2 ವರ್ಷದಲ್ಲಿ 1.42 ಲಕ್ಷ ಕೋಟಿ ರು. ಟೆಂಡರ್‍‌ ಅಂತಿಮ; ಜಲಸಂಪನ್ಮೂಲ, ಗ್ರಾಮೀಣ, ನಗರಾಭಿವೃದ್ಧಿ ಸಿಂಹಪಾಲು

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಕಳೆದ 2 ವರ್ಷದಲ್ಲಿ ಜಲಸಂಪನ್ಮೂಲ ಇಲಾಖೆ ಸೇರಿದಂತೆ ಒಟ್ಟು 30 ಇಲಾಖೆಗಳಲ್ಲಿ 1,42,005.92 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್‌ ಅಂತಿಮಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

 

ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಕಾಂಗ್ರೆಸ್‌ ಸರ್ಕಾರವು ಲೆಕ್ಕಾಚಾರ ನಡೆಸುತ್ತಿರುವ ಬೆನ್ನಲ್ಲೇ ಹಿಂದಿನ ಬಿಜೆಪಿ ಸರ್ಕಾರವು 1,42,005.92 ಕೋಟಿ ರು. ಮೊತ್ತದ  ಟೆಂಡರ್‌ನ್ನು ಅಂತಿಮಗೊಳಿಸಿರುವುದು ಮುನ್ನೆಲೆಗೆ ಬಂದಿದೆ.

 

ಅದೇ ರೀತಿ ಜಲಸಂಪನ್ಮೂಲ ಇಲಾಖೆಯೊಂದರಲ್ಲೇ 25,000 ಕೋಟಿ ಗೂ ಅಧಿಕ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಇದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಹೇಳಿಕೆ ನೀಡಿರುವ ನಡುವೆಯೇ ಜಲ ಸಂಪನ್ಮೂಲ ಇಲಾಖೆಯೊಂದರಲ್ಲಿಯೇ  21,309.04 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಟೆಂಡರ್‍‌ ಅಂತಿಮಗೊಂಡಿರುವುದು ಸಹ ಮಹತ್ವ ಪಡೆದುಕೊಂಡಿದೆ.

 

ಈಗಾಗಲೇ ಅಂತಿಮಗೊಂಡಿರುವ 1,42,005.92 ಕೋಟಿ ರುಪಾಯಿ ಮೊತ್ತದ ಟೆಂಡರ್‍‌ ನ ಕಾರ್ಯಾದೇಶವನ್ನು ಗುತ್ತಿಗೆದಾರರಿಗೆ ನೀಡಬೇಕೇ, ಬೇಡವೇ ಅಥವಾ ಮುಂದೂಡಬೇಕೇ ಎಂಬ ಬಗ್ಗೆ ಇಲಾಖೆಗಳು ಗೊಂದಲದಲ್ಲಿವೆ. ಈ ಸಂಬಂಧ ಇಲಾಖೆ ಸಚಿವರುಗಳಾದ ಪ್ರಿಯಾಂಕ್‌ ಖರ್ಗೆ, ಬೈರತಿ ಸುರೇಶ್‌ ಅವರು ಸಹ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ ಈ ಹಿಂದಿನ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ 36,784 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಸಿವಿಲ್ ಗುತ್ತಿಗೆದಾರರಿಗೇ 25 ಸಾವಿರ ಕೋಟಿ ರೂ. , ವಿದ್ಯುತ್ ಸರಬರಾಜು ಕಂಪನಿಗಳಿಗೆ 8,584 ಕೋಟಿ ರೂ. ಬಿಲ್ ಬಾಕಿ ಮರು ಪಾವತಿ ಮಾಡಬೇಕು. ಹೀಗಿರುವಾಗ 1,42,005.92 ಕೋಟಿ ರು. ಮೊತ್ತದ ಟೆಂಡರ್‍‌ನ್ನು ಅಂತಿಮಗೊಳಿಸಿರುವುದರಿಂದ ಬಿಡ್‌ನಲ್ಲಿ ಯಶಸ್ವಿಯಾಗಿರುವ ಟೆಂಡರ್‍‌ದಾರರಿಗೆ ಕಾಮಗಾರಿ ಚಾಲನೆಗೊಳಿಸಲು ಹಣ ಬಿಡುಗಡೆಯೂ ಸವಾಲು ಕೂಡ ಎದುರಾಗಿದೆ.

 

ವಿವಿಧ ಇಲಾಖೆಗಳು ಟೆಂಡರ್‌ಗೆ ಸಂಬಂಧಿಸಿದಂತೆ ಇ-ಪ್ರೊಕ್ಯೂರ್‌ಮೆಂಟ್‌ ಜಾಲತಾಣದಲ್ಲಿ ಅಂಕಿ ಅಂಶಗಳನ್ನು ಅಳವಡಿಸಿದೆ. ಇಲಾಖಾವಾರು ಅಂಕಿ ಅಂಶಗಳ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿಯೇ ಅತಿ ಹೆಚ್ಚು ಮೊತ್ತದ ಟೆಂಡರ್‌ನ್ನು ಅಂತಿಮಗೊಳಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು 32,790.01 ಕೋಟಿ ರು., ನಗರಾಭಿವೃದ್ಧಿ ಇಲಾಖೆಯು 25,172.17 ಕೋಟಿ ರು., ಜಲಸಂಪನ್ಮೂಲ ಇಲಾಖೆಯು 27,958.41 ಕೋಟಿ ರು. ಮೊತ್ತದ ಟೆಂಡರ್‌ನ್ನು ಅಂತಿಮಗೊಳಿಸಿರುವುದು ಇ-ಪ್ರೊಕ್ಯೂರ್‌ಮೆಂಟ್‌ ಜಾಲತಾಣದಿಂದ ತಿಳಿದು ಬಂದಿದೆ.

 

100 ಕೋಟಿ ಗಿಂತ ಹೆಚ್ಚು ಕಾಮಗಾರಿ

 

100 ಕೋಟಿ ರು.ಗಿಂತ ಹೆಚ್ಚು ಕಾಮಗಾರಿಗಳ ಸಂಬಂಧ 64,435.65 ಕೋಟಿ ರು. ಮೊತ್ತದ ಟೆಂಡರ್‍‌ ಅಂತಿಮಗೊಳಿಸಿದೆ. ಇದರಲ್ಲಿ ಜಲಸಂಪನ್ಮೂಲ ಇಲಾಖೆಯು 53  ಯೋಜನೆಗಳಿಗೆ 21,309.04 ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಯು 48 ಯೋಜನೆಗಳಿಗೆ 21,681.87 ಕೋಟಿ ರು., ನಗರಾಭಿವೃದ್ಧಿ ಇಲಾಖೆ 33 ಯೋಜನೆಗಳಿಗೆ 8,285.3 ಕೋಟಿ ರು., ಇಂಧನ ಇಲಾಖೆಯು 18 ಯೋಜನೆಗಳಿಗೆ 5,151.49 ಕೋಟಿ, ಸಣ್ಣ ನೀರಾವರಿಯಲ್ಲಿ 11 ಯೋಜನೆಗಳಿಗೆ 2,147.17 ಕೋಟಿ ರು., ಆರೋಗ್ಯ ಇಲಾಖೆಯು 7 ಯೋಜನೆಗಳಿಗೆ 1,662.64 ಕೋಟಿ ರು., ಟೆಂಡರ್‍‌ ಅಂತಿಮಗೊಂಡಿದೆ.

 

ವಸತಿ ಇಲಾಖೆಯು 6 ಯೋಜನೆಗಳಿಗೆ 800.44 ಕೋಟಿ ರು., ವಾಣಿಜ್ಯ ಕೈಗಾರಿಕೆ 3 ಯೋಜನೆಗಳಿಗೆ 1,591.29 ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ 1 ಯೋಜನೆಗೆ 157.86 ಕೋಟಿ ರು., ಸಹಕಾರ ಇಲಾಖೆಯಲ್ಲಿ 1 ಯೋಜನೆಗೆ  289.93 ಕೋಟಿ ರು., ಮೂಲಭೂತ ಸೌಕರ್ಯದಲ್ಲಿ 1 ಯೋಜನೆಗೆ 849.97 ಕೋಟಿ ರು., ಕಂದಾಯ ದಲ್ಲಿ 1 ಯೋಜನೆಗೆ  508.66 ಕೋಟಿ ರು. ಸೇರಿ ಒಟ್ಟಾರೆ 183 ಯೋಜನೆಗಳಿಗೆ 64,435.65 ಕೋಟಿ ರು. ಮೊತ್ತದ ಟೆಂಡರ್‍‌ ಅಂತಿಮಗೊಂಡಿರುವುದು ಪಿಪಿಎಂಎಸ್‌ ತಂತ್ರಾಂಶದಿಂದ ಗೊತ್ತಾಗಿದೆ.

 

ಅದೇ ರೀತಿ 50 ರಿಂದ 100 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ 30 ಇಲಾಖೆಗಳು 8,616.14 ಕೋಟಿ ರು., 25ರಿಂದ 50 ಕೋಟಿ ರು ಮೊತ್ತದ ಕಾಮಗಾರಿಗಳಿಗೆ 12,958.61 ಕೋಟಿ ರು., 10 ರಿಂದ 50 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ 14,205.48 ಕೋಟಿ ರು., 1ರಿಂದ 10 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ 41,388.19 ಕೋಟಿ ರು. ಮೊತ್ತದ ಟೆಂಡರ್‍‌ಗಳನ್ನು ಅಂತಿಮಗೊಳಿಸಿದೆ. ಒಟ್ಟಾರೆಯಾಗಿ 16,988 ಯೋಜನೆಗಳಿಗೆ 1,42,005.92 ಕೋಟಿ ರು. ಮೊತ್ತದಲ್ಲ ಟೆಂಡರ್‍‌ಗಳನ್ನು ಅಂತಿಮಗೊಳಿಸಿರುವುದು ತಿಳಿದು ಬಂದಿದೆ.

 

ಇದಲ್ಲದೇ ಪ್ರಮುಖ ಯೋಜನೆಗಳ ಕಾರ್ಯನಿರ್ವಹಣೆ ವ್ಯವಸ್ಥೆಯಡಿಯಲ್ಲಿ 15,225.69 ಕೋಟಿ ರು. ಟೆಂಡರ್‍‌ ಅಂತಿಮಗೊಂಡಿದೆ. ಈ ಪೈಕಿ 947.29 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ ಗುತ್ತಿಗೆದಾರರಿಗೆ 787.40 ಕೋಟಿ ರು. ಸಂದಾಯವಾಗಿದ್ದರೇ ಇನ್ನೂ 159.90 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts