ಹುದ್ದೆಗಳ ಬ್ಲಾಕಿಂಗ್‌; ಒಂದೇ ದಿನದಲ್ಲಿ ಸಮಿತಿ ರಚಿಸಿ, ಅದೇ ದಿನದಂದು ಏಕಪಕ್ಷೀಯ ವರದಿ ಪಡೆದ ಇಲಾಖೆ

ಬೆಂಗಳೂರು; ತಮಗೆ ಬೇಕಾದ ಅಧಿಕಾರಿ, ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡುವ ಮೂಲಕ ಬೇರೆ ಯಾವ ಅಧಿಕಾರಿ, ನೌಕರರೂ ಆ ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸದಂತೆ ಜಾಲ ಹೆಣೆಯಲಾಗಿದೆ ಮತ್ತು  ತಂತ್ರಾಂಶವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು  ಆಕ್ಷೇಪ ವ್ಯಕ್ತಪಡಿಸಿ  ಇಲಾಖೆಯ ಮುಂಚೂಣಿ  ಅಧಿಕಾರಿ ನೌಕರರು ಮಾಡಿದ್ದ ಆರೋಪ ಕುರಿತಂತೆ ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಆಧರಿಸಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಒಂದೇ ದಿನದಲ್ಲಿ ಸಮಿತಿ ರಚಿಸಿ, ಅದೇ ದಿನದಂದು ಸಮಿತಿಯಿಂದ ವರದಿಯನ್ನೂ ಪಡೆದಿದೆ.

 

ಆರೋಪ ಕುರಿತು ಇಬ್ಬರು ಐಎಫ್‌ಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿತ್ತಾದರೂ ಈ ಸಮಿತಿಯು ಏಕಪಕ್ಷೀಯವಾಗಿ ವರದಿಯನ್ನು ನೀಡಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಆರೋಪ ಮಾಡಿದ್ದ ಅರಣ್ಯ ಇಲಾಖೆಯ ಮುಂಚೂಣಿ ಅಧಿಕಾರಿ, ಸಿಬ್ಬಂದಿ ಮತ್ತು ಬಾಧಿತರನ್ನು ವಿಚಾರಣೆ, ಮಾಹಿತಿಯನ್ನೂ ಪಡೆಯದೇ ಸಮಿತಿಯು ತಮ್ಮ ಹಂತದಲ್ಲಿಯೇ ತರಾತುರಿಯಲ್ಲಿ ವರದಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ತಂತ್ರಾಂಶಗಳ ದುರುಪಯೋಗ ಮತ್ತು ವರ್ಗಾವಣೆಯ ಲೋಪದೋಷಗಳ ಕುರಿತಂತೆ  8 ಪುಟಗಳ ವರದಿಯಲ್ಲಿ  ಸುದೀರ್ಘವಾಗಿ ಸ್ಪಷ್ಟೀಕರಣ ನೀಡಿರುವ ಸಮಿತಿಯು ಯಾರೊಬ್ಬರಿಂದಲೂ ಮಾಹಿತಿಯನ್ನೂ ಪಡೆದಿಲ್ಲ. ಮತ್ತೊಂದು ವಿಶೇಷವೆಂದರೆ ಯಾವ ವಿಭಾಗದಲ್ಲಿ ದುರುಪಯೋಗವಾಗಿದೆ ಎಂಬ ಆರೋಪ ಕೇಳಿ ಬಂದಿತ್ತೋ ಅದೇ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿಯೇ ಸಮಿತಿ ರಚಿಸಿರುವುದು. ಈ ಇಬ್ಬರ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇ ಸರಿಯಾದ ಕ್ರಮವಲ್ಲ ಎಂದು ಬಾಧಿತ ಅಧಿಕಾರಿ ನೌಕರರು ಆಕ್ಷೇಪಣೆ ಎತ್ತಿದ್ದಾರೆ.

 

‘ಒಂದೇ ದಿನದಲ್ಲಿ ಸಮಿತಿ ರಚಿಸಿ, ವಿಚಾರಣೆಯನ್ನೇ ನಡೆಸದೇ ಏಕಪಕ್ಷೀಯವಾಗಿ ವರದಿ ಸಲ್ಲಿಸಿರುವುದೇ ಸಾಕ್ಷೀಕರಿಸುತ್ತದೆ ಅಧಿಕಾರಿಗಳು ಮುಂಚೂಣಿ ಸಿಬ್ಬಂದಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.  ಮುಂಚೂಣಿ ಸಿಬ್ಬಂದಿಗಳ ಮನವಿ, ಕಷ್ಟ-ಸುಖಗಳಿಗೆ ಸ್ಪಂದಿಸಲು ಮಾನ್ಯ ಸಚಿವರ ಮತ್ತು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು,’ ಎಂದು ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ‌ ವೀಕ್ಷಕರ ಸಂಘದ ರಾಜ್ಯಾಧ್ಯಕ್ಷ ವಿಠಲ ಜೋನಿ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ತಂತ್ರಾಂಶ ದುರುಪಯೋಗ ಕುರಿತು ಇಲಾಖೆಯು ನೀಡಿರುವ ಸ್ಪಷ್ಟೀಕರಣ

 

ನಿಯಮಗಳ ಅನ್ವಯ ಅಗತ್ಯವಿರುವ ತಂತ್ರಾಂಶ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಇಲಾಖೆಯು ಕ್ರಮ ಕೈಗೊಂಡಿದೆ. 2022-23ನೇ ಸಾಲಿನ ಕಂಟಿಂಜೆಂಟ್‌ ಸ್ಥಳ ನಿಯುಕ್ತ ಅಡಿ ಒಟ್ಟು 313 ಉಪ ವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕ ವೃಂದಲ್ಲಿನ ಸಿಬ್ಬಂದಿಗಳಿಗೆ ಸಮಾಲೋಚನೆ ಮೂಲಕ ಯಶಸ್ವಿಯಾಗಿ ಸ್ಥಳ ನಿಯುಕ್ತಿ ಮಾಡಲಾಗಿರುತ್ತದೆ. 2023ರ ಮಾರ್ಚ್‌ 28ರಿಂದ 2023ರ ಮೇ 14ರವರೆಗೆ ಚಾಲ್ತಿಯಲ್ಲಿದ್ದ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ 2023-24ನೇ ಸಾಲಿನಲ್ಲಿ ಸಾಮಾನ್ಯ ವರ್ಗಾವಣೆ, ಸ್ಥಳ ನಿಯುಕ್ತಿ ಹಾಗೂ ಕಂಟಿಂಜೆಂಟ್‌ ವರ್ಗಾವಣೆ, ಸ್ಥಳ ನಿಯುಕ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

 

ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ವರ್ಗಾವಣೆ, ಸ್ಥಳ ನಿಯುಕ್ತಿಯನ್ನು ಸಮಾಲೋಚನೆ ಪ್ರಕ್ರಿಯೆ ಮೂಲಕ ಸಂಪೂರ್ಣ ಪಾರದರ್ಶಕತೆಯಿಂದ ನಿರ್ವಹಿಸಲಾಗುತ್ತಿದೆ. ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಅಭಿವೃದ್ಧಿ ಪಡಿಸಲಾಗಿರುವ ತಂತ್ರಾಂಶವನ್ನು ಕಾಯ್ದೆ ಮತ್ತು ನಿಯಮಗಳಲ್ಲಿನ ಅವಕಾಶ ಮತ್ತು ನಿಯಂತ್ರಣಗಳಿಗನ್ವಯ ರೂಪಿಸಲಾಗಿರುತ್ತದೆ. ತಂತ್ರಾಂಶದಲ್ಲಿ ನಿಯಂತ್ರಣಾಧಿಕಾರಿಗಳ ಮೂಲಕ ಸಿಬ್ಬಂದಿಗಳ ವೈಯಕ್ತಿಕ ಮತ್ತು ಸೇವಾ ವಿವರಗಳನ್ನು ದಾಖಲಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.

 

ಎಲ್ಲಾ ಹುದ್ದೆಗಳ (ಖಾಲಿ ಹುದ್ದೆ/ಲಭ್ಯ ಹುದ್ದೆ/ಭರಿಸಲ್ಪಟ್ಟ ಇತರೆ ಹುದ್ದೆಗಳು/ ಮತ್ತು ಭರಿಸಲ್ಪಟ್ಟ ಹುದ್ದೆಗಳಲ್ಲಿ ನಿಯುಕ್ತರಾಗಿರುವ ಸಿಬ್ಬಂದಿಗಳ ಸಂಪೂರ್ಣ ಪಟ್ಟಿಯನ್ನು ಆಯಾ ವೃತ್ತಗಳ ಸಕ್ಷಮ ವೃತ್ತ ಪ್ರಾಧಿಕಾರರವರಿಂದ ಪರಿಶೀಲನೆಗೆ ಒಳಪಡಿಸಿ ಪ್ರಕಟಿಸಲಾಗಿರುತ್ತದೆ. ಈತನ್ಮಧ್ಯೆ ಪ್ರಕಟಿಸಲಾದ ಹುದ್ದೆಗಳ ವಿವರಗಳಲ್ಲಿ ಸಿಬ್ಬಂದಿಗಳ ಮಾಹಿತಿಯಲ್ಲಿ ಯಾವುದೇ ನ್ಯೂನತೆಗಳಲ್ಲಿದ್ದಲ್ಲಿ ಸಿಬ್ಬಂದಿಗಳು ಅವುಗಳನ್ನು ಆಯಾ ವೃತ್ತಗಳ ವೃತ್ತ ಪ್ರಾಧಿಕಾರಗಳ ಗಮನಕ್ಕೆ ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿರುತ್ತದೆ. ಖಾಲಿ ಮತ್ತು ಲಭ್ಯವಿರುವ ಹುದ್ದೆಗಳ ಪಲೈಕಿ ಸೂಕ್ಷ್ಮ ಹುದ್ದೆಗಳನ್ನು ಸಕ್ಷಮ ಪ್ರಾಧಿಕಾರವರ ಮೂಲಕ ಗುರುತಿಸಿ ಅವುಗಳನ್ನು ಕೂಡ ಪ್ರಕಟಿಸಲಾಗಿರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಪ್ರಸಕ್ತ ಸಾಲಿನ ಅನಿಶ್ಚಿತ ಸ್ಥಳ ನಿಯುಕ್ತಿ ಪ್ರಕ್ರಿಯೆಯಲ್ಲಿ ಪದನ್ನೋತಿ/ಬಡ್ತಿ ಹೊಂದಿದ ಮುಂಚೂಣಿ ಸಿಬ್ಬಂದಿಗಳ ಸ್ಥಳ ನಿಯುಕ್ತಿಗಾಗಿ ವಿವಿಧ ಕಾರಣಳಿಂದಾಗಿ ಕಡ್ಡಾಯ ಸ್ಥಳ ನಿರೀಕ್ಷಣೆಯಲ್ಲಿದ್ದ ಸಿಬ್ಬಂದಿಗಳ ಸ್ಥಳ ನಿಯುಕ್ತಿಗಾಗಿ ಅನುಕಂಪದ ಆಧಾರದಲ್ಲಿ ಇಲಾಖೆಗೆ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳ ಸ್ಥಳ ನಿಯುಕ್ತಿಗಳನ್ನು ಒಳಗೊಂಡ ಪ್ರಕರಣಗಳಿಗೆ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅನಿಶ್ಚಿತ ವರ್ಗಾವಣೆ, ಸ್ಥಳ ನಿಯುಕ್ತಿಗಾಗಿ ಅರ್ಹ ಸಿಬ್ಬಂದಿಗಳನ್ನು ಮಾತ್ರವೇ ಪರಿಗಣಿಸಲಾಗಿದ್ದು ಕಾಯ್ದೆ ಮತ್ತು ನಿಯಮಗಳಿನ್ವಯ ಆಸ್ಪದನ್ವಯ ಇವರಿಂದ ಸ್ಥಳ ನಿಯುಕ್ತಿಗಾಗಿ ಖಾಲಿ ಹುದ್ದೆಗಳನ್ನು ಆಯ್ಕೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. ಈ ರೀತಿಯ ಖಾಲಿ ಹುದ್ದೆಗಳ ಪಟ್ಟಿಯು ತಂತ್ರಾಂಶದಲ್ಲಿ ತರ್ಕಬದ್ಧವಾಗಿ ಸ್ವಯಂ ಪಟ್ಟಿಗೊಂಡಿದ್ದು ಅವುಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿರುತ್ತದೆ. ಈ ರೀತಿ ತಂತ್ರಾಂಶದ ಮೂಲಕ ಪಡೆಯಲಾದ ಪಟ್ಟಿಯಲ್ಲಿರುವ ಯಾವುದೇ ಖಾಲಿ ಹುದ್ದೆಗಳನ್ನು ಬ್ಲಾಕ್‌ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಇದೇ ರೀತಿ ಕಾಯ್ದೆ ಮತ್ತು ನಿಯಮಗಳಲ್ಲಿ ಹೇಳಿರುವಂತೆ ವಿವಿಧ ವೃಂದಗಳಿಗೆ ನಿಗದಿಪಡಿಸಿರುವ ಅವಧಿ ಪೂರ್ಣಗೊಳಿಸಿರುವ ಸಿಬ್ಬಂದಿಗಳನ್ನು ಮೂರು ವರ್ಷದ ಅಧಿಕಾರವಾಧಿ ಪೂರ್ಣಗೊಳಿಸಿದ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರರು, ನಾಲ್ಕು ವರ್ಷದ ಅಧಿಕಾರವಾಧಿ ಪೂರ್ಣಗೊಳಿಸಿದ ಅರಣ್ಯ ವೀಕ್ಷಕರು ಮತ್ತು ಅರಣ್ಯ ಸಂಚಾರಿ ದಳ, ತನಿಖಾ ಠಾಣೆ, ಜಾಗೃತ ದಳದ ಹುದ್ದೆಗಳಲ್ಲಿ ಎರಡು ವರ್ಷ ಸೇವಾವಧಿ ಪೂರ್ಣಗೊಳಿಸಿರುವ ಸಿಬ್ಬಂದಿಗಳು ಪ್ರಸ್ತುತ ನಿಯುಕ್ತರಾಗಿರುವ ಹುದ್ದೆಗಳಲ್ಲಿನ ಸೇವಾವಧಿಯ ಅವರೋಹಣಾ ಕ್ರಮದಲ್ಲಿ ಪಟ್ಟಿ ಮಾಡಿ ನಿಯಮಗಳಲ್ಲಿ ತಿಳಿಸಿರುವಂತೆ ಅಪೆಕ್ಸ್‌ ಪ್ರಾಧಿಕಾರವು ನಿಗದಿಪಡಿಸಿರುವ ವರ್ಗಾವಣೆ ಪ್ರಮಾಣವನ್ನು ಲಾಗುಪಡಿಸಿ ಈ ಪ್ರಮಾಣದೊಳಗೆ ಒಳಪಟ್ಟ ಸಿಬ್ಬಂದಿಳನ್ನು ಮಾತ್ರ ಸಾಮಾನ್ಯ ವರ್ಗಾವಣೆಗೆ ಆಯ್ಕೆಯಾದ ಸಿಬ್ಬಂದಿಗಳೆಂದು ಪರಿಗಣಿಸಲಾಗಿದೆ.

 

ವರ್ಗಾವಣೆಗೆ ಅರ್ಹರಿರುವ ಸಿಬ್ಬಂದಿಗಳ ಪಟ್ಟಿ ಮತ್ತು ಮೇಲೆ ವಿವರಿಸಿರುವ ಪದ್ಧತಿಯಲ್ಲಿ ಸಾಮಾನ್ಯ ವರ್ಗಾವಣೆಯಡಿ ಪರಿಗಣಿಸಲ್ಪಡುವ ಸಿಬ್ಬಂದಿಗಳ ಪಟ್ಟಿ ಮತ್ತು ಭರಿಸಲ್ಪಡುವ ಹುದ್ದೆಗಳ ಪಟ್ಟಿ ಈ ಎಲ್ಲಾ ಪಟ್ಟಿಗಳು ತಂತ್ರಾಂಶದಲ್ಲಿ ತರ್ಕ ಬದ್ಧವಾಗಿ ಸ್ವಯಂ ಸಿದ್ಧಗೊಳ್ಳುವುದಾಗಿರುತತದೆ. ಅಲ್ಲದೇ ಈ ಪಟ್ಟಿಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದ್ದು ಈ ಪಟ್ಟಿಗಳಲ್ಲಿ ಯಾವುದೇ ನ್ಯೂನತೆಗಳಿದ್ದಲ್ಲಿ ಅವುಗಳನ್ನ ಸಕ್ಷಮ ವೃತ್ತ ಪ್ರಾಧಿಕಾರದ ಗಮನಕ್ಕೆ ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ರೀತಿ ತಂತ್ರಾಂಶದಲ್ಲಿ ತರ್ಕ ಬದ್ಧವಾಗಿ ಸ್ವಯಂ ಸಿದ್ಧಗೊಳ್ಳುವ ಪಟ್ಟಿಗಳಲ್ಲಿನ ಯಾವುದೇ ಹುದ್ದೆಯನ್ನು ಬ್ಲಾಕ್‌ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ಬೇಕಾದ ಅಧಿಕಾರಿ, ನೌಕರರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡುವ ಮೂಲಕ ಬೇರೆ ಯಾವು ಅಧಿಕಾರಿ, ನೌಕರರು ಆ ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸದಂತೆ ಜಾಲ ಹೆಣೆಯಲಾಗಿರುತ್ತದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿರುವುದಿಲ್ಲ ಮತತು ಸತ್ಯಕ್ಕೆ ದೂರವಾಗಿದೆ ಎಂದು ಅರೋಪವನ್ನು ತಳ್ಳಿ ಹಾಕಿದೆ.

 

‘ಆದಾಗ್ಯೂ ಯಾವುದೇ ಒಂದು ನಿರ್ದಿಷ್ಟ ಹುದ್ದೆ/ ಹುದ್ದೆಗಳು ಸೇರ್ಪಡೆಗೊಂಡಿಲ್ಲದಿದ್ದಲ್ಲಿ ಸಿಬ್ಬಂದಿಗಳು ಸಂಬಂಧಿಸಿದ ವೃತ್ತ ಪ್ರಾಧಿಕಾರಗಳ ಗಮನಕ್ಕೆ ಸಲ್ಲಿಸಿದಲ್ಲಿ ಅವುಗಳನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಅಲ್ಲದೆ ಯಾವುದೇ ಸಿಬ್ಬಂದಿ ಸಾಮಾನ್ಯ ವರ್ಗಾವಣೆಗೆ ಪಟ್ಟಿ ಮಾಡಲ್ಪಟ್ಟ ಸಿಬ್ಬಂದಿಯಾಗಿದ್ದಲ್ಲಿ ಸದರಿ ಸಿಬ್ಬಂದಿಯು ಸೂಕ್ಷ್ಮ ಹುದ್ದೆಯಲ್ಲಿ ಹಾಲಿ ನಿಯುಕ್ತಿ ಹೊಂದಿದ್ದರೂ ಕೂಡ ಅವರನ್ನುಕಡ್ಡಾಯವಾಗಿ ವರ್ಗಾವಣೆಗೆ ಪರಿಗಣಿಸಲಾಗವುದು. ಹುfದೆಯ ಸೂಕ್ಷ್ಮತೆಯನ್ನು ಬದಲಾಯಿಸಿ ಸದರಿ ಹುದ್ದೆಯಲ್ಲಿಯೇ ಕೆಲವು ಸಿಬ್ಬಂದಿಳನ್ನು ಮುಂದುವರೆಸಲು ಹುನ್ನಾರ ಮಾಡಲಾಗುತ್ತಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದ್ದು ಸದರಿ ಆರೋಪದಲ್ಲಿ ಯಾವುದೇ ಹುರುಳಿರುವುದಿಲ್ಲ.ಈ ರೀತಿಯ ನಿರಾಧಾರ ಮತ್ತು ನಿರ್ದಿಷ್ಟವಲ್ಲದ ಆರೋಪಗಳು ಅರಣ್ಯ ಇಲಾಖೆಯಲ್ಲಿ ಸಮಾಲೋಚನೆ ಮೂಲಕ ಕೈಗೊಳ್ಳಬೇಕಿರುವ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಾಗಿ ಅನುಷ್ಠಾನಗೊಳಿಸಲಾಗುತ್ತಿರುವ ಪಾರದರ್ಶಕ ಪ್ರಕ್ರಿಯೆಯನ್ನು ತಡೆಯಲು ಹಾಗೂ ದಿಕ್ಕುತಪ್ಪಿಸಲು ಮಾಡಲಾಗಿರುವ ಪ್ರಯತ್ನವಾಗಿರುತ್ತದೆ.  ,’ ಎಂದು ಸಮಿತಿಯು ವರದಿಯಲ್ಲಿ ವಿವರಿಸಿದೆ.

 

ಕರ್ನಾಟಕ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ವೃಂದಗಳಾದ ಉಪ ವಲಯ ಅರಣ್ಯಾಧಿಕಾರಿಗಳ-ಕಂ-ಮೋಜಣಿದಾರ, ಅರಣ್ಯ ರಕ್ಷಕ (ಪ್ರಸ್ತುತ ಗಸ್ತು ವನಪಾಲಕ) ಮತ್ತು ಅರಣ್ಯ ವೀಕ್ಷಕ ವೃಂದಲ್ಲಿನ ಎಲ್ಲಾ ವರ್ಗಾವಣೆ/ಸ್ಥಳ ನಿಯುಕ್ತಿಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು ಮತ್ತು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಮಾವಳಿ 2019ರಡಿ ಸೂಚಿಸುವ ವಿಧಾನ ಎಂದರೆ ಸಮಾಲೋಚನೆ (ಕೌನ್ಸಲಿಂಗ್‌) ಮೂಲಕ ಮಾತ್ರ ಕೈಗೊಳ್ಳಲು ಅವಕಾಶವಿರುತ್ತದೆ.

ಈ ನಿಯಮಗಳಿಗೆ ಅನ್ವಯ ಪ್ರತಿಯೊಂದು ವರ್ಷದಲ್ಲಿ ಒಂದು ಬಾರಿ ಸಾಮಾನ್ಯ ವರ್ಗಾವಣೆ/ಸ್ಥಳ ನಿಯುಕ್ತಿ ಹಾಗೂ ವರ್ಷದ ಪ್ರತಿಯೊಂದು ತ್ರೈಮಾಸಿಕದಲ್ಲಿ ಒಂದು ಬಾರಿ (ಅಂದರೆ ವರ್ಷದಲ್ಲಿ ಒಟ್ಟು ನಾಲ್ಕು ಬಾರಿ) ಕಂಟಿಂಜೆಂಟ್‌ ವರ್ಗಾವಣೆ, ಸ್ಥಳ ನಿಯುಕ್ತಿ ಕೈಗೊಳ್ಳಲು ನಿಗದಿಪಡಿಸಲಾಗಿರುತ್ತದೆ.

ಈ ಕಾಯ್ದೆ ನಿಯಮಗಳು ಜಾರಿಯಾದ ನಂತರದಲ್ಲಿ ಹಿಂದಿನ ರೀತಿಯಲ್ಲಿಯೇ ಜಾರಿಗೊಳಿಸಿದ ಕೆಲವೊಂದು ವರ್ಗಾವಣೆ ಆದೇಶಗಳನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನ್ಯಾಯಾಲಯ ಪ್ರಕರಣಗಳಲ್ಲಿ ನ್ಯಾಯಮಂಡಳಿ/ನ್ಯಾಯಾಲಯ ಆದೇಶಗಳಲ್ಲಿಯೂ ಸಹ ಈ ಕಾಯ್ದೆ ನಿಯಮಾವಳಿಗಳಡಿ ವರ್ಗಾವಣೆ/ಸ್ಥಳ ನಿಯುಕ್ತಿ ನೀಡಲು ಆದೇಶಿಸಲಾಗಿರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಅರಣ್ಯ, ಜೀವಿಶಾಸ್ತ್ರ ಇಲಾಖೆಯ ಹಿರಿಯ ಅಧಿಕಾರಿಗಳು ಕಮಿಷನ್‌ಗಾಗಿ  ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿದ್ದಾರೆ. ಇದಕ್ಕಾಗಿ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಳ್ಳಲಾಗಿದೆ   ಎಂಬ ಆಪಾದನೆ ಕುರಿತಂತೆ ‘ದಿ ಫೈಲ್‌’ ವರದಿ ಮಾಡಿದ ಬೆನ್ನಲ್ಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ  ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಡೀ ಪ್ರಕರಣದ ಕುರಿತು ವರದಿ ನೀಡಲು ಇಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿಗಳ ಸಮಿತಿ ರಚಿಸಿ ಟಿಪ್ಪಣಿ ಹೊರಡಿಸಿದ್ದರು.

 

ತಂತ್ರಾಂಶದಲ್ಲಿಯೇ ಬ್ಲಾಕ್‌ ಮಾಡಿ ಕೆಲವು ಅಧಿಕಾರಿ, ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡುವ ಮೂಲಕ ಬೇರೆ ಯಾವ ಅಧಿಕಾರಿ ಮತ್ತು ನೌಕರರಿಗೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸದಂತೆ ಜಾಲ ಹೆಣೆಯಲಾಗುತ್ತಿದೆ ಎಂಬ ಆರೋಪವು ಗಂಭೀರ ಸ್ವರೂಪದ್ದಾಗಿದ್ದು ಇದು ಅಕ್ಷ್ಯಮ್ಯ ಅಪರಾಧವಾಗಿರುತ್ತದೆ ಎಂದು ಸಚಿವ ಖಂಡ್ರೆ ಅವರು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

 

‘ಈಗಾಗಲೇ ಉಭಯ ಸದನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ನಿರಂತರ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ನಾನು ಪ್ರತಿನಿಧಿಸುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಲು ಸ್ಪಷ್ಟ ಎಚ್ಚರಿಕೆಯನ್ನು ನೀಡುತ್ತಿದ್ದೇನೆ,’ ಎಂದು ಟಿಪ್ಪಣಿಯಲ್ಲಿ ಪ್ರಸ್ತಾಪಿಸಿದ್ದರು.

 

ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗ ಆರೋಪ; ಅಧಿಕಾರಿಗಳ ಸಮಿತಿ ರಚನೆ, ವರದಿಗೆ ಸೂಚನೆ

 

 

ಅರಣ್ಯ , ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯಲ್ಲಿ ಕೌನ್ಸಲಿಂಗ್‌ ಮೂಲಕ ಪಾರದರ್ಶಕವಾಗಿ ಕಾರ್ಯನಿರ್ವಹಣೆಯಾಗಬೇಕಿದ್ದು ಅಧಿಕಾರಿ, ನೌಕರ ಸ್ನೇಹಿ ಕೌನ್ಸಲಿಂಗ್‌ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಇಲಾಖೆ ನಿಯಮಗಳ ಅನ್ವಯ ಅಗತ್ಯ ಕ್ರಮ ಕೈಗೊಳ್ಳಲು ತಕ್ಷಣವೇ ಸಮಿತಿ ರಚಿಸಬೇಕು ಮತ್ತು ಪೂರ್ಣವಾದ ವರದಿಯನ್ನು ನೀಡಬೇಕು ಎಂದು ಟಿಪ್ಪಣಿಯಲ್ಲಿ ಸೂಚಿಸಿದ್ದನ್ನು ಸ್ಮರಿಸಬಹುದು.

 

ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಅರಣ್ಯ ವೀಕ್ಷಕರು, ಗಸ್ತು ಅರಣ್ಯ ಪಾಲಕ, ಉಪ ವಲಯ ಅರಣ್ಯಾಧಿಕಾರಿ  ಹುದ್ದೆಗಳನ್ನು ಬ್ಲಾಕ್‌ ಮಾಡಿದ್ದಾರೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗವು ವರ್ಗಾವಣೆ, ಕೌನ್ಸಲಿಂಗ್‌ ತಂತ್ರಾಂಶದ ಮೇಲ್ವಿಚಾರಣೆ ನಡೆಸುತ್ತದೆ. ಆದರೆ ಈ ತಂತ್ರಾಂಶವನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪಾರದರ್ಶಕ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಈ ಕುರಿತು ‘ದಿ ಫೈಲ್‌’ 2023ರ ಜುಲೈ 14ರಂದು ವರದಿ ಪ್ರಕಟಿಸಿತ್ತು.

 

ಲಂಚ; ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು?

 

ಅರಣ್ಯ ವೀಕ್ಷಕರಿಗೆ 50 ಸಾವಿರ, ಗಸ್ತು ಅರಣ್ಯ ಪಾಲಕರಿಗೆ 50 ಸಾವಿರದಿಂದ 1 ಲಕ್ಷ ರು., ಉಪ ವಲಯ ಅರಣ್ಯಾಧಿಕಾರಿಗಳಿಗೆ 1ರಿಂದ 2 ಲಕ್ಷ ರು. ಲಂಚ ನೀಡಬೇಕು. ಲಂಚ ನೀಡಿದ ಸಿಬ್ಬಂದಿಗಳಿಗೆ ಅನುಕೂಲವಾಗುವ ಹಾಗೇ ಹುದ್ದೆಗಳನ್ನು ಬ್ಲಾಕ್‌ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ, ಶಿವಮೊಗ್ಗ, ಕೆನರಾ ವೃತ್ತವೂ ಸೇರಿದಂತೆ ಬಹುತೇಕ ಅರಣ್ಯ ವೃತ್ತಗಳಲ್ಲಿ ಹುದ್ದೆಗಳನ್ನು ಬ್ಲಾಕ್‌ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಹಿರಿಯ ಐಎಫ್‌ಎಸ್‌ ಅಧಿಕಾರಿಗಳು ಇಂತಹದ್ದೊಂದು ಜಾಲ ಹೆಣೆದಿರುವುದು  ಸಚಿವ ಈಶ್ವರ ಖಂಡ್ರೆ ಅವರಿಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿತ್ತು.

 

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಅಧಿನಿಯಮ 2016 ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ನಿಯಮ 2019 ರ ನಿಯಮದಡಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಮಾಡುತ್ತಿದೆ. ಈ ಕಾಯಿದೆಯಲ್ಲಿ ಸುಮಾರು ಲೋಪದೋಷಗಳಿವೆ. ಅಲ್ಲದೇ ಅತೀ ಹೆಚ್ಚು ಸಿಬ್ಬಂದಿಗಳ ವಿರೋಧದ ನಡುವೆಯೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಾರಿಗೊಳಿಸುತ್ತಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

the fil favicon

SUPPORT THE FILE

Latest News

Related Posts