ಬೆಂಗಳೂರು; ಪದೇಪದೇ ಬರಗಾಲವನ್ನು ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ನೆಲಗಡಲೆ ದರವನ್ನು ಪರಿಷ್ಕರಿಸಿ ಪ್ರತಿ ಕ್ವಿಂಟಾಲ್‌ಗೆ 7,500 ರು.ನಂತೆ ನಿಗದಿಪಡಿಸಬೇಕು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಪೂರಕವಾಗಿ ಸ್ಪಂದಿಸಿಲ್ಲ.
ಜಿಲ್ಲಾಧಿಕಾರಿ ಪ್ರಸ್ತಾವನೆ ಪರಿಶೀಲಿಸಿರುವ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಪ್ರಸ್ತುತ ನೆಲಗಡಲೆ ಮಾರುಕಟ್ಟೆ ದರಗಳು ಹೆಚ್ಚಾಗಿರುವುದರಿಂದ ದರ ಕಡಿಮೆ ಮಾಡಲು ಯಾವ ಸರಬರಾಜುದಾರರು ಒಪ್ಪಿರುವುದಿಲ್ಲ ಎಂದು ಉತ್ತರಿಸಿ ಕೈ ತೊಳೆದುಕೊಂಡಿದ್ದಾರೆ.
ನೆಲಗಡಲೆ ಬಿತ್ತನೆ ಬೀಜಗಳ ದರಗಳನ್ನು ಪರಿಷ್ಕರಿಸುವ ಸಂಬಂಧ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಇದಕ್ಕೆ ಉತ್ತರಿಸಿರುವ ಎನ್ ಚೆಲುವರಾಯಸ್ವಾಮಿ ಅವರು ಸರಬರಾಜುದಾರರು ದರ ಪರಿಷ್ಕರಣೆಗೆ ಒಪ್ಪಿಲ್ಲ ಎಂದು ಉತ್ತರ ನೀಡುವ ಮೂಲಕ ಶೇಂಗಾ ಬೆಳೆಗಾರರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
‘ಪ್ರಸ್ತುತ ನೆಲಗಡಲೆ ಬಿತ್ತನೆ ಬೀಜಗಳ ದರಗಳನ್ನು ಪರಿಷ್ಕರಿಸಲು 2023ರ ಜುಲೈ 10ರಂದು ನೆಲಗಡಲೆ ಬೀಜ ಸರಬರಾಜುದಾರರೊಂದಿಗೆ ಮತ್ತೊಮ್ಮೆ ದರ ಸಮಾಲೋಚನೆ ಸಭೆ ನಡೆಸಲಾಗಿದ್ದು ಪ್ರಸ್ತುತ ನೆಲಗಡಲೆ ಮಾರುಕಟ್ಟೆ ದರಗಳು ಹೆಚ್ಚಾಗಿರುವುದರಿಂದ ದರ ಕಡಿಮೆ ಮಾಡಲು ಯಾವ ಸರಬರಾಜುದಾರರು ಒಪ್ಪಿರುವುದಿಲ್ಲ,’ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಉತ್ತರಿಸಿರುವುದ ನೆಲೆಗಡಲೆ ಬೆಳೆಗಾರರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಆದರೆ ಕೆಒಎಫ್ ಸಂಸ್ಥೆಯು ನೆಲಗಡಲೆ kadrii lepakshi ತಳಿಗೆ ಪ್ರತಿ ಕ್ವಿಂಟಾಲ್‌ಗೆ 200 ರು. ದರವನ್ನು ಕಡಿತಗೊಳಿಸಲು ಒಪ್ಪಿರುತ್ತಾರೆ. ಅದರಂತೆ ಈ ತಳಿಗೆ ಮಾತ್ರ ಪ್ರತಿ ಕ್ವಿಂಟಾಲ್‌ಗೆ 8,850 ರಿಂದ 8,650 ರು ನಂತೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದೂ ಉತ್ತರದಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಯೋಜನೆಯಡಿ ನೆಲಗಡಲೆ ಬಿತ್ತನೆ ಬೀಜಗಳಿಗೆ ಹೆಚ್ಚಿನ ದರಗಳನ್ನು ನಿಗದಿಪಡಿಸಿರುತ್ತದೆ. ಚಿತ್ರದುರ್ಗ ಜಿಲ್ಲೆಯ ರೈತರು ಆರ್ಥಿಕವಾಗಿ ದುರ್ಬಲರಾಗಿದ್ದು ಪದೇಪದೇ ಬರಗಾಲವನ್ನು ಎದುರಿಸುತ್ತಿರುವುದರಿಂದ ರೈತರ ಹಿತದೃಷ್ಟಿಯಿಂದ ನೆಲಗಡಲೆ ದರವನ್ನು ಪರಿಷ್ಕರಿಸಿ ಪ್ರತಿಕ್ವಿಂಟಾಲ್‌ಗೆ 7,500 ರು.ನಂತೆ ನಿಗದಿಪಡಿಸಲು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಕೋರಿದ್ದರು.
ಮುಂಗಾರು ಹಂಗಾಮಿಗೆ ಇಲಾಖಾ ಕಾರ್ಯಕ್ರಮದಡಿ ನೆಲಗಡಲೆ ಹಾಗೂ ಇನ್ನಿತರೆ ಬೆಳೆಗಳ ಬಿತ್ತನೆ ಬೀಝ ಪೂರೈಕೆಗಾಗಿ ಕೆಟಿಪಿಪಿ ಕಾಯ್ದೆಯಡಿ 2023ರ ಫೆ.8ರಂದು ಟೆಂಡರ್ ಕರೆದು ಬೀಜ ಸರಬರಾಜುದಾರರನ್ನು ಎಂಪ್ಯಾನಲ್ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ರಚಿತವಾಗಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು 2023ರ ಏಪ್ರಿಲ್ 18 ಮತ್ತು 19ರಂದು ಬೀಜ ಸರಬರಾಜುದಾರರೊಂದಿಗೆ ದರ ಸಮಾಲೋಚನೆ ನಡೆಸಿ ಬಿತ್ತನೆ ಬೀಜಗಳ ದರಗಳನ್ನು ಇಲಾಖೆಗೆ ಶಿಫಾರಸ್ಸು ಮಾಡಿದ್ದರು.
2023ರ ಮುಂಗಾರು ಹಂಗಾಮಿನಲ್ಲಿ ನೆಲಗಡಲೆ ಬಿತ್ತನೆ ಬೀಜದಲ್ಲಿ ಎಂ ಕೆ ಅಗ್ರೋ ಟೆಕ್ ಮತ್ತು ಶ್ರೀ ಅಮರೇಶ್ವರ ಸೀಡ್ಸ್ ಸಂಸ್ಥೆಗಳು ಎಲ್-1 ಸರಬರಾಜುದಾರರಾಗಿ ಹೊರಹೊಮ್ಮಿದ್ದು. ನೆಲಗಡಲೆ ಟಿಎಂವಿ -2 ತಳಿಗಳಿಗೆ ಪ್ರತಿ ಕ್ವಿಂಟಾಲ್ ಗೆ 9,000 ರು.ನಂತೆ ದರ ನಮೂದಿಸಿದ್ದರು. ತಾಂತ್ರಿಕ ಸಲಹಾ ಸಮಿತಿಯು ಖರೀದಿ ದರ ನಿಗದಿ ಸಮಿತಿಯು ನೆಲಗಲಡೆ ಪ್ರಮಾಣಿತ ಬಿತ್ತನೆ ಬೀಜಗಳಿಗೆ ಪ್ರತಿ ಕ್ವಿಂಟಾಲ್‌ಗೆ 7,500 ರು.ನಂತೆ ಖರೀದಿ ದರ ಹಾಗೂ ಪ್ರತಿ ಕ್ವಿಂಟಾಲ್‌ಗೆ 11,250 ರು.ನಂತೆ ಮಾರಾಟ ದರವನ್ನು ನಿಗದಿಪಡಿಸಿತ್ತು.
ದರ ಸಮಾಲೋಚನೆ ವೇಳೆ ಸದರಿ ದರ, ಪ್ರಸ್ತುತ ಮಾರುಕಟ್ಟೆ ದರಗಳು, ಬೀಜೋತ್ಪಾದನೆ ವೆಚ್ಚ, ಸಂಸ್ಕರಣೆ ವೆಚ್ಚ, ಸಾಗಾಣಿಕೆ ವೆಚ್ಚ ಹಾಗೂ ಹಿಂದಿನ ಸಾಲುಗಳ ಮಾರಾಟ ದರಗಳನ್ನು ಪರಿಗಣಿಸಿ ಪ್ರತಿ ಕ್ವಿಂಟಾಲ್‌ಗೆ 8,850 ರು.ನಂತೆ ದರ ನಿಗದಿಪಡಿಸಿತ್ತು. ಸದರಿ ದರಗಳಲ್ಲಿಯೇ ಎಲ್ಲಾ ಸರಬರಾಜುದಾರರು ನೆಲಗಡಲೆ ಟಿಎಂವಿ 2 ತಳಿಯ ಬಿತ್ತನೆ ಬೀಜಗಳನ್ನು ಪೂರೈಸಲು ಒಪ್ಪಿದ್ದರು. ಅದರಂತೆ 2023ರ ಮೇ 5ರಂದು ದರ ಕರಾರು ಸುತ್ತೋಲೆಯನ್ನು ಹೊರಡಿಸಿತ್ತು ಎಂದು ಉತ್ತರದಿಂದ ತಿಳಿದು ಬಂದಿದೆ.
ಪ್ರಸ್ತುತ ಇಲಾಖಾ ಕಾರ್ಯಕ್ರಮಗಳಡಿ ನೆಲಗಡಲೆ ಮಾರಾಟ ದರಗಳು ಪ್ರತಿ ಕ್ವಿಂಟಾಲ್‌ಗೆ 8,850 ರು. ಮತ್ತು ರಿಯಾಯಿತಿ ದರ ಪ್ರತಿ ಕ್ವಿಂಟಾಲ್‌ಗೆ 1,400 ರು.ನಂತೆ ರೈತರ ವಂತಿಕೆ ಪ್ರತಿ ಕ್ವಿಂಟಾಲ್ ಗೆ 7,450 ರು. ಇದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸೇರಿ 6 ತಾಲೂಕುಗಳಿಗೆ ಸಂಬಂಧಿಸಿದಂತೆ ಶೇಂಗಾ ಬಿತ್ತನೆ ಬೀಜ ದರವು ಕೃಷಿ ಇಲಾಖೆಯಿಂದ ನಿಗದಿಪಡಿಸಿರುವ ದರಕ್ಕೆ ಪೂರಕವಾಗಿ ಕೃಷಿ ಇಲಾಖೆಯಿಂದ ನಿಗದಿಗೊಳಿಸಿರುವ ಶೇಂಗಾ ಬಿತ್ತನೆ ಬೀಜ ದರವು ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಎಸ್‌ಸಿ ಎಸ್‌ಟಿ ಹಾಗೂ ಸಾಮಾನ್ಯ ವರ್ಗಗಳಿಗೆ ಉಪಯೋಗವಾಗುವ ರೀತಿಯ ಸಂಭವವಿದೆ.
ಹೀಗಾಗಿ ಶೇಂಗಾ ಬಿತ್ತನೆ ಬೀಜದ ಬೆಲೆಯನ್ನು ಕಡಿಮೆಗೊಳಿಸಬೇಕು ಎಂದು ಕೃಷಿ ಆಯುಕ್ತರಿಗೆ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಗೆ ಅನುಮೋದನೆ ನೀಡಬೇಕು ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅವರು ವಿಧಾನಸಭೆ ಅಧಿವೇಶನದಲ್ಲಿ ಗಮನಸೆಳೆದಿದ್ದನ್ನು ಸ್ಮರಿಸಬಹುದು.