ಬೆಂಗಳೂರು; ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಳವೆ ಬಾವಿ ಕೊರೆಯಲು ತುಂಡು ಗುತ್ತಿಗೆ ಅಡಿಯಲ್ಲಿ ಕಾಮಗಾರಿ ಆರಂಭಿಸಿದ್ದ ಅಧಿಕಾರಿಗಳು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ತಿಂಗಳವರೆಗೂ ಇದನ್ನು ಮುಂದುವರೆಸಿದ್ದರು. ಇದರಿಂದಾಗಿ 1.55 ಕೋಟಿಯಷ್ಟು ನಷ್ಟವಾಗಿತ್ತು.
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 2022 ರ ಏಪ್ರಿಲ್‌ನಿಂದ ಜೂನ್ 2023ರವರೆಗೂ ಒಟ್ಟಾರೆಯಾಗಿ 140 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿತ್ತು ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆಯೇ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿತ್ತು ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಎನ್ ರಾಜಶೇಖರಯ್ಯ ಎಂಬುವರು ದೂರು ಸಲ್ಲಿಸುವವರೆಗೂ ಈ ಪ್ರಕರಣವು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೂ ಬಂದಿರಲಿಲ್ಲ. ಇದು ಅಧಿಕಾರಿಗಳ ಗಮನಕ್ಕೆ ಬರುವ ಹೊತ್ತಿಗಾಗಲೇ 1.55 ಕೋಟಿಯಷ್ಟು ಆರ್ಥಿಕ ನಷ್ಟವಾಗಿತ್ತು.
ಇದೀಗ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಲೆಕ್ಕಾಧೀಕ್ಷಕ ವಿಕ್ರಮ್ ಮತ್ತು ಕಿರಿಯ ಇಂಜಿನಿಯರ್ ಶೃತಿ ಎಂಬುವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಹಿಂದಿರುಗಿಸಲಾಗಿದೆಯೇ ವಿನಃ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಗೊತ್ತಾಗಿದೆ. ಇಲಾಖೆಯಲ್ಲಿ ಆರ್ಥಿಕ ಅಶಿಸ್ತು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ ನಂತರವೂ 1.55 ಕೋಟಿ ರು. ನಷ್ಟವೆಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸದೆಯೇ ಮಾತೃ ಇಲಾಖೆಗೆ ಬಿಡುಗಡೆಗೊಳಿಸಿರುವುದು ಮುನ್ನೆಲೆಗೆ ಬಂದಿದೆ.
ಕರ್ತವ್ಯದಿಂದ ಬಿಡುಗಡೆ ಮಾಡಿರುವ ಕುರಿತು 2023ರ ಜುಲೈ 5ರಂದು ಬೆಂಗಳೂರು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ವಿವರ
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ವ್ಯಾಪ್ತಿಯ ಕೊಳವೆ ಬಾವಿ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದಲ್ಲಿ ನಡೆಸಲಾಗಿತ್ತು. ಇದರಿಂದಾಗಿ ಸರ್ಕಾರಕ್ಕೆ ಶೇ.15ರಷ್ಟು ನಷ್ಟವುಂಟಾಗಿದೆ ಎಂದು ಎನ್ ರಾಜಶೇಖರಯ್ಯ ಎಂಬುವರು ಜಿಲ್ಲಾ ಪಂಚಾಯ್ತಿಗೆ 2023ರ ಜೂನ್ 17ರಂದು ದೂರು ಸಲ್ಲಿಸಿದ್ದರು.
ಈ ದೂರನ್ನು ಪುರಸ್ಕರಿಸಿದ್ದ ಅಧಿಕಾರಿಗಳು ಕೊಳವೆ ಬಾವಿಗಳ ಕಾಮಗಾರಿಗಳ ಬಗ್ಗೆ ನಿಯಮಾನುಸಾರವಾಗಿ ಪರಿಶೀಲಿಸಿ ಕೆಟಿಪಿಪಿ ಕಾಯ್ದೆ, ನಿಯಮದಂತೆ ಅನುಷ್ಠಾನಗೊಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲಿಸಿ ತನಿಖಾ ತಂಡ ರಚಿಸಲಾಗಿತ್ತು.
1.55 ಕೋಟಿ ನಷ್ಟ
2022ರ ಏಪ್ರಿಲ್‌ನಿಂದ 2023ರ ಜೂನ್‌ವರೆಗೂ ಒಟ್ಟಾರೆಯಾಗಿ ನಡೆದಿದ್ದ ಕಾಮಗಾರಿಗಳನ್ನು ತನಿಖಾ ತಂಡವು ತಪಾಸಣೆಗೊಳಪಡಿಸಿತ್ತು. 2022ರ ಏಪ್ರಿಲ್‌ನಿಂದ 2023ರ ಜೂನ್‌ವರೆಗೆ ಒಟ್ಟಾರೆಯಾಗಿ 140 ಕಾಮಗಾರಿಗಳನ್ನು ನಿರ್ವಹಿಸಲಾಗಿತ್ತು. ಈ ಸಂಬಂಧ ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿತ್ತಾದರೂ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದಿರಲಿಲ್ಲ. ಈ ಕಾಮಗಾರಿಗಳಿಗೆ ಒಟ್ಟಾರೆಯಾಗಿ 5,24,58,019 ರು.ಗಳ ವೆಚ್ಚವಾಗಿತ್ತು ಎಂಬುದನ್ನು ತನಿಖೆ ವೇಳೆ ಬಯಲಾಗಿತ್ತು.
2022-23ನೇ ಸಾಲಿನ ಸೆಪ್ಟಂಬರ್‌ನಲ್ಲಿ ಒಂದು ವರ್ಷದ ಅವಧಿಗೆ ನೇಮಕಗೊಂಡ ಸಂಸ್ಥೆಗಳ ಕಾಮಗಾರಿಗೆ ನಿಗದಿಪಡಿಸಿದ ದರದ/ಕೊಳವೆ ಬಾವಿ ಆಳ, ಅಳತೆ ಆಧಾರದ ಮೇಲೆ ಕಾಮಗಾರಿ ಕೈಗೊಂಡಿದ್ದರೇ 1,74,40,674.35 ರು. ಮಾತ್ರ ವೆಚ್ಚವಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿಯೇ ಪ್ರಸ್ತುತ 3,30,02,237.00 ರು. ವೆಚ್ಚವಾಗಿತ್ತು. ಹೀಗಾಗಿ ಜಿಲ್ಲಾ ಪಂಚಾಯ್ತಿಗೆ 1,55, 61,562.70 ರು.ಗಳ ಆರ್ಥಿಕ ನಷ್ಟವುಂಟಾಗಿದೆ ಎಂಬುದನ್ನು ತನಿಖಾ ತಂಡವು ಪತ್ತೆ ಹಚ್ಚಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.
‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವ್ಯಾಪ್ತಿಯ ಕೊಳವೆ ಬಾವಿ ಕಾಮಗಾರಿಯಲ್ಲಿ ಸರ್ಕಾರಕ್ಕೆ 1,55,61,562.70 ರು. ನಷ್ಟವಾಗಿದೆ ಎಂದು ತನಿಖಾ ತಂಡವು ನೀಡಿರುವ ವರದಿಯಲ್ಲಿ ಅಭಿಪ್ರಾಯಿಸಿರುವುದರಿಂದ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಕಿರಿಯ ಇಂಜಿನಿಯರ್, ಲೆಕ್ಕ ಅಧೀಕ್ಷಕರನ್ನು ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರೆಸಿದ್ದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತಿದ್ದುವ, ಸಾಕ್ಷಿಗಳನ್ನು ತಿರುಚುವ ಮತ್ತು ದಾಖಲೆಗಳು ಲಭ್ಯವಾಗದಂತೆ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಈ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಪೂರ್ಣ ಪ್ರಮಾಣದ ವಿಚಾರಣೆ ಅವಶ್ಯವಿದೆ,’ ಎಂದು ತೀರ್ಮಾನಿಸಿರುವುದು ಅಧಿಕೃತ ಜ್ಞಾಪನ ಪತ್ರದಿಂದ ಗೊತ್ತಾಗಿದೆ.