ನ್ಯಾಯಾಧೀಶರ ಒತ್ತಡಕ್ಕೆ ಮಣಿದ ಸಿಎಂ; ಬೊಕ್ಕಸಕ್ಕೆ 637 ಕೋಟಿ ನಷ್ಟ ಸಂಭವಿಸಲು ಕಾರಣರಾದರೇ?

ಬೆಂಗಳೂರು; ಸಂಚಾರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ  ಇ-ಚಲನ್‌ ಮೂಲಕ ವಿಧಿಸಿದ ದಂಡದ ಮೊತ್ತ ಪಾವತಿಸಲು ನೀಡಿದ್ದ ರಿಯಾಯಿತಿ ವಿಸ್ತರಣೆಗೆ  ಆರ್ಥಿಕ ಇಲಾಖೆ ಒಪ್ಪದಿದ್ದರೂ ಮುಖ್ಯ ನ್ಯಾಯಾಧೀಶರ ಒತ್ತಾಯಕ್ಕೆ ಮಣಿದು ಬೊಕ್ಕಸಕ್ಕೆ 637 ಕೋಟಿ ರು. ನಷ್ಟ ಸಂಭವಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಕಾರಣರಾಗಿರುವುದು  ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ಇ-ಚಲನ್‌ ಮೂಲಕ ವಿಧಿಸಿದ ದಂಡದ ಮೊತ್ತವನ್ನು ಪಾವತಿಸಲು ನೀಡಿದ್ದ ಶೇ.50ರ ರಿಯಾಯಿತಿಯನ್ನು ಪದೇ ಪದೇ ವಿಸ್ತರಣೆ  ಮಾಡಿದರೆ ಜನ ದಂಡ  ಪಾವತಿಸಲು ಮುಂದೆ ಬರುವುದಿಲ್ಲ. ಅಲ್ಲದೇ  ಹಿಂದೆ ರಿಯಾಯಿತಿ ಕೊಟ್ಟ 3 ತಿಂಗಳ ಒಳಗೆ ಪುನಃ ರಿಯಾಯಿತಿ ನೀಡುವುದು ಸೂಕ್ತವಲ್ಲ ಎಂದು ಆರ್ಥಿಕ ಇಲಾಖೆ ಕಟ್ಟುನಿಟ್ಟಾಗಿ ಹೇಳಿತ್ತು. ಅಲ್ಲದೇ  ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಭಿಪ್ರಾಯದಲ್ಲಿಯೂ  ಮುಖ್ಯ ನ್ಯಾಯಾಧೀಶರು ಒತ್ತಾಯಿಸಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.  ಈ ಸಂಬಂಧ ‘ದಿ ಫೈಲ್‌’ 60 ಪುಟಗಳ ಕಡತವನ್ನು ಆರ್‌ಟಿಐ ಮೂಲಕ ಪಡೆದಿದೆ.

 

ಆರ್ಥಿಕ ಇಲಾಖೆ ಅಭಿಪ್ರಾಯದಲ್ಲೇನಿದೆ?

 

ಮುಖ್ಯಮಂತ್ರಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದೆ. ಟಿಪ್ಪಣಿ 68ರಲ್ಲಿ ಸೂಚಿಸಿರುವಂತೆ ಈಗಾಗಲೇ ಒಂದು ಬಾರಿ ಶೇ.50ರಷ್ಟು ರಿಯಾಯಿತಿ ಕೊಡಲಾಗಿದೆ. ಈ ರಿಯಾಯಿತಿಯಿಂದಾಗಿ 169.10 ಕೋಟಿ ರು. ದಂಡ ವಸೂಲಾಗಿದೆ. ಪದೇ ಪದೇ ರಿಯಾಯಿತಿ ಕೊಟ್ಟಲ್ಲಿ ಜನ ದಂಡ ಪಾವತಿಸಲು ಮುಂದು ಬರುವುದಿಲ್ಲ. ಹಾಗೂ ಪುನಃ ರಿಯಾಯಿತಿ ಸಿಗಬಹುದು ಎಂದು ಕಾಯುವ ಸಂಭವವಿರುತ್ತದೆ. ಆದುದರಿಂದ ಹಿಂದೆ ರಿಯಾಯಿತಿ ಕೊಟ್ಟ  3 ತಿಂಗಳ ಒಳಗೇ ಪುನಃ ರಿಯಾಯಿತಿ ಕೊಡುವುದು ಸೂಕ್ತವಲ್ಲ ಎಂಬುದು ಆರ್ಥಿಕ ಇಲಾಖೆಯ ಅಭಿಪ್ರಾಯ. ಆದರೂ, ಮುಖ್ಯ ನ್ಯಾಯಾಧೀಶರು ಇದರ ಬಗ್ಗೆ ಒತ್ತಾಯ ಮಾಡುತ್ತಿರುವುದರಿಂದ ಕೊನೆಯ ಬಾರಿ ರಿಯಾಯಿತಿಯನ್ನು ನೀಡುವ ಬಗ್ಗೆ ಮುಖ್ಯಮಂತ್ರಿಯವರು ಆದೇಶಿಸಬಹುದು,’ ಎಂದು ಆರ್ಥಿಕ ಇಲಾಕೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು 2023ರ ಜುಲೈ 3ರಂದು ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಅಲ್ಲದೇ ಆಡಳಿತ ಇಲಾಖೆಗೆ ಟ್ರಾಫಿಕ್‌ ಚಲನ್‌ಗಳ ಮೂಲಕ ವಿಧಿಸಿದ ದಂಡವನ್ನು ನಿಯತಕಾಲಿಕವಾಗಿ ವಸೂಲಾತಿ ಮಾಡುವ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಸಭೆಯನ್ನೂ ಕೂಡ ನಡೆಸಬಹುದು ಎಂದೂ ಸಲಹೆ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ರಾಜ್ಯದಾದ್ಯಂತ ಪೊಲೀಸ್‌ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣದ ದಂಡ ಮೊತ್ತವು 1,300 ಕೋಟಿಯಷ್ಟಿದೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಂಚಾರಿ ಇ-ಚಲನ್‌ ಪ್ರಕರಣಗಳಲ್ಲಿ ಅಂದಾಜು 1,000 ಕೋಟಿ ರು. ಮೊತ್ತದ ದಂಡವನ್ನು ವಸೂಲು ಮಾಡಲು ಬಾಕಿ ಇದೆ. ಡಿಜಿಐಜಿಪಿ ಕಚೇರಿ ನೀಡಿರುವ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ  2019ರಿಂದ 2023ರ ಜನವರಿವರೆಗೆ ಸುಮಾರು 2,64,85,640 ಕೋಟಿ ಪ್ರಕರಣಗಳು ಬಾಕಿ ಇವೆ. ಒಟ್ಟು 1,367.04 ಕೋಟಿ ರು. ದಂಡ ವಸೂಲಿಗೆ ಬಾಕಿ ಇದೆ ಎಂಬ ಸಂಗತಿಯು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಸಂಚಾರಿ ದಂಡ ಪಾವತಿಸಲು ರಿಯಾಯಿತಿ ನೀಡುವ ಸಂಬಂಧ ಉಚ್ಛ ನ್ಯಾಯಾಲಯದ ನ್ಯಾಯಾಧೀಶರೂ ಆಗಿದ್ದ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ  ಬಿ ವೀರಪ್ಪ ಅವರ ಅವರು 2023ರ ಜನವರಿ 27ರಂದು ಸಭೆ ನಡೆಸಿದ್ದರು. ‘ಸಂಚಾರಿ ಇ-ಚಲನ್‌ ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಶೇ.50ರಷ್ಟು ಕಡಿತಗೊಳಿಸಿದಲ್ಲಿ ದಂಡ ವಸೂಲಾತಿ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲಿವೆ ಎಂದು ಅಭಿಪ್ರಾಯಪಟ್ಟಿದ್ದರು.

 

ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಸಂಚಾರಿ ಇ-ಚಲನ್‌ ಪ್ರಕರಣಗಳ ದಂಡ ವಸೂಲಾತಿಯಲ್ಲಿ ಶೇ.50ರ ರಿಯಾಯಿತಿ ನೀಡಿದರೆ ರಾಜ್ಯದ ಬೊಕ್ಕಸಕ್ಕೆ ಅಂದಾಜು 683.52 ಕೋಟಿಗಳಷ್ಟು ರಾಜಸ್ವ ನಷ್ಟವಾಗುವ ಸಂಭವವಿರುತ್ತದೆ. ಆದ್ದರಿಂದ ದಂಡದ ಮೊತ್ತದಲ್ಲಿ ರಿಯಾಯಿತಿ ನೀಡಲು ಅವಕಾಶವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇ-ಚಲನ್‌ ದಂಡವನ್ನು ಶೀಘ್ರವಾಗಿ ವಸೂಲಾತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು,’ ಎಂದೂ ಅಭಿಪ್ರಾಯಿಸಿತ್ತು.

 

ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಬಿ ವೀರಪ್ಪ ಅವರ ನಿರ್ದೇಶನದ ಮೇರೆಗೆ 2023ರ ಫೆ.2 ಹಾಗೂ ಫೆ.28ರಂದು ಎರಡು ಬಾರಿ 15 ದಿನಗಳ ಕಾಲಾವಕಾಶ ನೀಡಿ ಶೇ.50ರಷ್ಟು ಕಡಿಮೆ ಮಾಡಿ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.

 

ಆದರೂ ಉಚ್ಛ ನ್ಯಾಯಾಲಯದ ಮತ್ತೊಬ್ಬ ನ್ಯಾಯಾಧೀಶರೂ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ ನರೇಂದ್ರ ಅವರು 2023ರ ಜೂನ್‌ 14ರಂದು ನಡೆದ ಸಭೆ ಪ್ರಕಾರ ಪಾವತಿಸಬೇಕಾದ ದಂಡ ಮೊತ್ತ  1,274 ಕೋಟಿ ರು. ಬಾಕಿ ಇತ್ತು. ಆಡಳಿತ ಇಲಾಖೆ ಕೋರಿಕೆಯಂತೆ ಶೇ.50ರಷ್ಟು ವಿನಾಯಿತಿ ನೀಡಿದಲ್ಲಿ ಸರ್ಕಾರಕ್ಕೆ 637 ಕೋಟಿ ಮೊತ್ತ ನಷ್ಟ ಉಂಟಾಗುತ್ತದೆ.

 

ಅಲ್ಲದೇ ಈ ಪ್ರಸ್ತಾವನೆಗೆ ಪ್ರಸಕ್ತ ಹಣಕಾಸು ಪರಿಸ್ಥಿತಿಯಲ್ಲಿ ಸಹಮತಿ ನೀಡಲು ಅವಕಾಶವಾಗುವುದಿಲ್ಲ  ಎಂದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್‌ ಎನ್‌ ಪ್ರಸಾದ್‌ ಅವರು 2023ರ ಜೂನ್‌ 27ರಂದು  ಎಚ್ಚರಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಸೆಪ್ಟಂಬರ್‌ 9ರವರೆಗೆ ರಿಯಾಯಿತಿ ಮುಂದುವರೆಸಲು ಆದೇಶಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಈ ಕುರಿತು ‘ದಿ ಫೈಲ್‌’ ದಾಖಲೆ ಸಹಿತ 2023ರ ಜುಲೈ 6ರಂದು ವರದಿ ಪ್ರಕಟಿಸಿತ್ತು.

 

ಇ-ಚಲನ್‌ ದಂಡ ಪಾವತಿಗೆ 3ನೇ ಬಾರಿಗೆ ವಿನಾಯಿತಿ; 637 ಕೋಟಿ ನಷ್ಟ, ಸಾರಿಗೆಗೆ ಆರ್ಥಿಕ ಆಘಾತ ‘ಗ್ಯಾರಂಟಿ’

 

ಪೊಲೀಸ್‌ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ ಪ್ರಸಕ್ತ ಹಣಕಾಸು ಪರಿಸ್ಥಿತಿಯಲ್ಲಿ ಸಹಮತಿ ನೀಡುವುದು ಸೂಕ್ತವಾಗಿರುವುದಿಲ್ಲ ಎಂದು ಆರಂಭದಲ್ಲಿ ನಿಲುವು ತಳೆದಿದ್ದ ಆರ್ಥಿಕ ಇಲಾಖೆಯು 15 ದಿನದೊಳಗೇ ತನ್ನ ಅಭಿಪ್ರಾಯ ಬದಲಿಸಿತ್ತು.

 

ಜೂನ್‌ 23ರಂದು ನೀಡಿದ್ದ ಅಭಿಪ್ರಾಯದಲ್ಲೇನಿತ್ತು?

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಈಗಾಗಲೇ ಈ ಕುರಿತು ಎರಡು ಸಲ 15 ದಿನಗಳ ಕಾಲಾವಕಾಶ ನೀಡಿ ಶೇ. 50ರಷ್ಟು ಕಡಿಮೆ ಮಾಡಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ. ಈಗ ಮತ್ತೆ ಅದೇ ಅವಧಿಗೆ ಅಂದರೆ 11.02.2023ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಅನ್ವಯವಾಗುವಂತೆ ಅವಕಾಶ ನೀಡಲು ಕೋರಲಾಗಿದೆ. ನಡವಳಿಗಳ ಅನುಸಾರ 1,274.00 ಕೋಟಿ ರು. ಬಾಕಿ ಇರುವುದಾಗಿ ತಿಳಿಸಲಾಗಿರುತ್ತದೆ.

 

ಆಡಳಿತ ಇಲಾಖೆಯ ಕೋರಿಕೆಯಂತೆ ಶೇ.50 ವಿನಾಯಿತಿ ನೀಡಿದ್ದಲ್ಲಿ ಸರ್ಕಾರಕ್ಕೆ 637.00 ಕೋಟಿ ರು ಮೊತ್ತ ನಷ್ಟ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಗೆ ಪ್ರಸಕ್ತ ಹಣಕಾಸು ಪರಿಸ್ಥಿತಿಯಲ್ಲಿ ಸಹಮತಿ ನೀಡುವುದು ಸೂಕ್ತವಾಗಿರುವುದಿಲ್ಲ,’ ಎಂದು 2023ರ ಜೂನ್‌ 23ರಂದು ಆರ್ಥಿಕ ಇಲಾಖೆಯ ಅಧಿಕಾರಿ ಶ್ರೀಕೃಷ್ಣ ಬುಗ್ಯಟಾಗೋಳ ಅವರು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿದ್ದರು. ಇದನ್ನು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‍‌ ಅವರು 2023ರ ಜೂನ್‌ 25ರಂದು ಅನುಮೋದಿಸಿದ್ದರು (FD/52/EX11/2023-EXP 11-FINANCE DEPT (COMPUTER NUMBER 1001755) ಎಂದು ಗೊತ್ತಾಗಿದೆ.

 

ಇದೇ ಪ್ರಸ್ತಾವನೆಯನ್ನು ಪುರಸ್ಕರಿಸಿದ್ದ ಆರ್ಥಿಕ ಇಲಾಖೆಯು ಒಂದು ಬಾರಿಯ ಕ್ರಮವಾಗಿ ಮಾತ್ರ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿತ್ತು. ಅ ನಂತರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 2023ರ ಜೂನ್‌ 14ರಂದು ನಡೆದ ಸಭೆಯ ನಡವಳಿಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡಲು ಕ್ರಮ ಕೈಗೊಳ್ಳುವಂತೆ ಕೋರಿತ್ತು.

 

ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಸರ್ಕಾರದ ನಿಯಮಾನುಸಾರ ದಂಡಗಳನ್ನು ವಿಧಿಸಲಾಗುತ್ತಿದೆ. ಬಹಳಷ್ಟು ಜನರು ತಮಗೆ ನೋಟೀಸ್‌ ತಲುಪಿದ ತಕ್ಷಣ ದಂಡ ಪಾವತಿಸಿ ಪ್ರಕರಣವನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೋಟೀಸ್‌ನ್ನು ಕಡೆಗಣಿಸಿ ದಂಡದ ಮೊತ್ತವನ್ನು ಹಾಗೆಯೇ ಬಾಕಿ ಉಳಿಸಿಕೊಂಡಿರುತ್ತಾರೆ.

 

ಒಂದು ವೇಳೆ ನೋಟೀಸ್‌ನ್ನು ಕಡೆಗಣಿಸಿ ದಂಡವನ್ನು ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ವಿನಾಯಿತಿ ನೀಡಿದರೆ ದಂಡವನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡುವವರಿಗೂ ಸಹ ಪಾವತಿ ಮಾಡದಿರಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಪೊಲೀಸ್‌ ಮಹಾನಿರ್ದೇಶಕರು ಸಹ ಅಭಿಪ್ರಾಯಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಬೆಂಗಳೂರು ನಗರವೊಂದರಲ್ಲೇ ಇ-ಚಲನ್‌ ಮೂಲಕ ಟ್ರಾಫಿಕ್‌ ದಂಡ ವಸೂಲಾತಿ 1,346.83ಕೋಟಿ ರು. ಪೈಕಿ 1,080.59 ಕೋಟಿ ಗೂ ಹೆಚ್ಚು ಮೊತ್ತ ವಸೂಲಾಗದೇ ಬಾಕಿ ಇದೆ. ಇದೇ ರೀತಿ ಇತರೆ 7 ನಗರಗಳಲ್ಲೂ ವಸೂಲಾಗಬೇಕಾದ ದಂಡದ ಮೊತ್ತ ಶೇ.50ಕ್ಕಿಂತಲೂ ಹೆಚ್ಚಿದೆ.

 

ವಿನಾಯಿತಿ ವಿಸ್ತರಿಸುವ ಪ್ರಸ್ತಾವನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೂ ಸಹ ಅನುಮೋದಿಸಿದ್ದರು ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts