ಸಿಎಜಿ ವರದಿ; ಬಿಎಸ್‌ವೈ, ಬೊಮ್ಮಾಯಿ ಅವಧಿಯಲ್ಲಿನ 983.86 ಕೋಟಿ ನಷ್ಟದ ತನಿಖೆ ಆಗುವುದೇ?

ಬೆಂಗಳೂರು; ಭೂ ಪರಿಹಾರ ಪಾವತಿಯಲ್ಲಿನ ವಿಳಂಬ, ನಕಲಿ ದಾಖಲೆಗಳ ಆಧಾರದ ಮೇಲೆ ಕ್ರಯ ಪತ್ರ ನೀಡಿರುವುದು, ಗುತ್ತಿಗೆದಾರರಿಗೆ ಅನಪೇಕ್ಷಿತ ಲಾಭ, ಭೂ ಮಾಲೀಕರಿಗೆ ಅನರ್ಹ ಲಾಭ ಕೊಟ್ಟಿರುವುದು, ವೇತನ ಪಾವತಿಯಲ್ಲಿನ ನಿಯಮಬಾಹಿರತೆ, ಅಕ್ರಮ ಪಾವತಿಗಳೂ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 2019ರಿಂದ 2021 ಆರ್ಥಿಕ ಸಾಲಿನಲ್ಲಿ 983.86 ಕೋಟಿ ರು. ಗಳನ್ನು ಆಕ್ಷೇಪಣೆಯಲ್ಲಿರಿಸಿದ್ದ ಸಿಎಜಿ ವರದಿಯು ಇದೀಗ ಮುನ್ನೆಲೆಗೆ ಬಂದಿದೆ.

 

ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸಬೇಕು ಎಂದು  ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕವೂ ಸಹ 2013-14ರಿಂದ 2017-18ನೇ ಸಾಲಿನವರೆಗೆ ಸಿಎಜಿ ನೀಡಿರುವ ವರದಿಯನ್ನು ಕಲೆ ಹಾಕುತ್ತಿದೆ. ಈ ಬೆಳವಣಿಗೆ ನಡುವೆ  2019ರಿಂದ 2021ನೇ ಸಾಲಿನಲ್ಲಿ ನಾಲ್ಕೈದು ಇಲಾಖೆಗಳಲ್ಲಿ 983.86 ಕೋಟಿ ರು. ಆಕ್ಷೇಪಣೆಯಲ್ಲಿಟ್ಟಿದ್ದ ಸಿಎಜಿ ವರದಿಯು ಮಹತ್ವ ಪಡೆದುಕೊಂಡಿದೆ.

 

ನಗರಾಭಿವೃದ್ಧಿ, ಲೋಕೋಪಯೋಗಿ, ವಾಣಿಜ್ಯ ಕೈಗಾರಿಕೆ, ಆರ್ಥಿಕ, ಕಂದಾಯ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಒಳಾಡಳಿತ, ಯೋಜನೆ, ಉನ್ನತ ಶಿಕ್ಷಣ, ಪಶು ಸಂಗೋಪನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಿಎಜಿ ವರದಿ ನೀಡಿತ್ತು. ವರದಿಯಲ್ಲಿ ಆಕ್ಷೇಪಣೆ ಇರಿಸಿದ್ದ ಕಂಡಿಕೆಗಳಿಗೆ ಈ ಇಲಾಖೆಗಳು ಇನ್ನೂ ಸಮರ್ಥನೀಯ ಅಂಶಗಳನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಒದಗಿಸಿಲ್ಲ ಎಂದು ಗೊತ್ತಾಗಿದೆ.

 

ನಗರಾಭಿವೃದ್ಧಿ ಇಲಾಖೆಯೊಂದರಲ್ಲೇ 2109-20ರಲ್ಲಿ ಒಟ್ಟು 233.39 ಕೋಟಿ ಮೊತ್ತವನ್ನು ಆಕ್ಷೇಪಣೆಯಲ್ಲಿರಿಸಿತ್ತು. ಭೂ ಪರಿಹಾರ ಪಾವತಿಯಲ್ಲಿನ ವಿಳಂಬದಿಂದಾಗಿ 10.04 ಕೋಟಿ ರು ಅರ್ಥಿಕ ಹೊರೆ ಸಂಭವಿಸಿತ್ತು. ಶಂಕಿತ ನಕಲಿ ದಾಖಲೆಗಳ ಆಧಾರದ ಮೇಲೆ ಸಂಪೂರ್ಣವಾಗಿ ಕ್ರಯ ಪತ್ರಗಳನ್ನು ನೀಡಿದ್ದರಿಂದಾಗಿ 10.05 ಕೋಟಿ ರು., ಸೇವಾ ತೆರಿಗೆ ಪಾವತಿಗೆ ಶಾಸನಬದ್ಧ ನಿಬಂಧನೆಗಳನ್ನು ಪಾಲಿಸದಿರುವ ಕಾರಣ 6.26 ಕೋಟಿ ರು., ಸೇವಾ ತೆರಿಗೆ ಮರು ಪಾವತಿ ಮೇಲೆ ಗುತ್ತಿಗೆದಾರನಿಗೆ ಅನುಚಿತವಾಗಿ 4.34 ಕೋಟಿ ರು. ಲಾಭವಾಗಿದ್ದು, ವ್ಯತ್ಯಾಸದ ಅಂಶವನ್ನಾಧರಿಸಿ ಗುತ್ತಿಗೆದಾರನಿಗೆ ಅನುಚಿತವಾಗಿ 2.34 ಕೋಟಿ ರು., ಒಳಚರಂಡಿ ಕಾಮಗಾರಿಗಳ ಅಸಮರ್ಪಕ ಯೋಜನೆ ಮತ್ತು ಕಾರ್ಯನಿರ್ವಹಣೆಯಿಂದಾಗಿ 198.75 ಕೋಟಿ ರು., ಆರ್ಥಿಕ ಸಂಹಿತೆ ನಿಬಂಧನೆಗಳನ್ನು ಅನುಸರಿಸದ ಕಾರಣ 1.61 ಕೋಟಿ ರು. ನಷ್ಟವುಂಟಾಗಿತ್ತು ಎಂದು ಸಿಎಜಿಯು (ವರದಿ ಸಂಖ್ಯೆ-3) 2022ರಲ್ಲಿ ನೀಡಿದ್ದ ವರದಿಯಲ್ಲಿ ವಿವರಿಸಿತ್ತು.

 

ಅಲ್ಲದೇ ಇದೇ ಇಲಾಖೆಯಯಡಿಯಲ್ಲಿ 2020-21ರಲ್ಲಿ ವಸತಿ ಯೋಜನೆ ಸಂಬಂಧಿಸಿದಂತೆ 478.77 ಕೋಟಿ ರು., ಮತ್ತು ಭೂ ಮಾಲೀಕರಿಗೆ 29.85 ಕೋಟಿ ರು. ಅನರ್ಹ ಲಾಭ ಮಾಡಿಕೊಟ್ಟಿದ್ದನ್ನು ಆಕ್ಷೇಪಣೆಯಲ್ಲಿರಿಸಿತ್ತು. 1.52 ಕೋಟಿ ರು.ಗಳ ಪ್ರಾರಂಭಿಕ ಠೇವಣಿಯನ್ನು ನಿಯಮಬಾಹಿರವಾಗಿ ಮರು ಪಾವತಿಸಲಾಗಿತ್ತು. ಕೊಳಚೆ ನೀರು ಕೊಳವೆಗಳಿಗೆ ಸಂರಕ್ಷಣಾ ಲೇಪನವನ್ನು ಒದಗಿಸುವಲ್ಲಿ 40.65 ಕೋಟಿ ರು.ಗಳ ವೆಚ್ಚವನ್ನು ತಪ್ಪಿಸಬಹುದಾಗಿತ್ತಾದರೂ ವೆಚ್ಚ ಮಾಡಲಾಗಿತ್ತು. 37.25 ಕೋಟಿ ರು. ಮೊತ್ತವನ್ನು ಹೊರಗುತ್ತಿಗೆ ಉದ್ಯೋಗಿಗಳ ಸಂಬಳ, ಕೂಲಿ ವೇತನವನ್ನಾಗಿ ನಿಯಮಬಾಹಿರವಾಗಿ ಪಾವತಿಸಲಾಗಿತ್ತು ಎಂದು ಸಿಎಜಿ (ವರದಿ ಸಂಖ್ಯೆ -7) ವಿವರಿಸಿತ್ತು.

 

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 48.2 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿತ್ತು. ನಿಷ್ಕ್ರೀಯವಾಗಿಡಲಾಘಿದದ ಗುಣಮಟ್ಟ ಖಾತ್ರಿ ಉಪಕರಣಗಳ ಸಂಬಂಧ 20.82 ಕೋಟಿ ರು., 18.50 ಕೋಟಿ ರು.ಗಳ ವೆಚ್ಚವನ್ನು ತಪ್ಪಿಸಬಹುದಾಗಿದ್ದರೂ ಅಧಿಕಾರಿಗಳ ಲೋಪದಿಂದಾಗಿ ಖರ್ಚಾಗಿತ್ತು. ಇಲಾಖೆಗಳ ತಪ್ಪುಗಳ ಕಾರಣದಿಂದ 9.10 ಕೋಟಿ ರು. ಪರಿಹಾರ ಪಾವತಿಯಾಗಿತ್ತು. 3.14 ಕೋಟಿ ರು. ಸ್ವೀಕಾರಾರ್ಹವಲ್ಲದ ಪಾವತಿ ರೂಪದಲ್ಲಿ 3.14 ಕೋಟಿ, ಅಕ್ರಮವಾಗಿ 3.09 ಕೋಟಿ ರು.ಗಳನ್ನು ಪಾವತಿಸಲಾಗಿತ್ತು ಎಂದು ಸಿಎಜಿ (2022ನೇ ಸಾಲಿನ ವರದಿ ಸಂಖ್ಯೆ 3) ಉಲ್ಲೇಖಿಸಿತ್ತು.

 

ಅದೇ ರೀತಿ ಇದೇ ಇಲಾಖೆಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ 1.56 ಕೋಟಿಯಷ್ಟು ಅಧಿಕ ಪ್ರಮಾಣದಲ್ಲಿ ಪಾವತಿಯಾಗಿತ್ತು. (2022ನೇ ಸಾಲಿನ ವರದಿ ಸಂಖ್ಯೆ 7) 2021ನೇ ವರ್ಷದ ಅಂತ್ಯಕ್ಕೆ ಪ್ರಾರಂಭವಾಗದ ಮತ್ತು ನಿಧಾನಗತಿಯಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರಿಗೆ 1.73 ಕೋಟಿ ರು. ಅನಗತ್ಯ ಲಾಭ ಮಾಡಿಕೊಡಲಾಗಿತ್ತು.

 

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಗುತ್ತಿಗೆದಾರರಿಗೆ 2.04 ಕೋಟಿಯಷ್ಟು ಲಾಭ ಮಾಡಿಕೊಡಲಾಗಿತ್ತಲ್ಲದೇ 1.01 ಕೋಟಿ ರು ಅನುದಾನವನ್ನು ನಿಯಮಬಾಹಿರವಾಗಿ ಬಿಡುಗಡೆ ಮಾಡಲಾಗಿತ್ತು. (2022ನೇ ಸಾಲಿನ ವರದಿ ಸಂಖ್ಯೆ 7) ಸಾರಿಗೆ ಇಲಾಖೆಯಲ್ಲಿ ಕಡಿಮೆ ಪ್ರಮಾಣದಲ್ಲಿ 97.66 ಲಕ್ಷ ರು. ತೆರಿಗೆ ವಸೂಲಾಗಿದ್ದನ್ನು ಆಕ್ಷೇಪಣೆಯಲ್ಲಿರಿಸಲಾಗಿತ್ತು.

 

ಆರ್ಥಿಕ ಇಲಾಖೆ ವ್ಯಾಪ್ತಿಯಲ್ಲಿನ ಅಧಿಕ ಪ್ರಮಾಣದಲ್ಲಿ ಸಂಗ್ರಹಿಸಿದ್ದ 6.65 ಕೋಟಿ ರು.ಗಳನ್ನು ಮುಟ್ಟುಗೋಲು ಹಾಕಿಕೊಂಡಿರಲಿಲ್ಲ. ಮದ್ಯ ಮಾರಾಟದ ಮೇಲೆ 37.48 ಲಕ್ಷ ರು.ಗಳನ್ನ ತೆರಿಗೆ ಪಾವತಿಸಿರಲಿಲ್ಲ. ಉಪ ಗುತ್ತಿಗೆದಾರರಿಗೆ 3.37 ಕೋಟಿ ರು.ಗಳನ್ನು ತಪ್ಪಾಗಿ ಪಾವತಿಸಲಾಗಿತ್ತು. ಖರೀದಿಗಳ ಮೇಲಿನ ತೆರಿಗೆ ಜಮೆಗೆ ಸಂಬಂಧಿಸಿದಂತೆ 0.54 ಕೋಟಿ ರು., ಕೂಲಿ ಪಾವತಿ ಹಾಗೂ ಅಂತಹದ್ದೇ ವೆಚ್ಚಗಳನ್ನು ಅಧಿಕ ಪ್ರಮಾಣದಲ್ಲಿ ಕಳೆದಿದ್ದರ ಪರಿಣಾಮ 3.77 ಕೋಟಿ ರು ಮೊತ್ತ ತೆರಿಗೆಯನ್ನು ವಿಧಿಸಲಾಗಿತ್ತು.

 

ಕಂದಾಯ ಇಲಾಖೆಯ (ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ) 2020-21ರಲ್ಲಿ ದಸ್ತಾವೇಜುಗಳನ್ನು ತಪ್ಪಾಗಿ ವರ್ಗೀಕರಿಸಿದ್ದರಿಂದಾಗಿ 14.71 ಕೋಟಿ ರು. ಶುಲ್ಕ ಕಡಿಮೆಯಾಗಿತ್ತು. ವಾಸ್ತವಾಂಶಗಳನ್ನು ಸ್ಪಷ್ಟಪಡಿಸದ ಕಾರಣ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕದಲ್ಲಿ 1.70 ಕೋಟಿ ರು., ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿದ್ದರಿಂದಾಗಿ 15.09 ಕೋಟಿ ರು., ಜಂಟಿ ಅಭಿವೃದ್ಧಿ ಒಡಂಬಡಿಕೆಗಳ ಮೇಲೂ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿದ್ದರಿಂದಾಗಿ 8.09 ಕೋಟಿ ಸೇರಿ ಒಟ್ಟಾರೆ 41.46 ಕೋಟಿಯಷ್ಟು ನಷ್ಟವುಂಟಾಗಿತ್ತು ಎಂದು ಸಿಎಜಿ 2021ರಲ್ಲಿ ವರದಿ ಸಲ್ಲಿಸಿತ್ತು.

 

ಉನ್ನತ ಶಿಕ್ಷಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಹಂಚಿಕೆಯಲ್ಲಿ 27.90 ಕೋಟಿಯಷ್ಟು ಅನುತ್ಪಾದಕ ವೆಚ್ಚವಾಗಿತ್ತು. ಅನುದಾನಿತ ಪಾಲಿಟೆಕ್ನಿಕ್‌ಗಳು 2.79 ಕೋಟಿಯಷ್ಟು ಕಡಿಮೆ ರಾಜಸ್ವ ಸಂಗ್ರಹಿಸಲಾಗಿತ್ತು. ಅರ್ಹತೆ ಪ್ರಕಾರ ಮನೆ ಬಾಡಿಗೆ ಭತ್ಯೆ ನಿಯಂತ್ರಣ ಮಾಡದ ಕಾರಣ 2.18 ಕೋಟಿಯಷ್ಟು ನಷ್ಟವುಂಟಾಗಿತ್ತು.

 

ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ಕಾಲು ಮತ್ತು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ವ್ಯಾಕ್ಸಿನ್‌ ವೈಲ್‌ ಮಾನಿಟರ್‍‌ಗಳ ದರವನ್ನು ತಪ್ಪಾಗಿ ಪರಿಗಣಿಸಿದ್ದರಿಂದಾಗಿ 7.66 ಕೋಟಿ ರು. ಅಧಿಕ ವೆಚ್ಚವಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3.73 ಕೋಟಿ ರು.ಗಳ ವೆಚ್ಚವನ್ನು ತಪ್ಪಿಸಬಹುದಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

 

2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 35 ಸಾವಿರ ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿಯು ಆರೋಪಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts