ಬೆಂಗಳೂರು; ಸರ್ಕಾರವು ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಎಕರೆಗೆ 4 ಲಕ್ಷ ರು. ನೀಡಲು ಬೇಡಿಕೆ ಇರಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾಯಿತರಾಗಿರುವ ಗೋವಿಂದರಾಜು ಅವರು 2023ರ ಜುಲೈ 11ರಂದು ವಿಧಾನ ಪರಿಷತ್‌ನಲ್ಲಿ ಈ ಕುರಿತು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದಾರೆ.
ವಿಶೇಷ ಭೂ ಸ್ವಾಧೀನಾಧಿಕಾರಿಗಳು ಎಕರೆಗೆ 4 ಲಕ್ಷ ರು. ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂಬ ಕುರಿತಾದ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಲಂಚಕ್ಕೆ ಬೇಡಿಕೆ ಇರಿಸಿದೆ ಎಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಬಲವಾಗಿ ಆರೋಪಿಸಿ ವಿಧಾನಸಭೆ ಚುನಾವಣೆಯಲ್ಲಿಯೂ ಇದನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿತ್ತು ಆದರೀಗ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿ ಒಂದು ತಿಂಗಳ ಅವಧಿ ಪೂರ್ಣಗೊಳಿಸಿರುವ ಹೊತ್ತಿನಲ್ಲಿಯೇ ಸರ್ಕಾರವು ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಎಕರೆಗೆ 4 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ಕೇಳಿ ಬಂದಿರುವ ಆರೋಪವು ಮುನ್ನೆಲೆಗೆ ಬಂದಿದೆ.
‘ವಿಶೇಷ ಭೂ ಸ್ವಾಧೀನಾಧಿಕಾರಿಗಳು ಅತಿಯಾದ ಭ್ರಷ್ಟಾಚಾರ ನಡೆಯುತ್ತಿದ್ದು ಸರ್ಕಾರದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು 4 ಲಕ್ಷ ರುಪಾಯಿ ನೀಡಲು ಒತ್ತಾಯಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ,’ ಎಂದು ಗೋವಿಂದರಾಜು ಅವರು ಪ್ರಶ್ನೆ ಕೇಳಿದ್ದರು.
ಇದಕ್ಕೆ ಸುದೀರ್ಘವಾಗಿ ಉತ್ತರಿಸಿರುವ ಎಂ ಬಿ ಪಾಟೀಲ್ ಅವರು ಎಲ್ಲಿಯೂ ಭ್ರಷ್ಟಾಚಾರದ ಕುರಿತು ಮತ್ತು 4 ಲಕ್ಷ ರುಪಾಯಿಗೆ ಬೇಡಿಕೆ ಇರಿಸುತ್ತಿರುವ ಆರೋಪದ ಕುರಿತು ಸ್ಪಷ್ಟನೆಯನ್ನೇ ನೀಡಿಲ್ಲ.
ಎಂ ಬಿ ಪಾಟೀಲ್ ನೀಡಿದ್ದ ಉತ್ತರದಲ್ಲೇನಿದೆ?
ಕೆಐಎಡಿಬಿ ವತಿಯಿಂದ ಕೈಗಾರಿಕೆ ಪ್ರದೇಶ ಮತ್ತು ಏಕಘಟಕ ಸಂಕೀರ್ಣಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳಿಗೆ ಕೆಐಎಡಿ ಕಾಯ್ದೆ ಕಲಂ 28(4) ಅಡಿ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಭೂ ಪರಿಹಾರ ದರ ನಿಗದಿಪಡಿಸುವ ಸಲುವಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ಮಂಡಳಿಯ ವಿಶೇಷ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರೊಂದಿಗೆ ಸಮಾಲೋಚಿಸಿ ಪ್ರಸ್ತಾವಿತ ಪ್ರದೇಶದಲ್ಲಿನ ಮಾರ್ಗಸೂಚಿ ದರ ಮತ್ತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಹಿಂದಿನ 3 ವರ್ಷಗಳ ಮಾರಾಟದ ಅಂಕಿ ಅಂಶಗಳನ್ನು ಪರಿಗಣಿಸಿ ಶಿಫಾರಸ್ಸು ಮಾಡುವ ದರಕ್ಕೆ ಮಂಡಳಿ ಸಭೆಯ ಅನುಮೋದನೆ ಪಡೆದು ನಿಯಮಾನುಸಾರ ಪರಿಹಾರ ಪಾವತಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.
ಮಂಡಳಿಯ ಭೂ ಸ್ವಾಧೀನಕ್ಕೆ ಒಳಪಟ್ಟ ಜಮೀನುಗಳಿಗೆ ಪರಿಹಾರ ಪಾವತಿಸುವ ಕುರಿತಂತೆ ಭೂ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಪಡೆದು ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಅರ್ಹ ಭೂ ಮಾಲೀಕರಿಗೆ ಆದ್ಯತೆ ಮೇರೆಗೆ ಪರಿಹಾರ ಪಾವತಿಸಲು ಮಂಡಳಿಯ ಎಲ್ಲಾ ವಿಶೇಷ ಭೂ ಸ್ವಾಧೀನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಭೂ ಪರಿಹಾರ ಪಾವತಿ ಕಾರ್ಯವನ್ನು ಪೂರ್ಣಗೊಳಿಸುವ ಕುರಿತಂತೆ ಭೂ ದರ ನಿರ್ಧರಣಾ ಸಲಹಾ ಸಮಿತಿ ಶಿಫಾರಸ್ಸು ಮಾಢುವ ಒಪ್ಪಂದದ ದರವು ಮಂಡಳಿ ಸಭೆಯಲ್ಲಿ ಅನುಮೋದನೆಗೊಂಡ ದಿನಾಂಕದಿಂದ 3 ತಿಂಗಳೊಳಗಾಗಿ ಪರಿಹಾರ ಪಾವತಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಹಾಘೂ ಒಪ್ಪಂದದ ದರದಲ್ಲಿ ಭೂ ಪರಿಹಾರ ಪಡೆಯದ ಮತ್ತು ಸಿವಿಲ್ ವಿವಾದಗಳಿರುವ ಪ್ರಕರಣಗಳಿಗೆ 45 ದಿನದೊಳಗಾಗಿ ಅವಾರ್ಡ್ ರಚಿಸಿ ಪರಿಹಾರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಕ್ರಮವಹಿಸುವಂತೆ ಕಾಲಮಿತಿ ನಿಗದಿಪಡಿಸಿದೆ ಎಂದು ಉತ್ತರದಲ್ಲಿ ವಿವರಿಸಿದ್ದಾರೆ.
ಅಲ್ಲದೇ ಕಲಂ 28(4) ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರದ ಹಣವನ್ನು ಆದ್ಯತೆ ಮೇರೆಗೆ ಸಂಬಂಧಪಟ್ಟ ರೈತರು, ಖಾತೆದಾರರು ಹಿತಾಸಕ್ತಿದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆರ್‍ಟಿಜಿಎಸ್ ಮುಖಾಂತರ ಜಮಾ ಮಾಡಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.