ಬೆಂಗಳೂರು; ನರೇಂದ್ರ ಮೋದಿ ಅವರನ್ನು ಬೈಯೋದನ್ನು ಬಿಟ್ಟರೆ ರಾಹುಲ್ ಗಾಂಧಿ ಒಳ್ಳೇ ಲೀಡರ್, ಅದೇ ರೀತಿ ಮೋದಿ ಸಹ ಕಾಂಗ್ರೆಸ್ ಮುಕ್ತ್ ಭಾರತ್ ಎನ್ನುವುದನ್ನು ಬಿಟ್ಟು ತಮ್ಮ ವಿಷನ್ ಹೇಳಬೇಕು ಎಂದು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಮಹಿಮ ಜೆ ಪಟೇಲ್ ಅವರು ಸಲಹೆ ನೀಡಿದ್ದಾರೆ.
‘ದಿ ಫೈಲ್’ನ ಆನ್ ದ ರೆಕಾರ್ಡ್‌ನಲ್ಲಿ ಸಂಗೀತಾ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಭಾಗವಹಿಸಿದ್ದ ಮಹಿಮಾ ಜೆ ಪಟೇಲ್ ತಮ್ಮ ಕೌಟುಂಬಿಕ ಜೀವನ, ಪ್ರಸಕ್ತ ರಾಜಕಾರಣ ಮತ್ತು ತಮ್ಮ ಇತಿಮಿತಿಗಳ ಕುರಿತೂ ಮುಕ್ತವಾಗಿ ಮಾತನಾಡಿದ್ದಾರೆ.
ಸಂಯುಕ್ತ ಜನತಾದಳ ಪಕ್ಷದ ಬಲವರ್ಧನೆ ಕುರಿತು ಮಾತನಾಡಿರುವ ಮಹಿಮಾ ಜೆ ಪಟೇಲ್ ಅವರು ನನ್ನ ಬಗ್ಗೆ ನೆಗೆಟೀವ್ ಕಟ್ಟಿಕೊಟ್ಟಿದ್ದಾರೆ. ದುಡ್ಡು ಖರ್ಚು ಮಾಡಲ್ಲ. ಬರೀ ಪುರಾಣ ಹೇಳ್ತಾರೆ. ಇಂಪ್ರಾಕ್ಟಿಕಲ್ ಪೊಲಿಟಿಯಷಿಯನ್ ಎಂದೆಲ್ಲಾ ಹೇಳುತ್ತಾರೆ. ನಾನು ಯಾರಿಗೂ ಹಣ ಕೊಡಲ್ಲ, ಹೆಂಡವನ್ನೂ ಹಂಚಲ್ಲ ಎಂದು ಅಂತರಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿಗಳ ಬಗ್ಗೆ ಮಾತನಾಡಿರುವ ಮಹಿಮಾ, ‘ಫ್ರೀ ಕೊಡುವ ಸಂಸ್ಕೃತಿ ಹಿಂದಿನ ಉದ್ದೇಶ ಚೆನ್ನಾಗಿರಬೇಕು. ಉದ್ದೇಶ ಸರಿ ಇಲ್ಲದಿದ್ದರೇ ವರ್ಕ್ ಅಗಲ್ಲ. ಫ್ರೀ ಫ್ರೀ ಎನ್ನುತ್ತಲೇ ಇದ್ದರೆ ಜನರಲ್ಲಿಯೂ ಭಿಕಾರಿತನ ಬಂದ್ ಬಿಡುತ್ತೆ. ಜನ ಭಿಕಾರಿಗಳು ತರ ಅನ್ನೋದು ನೋಡೋದು ಇದೆಯಲ್ಲ ಅದು ಹಾರ್ಮ್‌ಫುಲ್’ ಎಂದು ವಿಶ್ಲೇಷಿಸಿದರು.
ಅಧಿಕಾರಕ್ಕೂ ಸ್ಥಾನಮಾನಕ್ಕೂ ವ್ಯತ್ಯಾಸ ಇದೆ. ನಾನು ಪವರ್ ಕಡೆ ಹೆಚ್ಚು ಕೆಲಸ ಮಾಡುತ್ತೇನೆ. ಪವರ್ ಇರುವವರಿಗೆ ಪೊಸಿಷನ್ ಇರುವುದಿಲ್ಲ. ಐ ವರ್ಕ್ ಟು ಪವರ್. ಮ್ಯಾನ್ ಪವರ್ ಬಗ್ಗೆ. ನನ್ನೊಳಗೆ ಇರುವ ಪವರ್ ಮುಖ್ಯ. ಹೀಗಾಗಿ ನಾನು ಬೇರೆ ರಾಜಕಾರಣಿಗಳ ಬಳಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತೇನೆ. ಬುದ್ಧಿವಾದ ಹೇಳುವ ಪವರ್ ನನಗೆ ಇದೆ ಎಂದು ವಿಶ್ಲೇಷಿಸಿದರು.
ತಮ್ಮ ತಂದೆ ಜೆ ಎಚ್ ಪಟೇಲ್ ಅವರ ಕುರಿತು ನೆನಪು ಮಾಡಿಕೊಂಡ ಮಹಿಮಾ ಅವರು ‘ತಂದೆಯವರು ಬಹಳ ಅಪರೂಪವಾಗಿ ತಮ್ಮ ಜತೆ ಬೆರೆಯುತ್ತಿದ್ದರು. ಸಾಯಂಕಾಲದ ಹೊತ್ತು ಯಾರೂ ಇಲ್ಲದ ಹೊತ್ತಿನಲ್ಲಿ ಎರಡು ಮೂರು ಬಾರಿ ಡ್ರಿಂಕ್ಸ್ ಮಾಡಿದ ನಂತರ ನಮ್ಮ ಜತೆ ಮಾತನಾಡೋರು. ನಾನೇ ಹೆಚ್ಚು ಮೇಲೆ ಬಿದ್ದು ಮಾತನಾಡಿಸುತ್ತಿದ್ದೆ. ನನ್ನ ಜತೆ ಹೆಚ್ಚು ಶೇರ್ ಮಾಡ್ತಾ ಇದ್ರು. ಮನೆಯಲ್ಲಿ ಬಹಳ ಸೀರಿಯಸ್ ಆಗಿ ಇರ್ತಿದ್ರು,’ ಎಂದು ಕೌಟುಂಬಿಕ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡರು.
ಅವರೆಲ್ಲಾ ಸೋಷಿಯಲಿಸ್ಟ್ ವಿಚಾರಧಾರೆಯವರು. ಹೀಗಾಗಿ ಮಕ್ಕಳಿಗೆ ಹೆಚ್ಚು ಬೆಂಬಲ ನೀಡಲಿಲ್ಲ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ್ದು ಕೂಡ ವಂಶಾಡಳಿತ ವಿರುದ್ಧವೇ. ಹೀಗಾಗಿ ಹೆಚ್ಚು ಸಪೋರ್ಟ್ ಮಾಡಲಿಲ್ಲ. ಬಂಗಾರಪ್ಪ ಅವರು ಸಹ ಅವರ ಮಕ್ಕಳಿಗೆ ಹ ಹೆಚ್ಚು ಸಪೋರ್ಟ್ ಮಾಡಲಿಲ್ಲ. ವಂಶಾಡಳಿತ ಬೇಡ ಎಂದೇ ಹೋರಾಟ ಮಾಡಿದ್ದರು ಎಂದು ನೆನಪಿಸಿಕೊಂಡರು.