ವನ್ಯಜೀವಿ ಮಂಡಳಿ; ಪರಿಸರ, ವನ್ಯಜೀವಿ ಸಂರಕ್ಷಣೆ ತಜ್ಞರಲ್ಲದವರ ನಾಮನಿರ್ದೇಶನಕ್ಕೆ ಶಿಫಾರಸ್ಸು

ಬೆಂಗಳೂರು; ಪರಿಸರ, ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸದೇ ಕೇವಲ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇಬ್ಬರನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ನೈಸರ್ಗಿಕ ಪರಂಪರೆ ಮತ್ತು ವನ್ಯಜೀವಿಗಳ ರಕ್ಷಣೆಯ ಮೇಲೆ ತಪಾಸಣೆ ಮತ್ತು ಸಮತೋಲನವನ್ನು ಇಟ್ಟುಕೊಳ್ಳುವ ಪ್ರಮುಖ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಅಧಿಕಾರಾವಧಿ 2023ರ ಅಕ್ಟೋಬರ್‍‌ 15ರವರೆಗೆ ಇದ್ದರೂ ಸಹ ಈಗಾಗಲೇ ಖಾಲಿ ಇರುವ ಸ್ಥಾನಗಳಿಗೆ ಸಾಮಾಜಿಕ ಕಾರ್ಯಕರ್ತರನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿರುವುದು ಮಂಡಳಿಯಲ್ಲೂ ಚರ್ಚೆಗೆ ಗ್ರಾಸವಾಗಿದೆ.

 

ಮಂಡಳಿಗೆ ಪರಿಸರವಾದಿಗಳು ಇಲ್ಲವೇ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಿರುವವರನ್ನು ನಾಮನಿರ್ದೇಶನ ಮಾಡಬೇಕು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಕ್ತೀಶ್ವರನ್‌ ಮತ್ತು ವೃತ್ತಿಯಲ್ಲಿ ರೇಡಿಯಾಲಜಿ ವೈದ್ಯರಾಗಿದ್ದಾರೆ ಎಂದು ಹೇಳಲಾಗಿರುವ ಡಾ ವಿನೋಥ್‌ ಕುಮಾರ್‍‌ ಅವರನ್ನು ರಾಜ್ಯ ವನ್ಯಜೀವಿ ಮಂಡಳಿಗೆ ನಾಮನಿರ್ದೇಶನ ಮಾಡಬೇಕು ಎಂದು ಮಾಡಿರುವ ಶಿಫಾರಸ್ಸು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೇರಿದ 100 ದಿನದಲ್ಲಿ ಈಗಾಗಲೇ ಸಾಕಷ್ಟು ವಿವಾದ, ಅಸಂಗತ ತೀರ್ಮಾನಗಳನ್ನು ಕೈಗೊಂಡು ವಿವಾದಕ್ಕೆ ಮತ್ತು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ರಾಜ್ಯ ವನ್ಯಜೀವಿ ಮಂಡಳಿಗೆ ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಶಿಫಾರಸ್ಸು ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘ದಿ ಫೈಲ್‌’ ಗೆ ಕೆಲ ದಾಖಲೆಗಳು (ಕಡತ ಸಂಖ್ಯೆ ; FEE/116/FWL/2020-FEE) (DFA/1232366) ಲಭ್ಯವಾಗಿವೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಗೆ ನಾಮನಿರ್ದೇಶನ ಮಾಡಿದ್ದರ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆಯು ಇನ್ನೂ ಪೂರ್ಣಗೊಂಡಿಲ್ಲ. ಹೀಗಿದ್ದರೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಕಾರ್ಯಕರ್ತರನ್ನು ಮಂಡಳಿಗೆ ನಾಮನಿರ್ದೇಶನ ಮಾಡಲು ಮಾಡಿರುವ ಶಿಫಾರಸ್ಸು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವ ಈಶ್ವರ್‍‌ ಖಂಡ್ರೆ ಅವರಿಗೆ ಕಡತವನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಬೆಂಗಳೂರಿನ ಯಶವಂತಪುರದ ಸಾಮಾಜಿಕ ಕಾರ್ಯಕರ್ತರು ಎನ್ನಲಾದ ಶಕ್ತೀಶ್ವರನ್‌ (ಪ್ರತೀಮ್ ಇಂದ್ರಪಸ್ಥ 49/4 ಆರ್‍‌ ಕೆ ರಸ್ತೆ ಮಹಾಲಕ್ಷ್ಮಿಪುರಂ) ಮತ್ತು ಬೆಂಗಳೂರಿನ ಗೆದ್ದಲಹಳ್ಳಿಯ ಎನ್‌ ಎಸ್‌ ಫಾರ್ಮ್‌ನ ಸಾಮಾಜಿಕ ಮತ್ತು ಪರಿಸರ ಕಾರ್ಯಕರ್ತರು ಎನ್ನಲಾದ ಡಾ ವಿನೋಥ್‌ ಕುಮಾರ್‍‌ ಅವರನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ (ಟಿಪ್ಪಣಿ ಸಂಖ್ಯೆ 6214922- ದಿನಾಂಕ 21-07-2023, ಟಿಪ್ಪಣಿ ಸಂಖ್ಯೆ 6204367, ದಿನಾಂಕ 19-07-2023) ಎಂದು ಗೊತ್ತಾಗಿದೆ.

 

‘ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರನ್ನಾಗಿ ಶಕ್ತೀಶ್ವರನ್‌, ಮತ್ತು ಡಾ ವಿನೋಥ ಕುಮಾರ್‍‌ ಅವರನ್ನು ನಾಮ ನಿರ್ದೇಶನ ಮಾಡಲು ಮುಖ್ಯಮಂತ್ರಿಯವರು ಸೂಚಿಸಿರುತ್ತಾರೆ. ಈ ಇಬ್ಬರು ಅಭ್ಯರ್ಥಿಗಳ ವಿವರಗಳು ಮತ್ತು ಪೂರ್ವಾಪುರಗಳನ್ನು ಪರಾಮರ್ಶಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳ ಜಿ ಅವರು 2023ರ ಜುಲೈ 25ರಂದು ಟಿಪ್ಪಣಿ ಹಾಳೆಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

 

ಸದ್ಯ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ರವಿ ಸುಬ್ರಮಣ್ಯ, ಪೂರ್ಣಿಮಾ ಶ್ರೀನಿವಾಸ್‌, ಶಾಂತರಾಮ ಸಿದ್ದಿ,( ರಾಜ್ಯ ವಿಧಾನಮಂಡಲದ ಸದಸ್ಯರಾಗಿದ್ದ ಅವಧಿಯಲ್ಲಿ ನೇಮಕವಾಗಿದ್ದರು. 2023ರ ವಿಧಾನ ಸಭೆ ಚುನಾವಣೆಯಲ್ಲಿ ಮರು ಆಯ್ಕೆಯಾಗದ ಕಾರಣ ಈ ಸ್ಥಾನಗಳು ಖಾಲಿ ಇವೆ. ) ಅಲ್ಲದೇ ದಿನೇಶ್‌ ಸಿಂಗ್ವಿ, ಅಲೋಕ್‌ ವಿಶ್ವನಾಥ್, ಜೋಸೆಫ್‌ ಹೂವರ್‍‌ ಅವರು ರಾಜೀನಾಮೆ ನೀಡಿದ್ದರಿಂದಾಗಿ ಈ ಸ್ಥಾನಗಳೂ ಖಾಲಿ ಇವೆ.

 

 

ರಾಜ್ಯ ವನ್ಯಜೀವಿ ಮಂಡಳಿಗೆ ತಜ್ಞರನ್ನು ನಾಮ ನಿರ್ದೇಶನ ಮಾಡಬೇಕು. WLPA ಯ ವಿಭಾಗ 6 ರ ಪ್ರಕಾರ , ರಾಜ್ಯ ವನ್ಯಜೀವಿ ಮಂಡಳಿಯ 31 ಸದಸ್ಯರಲ್ಲಿ 10 ಜನರು “ಪ್ರಖ್ಯಾತ ಸಂರಕ್ಷಣಾವಾದಿಗಳು, ಪರಿಸರಶಾಸ್ತ್ರಜ್ಞರು ಮತ್ತು ಪರಿಸರವಾದಿಗಳು” ಇರಬೇಕು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಶಿಫಾರಸ್ಸು ಇಬ್ಬರು ಸಾಮಾಜಿಕ ಕಾರ್ಯಕರ್ತರಿಗೆ ಅಂತಹ ಯಾವುದೇ ಪರಿಣತಿಯನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ.

 

ಆದರೂ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ನಿಯಮಗಳು 2006 ನೇಮಕಾತಿಗಾಗಿ ಅನುಸರಿಸಬೇಕಾದ ನಿಖರವಾದ ಕಾರ್ಯವಿಧಾನದ ಬಗ್ಗೆ ಮೌನವಾಗಿವೆ. ವನ್ಯಜೀವಿ ಮಂಡಳಿಗೆ ಶಿಫಾರಸ್ಸು ಮಾಡಲು ಬಯಸುವ ಹೆಸರುಗಳ ಪಟ್ಟಿಯನ್ನು ಅರಣ್ಯ ಇಲಾಖೆಯು ಸಿದ್ಧಪಡಿಸುತ್ತದೆ. ಅದನ್ನು ರಾಜ್ಯ ಸರ್ಕಾರವು ಮೌಲ್ಯಮಾಪನ ಮಾಡುತ್ತದೆ.

 

ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ವಾರ್ಡನ್‌ಗಳು ವಿವಿಧ ವಿಭಾಗೀಯ ಅರಣ್ಯ ಅಧಿಕಾರಿಗಳು, ಸಂರಕ್ಷಣಾ ತಜ್ಞರು ಮತ್ತು ಇತರ ತಜ್ಞರೊಂದಿಗೆ ಚರ್ಚೆಯ ಆಧಾರದ ಮೇಲೆ ಶಿಫಾರಸುಗಳನ್ನು ಮಾಡಲಾಗುತ್ತಿರುವುದು ಒಂದು ಅಭ್ಯಾಸ. ಕೆಲವೊಮ್ಮೆ ಮುಖ್ಯ ವನ್ಯಜೀವಿ ವಾರ್ಡನ್‌ಗಳು ಮುಖ್ಯಮಂತ್ರಿ ಶಿಫಾರಸು ಮಾಡಿದ ನಾಮನಿರ್ದೇಶನವನ್ನು ವಿರೋಧಿಸಿದ ನಿದರ್ಶನಗಳೂ ಇವೆ.

 

ವನ್ಯಜೀವಿ ಮಂಡಳಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದರೇ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರ ವಿಭಾಗದಿಂದ ಮೂವರು ಮಂಡಳಿಯ ಸದಸ್ಯರಾಗಿರುತ್ತಾರೆ. ವೈಲ್ಡ್‌ ಲೈಫ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಸುಶೀಲ್  ಜಿ, ಬನ್ನೇರುಘಟ್ಟ ವೈಲ್ಡ್‌ಲೈಫ್‌ ಅಸೋಸಿಯೇಷನ್‌ನ ಟ್ರಸ್ಟಿ ಸಿದ್ಧಾರ್ಥ ಗೋಯೆಂಕಾ, ಯಳಂದೂರಿನ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜಿ ಮಲ್ಲೇಶಪ್ಪ ಅವರು ಸದಸ್ಯರಾಗಿದ್ದಾರೆ. ಈ ಪೈಕಿ ಸಿದ್ದಾರ್ಥ ಗೋಯೆಂಕಾ ಅವರು ರಾಜೀನಾಮೆ ನೀಡಿದ್ದಾರೆ.

 

ಹೆಸರಾಂತ ಸಂರಕ್ಷಣಾ ವಿಶೇಷ ತಜ್ಞರ ವಿಭಾಗದಿಂದ 10 ಮಂದಿ ಮಂಡಳಿ ಸದಸ್ಯರಾಗಿರುತ್ತಾರೆ. ಚೇತನ್‌ ಬಿ, ಡಾ ಸೋಮಶೇಖರ್‍‌, ಡಾ ಶಿವಪ್ರಕಾಶ್‌, ಅಲೋಕ್‌ ವಿಶ್ವನಾಥ್‌, ನವೀನ್‌ ಜೆ ಎಸ್‌, ವಿನೋದ್‌ ಕುಮಾರ್ ಬಿ ನಾಯ್ಕ, ದಿನೇಶ್‌ ಸಿಂಗ್ವಿ, ಕೆ ಎಸ್‌ ಎನ್‌ ಚಿಕ್ಕೆರೂರು, ತ್ಯಾರ್ಗ ಉತ್ತಪ್ಪ, ಜೋಸೆಫ್‌ ಹೂವೆರ್‍‌ ಸದಸ್ಯರಾಗಿದ್ದರು.

 

ಇನ್ನುಳಿದಂತೆ ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯಪಡೆಯ ಪಿಸಿಸಿಎಫ್‌, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಅರಣ್ಯ ವಿಭಾಗದ ಐಜಿಪಿ, ಕೇಂದ್ರ ಸರ್ಕಾರದ ಸಶಸ್ತ್ರ ಪಡೆಯ ಓರ್ವ  ಪ್ರತಿನಿಧಿ, ಪಶು ಸಂಗೋಪಣೆ, ಪಶು ವೈದ್ಯ ಇಲಾಖೆಯ ನಿರ್ದೇಶಕ, ಮೀನುಗಾರಿಕೆ ಇಲಾಖೆಯ ನಿರ್ದೇಶಕ, ವನ್ಯಜೀವಿ ಸಂರಕ್ಷಣೆ ನಿರ್ದೇಶಕ, ಭಾರತೀಯ ವನ್ಯಜೀವಿ ಸಂಸ್ಥೆಯಿಂದ ನಾಮನಿರ್ದೇಶಿತ ನಿರ್ದೇಶಕ, ಜುವಾಲಜಿಕಲ್‌ ಸರ್ವೆ ಆಫ್‌ ಇಂಡಿಯಾದಿಂದ ನಾಮನಿರ್ದೇಶಿತ ಸದಸ್ಯ, ಬಟಾನಿಕಲ್‌ ಸರ್ವೆ ಆಫ್‌ ಇಂಡಿಯಾದಿಂದ ನಾಮನಿರ್ದೇಶಿತ ಸದಸ್ಯ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಡಳಿಯ ಸದಸ್ಯರಾಗಿರುತ್ತಾರೆ.

 

ರಾಜ್ಯ ವನ್ಯಜೀವಿ ಮಂಡಳಿ ರಚನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನೂ ಸದಸ್ಯರನ್ನಾಗಿ ನೇಮಕ ಮಾಡಲು ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಶಿಫಾರಸ್ಸು ಮಾಡಿದ್ದರು. ಈ ಕುರಿತು ‘ದಿ ಫೈಲ್‌’ 2020ರ ಅಕ್ಟೋಬರ್‍‌ 21ರಂದು ವರದಿ ಪ್ರಕಟಿಸಿತ್ತು.

ವನ್ಯಜೀವಿ ಮಂಡಳಿ; ಬೇಲೇಕೇರಿ ಪ್ರಕರಣದ ಆರೋಪಿತರಿಗೆ ಅಶ್ವಥ್‌ನಾರಾಯಣ್‌ ಶಿಫಾರಸ್ಸು

 

ಬೆಂಗಳೂರಿನ ಪರಿಸರವಾದಿ ಪ್ರಮೋದ್‌ ವೆಂಕಟೇಶಮೂರ್ತಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದ್ದನ್ನು ಸ್ಮರಿಸಬಹುದು.

 

ದಿನೇಶ್‌ ಸಿಂಗ್ವಿ ಅವರನ್ನು ಸರಕಾರ 2020ರ ಜ.18ರಂದು ಮಂಡಳಿ ಸದಸ್ಯರನ್ನಾಗಿ ನೇಮಿಸಿತ್ತು.

 

ವನ್ಯಜೀವಿ ಮಂಡಳಿಗೆ ದಿನೇಶ್‌ ಸಿಂಗಿ ನಾಮನಿರ್ದೇಶನ; ಪಿಐಎಲ್‌ ದಾಖಲು

 

ಅವರು ಗಣಿ ಮಾಲೀಕರಾಗಿದ್ದು, ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಅ.16ರಂದು ಹೊಸದಾಗಿ 10 ಮಂದಿ ಸದಸ್ಯರನ್ನು ನೇಮಕ ಮಾಡಿಕೊಂಡಿತ್ತು. ಅವರಲ್ಲಿ ಬಿ.ಚೇತನ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಕಾರ‍್ಯಕರ್ತ. ಡಾ.ಎ.ಆರ್‌. ಸೋಮಶೇಖರ್‌ ವೈದ್ಯರು, ಅಲೋಕ್‌ ವಿಶ್ವನಾಥ್‌, ಶಾಸಕ ಎಸ್‌.ಆರ್‌. ವಿಶ್ವನಾಥ್‌ ಪುತ್ರ. ಜೆ.ಎಸ್‌. ನವೀನ್‌, ಕಂದಾಯ ಸಚಿವ ಆರ್‌. ಆಶೋಕ್‌ ಸಂಬಂಧಿ ಹಾಗೂ ಇಬ್ಬರು ಪತ್ರಕರ್ತರು ಮತ್ತಿತರರು ಇದ್ದು, ಅವರ್ಯಾರಿಗೂ ವನ್ಯಜೀವಿಗಳ ಬಗ್ಗೆ ಜ್ಞಾನವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

 

ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಮುಚ್ಚಿದ ಪ್ರದೇಶಗಳು ಮತ್ತು ಅದರ ಆಡಳಿತ ಎಂದು ಘೋಷಿಸಬೇಕಾದ ಪ್ರದೇಶಗಳ ಆಯ್ಕೆ, ವನ್ಯಜೀವಿಗಳು ಮತ್ತು ನಿರ್ದಿಷ್ಟ ಸಸ್ಯಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ನೀತಿಯ ರಚನೆ, ಯಾವುದೇ ವೇಳಾಪಟ್ಟಿಯ ತಿದ್ದುಪಡಿಗೆ ಸಂಬಂಧಿಸಿದ ಯಾವುದೇ ವಿಷಯ, ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಯೊಂದಿಗೆ ಆದಿವಾಸಿಗಳು ಮತ್ತು ಅರಣ್ಯಗಳ ಇತರ ನಿವಾಸಿಗಳ ಅಗತ್ಯಗಳನ್ನು ಸಮನ್ವಯಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಮಂಡಳಿಯು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತದೆ.

the fil favicon

SUPPORT THE FILE

Latest News

Related Posts