ಹಣಕಾಸು ಪರಿಸ್ಥಿತಿ ಸರಿಯಿಲ್ಲವೆಂದ ಆರ್ಥಿಕ ಇಲಾಖೆ; ಶಾಲೆ ಕಾಲೇಜುಗಳ ಉನ್ನತೀಕರಣ 2 ವರ್ಷ ಮುಂದೂಡಿಕೆ

ಬೆಂಗಳೂರು; ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವನಿಧಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಯ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯೇ ಸರಿಯಿಲ್ಲ ಎಂದು ಸಿದ್ದರಾಮಯ್ಯ ಅವರು ಸಚಿವರಾಗಿರುವ ಅರ್ಥಿಕ ಇಲಾಖೆಯು ಇದೀಗ ಬಹಿರಂಗಗೊಳಿಸಿದೆ.

 

ಇದೇ ಜುಲೈ 3ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಷ್ಕೃತ ಆಯವ್ಯಯವನ್ನು ಮಂಡಿಸುತ್ತಿರುವ ಹೊತ್ತಿನಲ್ಲೇ ರಾಜ್ಯದ ಆರ್ಥಿಕ ಪರಿಸ್ಥಿತಿಯು ಸರಿಯಿಲ್ಲ ಎಂದು ಅರ್ಥಿಕ ಇಲಾಖೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ನೀಡಿರುವ ಅಭಿಪ್ರಾಯವು ರಾಜ್ಯವನ್ನು ಮತ್ತಷ್ಟು ಕಳವಳಕ್ಕೆ ದೂಡಿದಂತಾಗಿದೆ.

 

ಕರ್ನಾಟಕವು ಖಾತರಿಗಳ ಮೇಲಿನ ವೆಚ್ಚವನ್ನು ಪೂರೈಸಲು ಸಮರ್ಥವಾಗಿದೆ ಎಂದು ಅರ್ಥಿಕ ಇಲಾಖೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದರು. ಆದರೆ, ತಮ್ಮದೇ ಇಲಾಖೆಯು ‘ಆರ್ಥಿಕ ಪರಿಸ್ಥಿತಿ ಸರಿಯಿಲ್ಲ,’ ವೆಂದು ನೀಡಿರುವ ಅಭಿಪ್ರಾಯವುದು ಚರ್ಚೆಗೆ ಗ್ರಾಸವಾಗಿದೆ.

 

ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ತನ್ನ ಐದು ಭರವಸೆಗಳನ್ನು ಜಾರಿಗೆ ತರಲು ಈಗಾಗಲೇ ಆದೇಶಗಳನ್ನು ಹೊರಡಿಸಿರುವ ಕಾಂಗ್ರೆಸ್ ಸರ್ಕಾರವು ಸರ್ಕಾರದ ಹಲವು ಯೋಜನೆಗಳ ಅನುದಾನಕ್ಕೂ ಕತ್ತರಿ ಹಾಕಲಿದೆ ಮತ್ತು ವಿವಿಧ ತೆರಿಗೆಗಳ ದರವನ್ನೂ ಪರಿಷ್ಕರಿಸಲಿದೆ ಎಂಬ ಸುಳಿವು ಕೂಡ ದೊರೆತಿದೆ.

 

ಶಾಲೆ-ಕಾಲೇಜುಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಅನುದಾನ ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಮುಂದಿನ ಎರಡು ವರ್ಷಗಳ ಮಟ್ಟಿಗೆ ಶಾಲಾ ಕಾಲೇಜುಗಳ ಉನ್ನತೀಕರಣ ಪ್ರಸ್ತಾವನೆಗಳನ್ನು ಮುಂದೂಡಬೇಕು ಎಂದು ಸೂಚಿಸಿರುವುದು ಹಲವು ಯೋಜನೆಗಳ ಅನುದಾನಕ್ಕೆ ಕತ್ತರಿ ಬೀಳಲಿದೆ ಎಂಬ ಸುಳಿವನ್ನು ಬಲಗೊಳಿಸಿದಂತಾಗಿದೆ.

 

ರಾಜ್ಯದ 361 ಸರ್ಕಾರಿ ಪ್ರೌಢಶಾಲೆಗಳನ್ನ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಪ್ರಸ್ತಾವನೆಯನ್ನು (ಕಡತ ಸಂಖ್ಯೆ; ಇಪಿ 229 ಎಸ್‌ಹೆಚ್‌ಹೆಚ್‌ 2021) ಪದವಿಪೂರ್ವ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ್ದ ಆರ್ಥಿಕ  ಇಲಾಖೆಯು ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವ ಕ್ರೋಢೀಕೃತ ಪ್ರಸ್ತಾವನೆಯನ್ನು ಎರಡು ವರ್ಷಗಳವರೆಗೆ ಮುಂದೂಡಲು ತಿಳಿಸಿದೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯು ಸಹ ಉನ್ನತೀಕರಣದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ದೊರೆತ ನಂತರ ಇಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸಂಬಂಧಿತ ಪ್ರಾಧಿಕಾರಗಳಿಗೆ ಹಿಂಬರಹ ನೀಡಿದೆ ಎಂದು ತಿಳಿದು ಬಂದಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಹಾನಗಲ್‌ ಪಟ್ಟಣದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಂಯೋಜಿತ ಪ್ರೌಢಶಾಲೆಯನ್ನು ಆರಂಭಿಸಲು ಉದ್ದೇಶಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತುತ ಇರುವ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೆಚ್ಚುವರಿ ಶಾಲೆಗಳ ಉನ್ನತೀಕರಣ ಪ್ರಸ್ತಾವನೆಗಳನ್ನು ಪರಿಗಣಿಸುವುದು ಸೂಕ್ತವಾಗಿರುವುದಿಲ್ಲ. ಆದ್ದರಿಂದ ಶಾಲಾ-ಕಾಲೇಜುಗಳನ್ನು ಉನ್ನತೀಕರಿಸುವ ಪ್ರಸ್ತಾವನೆಗಳನ್ನು ಮುಂದಿನ ಎರಡು ವರ್ಷಗಳ ಮಟ್ಟಿಗೆ ಮುಂದೂಡುವಂತೆ ಆಡಳಿತ ಇಲಾಖೆಗೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಜುಲೈ 1ರಂದು ಅಭಿಪ್ರಾಯ (ಸಂಖ್ಯೆ; ಆಇ 847 ವೆಚ್ಚ-8/2022 ಇಪಿ 139 SOH 2022, 01-07-2023) ತಿಳಿಸಿರುವುದು ಗೊತ್ತಾಗಿದೆ.

 

 

ವಿವೇಕ ಯೋಜನೆಯಡಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು 7,601 ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ ಸ್ಥಾಪನೆಗೆ ಮುಂದಾಗಿತ್ತು.ವಿವೇಕ ಯೋಜನೆಯಡಿಯಲ್ಲಿ 7,601 ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು 1,194 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೇ ಇಲಾಖೆಯ ಇತರೆ ಯೋಜನೆಗಳಡಿ ಹೆಚ್ಚುವರಿಯಾಗಿ 1,955 ಕೊಠಡಿಗಳನ್ನು 382 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಿತ್ತು.

 

ನರೇಗಾ ಸಂಯೋಜನೆಯೊಂದಿಗೆ 250 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7,750 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಂಡಿತ್ತು. ಯೋಜನೆಯಡಿ ಮಾರ್ಚ್ 2023ರ ಅಂತ್ಯದಲ್ಲಿ 2,169 ಶೌಚಾಲಯಗಳು ಪೂರ್ಣಗೊಳ್ಳಲಿವೆ ಎಂದು ಹೇಳಿತ್ತು.

 

ಉಳಿದ 5,581 ಶೌಚಾಲಯಗಳನ್ನು 2023-24ನೇ ಸಾಲಿನಲ್ಲಿ ನಿರ್ಮಿಸಲಾಗುವುದು, ಇದಕ್ಕೆ ಒಟ್ಟು 80 ಕೋಟಿ ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 50 ಕೋಟಿ ರೂ. ಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒದಗಿಸಲಾಗಿದೆ. ರಾಜ್ಯದ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಲು ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 632 ಕೋಟಿ ರೂ. ಗಳ ವೆಚ್ಚದಲ್ಲಿ ಈ ಕೆಳಗಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.

 

ಕಳೆದ ವರ್ಷದಲ್ಲಿ 2,284 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದು, ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿಯಾಗಿ 1,230 ಕೊಠಡಿಗಳ ನಿರ್ಮಾಣ, ಹಳೆಯ ಮತ್ತು ಅಧಿಕ ಮಳೆಯಿಂದಾಗಿ ಹಾನಿಯಾಗಿರುವ 2,777 ಕೊಠಡಿಗಳ ದುರಸ್ತಿ. ಅಧಿಕ ದಾಖಲಾತಿಯಿರುವ ಶಾಲಾ-ಕಾಲೇಜುಗಳಲ್ಲಿ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ, ಸರ್ಕಾರಿ ಪದವಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು.

 

ಕಾಲೇಜುಗಳಲ್ಲಿ ಕೊಠಡಿಗಳ 260 ಶೌಚಾಲಯಗಳನ್ನು 2023-24ನೇ ಸಾಲಿನಲ್ಲಿ ನಿರ್ಮಿಸಲಾಗುವುದು, ಇದಕ್ಕೆ ಒಟ್ಟು 80 ಕೋಟಿ ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 50 ಕೋಟಿ ರೂ. ಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒದಗಿಸಲಾಗಿತ್ತು. ಕಾಲೇಜುಗಳಲ್ಲಿ ಕೊಠಡಿಗಳ 260 ತರಗತಿ ಆಯ್ದ 60 ತಾಲ್ಲೂಕುಗಳಲ್ಲಿ ತಲಾ ಒಂದು ಪದವಿ ಪೂರ್ವ ಕಾಲೇಜನ್ನು ಗುರುತಿಸಿ, ವಿಜ್ಞಾನ ಶಿಕ್ಷಣಕ್ಕಾಗಿ ಅಗತ್ಯ ಸೌಲಭ್ಯ ನೀಡುವ ಮೂಲಕ ಆದರ್ಶ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

 

30 ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಗಳಲ್ಲಿ ನಿರ್ಮಾಣ, 47 ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್‌ರೂಮ್ ಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ, ಕಾಲೇಜುಗಳಿಗೆ ಪೀಠೋಪಕರಣ ಒದಗಿಸಲು 100 ಕೋಟಿ ಅನುದಾನ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತು.

 

”ಪ್ರತಿ ವರ್ಷ ಬಜೆಟ್ ಗಾತ್ರ ₹ 25,000 ಕೋಟಿಗಳಷ್ಟು ಬೆಳೆಯುತ್ತಿದೆ. ಆದ್ದರಿಂದ, ಐದು ವರ್ಷಗಳ ಅವಧಿಯ ಅಂತ್ಯದ ವೇಳೆಗೆ, ಬಜೆಟ್ ಗಾತ್ರವು ₹ 4.5 ಲಕ್ಷ ಕೋಟಿ ಆಗಿರುತ್ತದೆ. ಹಾಗಾಗಿ ಖಾತರಿಗಳನ್ನು ಜಾರಿಗೆ ತರಲು ಸಾಧ್ಯವಾಗಿದೆ ಎಂದಿದ್ದರು.

 

ಐದು ಖಾತರಿಗಳ ಅನುಷ್ಠಾನಕ್ಕೆ ಸರ್ಕಾರ ಹೆಚ್ಚುವರಿ ಆದಾಯವನ್ನು ಕ್ರೋಢೀಕರಿಸಬೇಕು. ಖಾತರಿಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ವರ್ಷಕ್ಕೆ ಕನಿಷ್ಠ 60,000 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಿವಿಧ ಕ್ಷೇತ್ರಗಳ ತಜ್ಞರು ಮನರಂಜನಾ ತೆರಿಗೆಯನ್ನು ಹೆಚ್ಚಿಸಲು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

ರಾಜ್ಯದ ಸ್ವಂತ ತೆರಿಗೆಯೇತರ ಆದಾಯ ಸುಮಾರು ₹11,000 ಕೋಟಿ ಎಂದು ಅಂದಾಜಿಸಲಾಗಿದೆ. 2023-24ರಲ್ಲಿ ಗಣಿಗಳ ರಾಯಧನವನ್ನು ₹7,500 ಕೋಟಿ ಎಂದು ಅಂದಾಜಿಸಲಾಗಿದೆ, ಇದು 2022-23ರ ಆದಾಯದ ಅಂದಾಜಿಗಿಂತ 15% ಹೆಚ್ಚಾಗಿದೆ. ಒಟ್ಟು ದೇಶೀಯ ರಾಜ್ಯ ಉತ್ಪನ್ನಕ್ಕೆ 22% ಸಾಲದ ಮಟ್ಟವನ್ನು ಗಮನಿಸಿ, ತಜ್ಞರು ಗ್ಯಾರಂಟಿಗಳ ಮೇಲಿನ ವೆಚ್ಚವನ್ನು ಪೂರೈಸಲು ಸಾಲವನ್ನು ತೆಗೆದುಕೊಳ್ಳದಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts