ಗುಪ್ತಚರ ಇಲಾಖೆ ಮಾಹಿತಿಯಂತೆ ಕೋವಿಡ್‌ ನಿಯಮ ಉಲ್ಲಂಘಿಸಿರುವ ಪ್ರಕರಣಗಳ ಹಿಂತೆಗೆತ; ನಿರ್ದೇಶನ

ಬೆಂಗಳೂರು; ರಾಮನಗರ, ಕನಕಪುರ, ಸಾತನೂರು, ಶಿವಾಜಿ ನಗರ ಸೇರಿದಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್‌ 19ರ ನಿಯಮ ಉಲ್ಲಂಘಿಸಿ ನಡೆಸಿ ಹೋರಾಟ ಮಾಡಿದ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆದುಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಸಂಬಂಧ ಅಭಿಯೋಗ, ಡಿಜಿಐಜಿಪಿ ಮತ್ತು  ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ಗೃಹ ಇಲಾಖೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.

 

ವಿಶೇಷ ಎಂದರೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯಂತೆ ಸರ್ಕಾರದ ಅಪರ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಈ ಎಲ್ಲಾ ಪ್ರಕರಣಗಳನ್ನು ಹಿಂಪಡೆದುಕೊಳ್ಳುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಡಿಜಿಐಜಿಪಿ ಅವರಿಗೆ ಪತ್ರ (ಹೆಚ್‌ಡಿ 101 ಎಮ್‌ಹೆಚ್‌ಬಿ 2023)  ಬರೆದಿದ್ದಾರೆ ಎಂದು ಗೊತ್ತಾಗಿದೆ.

 

ಬೆಂಗಳೂರು ನಗರದ ಡಿ ಜೆ ಹಳ್ಳಿ, ಕೆ ಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ನಡೆದ ಪ್ರತಿಭಟನೆ ಹಾಗೂ ಗಲಭೆಗ ಸಂದರ್ಭದಲ್ಲಿ ಬಂಧಿತರ ವಿರುದ್ಧ  ಹೂಡಿದ್ದ   ಮೊಕದ್ದಮೆಗಳನ್ನು  ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ತನ್ವೀರ್‍‌ ಸೇಠ್‌  ಪತ್ರ ಬರೆದಿದ್ದರು. ಈ  ಪತ್ರವನ್ನಾಧರಿಸಿ   ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಒಳಾಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಟಿಪ್ಪಣಿಯನ್ನು ಪ್ರತಿಪಕ್ಷಗಳು ಅಸ್ತ್ರದಂತೆ ಬಳಸಿಕೊಳ್ಳುತ್ತಿರುವ ಬೆನ್ನಲ್ಲೇ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಗೃಹ ಇಲಾಖೆಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

‘ಸರ್ಕಾರದ ಅಪರ ಕಾರ್ಯದರ್ಶಿಯವರು ಮೌಖಿಕವಾಗಿ ಸೂಚಿಸಿರುವಂತೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯಂತೆ ಕೋವಿಡ್‌ 19ರ ಸಮಯದಲ್ಲಿ 2022ರಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ವಿಷಯವಾಗಿ ಕಡತವನ್ನು ಮಂಡಿಸುವಂತೆ ನಿರ್ದೇಶಿಸಿರುವುದರಿಂದ ಕಡತವನ್ನು ಮಂಡಿಸಿದೆ,’ ಎಂದು ಒಳಾಡಳಿತ ಇಲಾಖೆಯು ಕಡತವನ್ನು ಮಂಡಿಸಿರುವುದು ಗೊತ್ತಾಗಿದೆ.

 

ಪ್ರಕರಣಗಳ ಪಟ್ಟಿ ಇಲ್ಲಿದೆ

 

ಸಾತನೂರು ಪೊಲೀಸ್‌ ಠಾಣೆ (ಮೊ. ಸಂ 01/2022, ಕಲಂ 41, 143, 209, 336, ಐಪಿಎಸಿ ಕೆಇಡಿ ಆಕ್ಟ್‌ 2020 ಕಲಂ 5(3), ಮೊಕದ್ದಮೆ ಸಂಖ್ಯೆ 02/2022 ಕಲಂ 141, 143, 290, 336/ರೆ ವಿ 149 ಐಪಿಸಿ ಕೆಇಡಿ ಆಕ್ಟ್‌ 2020 ಕಲಂ 5(3ಎ), ಐಜೂರು ಪೊಲೀಸ್‌ ಠಾಣೆ (ಮೊ ಸಂ 20/2022, ಕಲಂ 141, 143, 290, 336, 149, ಮತ್ತು ಸೆಕ್ಷನ್‌ 5 (3ಎ), ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆ (ಮೊ ಸಂ 13/2022, ಶಿವಾಜಿ ನಗರ ಪಿ ಎಸ್‌ ಕಲಂ 188 ಐಪಿಸಿ (ಸಿಸಿ ನಂ 25317/2022), ಅಶೋಕ್‌ಪುರಂ ಪೊಲೀಸ್‌ ಠಾಣೆ (ಮೊ ಸಂ 10/2021 ಕಲಂ 153 ಐಪಿಸಿ, ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ (ಮೊ ಸಂ 54/2022 ಕಲಂ 143, 41 ಐಪಿಸಿ, 103 ಕೆಪಿ ಆಕ್ಟ್‌, ಸಿದ್ದಾಪುರ ಪೊಲೀಸ್‌ ಠಾಣೆ ( ಮೊ ಸಂ 149/2022, ಕರ್ನಾಟಕ ಪೊಲೀಸ್ ಆಕ್ಟ್‌, 1963 (u/s 103 ) ಸಾರ್ವಜನಿಕ ಆಸ್ತಿಗೆ ಧಕ್ಕೆ, ಹಲಸೂರು ಗೇಟ್‌ ಪೊಲೀಸ್‌ ಠಾಣೆ ಎನ್‌ಡಿಎಂ ಆಕ್ಟ್‌, ಕನಕಪುರ ಟೌನ್‌ ಠಾಣೆ (ಮೊ ಸಂ 01/2022, ಉಪ್ಪಾರ ಪೇಟೆ ಟಾಣೆ ಪಿ ಎಸ್‌ ಕಲಂ 51(ಬಿ) ಎನ್‌ಡಿಎಂ ಮತ್ತು ಕಲಂ 269 ಐಪಿಸಿ ಈ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಕಡತ ಮಂಡಿಸಲು ನಿರ್ದೇಶಿಸಿದೆ ಎಂದು ತಿಳಿದು ಬಂದಿದೆ.

 

‘ಈ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿಜಿಐಜಿಪಿ ಹಾಗೂ ಡಿಒಪಿ ಅವರಿಗೆ ನಿಯಮಾನುಸಾರ ಪರಿಶೀಲಿಸಿ ಸ್ಪಷ್ಟ ಹಾಗೂ ನಿಖರ ಅಭಿಪ್ರಾಯದ ವರದಿಯನ್ನು ಸಮರ್ಥಿಸುವ ಪೂರಕ, ಅಗತ್ಯ ದಾಖಲೆಗಳೊಂದಿಗೆ ಒದಗಿಸಬೇಕು,’ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ನಿರ್ದೇಶಿಸಿದ್ದಾರೆ ಎಂದು ಗೊತ್ತಾಗಿದೆ.

 

ಬಿಜೆಪಿ, ಎಬಿವಿಪಿ ಮತ್ತು ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಸೇರಿದಂತೆ ಮತ್ತಿತರೆ 495ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ದಾಖಲಾಗಿದ್ದ ಒಟ್ಟು ಕ್ರಿಮಿನಲ್‌ ಪ್ರಕರಣಗಳ ಪೈಕಿ 260 ಪ್ರಕರಣಗಳನ್ನು 2023ರ ಜನವರಿಯಿಂದ 2023ರ ಮಾರ್ಚ್‌ ಅಂತ್ಯದವರೆಗಿನ ಕೇವಲ ಮೂರೇ ಮೂರು ತಿಂಗಳಲ್ಲಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರವು ವಿಚಾರಣೆಯಿಂದಲೇ ಹಿಂಪಡೆದುಕೊಂಡಿರುವುದನ್ನು ‘ದಿ ಫೈಲ್‌’ ದಾಖಲೆ ಸಹಿತ ಹೊರಗೆಡವಿತ್ತು.

 

ಕೋಮು ಪ್ರಚೋದನೆ, ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದಿದ್ದ ಕೋಮು ಗಲಭೆ, ಸಾರ್ವಜನಿಕರ ನೆಮ್ಮದಿಗೆ ಭಂಗ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಸಾಮಾಜಿಕ ಆಂತರ ಕಾಯ್ದುಕೊಳ್ಳದಿರುವುದು, ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಉಲ್ಲಂಘನೆ ಸೇರಿದಂತೆ ಮತ್ತಿತರೆ ಗಂಭೀರ ಆರೋಪಗಳಡಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಐಪಿಸಿ, ಸಿಆರ್‌ಪಿಸಿ ಸೇರಿ ಮತ್ತಿತರೆ ದಂಡನಾ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಹಿಂಪಡೆದುಕೊಂಡಿತ್ತು.

 

ಮಧುಗಿರಿ ಮೋದಿ ಸೇರಿ 495 ಆರೋಪಿಗಳ ವಿರುದ್ಧ 260 ಪ್ರಕರಣ ಹಿಂತೆಗೆತ;ಬಿಜೆಪಿ ಕಾರ್ಯಕರ್ತರದ್ದೇ ಸಿಂಹಪಾಲು

 

ಈ ಎಲ್ಲ ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂಪಡೆದುಕೊಳ್ಳಲು ಸಚಿವ ಸಂಪುಟ ಉಪ ಸಮಿತಿಯು ಶಿಫಾರಸ್ಸು ಮಾಡಿತ್ತು. ಪ್ರಕರಣ, ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂಪಡೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸರ್ಕಾರದ ಆದೇಶಗಳು ಮತ್ತು ಸಮಗ್ರ ನಡವಳಿಗಳನ್ನು ಪಡೆದುಕೊಂಡಿತ್ತು.

 

ವಿಶೇಷವೆಂದರೆ ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಒಂದೆರಡು ದಿನ ಮುನ್ನವೇ 212 ಕ್ರಿಮಿನಲ್‌ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದುಕೊಂಡಿತ್ತು.

 

 

ಟಿಪ್ಪು ಜಯಂತಿ, ಗಣೇಶ ವಿಸರ್ಜನೆ, ಅನ್ಯ ಕೋಮಿನ ಜನರ ಭಾವನೆಗಳಿಗೆ ಧಕ್ಕೆ ತರುವ, ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿ ಅಪರಾಧ ಎಸಗಿರುವುದು, ಕಾನೂನುಬಾಹಿರವಾಗಿ ಅಕ್ರಮ ಕೂಟ ಕಟ್ಟಿಕೊಂಡು ಕಾನೂನು ಸುವ್ಯವಸ್ಥೆಗೆ ಭಂಗ ತಂದ ಅಪರಾಧ, ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿರುವುದು, ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಮುದಾಯದವರು ಬಿಜೆಪಿ ವಿಜಯೋತ್ಸವ ಆಚರಣೆ ವೇಳೆ ಕಲ್ಲು ತೂರಾಟ ನಡೆಸಿರುವುದು ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡಿ ಕೋಮು ಸೌಹಾರ್ದ ಕದಡಿದ ಆರೋಪದ ಮೇಲೆ ಹಲವು ಪ್ರಕರಣಗಳು 2015, 2106, 2017, 2018, 2019, 2020, 2021ರಲ್ಲಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮೊಕದ್ದಮೆಗಳು ದಾಖಲಾಗಿದ್ದವು.

 

ಬೀದರ್‌, ಮಂಗಳೂರು ನಗರ, ಶಿವಮೊಗ್ಗ, ಧಾರವಾಡ, ಭಟ್ಕಳ, ಮಂಡ್ಯ, ಶಿರಸಿ, ದಾವಣಗೆರೆ, ತುಮಕೂರು, ಚಿತ್ತಾಪುರ, ಕಲ್ಬುರ್ಗಿ, ಹೊನ್ನಾಳಿ, ಹೊನ್ನಾವರ, ಜೇವರ್ಗಿ, ಯಾದಗಿರಿ, ಹಾವೇರಿ, ಕೊಪ್ಪಳ, ಮಂಗಳೂರಿನ ಕಂಕನಾಡಿ, ಕೊಪ್ಪಳ ನಗರ, ಗ್ರಾಮೀಣ, ಚಿತ್ರದುರ್ಗ, ಮೈಸೂರು, ಸಾಗರ, ಉಡುಪಿ, ಉತ್ತರ ಕನ್ನಡ, ಯಮಕನಮರಡಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು ಎಂಬುದು ಎಫ್‌ಐಆರ್‌ಗಳಿಂದ ತಿಳಿದು ಬಂದಿದೆ.

ಡಿಜಿಐಜಿಪಿ ಅಭಿಪ್ರಾಯ ಬದಿಗಿರಿಸಿ ನೂರಾರು ಕ್ರಿಮಿನಲ್‌ ಪ್ರಕರಣ ಹಿಂತೆಗೆತ; ಶಾಂತಿ ಸುವ್ಯವಸ್ಥೆಗೆ ಭಂಗ

ತುಮಕೂರಿನಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಮೇಲೆ ಮಧುಗಿರಿ ಮೋದಿ ಎಂಬಾತ ಮತ್ತಿತರರು ಸೇರಿಕೊಂಡು ಅಡ್ಡಗಟ್ಟಿ ಕೆಟ್ಟ ಮಾತುಗಳಿಂದ ಬೈಯ್ದು ಹೊಡೆದಿದ್ದರು. ಮಧುಗಿರಿ ಮೋದಿ ಮತ್ತಿತರರ ಮೇಲೆ 2021ರ ಅಕ್ಟೊಬರ್‌ 20ರಂದು ಎಫ್‌ಐಆರ್‌ (0142/2021) ದಾಖಲಾಗಿತ್ತು. ಸಚಿವ ಸಂಪುಟದ ಉಪ ಸಮಿತಿ ಶಿಫಾರಸ್ಸಿನ್ವಯ ಪ್ರಕರಣವನ್ನೂ ಅಭಿಯೋಜನೆಯಿಂದ ಹಿಂಪಡೆದಿತ್ತು.

 

ಮಧುಗಿರಿ ಮೋದಿ ವಿರುದ್ಧದ ಎಫ್‌ಐಆರ್‌ ಪ್ರತಿ

 

ಅದೇ ರೀತಿ ಟಿಪ್ಪು ಸುಲ್ತಾನರ ಭಾವಚಿತ್ರವನ್ನು ನಾಯಿ ಮುಖದ ರೀತಿಯಲ್ಲಿ ವಿರೂಪಗೊಳಿಸಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿ ಕೋಮು ಸೌಹಾರ್ದ ಕದಡಿದ್ದರಿಂದಾಗಿ ಮಂಡ್ಯದ ಬೆಳ್ಳೂರು ಗ್ರಾಮದಲ್ಲಿ ಯಾವ ಸಮಯದಲ್ಲಿಇಯಾದರೂ ಕೋಮು ಗಲಭೆ ನಡೆಯುವಂತಹ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದ್ದ ಎಂದು ಆರೋಪಿತರಾಗಿದ್ದ ಲೋಕೇಶ್‌ ಬಿ ವಿ ಸೇರಿದಂತೆ 5 ಮಂದಿ ಮೇಲೆ ಐ ಟಿ ಕಾಯ್ದೆಯಡಿ 2017ರ ನವೆಂಬರ್‌ 7ರಂದು ದಾಖಲಾಗಿದ್ದ ಮೊಕದ್ದಮೆಯನ್ನೂ ಹಿಂಪಡೆದುಕೊಳ್ಳಲಾಗಿತ್ತು.

 

ಶೃಂಗೇರಿಯಲ್ಲಿ ಎಬಿವಿಪಿ ಕಾರ್ಯಕರ್ತ ಎಂದು ಹೇಳಲಾದ ಅಭಿಷೇಕ್‌ ಎಂಬಾತನ ಆತ್ಮಹತ್ಯೆ ಪ್ರಕರಣವನ್ನು ಮುಂದಿರಿಸಿಕೊಂಡು ಮಂಗಳೂರು ನಗರದ ಜಯೇಶ್‌, ಮಂಡ್ಯದ ತೇಜಸ್ವಿ, ಉಡುಪಿಯ ವಿಜೇತ, ಅನುಷ ಸೇರಿ ಒಟ್ಟು 14 ಮಂದಿ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆಯಲ್ಲಿ (0005/2017) ಐಪಿಸಿ 1860 ಸೇರಿದಂತೆ ಇನ್ನಿತರೆ ಕಲಂಗಳಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಿಚಾರಣೆಯಿಂದ ವಾಪಸ್‌ ಪಡೆದುಕೊಂಡಿತ್ತು.

 

ಎಬಿವಿಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌

 

ಮಂಡ್ಯದ ಕಾವೇರಿ ಟಿ ವಿ ವಾಹಿನಿಯ ಮೇಲೆ ಕೆಲವರು ಹಿಂದೂಗಳಾದ ನಾವು ಹೆಳಿದಂತೆ ನೀವು ಕೇಳಬೇಕು, ಹಿಂದೂ ಸಂಘಟಕರು ಆಳ್ವಿಕೆ ಮಾಡುತ್ತಿದ್ದಾರೆ, ನಿಮ್ಮ ವಾಹಿನಿಯನ್ನು ಚಿಟಿಕೆ ಹೊಡೆಯುವುದರೊಳಗೆ ನಾವು ನಾಶಗೊಳಿಸುತ್ತೇವೆ, ಬುದ್ದಿಜೀವಿಗಳಿ ಬುದ್ಧಿ ಕಲಿಸಿದಂತೆ ನಿಮಗೂ ಬುದ್ದಿ ಕಲಿಸುತ್ತೇವೆ. ಭಾರತದಲ್ಲಿ ಹಿಂದುಗಳ ಮಾತ್ರು ಇರಬೇಕು, ಇದು ಹಿಂದು ರಾಷ್ಟ್ರ, ಇವತ್ತು ಮುಸ್ಲಿಂ ನ್ಯೂಸ್‌ ಓದುತ್ತೀರಿ, ನಾಳೆ ಕ್ರಿಶ್ಚಿಯನ್‌ ನ್ಯೂಸ್‌ ಓದುತ್ತಿರಿ, ನಾವು ಮಂಡ್ಯದ ಜನ ಏನ್‌ ಮಾಡಕ್ಕೂ ಹೆದರೋದಿಲ್ಲ ಎಂದೆಲ್ಲಾ ಬೆದರಿಕೆ ಒಡ್ಡಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಮುರುಗೇಶ್‌ ಎಂಬುವರು ಸೇರಿದಂತೆ ಇನ್ನಿತರರ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣವನ್ನೂ ವಿಚಾರಣೆಯಿಂದ ಹಿಂಪಡೆದಿತ್ತು.

 

ಮಂಡ್ಯದ ಕಾವೇರಿ ವಾಹಿನಿ ಮೇಲಿನ ದಾಳಿ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌

 

ಟಿಪ್ಪು ಜಯಂತಿ ಆಚರಣೆ ವಿರುದ್ಧ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ಕೆ ಆರ್‌ ಪ್ರದೀಪ್‌, ಮುರುಳೀಧರನ್‌, ಗಿರೀಶ್‌, ಮಹದೇವಸ್ವಾಮಿ (ಬಿಜೆಪಿಯ ಯುವ ಮೋರ್ಚಾ ಗ್ರಾಮಾಂತರ) ಸೇರಿದಂತೆ ಮತ್ತಿತರರು ಸುಮಾರು 40-50 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ 2016ರ ನವೆಂಬರ್‌ 7ರಂದು ಲಕ್ಷ್ಮೀಪುರಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸಿನ್ವಯ ಈ ಪ್ರಕರಣವನ್ನೂ ವಿಚಾರಣೆಯಿಂದ ಹಿಂಪಡೆದುಕೊಂಡಿರುವುದು ಆರ್‌ಟಿಐ ದಾಖಲೆಯಿಂದ ತಿಳಿದು ಬಂದಿತ್ತು.

 

ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ, ಪ್ರತಿಭಟನೆ, ಮೆರವಣಿಗೆ ನಿಷೇದಿಸಿದ್ದರೂ ಮೈಸೂರು ಜಿಲ್ಲೆಯಿಂದ ಮಂಗಳೂರು ಚಲೋ ಬೈಕ್‌ ರ್ಯಾಲಿಯನ್ನು ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಟಿನರಸೀಪುರ ಠಾಣೆಯಲ್ಲಿ 2017ರ ಸೆಪ್ಟಂಬರ್‌ 6ರಂದು ಎಫ್‌ ಐ ಆರ್‌ ದಾಖಲಾಗಿತ್ತು. ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸಿನ ಅನ್ವಯ ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆದುಕೊಂಡಿತ್ತು.

 

‘ರಾಣೆಬೆನ್ನೂರನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಅಲ್ಲದೇ ತುಘಲಕ್‌ ಆಡಳಿತ ರಾಜ್ಯದಲ್ಲಿ ನಡೆಯುತ್ತಿದೆ. ಹಿಂದೂಗಳೆಲ್ಲ ಒಂದಾಗಬೇಕು, ಡಿಸೆಂಬರ್‌ 6ರಂದು ಮತಾಂಧ ನೊಂದ ಸಮುದಾಯ ಈ ವರ್ಷ ಕರಾಳ ಆಚರಣೆ ಮಾಡುತ್ತಿದ್ದು ನಾವು ಶೌರ್ಯ ದಿನವನ್ನು ಆಚರಣೆ ಮಾಡಬಾರದು. ಹೊನ್ನಾವರದಲ್ಲಿ ಪರೇಶ್‌ ಮೇಸ್ತಾನನ್ನು ಹತ್ಯೆ ಮಾಡಲಾಗಿದೆ. ನಮ್ಮಲ್ಲಿ ಅಂತಹ ಘಟನೆ ಆಗಬಹುದು,’ ಎಂದು ಕೋಮು ಭಾವನೆಗಳನ್ನು ಉದ್ರೇಕಿಸಿ, ಜಾತ್ಯತೀತತೆಗೆ ಧಕ್ಕೆ ತರುವ ರೀತಿಯಲ್ಲಿ, ಧರ್ಮ ಧರ್ಮದ ಮಧ್ಯೆ ಕೋಮು ಭಾವನೆಗಳನ್ನು ಉದ್ರೇಕಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತೆ ಮಾತಾಡಿದ ಅಪರಾಧದ ಮೇಲೆ ಅಜಯ ಗದಿಗೆಯ್ಯ ಸೇರಿದಂತೆ ಇತರರ ವಿರುದ್ಧ 2017ರ ಡಿಸೆಂಬರ್‌ 15ರಂದು ದಾಖಲಾಗಿದ್ದ ಪ್ರಕರಣವನ್ನೂ ಹಿಂಪಡೆದುಕೊಳ್ಳಲಾಗಿತ್ತು.

 

‘ಪರವಾನಿಗೆ ಪಡೆದು ದನ ಮತ್ತು ಹೋರಿಗಳನ್ನು ಸಾಗಿಸುತ್ತಿದ್ದರೂ ದನಗಳನ್ನು ಮಾರಾಟಕ್ಕೆ ಒಯ್ಯುತ್ತೀಯಾ, ನಿನ್ನ ಬಳಿ ಇರುವ ಹಣವನ್ನು ಕೊಡದಿದ್ದರೇ ವಾಹನಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಹೆದರಿಸಿದ್ದ,’ ಎಂಬ ಆರೋಪದ ಮೇರೆಗೆ ಸಾಗರ ತಾಲೂಕಿನ ಪೊಲೀಸ್‌ ಠಾಣೆಯಲ್ಲಿ ಲಕ್ಷ್ಮಿನಾರಾಯಣ ಗಣಪತಿ ಎಂಬುವರು ಸೇರಿದಂತೆ ಒಟ್ಟು 7 ಮಂದಿ ವಿರುದ್ಧ 2018ರ ನವೆಂಬರ್‌ 25ರಂದು ದಾಖಲಾಗಿದ್ದ ಮೊಕದ್ದಮೆಯನ್ನು ವಾಪಸ್‌ ಪಡೆದುಕೊಂಡಿತ್ತು.

 

ಹೊನ್ನಾವರ ಪಟ್ಟಣದಲ್ಲಿ ನಡೆದ ಕೋಮು ಗಲಭೆಯಲ್ಲಿ ಮೃತಪಟ್ಟ ಪರೇಶ ಮೇಸ್ತ ಮತ್ತು ಆತನ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಬಂದ್‌ಗೆಕರೆನೀಡಿ ವಾಟ್ಸಾffನಲ್ಲಿ ಪ್ರಚೋದನಾಕಾರಿ ಸಂದೇಶ ಹರಿಬಿಟ್ಟು ಶಿರಸಿಯಲ್ಲಿ ನಡೆದಿದ್ದ ಗಲಭೆಗೆ ಪ್ರಕರಣ ಸಂಬಂಧ 11 ಮಂದಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂದಿನ ಸರ್ಕಾರವು ಹಿಂಪಡೆದಿತ್ತು.

 

2017ರ ಡಿಸೆಂಬರ್‌ 12ರಂದು ಶಿರಸಿ ಬಂದ್‌ ಮಾಡಿದ್ದ ಸಂದರ್ಭದಲ್ಲಿ ಅಹಲ್ಯೆ ಹದೀಸ್‌ ಜಮಾತಗೆ ಸೇರಿದ ಜಾಮೀಯಾ ಮಸೀದಿಯ ಹತ್ತಿರ ಹೋಗಿ ಅವಾಚ್ಯವಾಗಿ ಬೈದು, ಮಸೀದಿ ಸುಡುತ್ತೇವೆ, ಮುಸಲ್ಮಾನರನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಸುಮಾರು 100ರಿಂದ 150 ರಷ್ಟಿದ್ದ ಉದ್ರಿಕ್ತ ಗುಂಪು ಮಸೀದಿ ಬಾಗಿಲು, ಕಿಟಕಿಗಳಿಗೆ ಸಿಸಿ ಕ್ಯಾಮರಾಕ್ಕೆ ಕಲ್ಲು ಹೊಡೆದು ಧ್ವಂಸ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಪ್ರಕರಣವನ್ನು ವಾಪಸ್‌ ಪಡೆದಿತ್ತು.

SUPPORT THE FILE

Latest News

Related Posts