5 ಗ್ಯಾರಂಟಿಗಳ ಪರಿಶೀಲಿಸದ ವಿತ್ತೀಯ ಸುಧಾರಣೆ ಕೋಶ; ಸಾಲದ ಮೂಲಕ ಅನುದಾನ ಒದಗಿಸಲಿರುವ ಸರ್ಕಾರ

ಬೆಂಗಳೂರು; ವಿಧಾನಸಭೆ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಕಾಂಗ್ರೆಸ್‌ ಸರ್ಕಾರವು ಈಗಾಗಲೇ ಅಧಿಸೂಚನೆ, ಆದೇಶಗಳನ್ನು ಹೊರಡಿಸಿದೆಯಾದರೂ ಇದಕ್ಕೂ ಮುನ್ನ ಆರ್ಥಿಕ ಇಲಾಖೆಯ ವಿತ್ತೀಯ ಸುಧಾರಣೆ ಕೋಶ ಮತ್ತು ಆರ್ಥಿಕ ಇಲಾಖೆಯ ಇತರೆ ವಿಭಾಗಗಳು ಸರ್ಕಾರದ ಗ್ಯಾರಂಟಿಗಳ ಕುರಿತು ಪ್ರಸ್ತಾವನೆಗಳನ್ನು ಪರಿಶೀಲಿಸಿಲ್ಲ. ಅಲ್ಲದೇ ಐದೂ ಗ್ಯಾರಂಟಿ ಯೋಜನೆಗಳನ್ನು ಸಾಲದ ಮೂಲಕ ಅನುದಾನ ಒದಗಿಸಲಾಗಿದೆ ಎಂಬ ಅಂಶವು ಇದೀಗ ಬಹಿರಂಗವಾಗಿದೆ.

 

ವಿಧಾನಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಿದ್ಧಪಡಿಸಿರುವ ಉತ್ತರಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು  ತೆರೆದಿರುವ ಕಡತದಲ್ಲಿ  ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಕುರಿತು ಪ್ರಸ್ತಾವನೆಗಳನ್ನು ಪರಿಶೀಲಿಸಿಲ್ಲ ( FD/36/BGL/2023/-FRC-FINANCE DEPT SEC (COMPUTER NUMBER 1120886) ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು  ಗೊತ್ತಾಗಿದೆ.

 

ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಮತ್ತು ಶಕ್ತಿ ಯೋಜನೆ ಗ್ಯಾರಂಟಿಗಳ ಅನುಷ್ಠಾನದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಇಂದು ನಡೆದ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯು ಗದ್ದಲ ಎಬ್ಬಿಸಿ ಅಧಿವೇಶನವನ್ನು ಮೂರ್ನಾಲ್ಕು ಬಾರಿ ಮುಂದೂಡಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಕುರಿತಾದ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಯ ವಿತ್ತೀಯ ಸುಧಾರಣೆ ಕೋಶವು ಪರಿಶೀಲಿಸದಿರುವುದು ಮುನ್ನೆಲೆಗೆ ಬಂದಿದೆ.

 

ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿರುವ ಪ್ರಶ್ನೆಗಳೇನು?

 

ಸರ್ಕಾರ ಪ್ರಕಟಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಅಂದಾಜಿಸಲಾಗಿದೆಯೇ?

 

ಅಂದಾಜಿಸಿದ್ದಲ್ಲಿ ಮಾಸಿಕ ಮತ್ತು ವಾರ್ಷಿಕವಾಗಿ ಖರ್ಚಾಗಬಹುದಾದ ಅಂದಾಜು ಮೊತ್ತವೆಷ್ಟು?

 

ಈ ಮೊತ್ತವನ್ನು ಕ್ರೋಢೀಕರಿಸಲು ಕೈಗೊಂಡ ಕ್ರಮಗಳೇನು?

 

ಈ ಯೋಜನೆಗಳಿಗೆ ಸರ್ಕಾರವು ಒತ್ತು ನೀಡುತ್ತಿರುವುದರಿಂದ ರಾಜ್ಯದ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡುವ ಅನುದಾನವು ಕುಸಿತಗೊಳ್ಳಲಿದೆಯೇ?

 

ಸಾಲ ಎತ್ತುವಳಿ ಮೂಲಕ ಈ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಕಾರ್ಯರೂಪಕ್ಕೆ ತರುವ ಆಲೋಚನೆ ಸರ್ಕಾರಕ್ಕಿದೆಯೇ?

 

ಈ ಪ್ರಶ್ನೆಗಳ ಕುರಿತು ಆರ್ಥಿಕ ಇಲಾಖೆಯು ‘ ಆರ್ಥಿಕ ಇಲಾಖೆಯ ವಿತ್ತೀಯ ಸುಧಾರಣೆ ಕೋಶ ಮತ್ತು ಗಣಕ ಕೋಶ ಶಾಖೆಗಳಿಂದ ಸರ್ಕಾರದ ಗ್ಯಾರಂಟಿಗಳ ಕುರಿತು ಪ್ರಸ್ತಾವನೆಗಳನ್ನು ಪರಿಶೀಲಿಸಿರುವುದಿಲ್ಲ ಎಂದು ಸರ್ಕಾರದ ಆಧೀನ ಕಾರ್ಯದರ್ಶಿ ಇವರಿಗೆ ತಿಳಿಸಬಹುದಾಗಿದೆ,’ ಎಂದು ಮೇಲಿನ ಅಧಿಕಾರಿಗಳಿಗೆ ತಿಳಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರವು ಪ್ರಕಟಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು 2023-24ರ ಪರಿಷ್ಕೃತ ಆಯವ್ಯಯದಲ್ಲಿ ಅಂದಾಜಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗಬಹುದಾದ ಮಾಸಿಕ ಮತ್ತು ವಾರ್ಷಿಕ ಮೊತ್ತವನ್ನು ಅಂದಾಜಿಸಿ 2023-24ರ ಪರಿಷ್ಕೃತ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಅಂದಾಜಿಸಲಾಗಿದ್ದು ಜುಲೈ 2,2023ರಂದು ಮಂಡನೆಯಾಗಲಿರುವ ಆಯವ್ಯಯದಲ್ಲಿ ನೀಡಲಾಗಿದೆ. ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೂ ಆದ್ಯತೆ ನೀಡಿದ್ದು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿಮೆಯಾಗದಂತೆ ಕ್ರಮವಹಿಸಲಾಗಿದೆ. ಈ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಕಾರ್ಯರೂಪಕ್ಕೆ ತರಲು ಸಂಪನ್ಮೂಲ ಕ್ರೋಢೀಕರಣದ ಜೊತೆಗೆ ಸಾಲದ ಮೂಲಕ ಅನುದಾನ ಒದಗಿಸಲಾಗಿದೆ ಎಂಬ ಉತ್ತರವನ್ನು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಡತವನ್ನು  2023ರ ಜುಲೈ 4ರಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‍‌ ಅವರು ಮಂಡಿಸಿದ್ದಾರೆ ಎಂದು  ತಿಳಿದು ಬಂದಿದೆ.

 

ಹಣಕಾಸು ಪರಿಸ್ಥಿತಿ ಸರಿಯಿಲ್ಲವೆಂದ ಆರ್ಥಿಕ ಇಲಾಖೆ; ಶಾಲೆ ಕಾಲೇಜುಗಳ ಉನ್ನತೀಕರಣ 2 ವರ್ಷ ಮುಂದೂಡಿಕೆ

ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ₹ 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ₹3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ₹ 1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಐದು ಗ್ಯಾರಂಟಿ ಕಾರ್ಡ್ ಗಳು ಕಾಂಗ್ರೆಸ್ ನ್ನು ಈ ಬಾರಿ ಅಭೂತಪೂರ್ವ ವಿಜಯದ ಗಡಿ ಮುಟ್ಟಿಸಿತ್ತು.

 

ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 40,000 ಕೋಟಿ ರೂ. ಬೇಕಾಗಲಿದ್ದು, ಇದು ರಾಜ್ಯ ಬಜೆಟ್ ಮೊತ್ತದ ಕೇವಲ 15% ಆಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಆದರೆ, ಅಸಲಿಗೆ ಕಾಂಗ್ರೆಸ್ ಘೋಷಿಸಿದಂತೆ ರಾಜ್ಯದ ಎಲ್ಲರಿಗೂ ಈ ಯೋಜನೆಗಳನ್ನು ಅನ್ವಯಿಸಿದರೆ ಅಂದಾಜು ಮೊತ್ತ 60,000 ಕೋಟಿ ರೂ. ದಾಟುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

ರಾಜ್ಯದ ಆದಾಯ ಸಂಗ್ರಹದಲ್ಲಿ ಶೇ. 80-90ರಷ್ಟು ಮೊತ್ತ ನೌಕರರ ವೇತನ, ಪಿಂಚಣಿ, ಆಡಳಿತ ವೆಚ್ಚ, ಸಹಾಯಧನಗಳು ಸೇರಿದಂತೆ ಬದ್ಧ ವೆಚ್ಚಕ್ಕೆ ತಗುಲುತ್ತದೆ. ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಅನುಷ್ಠಾನಕ್ಕೆ ಮಿತಿ ಮೀರಿದ ಬದ್ಧ ವೆಚ್ಚವೇ ದೊಡ್ಡ ತಲೆನೋವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯದ ಒಟ್ಟು ಬದ್ಧ ವೆಚ್ಚ ಸುಮಾರು 94,699 ಕೋಟಿ ರೂ. ಆಗಿತ್ತು. ಇದರ ಜೊತೆಗೆ ಸುಮಾರು 30,000 ಕೋಟಿ ರು.ಗಳು ಸಾಲದ ಮೇಲಿನ ಬಡ್ಡಿ ಪಾವತಿಗೆ ವೆಚ್ಚ ಮಾಡಿರುವುದು ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

 

ಬೊಮ್ಮಾಯಿ ಸರ್ಕಾರ 2023-24ರ ಬಜೆಟ್ ನಲ್ಲಿ ಅಲ್ಪ ಉಳಿತಾಯದ ಬಜೆಟ್ ಮಂಡಿಸಿದ್ದರು. 2022-23ರ ಸರ್ಕಾರದ ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ರಾಜ್ಯದ ಹಣಕಾಸಿನಲ್ಲಿ ಆದಾಯ ಕೊರತೆಯ ಪರಿಸ್ಥಿತಿ ಇರುವುದರಿಂದ ಸಹಾಯಧನಗಳ ವೆಚ್ಚ ಕಡಿತ ಮಾಡಬೇಕು. ಕೇವಲ ಬಡವರಿಗೆ ಮಾತ್ರ ಸಹಾಯಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿತ್ತು.

the fil favicon

SUPPORT THE FILE

Latest News

Related Posts