ಅಂಬುಲೆನ್ಸ್‌ ಖರೀದಿ ಅಕ್ರಮ; 8 ವರ್ಷದ ಹಿಂದಿನ ದೂರಿನ ವಿಚಾರಣೆ, ತನಿಖೆಗೆ ಹಾಜರಾಗಲು ಬಗಲಿಗೆ ನೋಟೀಸ್

ಬೆಂಗಳೂರು;  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2014-15ನೇ ಸಾಲಿನಲ್ಲಿ  ಆರೋಗ್ಯ ಕವಚ 108 ಯೋಜನೆಯಡಿಯಲ್ಲಿ 198 ಅಂಬುಲೆನ್ಸ್ ವಾಹನಗಳ ಖರೀದಿ ಮತ್ತು ಈ ಪ್ರಕ್ರಿಯೆಯಲ್ಲಿ ಸರ್ಕಾರದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರನ್ನಾಧರಿಸಿ ತನಿಖೆ ಕೈಗೊಂಡಿರುವ ಕರ್ನಾಟಕ ಲೋಕಾಯುಕ್ತ ತಾಂತ್ರಿಕ ವಿಭಾಗವು ಈ ಸಂಬಂಧ ದಾಖಲೆಗಳೊಂದಿಗೆ ತನಿಖೆಗೆ ಹಾಜರಾಗಬೇಕು ಎಂದು ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರಿಗೆ ನೋಟೀಸ್‌ ಜಾರಿಗೊಳಿಸಿದೆ.

 

ಇದೇ ಆರೋಗ್ಯ ಕವಚ ಯೋಜನೆಯಡಿಯಲ್ಲಿ ಬಿಜೆಪಿ ಸರ್ಕಾರದ ಕೊನೆಯ ದಿನದಲ್ಲಿಯೂ ಅಂಬುಲೆನ್ಸ್‌ ಖರೀದಿ ಸಂಬಂಧ ಅಕ್ರಮಗಳು ನಡೆದಿವೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನ ವಿಚಾರಣೆಯು ವಿಳಂಬವಾಗಿರುವ ಬೆನ್ನಲ್ಲೇ 2014-15ನೇ ಸಾಲಿನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಆರೋಗ್ಯ ಕವಚ ಯೋಜನೆಯ ಅಂಬುಲೆನ್ಸ್‌ ಖರೀದಿ ಅಕ್ರಮಗಳ ಕುರಿತಾದ ತನಿಖೆ ಸಂಬಂಧ ದೂರುದಾರನಿಗೆ ನೀಡಿರುವ ನೋಟೀಸ್‌ ಮುನ್ನೆಲೆಗೆ ಬಂದಿದೆ.

 

ವಿಶೇಷವೆಂದರೆ 2014-15ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಇದೇ ಅವಧಿಯಲ್ಲಿ ಅಂಬುಲೆನ್ಸ್‌ ಖರೀದಿಯಲ್ಲಿ ಅಕ್ರಮಗಳು ನಡೆದಿದ್ದವು ಎಂದು ದೂರು ದಾಖಲಾಗಿತ್ತು. ಪ್ರಸ್ತುತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸಿರುವ ಮಧ್ಯೆಯೇ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತಾಗಿ ಲೋಕಾಯುಕ್ತದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಹತ್ವ ಬಂದಂತಾಗಿದೆ.

 

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಕವಚ 108 ಯೋಜನೆಯಡಿಯಲ್ಲಿ 198 ಅಂಬುಲೆನ್ಸ್‌ ವಾಹನಗಳನ್ನು ಖರೀದಿಸಿ ಅದಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಉಪಕರಣಗಳ ಅಳವಡಿಕೆ ಇತ್ಯಾಧಿಯಾಗಿ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಪಿ ಎಸ್‌ ವಸ್ತ್ರದ್‌ ಅವರೂ ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಬಿಜೆಪಿ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ  (lok/bcd/1693/20/are-3, lok/inv (t)elfe-130/2023/as-2)ದೂರು ದಾಖಲಿಸಿದ್ದರು.

 

 

ಆರೋಗ್ಯ ಕವಚ ಯೋಜನೆಯಡಿಯಲ್ಲಿ 198 ಅಂಬುಲೆನ್ಸ್‌ ವಾಹನಗಳನ್ನು ಖರೀದಿಸಿ ಅದಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಉಪಕರಣಗಳ ಅಳವಡಿಕೆಗೆ ಹೆಚಚಿನ ದರದಲ್ಲಿ ಉಪಕರಣಗಳನ್ನು ಖರೀದಿಸಿರುವುದು ವಾರಂಟಿ ಅವಧಿಯಲ್ಲಿ ಅನಾವಶ್ಯಕವಾಗಿ ಸಿಎಂಸಿ ಮೊತ್ತವನ್ನು ಪಾವತಿಸಿರುವುದು ಹಾಗೂ ಸರಬರಾಜಾದ ಉಪಕರಣಗಳು ಟೆಂಡರ್‍‌ ಅಗ್ರಿಮೆಂಟ್‌ ವಿವರಗಳ ಪ್ರಕಾರ ಇಲ್ಲ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

 

 

ಅಂದಿನ ಆಯುಕ್ತ ವಸ್ತ್ರದ್‌, ಕರ್ನಾಟಕ ವಿದ್ಯುತ್‌ ನಿಗಮದ ನಿರ್ದೇಶಕರಾದ   ಪ್ರಭುಲಿಂಗ ಕವಳಿಕಟ್ಟೆ, ರೇಷ್ಮೆ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಗಳಾದ ಶೋಭಾ ಟಿ ಆರ್‍‌, ಕೆಹೆಚ್‌ಡಿಎಸ್‌ಡಿಆರ್‍‌ಪಿ ಮುಖ್ಯ ಆಡಳಿತಾಧಿಕಾರಿ ಜ್ಞಾನೇಶ್‌, ರಾಜ್ಯ ರಕ್ತ ಕೋಶದ ಸೇವಾ ಅಭಿಯಂತರರಾದ ಶಿವಕುಮಾರ್‍‌, ಜಿವಿಕೆ ಫ್ಲೀಟ್‌ ಮ್ಯಾನೇಜರ್‍‌ ವಿ ವಿ ಶೇಷಾದ್ರಿ ಸೇರಿ ಒಟ್ಟು 10 ಮಂದಿ ವಿರುದ್ಧ ದೂರು ಸಲ್ಲಿಸಿದ್ದರು.

 

ಈ ಕುರಿತು 2023ರ ಜುಲೈ 25 ಮತ್ತು ಜುಲೈ 26ರಂದು ನಡೆಯಲಿರುವ ತನಿಖೆಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ತನಿಖಾ ಸಮಯದಲ್ಲಿ ಖುದ್ದು ಹಾಜರಿದ್ದು ತನಿಖೆಗೆ ಸಹಕರಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ತಾಂತ್ರಿಕ ವಿಭಾಗದ ಮುಖ್ಯ ಅಭಿಯಂತರರು ನೋಟೀಸ್‌ ಜಾರಿಗೊಳಿಸಿದ್ದಾರೆ.

 

ಶೈಕ್ಷಣಿಕ ಸೇವೆಗಳನ್ನು ಒದಗಿಸುವ ಹಿನ್ನೆಲೆ ಹೊಂದಿರುವ ಖಾಸಗಿ ಕಂಪನಿಯೊಂದಕ್ಕೆ 1,260 ಕೋಟಿ ರು ಮೊತ್ತದ 108 ಆರೋಗ್ಯ ಕವಚ ಆಂಬ್ಯುಲೆನ್ಸ್‌ ಸೇವೆ ಪಡೆಯಲು ಟೆಂಡರ್‍‌ ನೀಡಲು ಸಿದ್ಧತೆ ನಡೆಸಿದೆ ಮತ್ತು ಸದಾಶಿವನಗರದಲ್ಲಿರುವ ಸಚಿವರೊಬ್ಬರ ನಿವಾಸದ ನೆಲಮಹಡಿಯ ಕೊಠಡಿಯಲ್ಲಿ ಲಂಚದ ಹಣವನ್ನು ಖಾಸಗಿ ಕಂಪನಿಯೊಂದರಿಂದ ಉಪ ನಿರ್ದೇಶಕರೊಬ್ಬರು ಸ್ವೀಕರಿಸಿದ್ದಾರೆ ಎಂಬ ಆರೋಪ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ  ವರದಿ ಬೆನ್ನಲ್ಲೇ  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ವಕ್ತಾರ ಹಾಗೂ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

 

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಶಾಖೆಯ ಉಪನಿರ್ದೇಶಕ ಡಾ. ಆರ್.ನಾರಾಯಣ್ ಎಂಬುವವರು ಈ ಹಗರಣದಲ್ಲಿ ಮಧ್ಯವರ್ತಿಗಳಾಗಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿರುವುದಿಲ್ಲ. ಚುನಾವಣಾ ಸಮಯದಲ್ಲಿ ತರಾತುರಿಯಲ್ಲಿ ನಿಯಮಗಳ ಉಲ್ಲಂಘನೆ ಮಾಡಿ ಟೆಂಡರ್ ಹಂಚಿಕೆ ಮಾಡಿರುವ ಕ್ರಮದ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿದಿದೆ ಎಂದು ರಮೇಶ್‌ ಬಾಬು ಅವರು ದೂರಿದ್ದರು.

 

 

ಡಾ ಆರ್‍‌ ನಾರಾಯಣ್‌ ಎಂಬುವರು ಮಧ್ಯವರ್ತಿಗಳಗಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಈ ಸಂಬಂಧ ಡಾ ನಾರಾಯಣ್‌ ಅವರು ಹಣ ಪಡೆದಿದ್ದಾರೆ ಎಂಬುವುದಕ್ಕೆ ಸಾಕ್ಷ್ಯವಾಗಿ ಕೆಲ ಫೋಟೋಗಳನ್ನೂ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನೊಂದಿಗೇ ಸಲ್ಲಿಸಿದ್ದರು.

 

 

ಈ ದೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್‍‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ ಕೆ ಅನಿಲ್‌ಕುಮಾರ್‍‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ ನವೀನ್‌ ಭಟ್‌, ಇಲಾಖೆಯ ಆಯುಕ್ತ ಡಿ ರಂದೀಪ್‌ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಪ ನಿರ್ದೇಶಕ (ಇಎಂಆರ್‍ಐ)ನ ಡಾ ನಾರಾಯಣ್‌ ಅವರನ್ನು ಪ್ರತಿವಾದಿಯನ್ನಾಗಿಸಿದ್ದರು.

 

 

‘ಬಹಳ ಪ್ರಮುಖವಾಗಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಮಧ್ಯವರ್ತಿಯಾಗಿ ಸಚಿವರ ಪರವಾಗಿ ಅವರ ಮನೆಯಲ್ಲೇ ಹಣ ಪಡೆದಿರುವ ಅನುಮಾನಗಳಿರುತ್ತವೆ. ಕರ್ನಾಟಕ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ಬೆಂಗಳೂರಿನ ಕ್ರೈಂ ಬ್ರಾಂಚ್ ನವರಿಗೂ ಈ ಹಗರಣ ಸಂಬಂಧ ಮಾಹಿತಿ ಇರುವುದಾಗಿ ತಿಳಿದುಬಂದಿರುತ್ತದೆ. ಆದರೆ ಇಲ್ಲಿಯವರೆಗೆ ಪ್ರಕರಣದ ಆರೋಪಿತರ ಮೇಲೆ ಯಾವುದೇ ಕ್ರಮ ಜರುಗಿರುವುದಿಲ್ಲ,’ ಎಂದು ರಮೇಶ್‌ಬಾಬು ಅವರು ದೂರಿನಲ್ಲಿ ಆಪಾದಿಸಿದ್ದರು.

 

 

ಹಾಗೆಯೇ “ಈ ಟೆಂಡರ್ ಹಗರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗಿಯಾಗಿರುವ ಆರೋಪದ ಸಂಬಂಧ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಮೀರಿ ಟೆಂಡರ್ ಹಂಚಿಕೆಯಾಗಿರುವ ಸಂಬಂಧ ಮಾನ್ಯ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ತನಿಖೆಯನ್ನು ಮಾಡಬೇಕಾಗಿರುತ್ತದೆ,’ ಎಂದೂ ದೂರಿನಲ್ಲಿ ಒತ್ತಾಯಿಸಿದ್ದರು.

 

ಕರ್ನಾಟಕದಲ್ಲಿ 10 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಟೆಂಡರ್ ಅಂಗೀಕಾರ ಆಗಬೇಕಾದಲ್ಲಿ ಅದು ಸಂಪುಟ ಸಭೆಯ ಮೂಲಕ ಅನುಮೋದನೆ ಆಗಬೇಕು. ಇದರ ಜೊತೆಗೆ ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಬಿಡ್ ದಾರರ ಟೆಂಡರ್ ಗಳು ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ರಾಜ್ಯ ಸರ್ಕಾರದ ಹೊಸ ನೀತಿಗೆ ಅನುಗುಣವಾಗಿ ಟೆಂಡರ್ ಅನುಮೋದನೆ ಸಮಿತಿಯಿಂದಲೂ ಅನುಮೋದನೆ ಪಡೆಯಬೇಕಾಗುತ್ತದೆ.

 

ಆದರೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೋರಿ ಚುನಾವಣಾ ಪೂರ್ವದಲ್ಲಿ ಟೆಂಡರ್ ಅನುಮೋದನೆ ಮಾಡಿರುವುದು ಹಲವಾರು ಅನುಮಾನಗಳಿಗೆ ಅವಕಾಶ ನೀಡುತ್ತದೆ. ಸದರಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದ್ದು, ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಇಲಾಖೆಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಗಳಿರುತ್ತವೆ ಎಂದು ವಿವರಿಸಿದ್ದರು.

 

ಸಾರ್ವಜನಿಕ ಹಣದ ಸಂರಕ್ಷಣೆಯನ್ನು ರಾಜ್ಯ ಸರ್ಕಾರವೇ ಮಾಡಬೇಕಾಗಿದ್ದು, ಈ ಹಗರಣದಲ್ಲಿ ಆಡಳಿತ ಪಕ್ಷ ಅಕ್ರಮ ರೀತಿಯಲ್ಲಿ ಆತುರ ಆತುರವಾಗಿ ಟೆಂಡರ್ ಗೆ ಅನುಮೋದನೆ ನೀಡುವ ಮೂಲಕ ಭ್ರಷ್ಟಾಚಾರದ ಆರೋಪಗಳಿಗೆ ಅವಕಾಶವನ್ನು ನೀಡಿದಂತಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

 

ರಾಜ್ಯದ ಹಿತದೃಷ್ಟಿಯಿಂದ ಮತ್ತು ಅಗತ್ಯ ಸೇವೆಯಾದ ಆರೋಗ್ಯ ಇಲಾಖೆಯ ಆಂಬುಲೆನ್ಸ್ ಸೇವೆಯನ್ನು ಯಾವುದೇ ಹಗರಣಗಳಿಗೆ ಆಸ್ಪದ ನೀಡದಂತೆ ಜನರಿಗೆ ನೀಡುವ ಕಾರಣಕ್ಕಾಗಿ ಮಾನ್ಯ ಲೋಕಾಯುಕ್ತರು ಪಾರದರ್ಶಕ ತನಿಖೆ ನಡೆಸಿ ಈ ಹಗರಣದಲ್ಲಿ ನಡೆದಿರುವ ಅಕ್ರಮಗಳನ್ನು ಬಯಲಿಗೆಳೆಯಬೇಕು ಎಂದು ದೂರಿನಲ್ಲಿ ರಮೇಶ್‌ ಬಾಬು ಅವರು ಒತ್ತಾಯಿಸಿದ್ದರು.

 

ಕರ್ನಾಟಕ ವಿಧಾನಸಭೆಗೆ ಮತದಾನಕ್ಕೆ ಇನ್ನು ಐದೇ ಐದು ದಿನಗಳು ಬಾಕಿ ಇರುವಾಗಲೇ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಖಾಸಗಿ ಕಂಪನಿಯೊಂದರಿಂದ ದೊಡ್ಡಮಟ್ಟದ ಲಂಚದ ವ್ಯವಹಾರ ನಡೆದಿದೆ ಎಂಬ ಆಪಾದನೆಗೂ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಪ್ರಭಾವಿ ಸಚಿವರೊಬ್ಬರು ಗುರಿಯಾಗಿದ್ದಾರೆ. ಈ ಸಂಬಂಧ ಖಾಸಗಿ ಸಂಸ್ಥೆಯೊಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿತ್ತು ಎಂದು ಗೊತ್ತಾಗಿದೆ. ಈ ಕುರಿತು ‘ದಿ ಫೈಲ್‌’ 2023ರ ಮೇ 6ರಂದೇ ವರದಿ ಪ್ರಕಟಿಸಿತ್ತು.

 

ಆಂಬ್ಯುಲೆನ್ಸ್; ಶೈಕ್ಷಣಿಕ ಹಿನ್ನೆಲೆ ಕಂಪನಿಗೆ 1,260 ಕೋಟಿ ಮೊತ್ತದ ಟೆಂಡರ್‌,100 ಕೋಟಿ ಲಂಚದ ಆರೋಪ

 

ಅಲ್ಲದೇ ಸಚಿವರೊಬ್ಬರಿಗೆ 100 ಕೋಟಿ ರು., ಇಲಾಖೆಯ ಉನ್ನತ ಅಧಿಕಾರಿಗಳಿಗೆ 10 ಕೋಟಿ, ಉಪ ನಿರ್ದೇಶಕರೊಬ್ಬರಿಗೆ 10 ಕೋಟಿ ಮತ್ತು ಸಮಿತಿಯ ಸದಸ್ಯರುಗಳಿಗೂ 1 ಕೋಟಿ ಲಂಚ ನೀಡಲಾಗಿದೆ. ಲಂಚದ ಹಣವನ್ನು ಪಡೆಯುವಾಗ ಉಪ ನಿರ್ದೇಶಕರೊಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆಯಲ್ಲದೆ ಹಣವನ್ನು ಪಡೆದು ಬ್ಯಾಗ್‌ನಲ್ಲಿ ಇರಿಸುತ್ತಿರುವ ಫೋಟೋಗಳನ್ನೂ ಲಗತ್ತಿಸಲಾಗಿತ್ತು ಎಂದು ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts