ಬೆಂಗಳೂರು; ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಕ್ರೈಸ್ತ ಮತಕ್ಕೆ ಮತಾಂತರವಾಗಲು ಒತ್ತಡ, ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ನ್ಯೂನತೆಗಳಿವೆ ಎಂಬುದು ಇದೀಗ ಬಹಿರಂಗವಾಗಿವೆ.
ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪೊಲೀಸ್ ಮಹಾ ನಿರ್ದೇಶಕರಿಗೆ 2023 ಆಗಸ್ಟ್ 10ರಂದು ಪತ್ರವನ್ನು (HD 97 MHB 2023) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪಾಂಡವಪುರದ ಹರಳಹಳ್ಳಿ ಗ್ರಾಮದಲ್ಲಿನ ಪ್ರಾರ್ಥನಾ ಮಂದಿರಕ್ಕೆ ಮುರುಳಿ, ರಾಮು ಮತ್ತು ಸುಮಂತ್ ಎಂಬುವರು ತೆರಳಿದ್ದ ಸಂದರ್ಭದಲ್ಲಿ ಸುರೇಶ್ ನಾಯಕ್ ಮತ್ತಿತರರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಪ್ರಚೋದನೆ ಮತ್ತು ಒತ್ತಡ ಹೇರಿದ್ದರು ಎಂದು ಆರೋಪಿಸಿ ಮುರುಳಿ ಎಂಬುವರು ಪಾಂಡವಪುರ ಪೊಲೀಸ್ ಠಾಣೆಗೆ 2021ರ ಜನವರಿ 24ರಂದು ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ಸುರೇಶ್ ನಾಯಕ್ ಮತ್ತಿತರರ ವಿರುದ್ಧ ಮೊಕದ್ದಮೆ (ಮೊ ಸಂಖ್ಯೆ; 37/2021) ದಾಖಲಾಗಿತ್ತು.
ಈ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಪಾಂಡವಪುರ ಪೊಲೀಸರು ಪೂರ್ವಾನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಸಂಬಂಧ ಪರಿಶೀಲಿಸಿದ್ದ ಒಳಾಡಳಿತ ಇಲಾಖೆಯು ದೋಷಾರೋಪಣೆ ಪಟ್ಟಿಯಲ್ಲಿ ನ್ಯೂನತೆಗಳಿರುವುದನ್ನು ಪತ್ತೆ ಹಚ್ಚಿತ್ತು ಎಂದು ಗೊತ್ತಾಗಿದೆ.
ದೋಷಾರೋಪಣೆ ಪಟ್ಟಿಯಲ್ಲಿರುವ ನ್ಯೂನತೆಗಳೇನು?
‘ಪ್ರಸ್ತುತ ಪ್ರಕರಣದ ದೂರುದಾರರು ಸಲ್ಲಿಸಿದ ದೂರನ್ನು ಪರಿಶೀಲಿಸಿದಾಗ ಆರೋಪಿತರು ಭಾರತೀಯ ದಂಡ ಸಂಹಿತೆ ಕಲಂ 153)ಎ) ಅಡಿ ಕೃತ್ಯವೆಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದೂರುದಾರರು ನೀಡಿದ ದೂರಿನಲ್ಲಿ ಕೃತ್ಯ ನಡೆದ ದಿನಾಂಕ 24.01.2021 ಎಂದು ನಮೂದಾಗಿದ್ದು ಆದರೆ ಕರಡು ದೋಷಾರೋಪಣೆ ಪತ್ರದ ಕಾಲಂ 17ರ ಪ್ರಕರಣದ ಸಂಕ್ಷಿಪ್ತ ವಿವರದಲ್ಲಿ ಕೃತ್ಯ ನಡೆದ ದಿನಾಂಕ 24.02.2021 ಎಂದು ನಮೂದಾಗಿದೆ. ಈ ಕುರಿತು ತನಿಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಕಾನೂನಿನ ಕಲಂಗಳನ್ನು ಅಳವಡಿಸಿ ನಂತರ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಬೇಕು,’ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್ ಜೆ ಅವರು ನಿರ್ದೇಶಿಸಿರುವುದು ತಿಳಿದು ಬಂದಿದೆ.
ಈ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ದೂರಿನಲ್ಲೇನಿದೆ?
ಹರಳಹಳ್ಳಿ ಗ್ರಾಮದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಪ್ರತಿ ಭಾನುವಾರ ಯೇಸು ಪ್ರಾರ್ಥನೆ ಮಾಡುತ್ತಿರುತ್ತೇವೆ. ನೀವು ಕೂಡ ಯೇಸುವಿನ ಆರಾಧನೆಗೆ 2021 ಜನವರಿ 21ರಂದು ಬೆಳಗ್ಗೆ 11-30ಕ್ಕೆ ಪ್ರಾರ್ಥನ ಮಂದಿರಕ್ಕೆ ಬನ್ನಿ ಎಂದು ಸುರೇಶ್ ನಾಯಕ್ ಮತ್ತಿತರರು ಹೇಳಿದರು. ಅದರಂತೆ ನಾನು ಮತ್ತು ನನ್ನ ಸಂಗಡ ನನ್ನ ಪರಿಚಯಸ್ಥರಾದ ರಾಮು ಮತ್ತು ಸುಮಂತ್‌ರವರ ಜೊತೆಗೂಡಿ ಹೋದೆವು.
ಅಲ್ಲಿ ಸದರಿ ವ್ಯಕ್ತಿ ಮತ್ತು ಅವನ ಜೊತೆ ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು ಹಾಗೂ ಒಬ್ಬ ಹಿರಿಯ ಮಹಿಳೆ ಇದ್ದರು. ಅಲ್ಲಿ ನಮ್ಮನ್ನು ನಿಮಗೆ ಪ್ರಾರ್ಥನೆ ಮಾಡಿಸುತ್ತೇವೆ ಎಂದು ಪ್ರಾರ್ಥನೆ ಮಾಡುವ ಸಮಯದಲ್ಲಿ ನನ್ನ ಕೈಗೆ ಬೈಬಲ್ ಪುಸ್ತಕ ಕೊಟ್ಟರು. ಹಾಗೂ ನಿಮ್ಮ ಮನೆ ದೇವರು ಮತ್ತು ನಿಮ್ಮ ಇಷ್ಟ ದೇವರು ಯಾವುದು ಎಂದು ಕೇಳಿದರು. ಆಗ ನಾನು ನನ್ನ ಮನೆಯ ದೇವರು ಕಾಳ ಬೈರವೇಶ್ವರ ನನ್ನ ಇಷ್ಟ ದೇವರು ಗಣಪತಿ ಮತ್ತು ಆಂಜನೇಯ ಎಂದು ಹೇಳಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಮನುಷ್ಯ ರೂಪದಲ್ಲಿರುವ ವ್ಯಕ್ತಿಗೆ ಆನೆಯ ತಲೆ ಸೊಂಡಿಲು ಇರಲು ಸಾಧ್ಯವೇ ಎಂದು ಪ್ರಶ್ನಿಸಿದ. ಅವನು ಒಬ್ಬ ಕೊಳೆಯಿಂದ ಹುಟ್ಟಿದವರು. ಮೊದಲು ಅವನೇ ಕೊಳಕ ಅವನು ನಿಮ್ಮನ್ನು ಎಷ್ಟು ಮಟ್ಟಿಗೆ ನಿಮ್ಮನ್ನು ನಿಮ್ಮ ಜೀವನವನ್ನು ದೇಹವನ್ನು ಮನಸ್ಸನ್ನು ಹೇಗೆ ಸುಖವಾಗಿ ಹಾಗೂ ಸ್ವಚ್ಛವಾಗಿ ಇಡಲು ಸಾಧ್ಯ. ಅವನೊಬ್ಬ ಹೊಟ್ಟೆಬಾಕ ಅವನು ತನ್ನ ಹೊಟ್ಟೆಯನ್ನು ಹಾವಿನಿಂದ ಸುತ್ತಿಕೊಂಡಿದ್ದಾನೆ ಎಂದು ಅವಹೇಳನ ಮಾಡಿ ನನ್ನ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
‘ಹನುಮಂತ ಅವನೊಬ್ಬ ಕಪಿ, ಅವನೊಬ್ಬ ಕೋತಿ ಅವನೊಬ್ಬ ಬುದ್ಧಿ ಹೀನ. ಅವನು ರಾಮನ ಗುಲಾಮ ಎಂದು ಅವಹೇಳನ ಮಾಡಿ ನನ್ನ ನೆಮ್ಮದಿ ಮತ್ತು ಶಾಂತಿಗೆ ಭಂಗ ತಂದಿದ್ದಾನೆ. ನನ್ನ ಮತ ಜಗತ್ತಿನಲ್ಲಿ ಸರ್ವ ಶ್ರೇಷ್ಟ ಮತ, ನಿಮ್ಮದು ಅನಾಗರಿಕ. ಮೂಢ ನಂಬಿಕೆ ಹೊಂದಿರುವ ಕೀಳು ಮತ ಎಂದು ಹೇಳಿ ದೂಷಣೆ ಮಾಡಿದ ಎಂದು ವಿವರಿಸಲಾಗಿದೆ.
ನಮ್ಮಹಿಂದೂ ಧರ್ಮ ಮತ್ತು ಅವರ ಕ್ರೈಸ್ತ ಮತದ ಬಗ್ಗೆ ಭಿನ್ನ ಭಿನ್ನ ಎಂದು ಹೇಳಿ ನಮ್ಮ ಹಿಂದೂ ಸಮಾಜ ಮತ್ತು ಕ್ರೈಸ್ತ ಸಮಾಜದ ಬಗ್ಗೆ ಒಡಕು ಉಂಟು ಮಾಡಿದ ಮಾತನಾಡಿದ ಅಲ್ಲದೇ ನೀವೆಲ್ಲಾ ಪಾಪಿಗಳು. ನಿಮ್ಮನ್ನು ಉದ್ಧರಿಸಲೆಂದೇ ಕ್ರೈಸ್ತ ಮತದ ಪ್ರಚಾರಕರು ಭಾತದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಕ್ರೈಸ್ತ ಮತ ಜಗತ್ತಿನಾದ್ಯಂತ ಹರಡಿದೆ. ಮತ್ತು ನೀವು ಯೇಸುವನ್ನು ನಂಬಿ ಆರಾಧಿಸಿದರೆ ಮಾತ್ರ ನಿಮ್ಮ ಜೀವನ ಸ್ವರ್ಗ ಅಗುತ್ತದೆ ಮತ್ತು ನೀವು ಮರಣಿಸಿದ ನಂತರ ಸ್ವರ್ಗಕ್ಕೆ ಹೋಗುತ್ತೀರ ಇಲ್ಲದಿದ್ದಲ್ಲಿ ನಿಮ್ಮ ಜೀವನ ನರಕ ಆಗುತ್ತದೆ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೀವು ಸತ್ತ ನಂತರ ನರಕಕ್ಕೆ ಹೋಗುತ್ತೀರಿ ಎಂದು ನೀವು ನಾನು ಕೊಟ್ಟಿರುವ ಗ್ರಂಥವಾದ ಬೈಬಲ್‌ನ್ನು ಓದಿ ಎಂದು ಹೇಳಿದನು. ಆಗ ನಾವೆಲ್ಲರೂ ಭಾರತೀಯರು ನಾವೆಲ್ಲರೂ ಒಂದು ಏಕೆ ಈ ಭೇದವನ್ನು ಉಂಟು ಮಾಡುತ್ತೀರಿ ಎಂದು ಕೇಳಿದಾಗ ಸದರಿ ವ್ಯಕ್ತಿಯು ನೀವು ಕಡ್ಡಾಯವಾಗಿ ಕ್ರೈಸ್ತ ಮತಕ್ಕೆ ಮತಾಂತರವಾಗಲೇಬೇಕು ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಕುತ್ತು ತರುತ್ತೇವೆ ಎಂದು ಹೇಳಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ವಿವರಿಸಲಾಗಿದೆ.
‘ನೀವು ನಮ್ಮ ಧರ್ಮಕ್ಕೆ ಮತಾಂತರವಾಗದಿದ್ದರೆ ನಿಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ನಿಮ್ಮ ಮೇಲೆ ಪೊಲೀಸ್ ದೂರನ್ನು ಕೊಡುತ್ತೇವೆಂದು ಬೆದರಿಕೆ ಹಾಕಿದರು. ಆ ಸಂದರ್ಭದಲ್ಲಿ ನನ್ನ ಮತ್ತು ಅವರ ನಡುವೆ ಚರ್ಚೆ ನಡೆಯುತ್ತಿದ್ದಾಗ ಹಲವು ಜನ ಸಾರ್ವಜನಿಕರು ಅಲ್ಲಿ ಸೇರಿ ಮೇಲ್ಕಂಡ ಸದರಿ ವ್ಯಕ್ತಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಆಗ ಬುದ್ಧಿ ಮಾತು ಕೇಳದ ಸದರಿ ವ್ಯಕ್ತಿಯು ನೀವೆಲ್ಲಾ ಪಾಪಿಗಳು ನೀವೆಲ್ಲಾ ನರಕಕ್ಕೆ ಹೋಗುತ್ತೀರಿ ಎಂದು ಕೂಗಾಡುತ್ತಾ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿದ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.