ಬೆಂಗಳೂರು; 2014ರಲ್ಲಿ 197 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ 59 ಎಪಿಪಿಗಳನ್ನು ಒಮ್ಮೆಲೆ ರಾಜ್ಯ ಸರ್ಕಾರ ಅಮಾನುತಗೊಳಿಸಿ ಆದೇಶಿಸಿದೆ.
ಉತ್ತರಪತ್ರಿಕೆಗಳಲ್ಲಿ ಮೌಲ್ಯಮಾಪಕರು ನೈಜವಾಗಿ ನೀಡಿದ್ದ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಿ ಅಂಕಗಳನ್ನು ತಿದ್ದುವ ಮೂಲಕ ಹಾಗೂ ಮೌಲ್ಯಮಾಪಕರು ಮೌಲ್ಯಮಾಪನ ಮಾಡದೇ ಇದ್ದರೂ ಕೆಲವು ಉತ್ತರಪತ್ರಿಕೆಗಳಲ್ಲಿ ಅಭ್ಯರ್ಥಿಗಳಿಂದ ಬದಲಿ ಉತ್ತರಗಳನ್ನು ಬರೆಯಿಸಿ ನಕಲು ಮೌಲ್ಯಮಾಪನ ಸೇರಿದಂತೆ ಇನ್ನಿತರೆ ಅಕ್ರಮಗಳು ನಡೆದಿದ್ದವು.
‘ಅಕ್ರಮದಲ್ಲಿ ಭಾಗಿ ಆಗಿದ್ದ ಎಲ್ಲಾ ಆರೋಪಿತರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಗಳನ್ನು ಸಮರ್ಥಿಸುವ ಮೇಲ್ನೋಟದ ಸಾಕ್ಷ್ಯಗಳು ಇದೆ ಎಂಬುದನ್ನು ಮನದಟ್ಟಾಗಿರುವುದರಿಂದ ಇವರನ್ನು ಸೇವೆಯಲ್ಲಿ ಮುಂದುವರೆಸುವುದು ಸಮಂಜಸವಲ್ಲವೆಂದು ಸರ್ಕಾರವು ಭಾವಿಸಿದೆ,’ ಎಂದು 2020ರ ಮಾರ್ಚ್ 20ರಂದು ಒಳಾಡಳಿತ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಅಮಾನತಾದವರ ಹೆಸರಿನ ಪಟ್ಟಿ
ಮಧುಗಿರಿ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹ್ಮದ್ ಅಜ್ಮಲ್ ಪಾಶ, ದೊಡ್ಡಬಳ್ಳಾಪುರ ನ್ಯಾಯಾಲಯದ ಸಿ ಜೆ ಸುಬ್ರಹ್ಮಣ್ಯ, ಶ್ರೀರಂಗಪಟ್ಟಣ ನ್ಯಾಯಾಲಯದ ಶಿವನಂಜಪ್ಪ, ಧಾರವಾಡ ನ್ಯಾಯಾಲಯದ ಗೀತಾ ಸಿದ್ದರಾಮಪ್ಪ ಅಸೂಟಿ, ಕನಕಪುರ ನ್ಯಾಯಾಲಯದ ತ್ರಿಶೂಲ ಸುಭಾಷ್ ಚಂದ್ರ ಜೈನ್, ಶಿಡ್ಲಘಟ್ಟ ನ್ಯಾಯಾಲಯದ ಕುಮುದಿನಿ, ಹಾಸನ ನ್ಯಾಯಾಲಯದ ಮಾಯಣ್ಣಗೌಡ, ಚಿತ್ರದುರ್ಗ ನ್ಯಾಯಾಲಯದ ವೀರೇಂದ್ರಪಾಟೀಲ್ ಬಿ, ದೇವನಹಳ್ಳಿಯ ಎ ಟಿ ರೂಪಾ, ಕುಂದಾಪುರ ನ್ಯಾಯಾಲಯದ ಸುಮಂಗಲಾ ಚಂದ್ರಶೇಖರ ನಾಯ್ಕ, ಹುಬ್ಬಳ್ಳಿ ನ್ಯಾಯಾಲಯದ ರವೀಂದ್ರಸಾ, ಮಂಗಳೂರು ನ್ಯಾಯಾಲಯದ ಚೇತನ್ ತುಕಾರಾಮ ನಾಯ್ಕ, ಚಿಕ್ಕಬಳ್ಳಾಪುರ ನ್ಯಾಯಾಲಯದ ಗುರುಸ್ವಾಮಿ, ಚಿತ್ತಾಪುರ ನ್ಯಾಯಾಲಯದ ಸಾಹೇಬಗೌಡ, ಆನೇಕಲ್ ನ್ಯಾಯಾಲಯದ ಎಸ್ ಎನ್ ವೆಂಕಟೇಶ್, ಚಳ್ಳಕೆರೆ ನ್ಯಾಯಾಲಯದ ಎನ್ ಕುಮಾರ್, ಹುಣಸೂರು ನ್ಯಾಯಾಲಯದ ರೇಖಾ, ಚನ್ನರಾಯಪಟ್ಟಣದ ಬಿ ವಿ ಜ್ಞಾನಮೂರ್ತಿ, ಹರೀಶ್, ಹೊಸಕೋಟೆ ನ್ಯಾಯಾಲಯದ ಎಂ ಎಲ್ ಚಂದ್ರಾರೆಡ್ಡಿ, ಸಿ ಹೃಷಿಕೇಶ, ಮಾಲೂರು ನ್ಯಾಯಾಲಯದ ರೂಪ, ತುಮಕೂರು ನ್ಯಾಯಾಲಯದ ಕೆ ಎಂ ರಘು, ಮಾಗಡಿ ನ್ಯಾಯಾಲಯದ ಎಚ್ ಆರ್ ಯಶೋಧ, ಬೆಂಗಳೂರು 6ನೇ ಮೆಟ್ರೋಪಾಲಿಟಿನ್ ನ್ಯಾಯಾಲಯದ ಪುಷ್ಪಾವತಿ, ಅಥಣಿ ನ್ಯಾಯಾಲಯದ ಬಸಲಿಂಗಪ್ಪಾ ಬಾಳಗೊಂಡ ಬೋರ್‌ಗಲ್, ಮೂಡಲಗಿ ನ್ಯಾಯಾಲಯದ ಶಿಲ್ಪಾ ಜೋಷಿ, ಬೀಳಗಿ ನ್ಯಾಯಾಲಯದ ಸರೋಜಿನಿ ವೀರಪ್ಪ ಬಟಕುರ್ಕಿ, ಬಂಗಾರಪೇಟೆ ನ್ಯಾಯಾಲಯದ ಮೊಹಮದ್ ಖಾಜಾ, ರಾಮನಗರ ನ್ಯಾಯಾಲಯದ ಎಂ ಕೆ ವಿಜಯಕುಮಾರ್, ಮೈಸೂರು ನ್ಯಾಯಾಲಯದ ಎಚ್ ಸಿ ರವೀಂದ್ರ, ತಿಪಟೂರು ನ್ಯಾಯಾಲಯದ ಶಿವಮ್ಮ, ಅರಕಲಗೂಡು ನ್ಯಾಯಾಲಯದ ಎಸ್ ಎನ್ ಮಮತ, ಶಿವಮೊಗ್ಗ ನ್ಯಾಯಾಲಯದ ಧೀರೇಂದ್ರ, ಬೆಳಗಾವಿ ನ್ಯಾಯಾಲಯದ ಧನಪಾಲ್ ದೇವಪ್ಪ ಹಾರೋಗೇರಿ, ಹುಬ್ಬಳ್ಳಿ ನ್ಯಾಯಾಲಯದ ವಿನಾಯಕ ಎಸ್ ಪಾಟೀಲ್, ಬದಾಮಿ ನ್ಯಾಯಾಲಯದ ಸಂಗನಗೌಡ ಪ.ನಾಯಕ, ಚನ್ನಪಟ್ಟಣ ನ್ಯಾಯಾಲಯದ ಎಲ್ ರೂಪ, ಬೆಂಗಳೂರು 4ನೇ ಮೆಟ್ರೋಪಾಲಿಟಿನ್ ನ್ಯಾಯಾಲಯದ ಟಿ ಎಂ ವಿಮಲ, ಗುಂಡ್ಲುಪೇಟೆ ನ್ಯಾಯಾಲಯದ ಎ ಎನ್ ರಾಜಣ್ಣ, ಗುಬ್ಬಿ ನ್ಯಾಯಾಲಯದ ಟಿ ರಾಖಿ, ಶಿಕಾರಿಪುರ ನ್ಯಾಯಾಲಯದ ದಾದಾಪೀರ್ ಶಬ್ಬೀರ್ ಅಹ್ಮದ್, ಕಲಬುರಗಿ ನ್ಯಾಯಾಲಯದ ಛಾಯಾದೇವಿ, ನಾಗಮಂಗಲ ನ್ಯಾಯಾಲಯದ ಜ್ಞಾನೇಂದ್ರ, ಚಿಂತಾಮಣಿ ನ್ಯಾಯಾಲಯದ ವೇಣುಕುಮಾರ್, ಕೊರಟಗೆರೆ ನ್ಯಾಯಾಲಯದ ಶೇಖ್ ಮಹಮದ್, ಗಂಗಾವತಿ ನ್ಯಾಯಾಲಯದ ವಿಜಯಚಂದ್ರ ಪ್ರಭು ಬಿ, ಜಮಖಂಡಿ ನ್ಯಾಯಾಲಯದ ಭರತ್ ಬುಜಬಲಿ ಶಿರಹಟ್ಟಿ, ಬಂಗಾರಪೇಟೆ ನ್ಯಾಯಾಲಯದ ಶ್ರೀನಿವಾಸ ಎಂ, ಚಳ್ಳಕೆರೆ ನ್ಯಾಯಾಲಯದ ಲಿಂಗೇಶ್ವರ ಜೆ, ಮಧುಗಿರಿ ನ್ಯಾಯಾಲಯದ ಮೋಹನ ಬಿ, ದೊಡ್ಡಬಳ್ಳಾಪುರ ನ್ಯಾಯಾಲಯದ ಕೆ ಆರ್ ನಾಗಭೂಷಣ, ಬೀಳಗಿ ನ್ಯಾಯಾಲಯದ ವಿಜಯಲಕ್ಷ್ಮಿ ಅಥರ್ಗ, ಆನೇಕಲ್ ನ್ಯಾಯಾಲಯದ ವೈ ಎಸ್ ಮೋಹನ್, ಕನಕಪುರ ನ್ಯಾಯಾಲಯದ ಬಿ ನಾರಾಯಣಸ್ವಾಮಿ, ಬೈಲಹೊಂಗಲ ನ್ಯಾಯಾಲಯದ ರಂಜನಾ ಸುರೇಶ್ ಪಾಟೀಲ್ ಅವರು ಅಮಾನತುಗೊಂಡ ಎಪಿಪಿಗಳಾಗಿದ್ದಾರೆ.
ಈ ಅಕ್ರಮಗಳನ್ನು ಪತ್ತೆ ಹಚ್ಚಿದ್ದ ತೀರ್ಥಹಳ್ಳಿ ಮೂಲದ ಎಚ್ ಟಿ ರವಿ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಗೆ ಸೆಷನ್ಸ್ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟಸ್ವಾಮಿ ನೇತೃತ್ವದ ತಂಡ ತನಿಖೆ ನಡೆಸಿತ್ತಲ್ಲದೆ ಅಕ್ರಮಗಳನ್ನು ದಾಖಲೆಗಳ ಮೂಲಕ ದೃಢಪಡಿಸಿತ್ತು.
ಆದರೆ ಆರೋಪಿಗಳ ವಿರುದ್ಧ ಹಿಂದಿನ ಕಾಂಗ್ರೆಸ್ ಮತ್ತು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಬದಲಿಗೆ ಆ ಎಲ್ಲಾ ಆರೋಪಿಗಳ ರಕ್ಷಣೆಗೆ ನಿಂತಿತ್ತು. ಆ ಸಂದರ್ಭದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಮತ್ತು ಸುಧಾ ಕಟ್ವಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮುಖ್ಯ ನ್ಯಾಯಮೂರ್ತಿ ಅಭಯ್.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಇದರ ವಿಚಾರಣೆ ನಡೆಸಿತ್ತು.
ಈ ಮಧ್ಯೆ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ (ಎಪಿಪಿ) ಅಕ್ರಮ ನೇಮಕಾತಿ ಹಗರಣದ ಆರೋಪಿ, ಇಲ್ಲಿನ ಕಾನೂನು ಅಧಿಕಾರಿ ಕಚೇರಿ ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರನ್ನು ಪುನಃ ಅಭಿಯೋಗ ನಿರ್ದೇಶಕರ ಇಲಾಖೆ ಆಡಳಿತಾಧಿಕಾರಿ ಆಗಿ ನೇಮಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಲವು ತೋರಿದ್ದರು.
ನ್ಯಾಯಾಂಗ ಇಲಾಖೆ ನಾಲ್ಕು ವರ್ಷಗಳ ಹಿಂದೆ 191 ಎಪಿಪಿ ಮತ್ತು ಎಜಿಪಿಗಳ ನೇಮಕಕ್ಕೆ ಪರೀಕ್ಷೆ ನಡೆಸಿತ್ತು. ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಈ ಸಂಬಂಧ ತೀರ್ಥಹಳ್ಳಿಯ ವಕೀಲ ಎಚ್.ಟಿ.ರವಿ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರ ಪರ ಮತ್ತೊಬ್ಬ ವಕೀಲ ರವೀಂದ್ರ ಅವರು ವಾದಿಸಿದ್ದರು.