ದಿ ಕಾಶ್ಮೀರ್‍‌ ಫೈಲ್ಸ್‌, 777 ಚಾರ್ಲಿ ಸೇರಿ 4 ಸಿನಿಮಾಗಳ ಪ್ರದರ್ಶಕರಿಗೆ ಜಿಎಸ್‌ಟಿ ಹಿಂಪಾವತಿ; ಹೊರಬಿದ್ದ ಆದೇಶ

ಬೆಂಗಳೂರು;  ‘ದಿ ಕಾಶ್ಮೀರ್ ಫೈಲ್ಸ್’ , 777 ಚಾರ್ಲಿ, ಸೆಪ್ಟಂಬರ್‍‌ 13 ಹಾಗೂ ಕನಕ ಮಾರ್ಗ ಚಿತ್ರಗಳಿಗೆ  ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೆರಿಗೆ ವಿನಾಯಿತಿ ನೀಡಿತ್ತಾದರೂ ತನ್ನ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೂ   ಪ್ರದರ್ಶಕರಿಗೆ ಜಿಎಸ್‌ಟಿ  ಹಿಂಪಾವತಿ ಮೊತ್ತವನ್ನು ಪಾವತಿಸಿರಲಿಲ್ಲ.  ಆದರೀಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ದಿ ಕಾಶ್ಮೀರ್‍‌ ಫೈಲ್ಸ್‌ ಸಿನಿಮಾವೂ ಸೇರಿದಂತೆ ತೆರಿಗೆ ವಿನಾಯಿತಿ ಪಡೆದುಕೊಂಡಿದ್ದ ನಾಲ್ಕೂ ಸಿನಿಮಾಗಳ ಪ್ರದರ್ಶಕರಿಗೆ ಜಿಎಸ್‌ಟಿ ಹಿಂಪಾವತಿ ಮಾಡಲು ಆದೇಶ ಹೊರಡಿಸಿದೆ.

 

 

ದಿ ಕಾಶ್ಮೀರ್‍‌ ಫೈಲ್ಸ್‌ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಘೋಷಣೆ ಮಾಡಿದ  3 ದಿನದ ಅಂತರದೊಳಗೇ ಆರ್ಥಿಕ ಇಲಾಖೆಯು ಇದೀಗ ಆದೇಶ ಹೊರಡಿಸಿತ್ತು. ಈ ತೆರಿಗೆ ವಿನಾಯಿತಿಯು 2022ರ ಮಾರ್ಚ್‌ 14ರಿಂದ ಅನ್ವಯವಾಗುವಂತೆ 6 ತಿಂಗಳವರೆಗೆ ಜಾರಿಯಲ್ಲಿರುವಂತೆ ಆದೇಶದಲ್ಲಿ ಹೇಳಲಾಗಿತ್ತು. ಆದರೆ ಸಮಯದ ಅಭಾವದ ಕಾರಣವನ್ನು ಮುಂದಿರಿಸಿ ಪ್ರದರ್ಶಕರಿಗೆ ಜಿಎಸ್‌ಟಿ ಮೊತ್ತವನ್ನು ಹಿಂಪಾವತಿಸಿರಲಿಲ್ಲ.

 

ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ್ದನ್ನು ಕಾಂಗ್ರೆಸ್‌ ಕೂಡ ವಿರೋಧಿಸಿತ್ತಾದರೂ ಅಧಿಕಾರಕ್ಕೆ ಬಂದ ಎರಡೇ ಎರಡು ತಿಂಗಳಲ್ಲಿ ಪ್ರದರ್ಶಕರಿಗೆ ಜಿಎಸ್‌ಟಿ ಮೊತ್ತವನ್ನು ಹಿಂಪಾವತಿಸಲು 2023ರ ಜುಲೈ 31ರಂದು ಆದೇಶ ಹೊರಡಿಸಿದೆ. ವಾರ್ತಾ ಇಲಾಖೆ ಮತ್ತು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ಮೇರೆಗೆ ಈ ಚಿತ್ರಗಳ ಪ್ರದರ್ಶಕರಿಗೆ ಜಿಎಸ್‌ಟಿ ಮೊತ್ತವನ್ನು ಹಿಂಪಾವತಿಸಲು ಆದೇಶ ಹೊರಡಿಸಿದೆ ಎಂದು ಗೊತ್ತಾಗಿದೆ.

 

 

ದಿ ಕಾಶ್ಮೀರ್‍‌ ಫೈಲ್ಸ್ (ಹಿಂದಿ), 777 ಚಾರ್ಲಿ, ಸೆಪ್ಟಂಬರ್‍‌ 13, ಕನಕ ಮಾರ್ಗ ಕನ್ನಡ ಚಲನಚಿತ್ರಗಳಲ್ಲಿನ ಸಂದೇಶವನ್ನು ಪರಿಗಣಿಸಿ 6 ತಿಂಗಳ ಅವಧಿಗೆ 2022 ಮತ್ತು 2023ರ ವರ್ಷದಲ್ಲಿ ಪ್ರದರ್ಶಿಸಿದ ಪ್ರದರ್ಶಕರಿಗೆ ರಾಜ್ಯದ ಜಿಎಸ್‌ಟಿ ಪಾಲಿನ ಮೊತ್ತವನ್ನು ಹಿಂಪಾವತಿ ಸೌಲಭ್ಯ ನೀಡಲಾಗಿತ್ತು.

 

ಕಳೆದ ಆರ್ಥಿಕ ವರ್ಷ 2022-23ರ ಮಾರ್ಚ್‌ ಅಂತ್ಯದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರು ದೃಢೀಕರಿಸಿ ಕಳಿಸಿದ್ದ ಪತ್ರಗಳಿಗೆ ಸಂಬಂಧಿಸಿದಂತೆ ಪ್ರದರ್ಶಕರಿಗೆ ಹಿಂಪಾವತಿ ಮೊತ್ತವನ್ನು ಸಮಯದ ಅಭಾವದಿಂದಾಗಿ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ತಿಳಿಸಿದ್ದರು. ಅದರಂತೆ ಈ ಮೊತ್ತವನ್ನು ವಾರ್ತಾ ಪ್ರಚಾರ ನಿರ್ದೇಶನಾಲಯದಿಂದಲೇ ಭರಿಸಲು 2023ರ ಜುಲೈ 31ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2022ರ ಮಾರ್ಚ್‌ 18ರಂದು ಆದೇಶ ಹೊರಡಿಸಿರುವ ಸರ್ಕಾರವು ಚಿತ್ರ ಪ್ರದರ್ಶಕರು ವೀಕ್ಷಕರಿಂದ ಯಾವುದೇ ತರಹದ ಎಸ್‌ಜಿಎಸ್‌ಟಿಯನ್ನು ಸಂಗ್ರಹಿಸಬಾರದು ಮತ್ತು ಜಿಎಸ್‌ಟಿ ತಗ್ಗಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಾಟ ಮಾಡಬೇಕು ಎಂದು ಸೂಚಿಸಿತ್ತು.

 

 

ಇದನ್ನು ಚಲನಚಿತ್ರ ನಿರ್ಮಾಣ ಸಹಾಯಧನ (ಲೆಕ್ಕ ಶೀರ್ಷಿಕೆ- 2220–1-105-0-01-ಚಲನಚಿತ್ರ ನಿರ್ಮಾಣ 106-ಸಹಾಯಧನ) ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಿರುವುದು ಆದೇಶದಿಂದ ತಿಳಿದು ಬಂದಿದೆ.
ದ ಕಾಶ್ಮೀರ್‌ ಫೈಲ್ಸ್‌ ಚಲನಚಿತ್ರಕ್ಕೆ ಶೇ. 100ರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಶಾಸಕ ಅಭಯ್‌ ಪಾಟೀಲ್‌ ಅವರು 2022ರ ಮಾರ್ಚ್‌ 10ರಂದೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಆದೇಶ ಹೊರಡಿಸಲಾಗಿತ್ತು. ಈ ಕುರಿತು ‘ದಿ ಫೈಲ್‌’ 2022ರ ಮಾರ್ಚ್‌ 19ರಂದು ವರದಿ ಪ್ರಕಟಿಸಿತ್ತು.

 

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾಗೆ 6 ತಿಂಗಳವರೆಗೆ ತೆರಿಗೆ ವಿನಾಯ್ತಿಗೆ ಆದೇಶ; ಶಾಸಕರ ಕೋರಿಕೆಗೆ ಮನ್ನಣೆ

 

 

ಸ್ಪೂರ್ತಿದಾಯಕ, ಸ್ವಾತಂತ್ರ್ಯ ಹೋರಾಟಗಾರರು, ಕೋಮು ಸೌಹಾರ್ದತೆ ಉತ್ತೇಜಿಸುವ, ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಚಲನಚಿತ್ರಗಳಿಗೆ ತೆರಿಗೆ ಮುಕ್ತ ಘೋಷಿಸುವ ಅಧಿಕಾರ ಹೊಂದಿರುವ ರಾಜ್ಯ ಸರ್ಕಾರವು ‘ದ ಕಾಶ್ಮೀರ್‌ ಫೈಲ್ಸ್‌’ ಹಿಂದಿನ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ಸಂಬಂಧ ಆದೇಶ ಹೊರಡಿಸಿತ್ತು.

 

‘ಪ್ರಧಾನಿ ನರೇಂದ್ರ ಮೋದಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಧ್ಯಪ್ರದೇಶ, ಗುಜರಾತ್ ಗಳು ತೆರಿಗೆ ವಿನಾಯಿತಿ ಘೋಷಣೆ ಮಾಡಿವೆ. ಈಗ ಕರ್ನಾಟಕವೂ ಇದೇ ರಾಜ್ಯಗಳ ಹಾದಿಯಲ್ಲಿ ನಡೆದಿದ್ದು ರಾಜ್ಯದಲ್ಲಿ ಕಾಶ್ಮೀರ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ,’ ಎಂದು ಹಿಂದಿನ  ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ 13ರಂದು ಘೋಷಿಸಿದ್ದರು.

 

‘ಕಾಶ್ಮೀರಿ ಪಂಡಿತರು ತಮ್ಮ ನೆಲದಿಂದ ವಲಸೆ ಹೋಗುವಂತೆ ಮಾಡಿದ ಪರಿಸ್ಥಿತಿಯ ಕುರಿತು ನೇರವಾದ ಕಾಶ್ಮೀರ ಫೈಲ್ಸ್ ಸಿನಿಮಾ ಮಾಡಿರುವ ವಿವೇಕ್ ಅಗ್ನಿಹೋತ್ರಿಗೆ ವಂದನೆಗಳು. ಈ ಸಿನಿಮಾಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ದ ಕಾಶ್ಮೀರ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ,’ ಎಂದು ಟ್ವೀಟ್ ಮಾಡಿದ್ದರು.

 

ಕಾಶ್ಮೀರಿ ಪಂಡಿತರ ವಲಸೆಯ ನೋವನ್ನು ತೋರಿಸುವ ಚಿತ್ರ ಎಂದು ಹೇಳಲಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಮಾರ್ಚ್ 11ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಈ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿತ್ತು. ಇವುಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಉತ್ತರಾಖಂಡ ಮತ್ತು ಗೋವಾ ಸೇರಿತ್ತು.

 

2017ರಲ್ಲಿ ಜಿಎಸ್‌ಟಿ ಜಾರಿಗೆ ಬರುವವರೆಗೆ ರಾಜ್ಯ ಸರ್ಕಾರಗಳು ಚಿತ್ರಮಂದಿರಗಳಿಂದ ಮನರಂಜನಾ ತೆರಿಗೆ ಸಂಗ್ರಹ ಮಾಡುತ್ತಿದ್ದವು. ಆದರೆ ಹೊಸ ತೆರಿಗೆ ಜಾರಿಯ ಬಳಿಕ ದೇಶದ ಪ್ರತಿ ರಾಜ್ಯಗಳಲ್ಲಿ ಚಲನಚಿತ್ರ ಟಿಕೆಟ್‌ಗಳ ಮೇಲೆ ಶೇಕಡಾ 28ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಅಲ್ಲದೆ, ಈ ತೆರಿಗೆಯಿಂದ ಬರುವ ಆದಾಯದ ಅರ್ಧದಷ್ಟು ಹಣವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಂಚಿಕೊಳ್ಳಲು ಒಪ್ಪಿಕೊಂಡಿದ್ದವು.

 

ಈ ಹೊಸ ನೀತಿಯಿಂದಾಗಿ ನಮಗೂ ಪರಿಹಾರ ಬೇಕು ಮತ್ತು ಸಡಿಲಿಕೆ ಬೇಕು ಎಂದು ಚಿತ್ರರಂಗ ಧ್ವನಿ ಎತ್ತಿತ್ತು. ಟಿಕೆಟ್‌ಗೆ ಶೇ.28ರಷ್ಟು ತೆರಿಗೆ ಪಾವತಿಸುವುದು ತುಂಬಾ ಕಷ್ಟ ಎಂದು ಸರಕಾರಗಳ ಮೇಲೆ ಒತ್ತಡ ಹೇರಿತ್ತು. ಕಡೆಗೆ ಕೇಂದ್ರ ಸರಕಾರ ಈ ಒತ್ತಡಕ್ಕೆ ಮಣಿದು, ಎರಡು ಭಾಗಗಳಾಗಿ ವಿಂಗಡಿಸಿ ತೆರಿಗೆ ವಿಧಿಸುವುದಾಗಿ ಹೇಳಿತ್ತು. ಚಲನಚಿತ್ರ ಮಂದಿರಗಳಲ್ಲಿ ಟಿಕೆಟ್ ದರ 100 ರೂ.ಗಿಂತ ಕಡಿಮೆಯಿದ್ದರೆ 12 ರಷ್ಟು ಜಿಎಸ್‌ಟಿ, ಟಿಕೆಟ್ ಬೆಲೆ 100 ರೂ.ಗಿಂತ ಹೆಚ್ಚಾಗಿದ್ದರೆ ಶೇ.18ರಷ್ಟು ಜಿಎಸ್‌ಟಿ ಎಂದು ಮಾನದಂಡ ರೂಪಿಸಿತ್ತು.

 

ರಾಜ್ಯದಲ್ಲಿ ಯಾವುದೇ ಚಿತ್ರದ ಟಿಕೆಟ್‌ಗೆ 18 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದಿಟ್ಟುಕೊಂಡರೆ ರಾಜ್ಯ ಸರಕಾರ ಸಿನೆಮಾವೊಂದಕ್ಕೆ ತೆರಿಗೆ ಮುಕ್ತ ಘೋಷಿಸಿದ ಬಳಿಕ ತೆರಿಗೆ ವ್ಯಾಪ್ತಿಯಿಂದ ತನ್ನ ಪಾಲಿನ ಶೇಕಡಾ 9ರಷ್ಟು ವಿನಾಯಿತಿ ನೀಡಲಾಗಿದೆ ಎಂದು ಅರ್ಥ. ಶೇ. 18ರ ಜಿಎಸ್‌ಟಿ ಬದಲಿಗೆ 9ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹಾಗಾಗಿ ವಿಧಿಸುತ್ತಿರುವ ಶೇ.9ರಷ್ಟು ತೆರಿಗೆಯೂ ಕೇಂದ್ರದ ಪಾಲಾಗಿರುತ್ತದೆ. ಅಂದರೆ ರಾಜ್ಯವು ತನ್ನ ಪಾಲಿನ ತೆರಿಗೆಯ ಶೇಕಡಾ 50 ರಷ್ಟು ಮಾತ್ರ ಮನ್ನಾ ಮಾಡುವ ಹಕ್ಕು ಹೊಂದಿದೆ. ಹೀಗಾಗಿ, ಈ ತೆರಿಗೆ ಲಾಭ ಪ್ರೇಕ್ಷಕರಿಗೆ ದೊರೆಯಲಿದೆ ಎಂದು ಹೇಳಲಾಗಿತ್ತು.

the fil favicon

SUPPORT THE FILE

Latest News

Related Posts