪಿ ಚಂದ್ರಕುಮಾರ ಎಂಬುವರು 2023ರ ಆಗಸ್ಟ್‌ 18ರಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

 

ಕಲ್ಬುರ್ಗಿಯ ಗೊಬ್ಬರು ದತ್ತಪ್ಪಾ ಸೇರಿದಂತೆ ಹಲವರು ದೂರು ಸಲ್ಲಿಸಿದ್ದಾರೆ. ಖಜಾನೆ ಉಪ ನಿರ್ದೇಶಕರ ಹುದ್ದೆ ಮುಂಬಡ್ತಿಗೆ ಅರ್ಹತೆ ಹೊಂದಿದ್ದರೂ ಆರ್ಥಿಕ ಇಲಾಖೆಯು ಅನ್ಯಾಯ ಮಾಡಿದೆ ಎಂದು ಸೌಲಭ್ಯ ವಂಚಿತರು ದೂರಿನಲ್ಲಿ ಅಳಲು ತೋಡಿಕೊಂಡಿರುವುದು ಗೊತ್ತಾಗಿದೆ.

 

ಸಹಾಯಕ ಖಜಾನಾಧಿಕಾರಿಗಳ ಹುದ್ದೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ನೀಡಲು ಆರ್ಥಿಕ ಇಲಾಖೆಯು ಒಂದು ವರ್ಷಕ್ಕೂ ಅಧಿಕ ಅವಧಿ ತೆಗೆದುಕೊಂಡಿತ್ತು. ಹೀಗಾಗಿ 2022 ಮತ್ತು 2023ರ ಸಾಲಿನಲ್ಲಿ ಪದನ್ನೋತಿ ಪಟ್ಟಿಯಲ್ಲಿ ಹಲವು ಸಹಾಯಕ ಖಜಾನಾಧಿಕಾರಿಗಳಿದ್ದರು. ನಿಗದಿತ ಅವಧಿಯೊಳಗೆ ಪದನ್ನೋತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಲವರು ಪದನ್ನೋತಿ ಸೌಲಭ್ಯವಿಲ್ಲದೇ ನಿವೃತ್ತರಾಗಿದ್ದಾರೆ ಎಂದು ದೂರಿನಿಂದ ತಿಳಿದು ಬಂದಿದೆ.

 

ಅದೇ ರೀತಿ ಕೆಲವು ಪ್ರಕರಣಗಳಲ್ಲಿ ಜೇಷ್ಠತೆ ಪಟ್ಟಿಯಲ್ಲಿ ಹಿರಿತನ ಹೊಂದಿದ್ದರೂ ಅತ್ಯಂತ ಕಿರಿಯ ಅಧಿಕಾರಿಗಳಿಗೆ ಉಪ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಹಲವು ದೂರುಗಳು ಸಲ್ಲಿಕೆಯಾಗಿವೆ.

 

2022-23ನೇ ಸಾಲಿನ ಸಹಾಯಕ ಖಜನಾಧಿಕಾರಿಗಳ ಹುದ್ದೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ  ನೀಡುವ ಪ್ರಕ್ರಿಯೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ 2022ರ ಮಾರ್ಚ್‌ 18ರಂದು ಆರಂಭಿಸಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಪದೋನ್ನತಿ  ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಲಿಲ್ಲ. ಈ ಪ್ರಕ್ರಿಯೆಯು 2023ರ ಜುಲೈ 10ಕ್ಕೆ ಅಂತಿಮಗೊಳಿಸಿ 2023ರ ಆಗಸ್ಟ್‌ 3ರಂದು ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಪಟ್ಟಿಯನ್ನು ಬಿಡುಗಡೆಗೊಳಿಸಿರುವುದು ದೂರಿನಿಂದ ಗೊತ್ತಾಗಿದೆ.

 

‘ಸಹಾಯಕ ಖಜಾನಾಧಿಕಾರಿಗಳ ಹುದ್ದೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ನೀಡಲು ಸರಿ ಸುಮಾರು 1 ವರ್ಷ 4 ತಿಂಗಳು 15 ದಿನ ಅವಧಿ ತೆಗೆದುಕೊಳ್ಳಲಾಗಿದೆ. ಈ ವಿಳಂಬ ಕಾರ್ಯವಿಧಾನವು ಸಂವಿಧಾನದ 309ನೇ ವಿಧಿಯನ್ನು ಅಣಕ ಮಾಡಿದಂತಾಗಿದೆ.

 

309ನೇ ವಿಧಿಯಲ್ಲೇನಿದೆ?

 

ಒಕ್ಕೂಟಕ್ಕೆ ಅಥವಾ ರಾಜ್ಯಕ್ಕೆ ಸೇವೆ ಸಲ್ಲಿಸುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳ ಕುರಿತು ಸಂವಿಧಾನದ 309ನೇ ವಿಧಿಯಲ್ಲಿ ವಿವರಿಸಲಾಗಿದೆ. ಈ ಸಂವಿಧಾನದ ಉಪ ಬಂಧಗಳಿಗೆ ಒಳಪಟ್ಟು, ಸಮುಚಿತ ವಿಧಾನ ಮಂಡಲದ ಅಧಿನಿಯಮಗಳು ಒಕ್ಕೂಟದ ಅಥವಾ ಯಾವುದೇ ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿನ ಲೋಕಸೇವೆಗಳಿಗೆ ಮತ್ತು ಹುದ್ದೆಗಳ ನೇಮಕಾತಿಯನ್ನು ಮತ್ತು ಅವುಗಳಿಗೆ ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ವಿನಿಯಮಿಸಬಹುದು.

 

ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಪಟ್ಟ ಸೇವೆಗಳ ಮತ್ತು ಹುದ್ದೆಗಳ ಸಂದರ್ಭದಲ್ಲಿ ರಾಷ್ಟ್ರಪತಿಯು ಅಥವಾ ಅವನು ನಿರ್ದೇಶಿಸಬಹುದಾದಂಥ ವ್ಯಕ್ತಿಯು ಈ ಅನುಚ್ಛೇಧದ ಮೇರೆಗೆ ಆ ಬಗ್ಗೆ ಸಮುಚಿತ ವಿಧಾನ ಮಂಡಲದ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಉಪ ಬಂಧಿಸುವವರೆಗೆ ಅಂಥ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ನೇಮಕಾತಿಯನ್ನು ಮತ್ತು ಹಾಗೇ ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ವಿನಿಯಮಿಸುವ ನಿಯಮಗಳನ್ನು ರಚಿಸಲು ಸಕ್ಷಮನಾಗಿರತಕ್ಕದ್ದು ಮತ್ತು ಹಾಗೆ ರಚಿಸಿದ ಯಾವುವೇ ನಿಯಮಗಳು ಅಂಥ ಯಾವುದೇ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಪರಿಣಾಮಕಾರಿಯಾಗಿರತಕ್ಕದ್ದು ಎಂದು ಸಂವಿಧಾನದಲ್ಲಿ ವಿವರಿಸಲಾಗಿದೆ.

 

‘ಇಷ್ಟೊಂದು ವಿಳಂಬವಾಗುವುದಾದರೇ ಪದನ್ನೋತಿಯನ್ನು ಏಕೆ ನೀಡಬೇಕು, ಮತ್ತು ಇದು ನಿವೃತ್ತಿ, ಪದನ್ನೋತಿ ನಿಯಮಗಳು, ಇಲಾಖಾ ಪದೋನ್ನತಿ ಸಮಿತಿ ಅಂಗೀಕಾರಗಳಿಗೆ ವ್ಯತಿರಿಕ್ತ ಹಾಗೂ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಡುವ ಕಾರ್ಯವಿಧಾನವಾಗಿದೆ,’ ಎಂದು ಚಂದ್ರಕುಮಾರ್‍‌ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

 

ಪದೋನ್ನತಿ  ಪಟ್ಟಿಯಲ್ಲಿ ಆರಂಭದಲ್ಲಿ 37 ಅಧಿಕಾರಿಗಳ ಹೆಸರುಗಳಿದ್ದವು. ಆ ನಂತರ ಈ ಪಟ್ಟಿಗೆ 15 ಮಂದಿ ಅಧಿಕಾರಿಗಳನ್ನು ಸೇರ್ಪಡೆ ಮಾಡುವುದರ ಜತೆಗೆ ಹೈದರಾಬಾದ್‌ ಕರ್ನಾಟಕ ಮೀಸಲಾತಿ ಅಡಿಯಲ್ಲಿನ ಸಂಖ್ಯೆಯೂ ಸೇರಿದಂತೆ ಒಟ್ಟಾರೆ 52 ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅಲ್ಲದೇ ಇದೇ ಪಟ್ಟಿಗೆ ಮತ್ತೇ 5 ಅಧಿಕಾರಿಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಈ ಅವಧಿ ಹೊತ್ತಿಗೆ 9 ಮಂದಿ ಅಧಿಕಾರಿಗಳು ನಿವೃತ್ತಿಯಾಗಿದ್ದರು. ಆ ನಂತರವೂ ಇಬ್ಬರು ಅಧಿಕಾರಿಗಳನ್ನು ಪಟ್ಟಿಗೆ ಸೇರಿಸಲು ವ್ಯವಹರಿಸುವ ಮೂಲಕ ಪಟ್ಟಿಯನ್ನು ಪದೇ ಪದೇ ಪರಿಷ್ಕರಣೆ ಮಾಡುವುದರಲ್ಲಿಯೇ ಕಾಲಹರಣ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಅಂತಿಮವಾಗಿ ಈ ಪಟ್ಟಿಯನ್ನು 2023ರ ಮಾರ್ಚ್‌ 24ರಂದು ನಡೆದಿದ್ದ ಇಲಾಖಾ ಪದೋನ್ನತಿ ಸಮಿತಿ ಮುಂದೆ ಮಂಡಿಸಲಾಗಿತ್ತು. ಸಮಿತಿ ಸಭೆ ನಂತರ 2023ರ ಮೇ 22ರಂದು ಆರ್ಥಿಕ ಇಲಾಖೆಗೆ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದೇ ಪಟ್ಟಿಯಲ್ಲಿ ಇಬ್ಬರು ಅಧಿಕಾರಿಗಳ ವರ್ಗಾವಣೆ ಪ್ರಸ್ತಾವನೆಯನ್ನೂ ಸಲ್ಲಿಸಿ ಪದೋನ್ನತಿ ಪಟ್ಟಿಯ ಮೇಲೆ ತೀರ್ಮಾನ ಕೈಗೊಳ್ಳಲು ವಿಳಂಬಕ್ಕೆ ದಾರಿ ಮಾಡಿಕೊಟ್ಟಂತಾಗಿತ್ತು ಎಂಬುದು ದೂರಿನಿಂದ ತಿಳಿದು ಬಂದಿದೆ.

 

‘ಹಾಗೆಯೇ ಈ ಕಡತವನ್ನು ಆರ್ಥಿಕ ಇಲಾಖೆಯು ತಿಂಗಳುಗಟ್ಟಲೇ ತನ್ನ ಬಳಿಯೇ ಇಟ್ಟುಕೊಂಡಿತ್ತು. ಪದನ್ನೋತಿ ಪಟ್ಟಿಗೆ ಅನುಮೋದನೆ ನೀಡಲು ಕಾಲಮಿತಿಯಿಲ್ಲದಂತಾಗಿತ್ತು. ಹಲವು ಅಧಿಕಾರಿಗಳು ನಿವೃತ್ತರಾಗುವವರೆಗೂ ಕಾದು ಇನ್ನೂ ಸೇವೆಗೆ ಸಾಕಷ್ಟು ಕಾಲಾವಕಾಶ ಇರುವ ಮಂದಿಗೆ ಅನುಕೂಲ ಮಾಡಿಕೊಡಲಾಗಿತ್ತು. ಹೀಗಾಗಿ ನಿವೃತ್ತಿ ಅಂಚಿನಲ್ಲಿದ್ದ ಅಧಿಕಾರಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹೀಗಾಗಿ ಪದೋನ್ನತಿ ಅವಕಾಶ ಕಸಿದುಕೊಂಡು ಸಂವಿಧಾನದ ಅನುಚ್ಛೇಧ 14ರ ಮತ್ತು 309ರ ಅವಕಾಶಗಳನ್ನು ನಿರಾಕರಣೆ ಮಾಡಲಾಗಿದೆ,’ ಎಂದು ಚಂದ್ರಕುಮಾರ್‍‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

the fil favicon

SUPPORT THE FILE

Latest News

Related Posts