ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಹೆಸರು ಬಳಕೆ; ಗುತ್ತಿಗೆ, ಬಾಕಿ ಬಿಲ್‌ ಬಿಡುಗಡೆಗೆ 1 ಕೋಟಿ ವಸೂಲು

ಬೆಂಗಳೂರು; ಕಾಮಗಾರಿ ಗುತ್ತಿಗೆ ಹಾಗೂ ಬಾಕಿ ಇರುವ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ನಸೀರ್‍‌ ಅಹ್ಮದ್‌ ಅವರ ಹೆಸರಿನಲ್ಲಿ ಕೋಲಾರ ಮೂಲದ ಇಬ್ಬರು ವ್ಯಕ್ತಿಗಳು ಒಂದು ಕೋಟಿ ರು.ಗಳನ್ನು ಮುಂಗಡವಾಗಿ ಪಡೆದು ವಂಚಿಸಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ನಡೆಸಿದ್ದ ವಾಗ್ದಾಳಿಯಿಂದ ಕಾಂಗ್ರೆಸ್‌ ಸರ್ಕಾರವು ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್‍‌  ಅಹ್ಮದ್‌ ಹೆಸರನ್ನು ಮುಂದಿರಿಸಿ ಕಾಮಗಾರಿ ಗುತ್ತಿಗೆ ಮತ್ತು ಹಳೆ ಬಿಲ್‌ಗಳ ಮೊತ್ತವನ್ನು ಬಿಡುಗಡೆ ಮಾಡಿಸಲು  1 ಕೋಟಿ  ಹಣ ವಸೂಲಿ ಮಾಡಿರುವ ಪ್ರಕರಣವು ಸರ್ಕಾರವನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿದಂತಾಗಿದೆ. ಅಲ್ಲದೇ ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗೆ ಮತ್ತೊಂದು ಪ್ರಬಲ ಅಸ್ತ್ರವನ್ನು ಕೊಟ್ಟಂತಾಗಿದೆ.

 

ಈ ಪ್ರಕರಣದಲ್ಲಿ ವಂಚನೆಗೀಡಾಗಿರುವ ಬೆಂಗಳೂರಿನ  ಪ್ರತಾಪ್‌ ಬಿ ಎನ್‌ ಎಂಬುವರು ಸಲ್ಲಿಸಿದ್ದ ದೂರಿನ ಆಧಾರದ ಮೇರೆಗೆ ಈಗಾಗಲೇ ಕೋಲಾರ ಜಿಲ್ಲೆಯ ಗುಳೇಪೇಟೆ ಸರ್ಕಲ್‌ ಪೊಲೀಸ್‌ ಠಾಣೆಯಲ್ಲಿ ಮುಬಾರಕ್‌ ಮತ್ತು ಪೀರ್‍‌ ಸೈಯದ್‌ ಖಾದರ್‍‌ ಆಲಿ ಷಾ ಖಾದ್ರಿ ಎಂಬುವರ ವಿರುದ್ಧ ಎಫ್‌ಐಆರ್‍‌ ಕೂಡ ದಾಖಲಾಗಿದೆ. ಈ ಎಫ್‌ಐಆರ್‍‌ನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರೋಪಿ ಪೀರ್‍‌ ಸೈಯದ್‌ ಖಾದರ್‍‌ ಆಲ ಷಾ ಖಾದ್ರಿ ಎಂಬುವರ ಮೂಲಕ ದೂರುದಾರ ಪ್ರತಾಪ್‌ಗೆ ಪರಿಚಿತವಾಗಿದ್ದ ಮುಬಾರಕ್‌ ಎಂಬಾತ ಎಂ ಎಲ್‌ ಸಿ ನಸೀರ್‍‌ ಅಹ್ಮದ್‌ ಅವರ ಹೆಸರನ್ನು ಮುಂದಿರಿಸಿ ಹಣ ಪಡೆದಿರುವುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಕೋಲಾರ ನಗರಸಭೆಯು ಸದ್ಯದಲ್ಲೇ   500 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಈ ಯೋಜನೆಯಲ್ಲಿಯೂ ತುಂಡು ಗುತ್ತಿಗೆ ಮೂಲಕ ಕಾಮಗಾರಿ ಟೆಂಡರ್‍‌ ಕೊಡಿಸಲಾಗುವುದು ಎಂದು ಆರೋಪಿ ಮುಬಾರಕ್‌ ನಂಬಿಸಿದ್ದ. ಈ ಕೆಲಸಕ್ಕೆ ಒಂದೂವರೆ ಕೋಟಿ ಹಣ ಕೊಡಬೇಕು ಎಂದು ಬೇಡಿಕೆ ಇರಿಸಿದ್ದ ಆರೋಪಿ ಮುಬಾರಕ್‌,  ಮೂರು ಕಂತಿನಲ್ಲಿ ಒಂದು ಕೋಟಿ ರು.ಗಳನ್ನು ವಸೂಲು ಮಾಡಿದ್ದ ಎಂಬ ಸಂಗತಿಯು ಎಫ್‌ಐಆರ್‍‌ನಿಂದ ಗೊತ್ತಾಗಿದೆ.

 

‘ನಜೀರ್‍‌ ಅಹ್ಮದ್‌ ಸಾಬ್‌ ಅವರು ರಾಜಕೀಯವಾಗಿ ಪ್ರಭಾವಿಯಾಗಿದ್ದು ನಾನು ಅವರ ಬಲಗೈ ಬಂಟ. ಅವರು ನನ್ನ ಮಾತನ್ನು ಕೇಳುತ್ತಾರೆಂದು ದೂರುದಾರ ಪ್ರತಾಪ್‌ನನ್ನು ಮುಬಾರಕ್‌ ನಂಬಿಸಿದ್ದ. ಅವರ ಮಾತನ್ನು ನಂಬಿ ಮುಬಾರಕ್‌ ಗೆ  25 ಲಕ್ಷ ರುಪಾಯಿ ಹಣವನ್ನು ನೀಡಿದ್ದ. ಆ ನಂತರ 2023 ಜುಲೈ 2ರಂದು 25 ಲಕ್ಷ ರು., 2023ರ ಜುಲೈ 22ರಂದು ಕೋಲಾರ ಹೊರ ವಲಯದ ನಾಗಾರ್ಜುನ ಹೋಟೆಲ್‌ ನಲ್ಲಿ 50 ಲಕ್ಷ ರು. ನಗದು ಹಣವನ್ನು ಮುಬಾರಕ್‌ಗೆ ನೀಡಿದ್ದ,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಎರಡನೇ ಆರೋಪಿ ಪೀರ್‍‌ ಸೈಯದ್‌ ಖಾದರ್‍‌ ಆಲಿ ಷಾ ಖಾದ್ರಿ ಅವರು ಸಹ ಕಮಿಷನ್‌ ಹಾಗೂ ಓಡಾಟದ ಖರ್ಚು ವೆಚ್ಚ ಎಂದು 9 ಲಕ್ಷ ರುಪಾಯಿ ಹಣವನ್ನು ನಗದು ರೂಪದಲ್ಲಿ ಪಡೆದಿದ್ದ.  ಆ ನಂತರ ಕಾಮಗಾರಿ ಮಂಜೂರಾತಿ ಮತ್ತು ಹಳೆ ಬಿಲ್‌ಗಳ ಹಣ ವರ್ಗಾವಣೆ ವಿಚಾರದಲ್ಲಿ ತಡವಾಗಿತ್ತು. ಹೀಗಾಗಿ ಪ್ರತಾಪ್‌ ಹಲವು ಬಾರಿ ಮುಬಾರಕ್‌ ಗೆ ಕರೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಬಾರಕ್‌, ಕಾಮಗಾರಿ ಹಾಗೂ ಹಣ ವರ್ಗಾವಣೆ ಬಗ್ಗೆ ನಜೀರ್‍‌ ಅಹ್ಮದ್‌ ಅವರೊಂದಿಗೆ ಹಲವಾರು ಬಾರಿ ಫೋನಿನಲ್ಲಿ ಸಂಭಾಷಣೆ ನಡೆಸಿರುವುದಾಗಿ ಮೆಸೇಜ್‌ಗಳನ್ನು ವಾಟ್ಸ್‌ ಆಪ್‌ ಮೂಲಕ ದೂರುದಾರ ಪ್ರತಾಪ್‌ ಮೊಬೈಲ್‌ಗೆ ಕಳಿಸಿದ್ದ ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಲಾಗಿದೆ.

 

‘ಎಂಎಲ್‌ಸಿ ನಜೀರ್‍‌ ಅಹ್ಮದ್‌ ಹೆಸರಿನಲ್ಲಿ ಮೆಸೇಜ್‌ಗಳು ಬಂದಿದ್ದು ದೂರುದಾರ ಅದನ್ನು ನಂಬಿದ್ದ. ತದ ನಂತರ ಅವರ ನಡವಳಿಕೆ ಬಗ್ಗೆ ಅನುಮಾನಗೊಂದು ವಿಚಾರಿಸಿದಾಗ ಮುಬಾರಕ್‌ ಬೇರೊಂದು ಮೊಬೈಲ್‌ನಲ್ಲಿ ಎಂಎಲ್‌ಸಿ ನಜೀರ್‍‌ ಅಹ್ಮದ್‌ ಎಂದು ಸೇವ್ ಮಾಡಿಕೊಂಡು ದೂರುದಾರನಿಗೆ ಮೊಬೈಲ್‌ನಲ್ಲಿ ಮುಬಾರಕ್‌ ಮತ್ತು ನಜೀರ್‍‌ ಅಹ್ಮದ್‌ ಅವರು ಚಾಟಿಂಗ್‌ ಮಾಡಿರುವಂತೆ ಮೆಸೇಜ್‌ ಚಾಟ್‌ ಮಾಡಿಕೊಂಡು ಆ ಚಾಟಿಂಗ್‌ ಮೆಸೇಜ್‌ಗಳನ್ನು ದೂರುದಾರ ನಂಬುವಂತೆ ಅವರಿಗೆ ಕಳಿಸಿದ್ದ, ‘ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಇದೇ ಆರೋಪಿಯು ಕೋಲಾರ ಶಾಸಕ ನಂಜೇಗೌಡ ಅವರ ಹೆಸರನ್ನೂ ಬಳಸಿದ್ದ. ಕೋಲಾರದ ಡೈರಿಯಲ್ಲಿ ಗುತ್ತಿಗೆ ಕೊಡಿಸಿ ಕಾಮಗಾರಿಗೆ 25 ಲಕ್ಷ ರು. ಹಣ ನೀಡಬೇಕು ಎಂದು ಬೇಡಿಕೆ ಇರಿಸಿದ್ದ. ಈ ಬಗ್ಗೆ ದೂರುದಾರನಿಗೆ ಅನುಮಾನ ಬಂದು ಮಾಲೂರು ಶಾಸಕ ನಂಜೇಗೌಡರ ಗಮನಕ್ಕೆ ತರಲಾಗಿತ್ತು. ಆದರೆ ಆರೋಪಿ ಮುಬಾರಕ್‌ ಎಂಬಾತ ಕೋಲಾರ ಶಾಸಕ ನಂಜೇಗೌಡರ ಗಮನಕ್ಕೆ ಯಾವುದೇ ಕಾಮಗಾರಿ ಹಾಗೂ ಗುತ್ತಿಗೆ ಬಗ್ಗೆ ಚರ್ಚಿಸಿರಲಿಲ್ಲ. ಹೀಗಾಗಿ ನಂಜೇಗೌಡರ ಹೆಸರನ್ನೂ ದುರ್ಬಳಕೆ ಮಾಡಿಕೊಂಡು ದೂರುದಾರ ಪ್ರತಾಪ್‌ ಎಂಬಾತನಿಗೆ ವಂಚನೆ ಮಾಡಿದ್ದ ಎಂಬ ಅಂಶವು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಕಾಮಗಾರಿ ಗುತ್ತಿಗೆ ಹಾಗೂ ಹಳೆ ಬಿಲ್‌ಗಳ ವರ್ಗಾವಣೆ ವಿಚಾರದಲ್ಲಿ ಯಾವ ಕೆಲಸವೂ ಆಗದ ಕಾರಣ ಹಣ ವಾಪಸ್‌ ಕೊಡಬೇಕು ಎಂದು ಪ್ರತಾಪ್‌, ಮುಬಾರಕ್‌ ಎಂಬಾತನ ಮೇಲೆ ಒತ್ತಡ ಹೇರಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ ಮುಬಾರಕ್‌ ‘ನಿನ್ನ ಕೈಯಲ್ಲಿ ಏನು ಆಗುತ್ತದೋ ಅದನ್ನು ಮಾಡಿಕೋ ನಾನು ಯಾವುದಕ್ಕೂ ಹೆದರುವುದಿಲ್ಲ. ನೀನು ಏನು ಕಿತ್ತಕೊಳ್ಳುತ್ತಿಯೋ ಕಿತ್ತಿಕೋ ಎಂದು ಕೆಟ್ಟ ಶಬ್ದಗಳಿಂದ ನಿಂದಿಸಿ ತನ್ನ ತಂಟೆಗೆ ಬಂದರೆ ಇನಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದ,’ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

Your generous support will help us remain independent and work without fear.

Latest News

Related Posts