ಬಿದರಿ ಗೌರವಾಧ್ಯಕ್ಷರಾಗಿರುವ ಸಂಘಕ್ಕೂ 3.24 ಎಕರೆ ಗೋಮಾಳ; ಆರ್ಥಿಕ ಇಲಾಖೆ ಅಭಿಪ್ರಾಯ ಬದಿಗೊತ್ತಿ ಆದೇಶ

ಬೆಂಗಳೂರು; ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಅವರು ಗೌರವಾಧ್ಯಕ್ಷರಾಗಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಗೆ ಆರ್ಥಿಕ ಮತ್ತು ಕಾನೂನು ಇಲಾಖೆಯ ವಿರೋಧದ ನಡುವೆಯೂ 3.24 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳವನ್ನು ಹಿಂದಿನ ಬಿಜೆಪಿ ಸರ್ಕಾರವು ಮಂಜೂರು ಮಾಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಜನಸೇವಾ ಟ್ರಸ್ಟ್‌, ರಾಷ್ಟ್ರೋತ್ಥಾನ ಪರಿಷತ್‌, ಇಸ್ಕಾನ್‌, ಆದಿಚುಂಚನಗಿರಿ ಸೇರಿದಂತೆ ವಿವಿಧ ಖಾಸಗಿ ಸಂಘ ಸಂಸ್ಥೆಗಳಿಗೆ ಈಗಾಗಲೇ ಗೋಮಾಳ ಮಂಜೂರು ಮಾಡಿರುವ ಆದೇಶವನ್ನು ಈಗಿನ ಕಾಂಗ್ರೆಸ್‌ ಸರ್ಕಾರವು ತಡೆಹಿಡಿಯಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನದಲ್ಲಿ ಹೇಳಿಕೆ ನೀಡಿರುವ  ಬೆನ್ನಲ್ಲೇ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಅವರು ಗೌರವಾಧ್ಯಕ್ಷರಾಗಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಗೆ 3.24 ಎಕರೆ ಮಂಜೂರು ಮಾಡಿರುವುದು ಮುನ್ನೆಲೆಗೆ ಬಂದಿದೆ.

 

ಹಿಂದಿನ ಬಿಜೆಪಿ ಸರ್ಕಾರವು ಈ ಜಮೀನಿಗೆ ವಿಧಿಸಿದ್ದ ಮೊತ್ತವನ್ನು ಪರಿಷ್ಕರಿಸಿ ಶೇ.25ರ ದರವನ್ನು ಮರು ನಿಗದಿಗೊಳಿಸಿತ್ತು. ವಿಶೇಷವೆಂದರೇ ಈ ಕುರಿತು ಸಚಿವ ಸಂಪುಟದ ಅನುಮೋದನೆ ಪಡೆದ ಕೇವಲ ಮೂರೇ ಮೂರು ದಿನದಲ್ಲಿ ಈ ಸಂಬಂಧ ಆದೇಶವೂ ಹೊರಬಿದ್ದಿತ್ತು. ಈ ಸಂಬಂಧ ಸಮಗ್ರ ಕಡತ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೆ ಈ ಸಂಘವು 2018ರ ಡಿಸೆಂಬರ್‍‌ 7ರಂದು ನೋಂದಣಿಯಾಗಿತ್ತು. ಪ್ರಸ್ತಾವನೆ ಸಂಬಂಧ ಸಂಸ್ಥೆಯು ಹಿಂದಿನ 05 ವರ್ಷಗಳ ಆಡಿಟ್‌ ವರದಿ ಸಲ್ಲಿಸಬೇಕಿತ್ತು. ಆದರೆ ಸಂಸ್ಥೆಯು ಹಿಂದಿನ 03 ವರ್ಷಗಳ ಆಡಿಟ್‌ ವರದಿಯನ್ನು ಸಲ್ಲಿಸಿತ್ತು  ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಅಲ್ಲದೇ ಈ ಸಂಘಕ್ಕೆ ಗೋಮಾಳ ಜಮೀನು ಮಂಜೂರು ಮಾಡುವ ಉದ್ದೇಶದಿಂದ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಡಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಲಾಗಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(2)ನ್ನು ಸಡಿಲಿಸಿ 2022ರ ಆಗಸ್ಟ್‌ 17ರಂದು ಆದೇಶ ಹೊರಡಿಸಿತ್ತು.

 

 

 

ಜಮೀನಿಗೆ ಮಾರುಕಟ್ಟೆ ಮೌಲ್ಯದ ಶೇ.25ರಷ್ಟು ಮೌಲ್ಯ ನಿಗದಿಗೊಳಿಸಿ 2023ರ ಮಾರ್ಚ್‌ 27ರಂದು ಆದೇಶವನ್ನೂ ಹೊರಡಿಸಿತ್ತು.

 

ಜಿಲ್ಲಾಧಿಕಾರಿ ವರದಿ ಪ್ರಕಾರ ಸರ್ಕಾರಿ ಮಾರ್ಗಸೂಚಿ ಬೆಲೆ ಪ್ರಕಾರ ದಾಸನಪುರ ಹೋಬಳಿ ಕಮ್ಮಸಂದ್ರ ಗ್ರಾಮದಲ್ಲಿ ಎಕರೆಗೆ 48 ಲಕ್ಷ ರು. ಇದೆ. ಇದರಂತೆ 3.24 ಎಕರೆಗೆ ಒಟ್ಟಾರೆ 1.72 ಕೋಟಿ ರು. ಆಗಲಿದೆ. ಸರ್ಕಾರ ನೀಡಿರುವ ರಿಯಾಯಿತಿ ಪ್ರಕಾರ ತಲಾ ಎಕರೆಗೆ ಶೇ.25ರಂತೆ ಎಕರೆಗೆ 12.25 ಲಕ್ಷ ಆಗಲಿದೆ. ಇದರ ಪ್ರಕಾರ ಎಕರೆಗೆ 39 ಲಕ್ಷ ರು. ಆಗಲಿದೆ. ಇದರ ಪ್ರಕಾರ ಎಕರೆಯೊಂದಕ್ಕೆ 33 ಲಕ್ಷ ರು ನಂತೆ 3.24 ಎಕರೆಗೆ 1.10 ಕೋಟಿ ರು.ಗೂ ಅಧಿಕ ನಷ್ಟವಾಗಲಿದೆ ಎಂದು ಗೊತ್ತಾಗಿದೆ.

 

ಉತ್ತರ ಕರ್ನಾಟಕ ಜಿಲ್ಲೆಗಳಿಂದ ವಿವಿಧ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬರುವವರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸುವುದು ಮತ್ತು ಉತ್ತರ ಕರ್ನಾಟಕದ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶದ ಹೆಸರಿನಲ್ಲಿ 3.24 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳವನ್ನು ಹಂಚಿಕೆ ಮಾಡಿರುವುದು ಆದೇಶದಿಂದ ತಿಳಿದು ಬಂದಿದೆ.

 

ಮೊದಲ ಮನವಿಯಲ್ಲೇನಿತ್ತು?

 

ಈ ಸಂಸ್ಥೆಯು 2018ರಲ್ಲಿ ಆರಂಭವಾಗಿದೆ. ಇದುವರೆಗೂ ಸಂಸ್ಥೆಯ ಹೆಸರಿನಲ್ಲಿ ಯಾವುದೇ ಜಮೀನು ಇಲ್ಲ. ‘ ಬೆಂಗಳೂರು ಮಹಾನಗರದಲ್ಲಿ ಉತ್ತರ ಕರ್ನಾಟಕದ ಸುಮಾರು 25 ಲಕ್ಷ ಜನರು ವಾಸವಾಗಿದ್ದು, ನಗರ ಹಾಗೂ ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರು ರಾಜ್ಯದ ರಾಜಧಾನಿಯಾಗಲು ಉತ್ತರ ಕರ್ನಾಟಕ ಭಾಗದ ಜನರ ತ್ಯಾಗ ಮಹತ್ವದ್ದಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

 

ಹಾಗೆಯೇ ಆ ಭಾಗದ ಜನರ ಅಭಿಲಾಷೆಗೆ ತಕ್ಕಂತೆ ಬೆಂಗಳೂರು ರಾಜ್ಯದ ರಾಜಧಾನಿಯಾಗಿ ಬೆಳೆಯಲು ಕಾರಣವಾಗಿದೆ. ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಆ ಭಾಗದ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಬೆಂಗಳೂರಿನಲ್ಲಿಯೂ ಜೀವಂತವಾಗಿಡಲು ಪ್ರಯತ್ನ ಮಾಡುತ್ತಿದ್ದಾರೆ.

 

ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಸಂಸ್ಥೆಗಳ ಮಹಾಸಂಸ್ಥೆಗೆ ಬೆಂಗಳೂರಿನಲ್ಲಿ ಕನಿಷ್ಠ 5 ಎಕರೆ ಜಾಗವನ್ನು ಸರ್ಕಾರದಿಂದ ಉಚಿತವಾಗಿ ಮಂಜೂರು ಮಾಡಬೇಕು,’ ಎಂದು 2022ರ ಮೇ 30ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದ ಮನವಿಯಲ್ಲಿ ಕೋರಿತ್ತು.

 

ಈ ಮನವಿಯನ್ನಾಧರಿಸಿ ಕಂದಾಯ ಇಲಾಖೆಯು ಆಗಸ್ಟ್‌ 17ರಂದೇ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಕಟವಾದ 4 ತಿಂಗಳ ಒಳಗೇ ಇದೇ ಸಂಘವು ಸರ್ಕಾರಕ್ಕೆ 2022ರ ಡಿಸೆಂಬರ್‌ 4ರಂದು ಮತ್ತೊಂದು ಮನವಿಯನ್ನು ಸಲ್ಲಿಸಿತ್ತು.

 

‘ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಗೆ 3-24 ಎಕರೆ ಜಮೀನು ಮಂಜೂರು ಮಾಡಿದ್ದು ಈ ಜಾಗದಲ್ಲಿ ಸಾಂಪ್ರದಾಯಿಕ ಹಬ್ಬದ ಆಚರಣೆ, ಕಾರ್ಮಿಕರು, ವಿದ್ಯಾರ್ಥಿಗಳು, ಹಾಗೂ ಬಡಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಸತಿ ನಿಲಯ ಸ್ಥಾಪಿಸಲು ಉದ್ದೇಶಿಸಿದೆ. ಯಾವುದೇ ವ್ಯವಹಾರಿಕ ಉದ್ದೇಶವನ್ನು ಹೊಂದಿರದೇ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವುದರಿಂದ ಈ ಜಮೀನನ್ನು ಉಚಿತವಾಗಿ ಅಥವಾ ಗರಿಷ್ಠ ಪ್ರಮಾಣದ ರಿಯಾಯಿತಿ ನೀಡಿ ಮಂಜೂರು ಮಾಡಬೇಕು,’ ಎಂದು ಸಂಘದ ಅಧ್ಯಕ್ಷ ಶಿವಕುಮಾರ್‌ ಮೇಟಿ ಅವರು ಮನವಿಯಲ್ಲಿ ಕೋರಿದ್ದರು.

 

ಕಾನೂನು, ಆರ್ಥಿಕ ಇಲಾಖೆ ಒಪ್ಪಿರಲಿಲ್ಲ

 

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಗೆ 3.24 ಎಕರೆ ಗೋಮಾಳ ಜಮೀನು ಮಂಜೂರಾತಿಗೆ ಆರ್ಥಿಕ ಇಲಾಖೆಯೂ ಒಪ್ಪಿರಲಿಲ್ಲ. ‘ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ಪ್ರಸ್ತಾಪಿತ ಸರ್ಕಾರಿ ಗೋಮಾಳ ಜಮೀನು ಬಿಬಿಎಂಪಿ ವ್ಯಾಪ್ತಿಯಿಂದ 10 ಕಿ ಮೀ ದೂರದಲ್ಲಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(ಎ)2 ಅನ್ವಯ ನಗರ ಪೌರ ಸರಹದ್ದಿನೊಳಗೆ ಸರ್ಕಾರಿ ಜಮೀನುಗಳನ್ನು ಯಾವನೇ ವೈಯಕ್ತಿಕ ಅಥವಾ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲವಾದದುರಿಂದ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯು 2022ರ ಜುಲೈ 22ರಂದೇ ಅಭಿಪ್ರಾಯಿಸಿತ್ತು. ಅದೇ ರೀತಿ ಕಾನೂನು ಇಲಾಖೆಯೂ ಸಹ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.

 

ಆದರೂ ಕಂದಾಯ ಇಲಾಖೆಯು ಗೋಮಾಳ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಮುಂದಿರಿಸಿತ್ತು.

 

ಈ ಮನವಿಯನ್ನು ಪುರಸ್ಕರಿಸಿದ್ದ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಘಕ್ಕೆ ಈಗಾಗಲೇ ವಿಧಿಸಿರುವ ಮೊತ್ತದಲ್ಲಿ ಶೇ. 25ರಷ್ಟು ಮೊತ್ತವನ್ನು ವಿಧಿಸಿ ಮಂಜೂರು ಮಾಡಲು ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಬೇಕು ಎಂದು ಆದೇಶಿಸಿದ್ದರು.

 

ಗೋಮಾಳ ಮಂಜೂರಿಗೆ ತಡೆ; ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಸುತ್ತ ‘ದಿ ಫೈಲ್‌’ನ 11 ವರದಿಗಳು

 

ಅದರಂತೆ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಮಂಡಿಸಿದ್ದರು. ಈ ಕುರಿತು 2023ರ ಮಾರ್ಚ್‌ 24ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ. ಈ ಕುರಿತು ಸಂಘದ ಗೌರವಾಧ್ಯಕ್ಷ ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಅವರಿಗೆ ಪ್ರತಿಕ್ರಿಯೆಗಾಗಿ ವಾಟ್ಸಾಪ್‌ ಮೂಲಕ ‘ದಿ ಫೈಲ್‌’ ಲಿಖಿತವಾಗಿ ಕೋರಿತ್ತು. ಇದುವರೆಗೂ ಬಿದರಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯಲ್ಲಿ ಅದನ್ನು ಸೇರ್ಪಡೆಗೊಳಿಸಲಾಗುವುದು.

the fil favicon

SUPPORT THE FILE

Latest News

Related Posts