47 ಕೋಟಿ ನಷ್ಟ; ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಸೇರಿದಂತೆ ಹಲವು ಉಪಕರಣಗಳ ಖರೀದಿಯಲ್ಲಿ ಹಲವು ನಿಯಮಾವಳಿಗಳನ್ನು ಅಧಿಕಾರಿಗಳು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ 47 ಕೋಟಿ ರುಪಾಯಿ  ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಡಾ ಸ್ವತಂತ್ರಕುಮಾರ್‍‌ ಬಣಕಾರ್‍‌ ಅವರನ್ನು ಇದೀಗ ಸಾರ್ವಜನಿಕ ಆರೋಗ್ಯ ಸಂಸ್ಥೆಯ ತರಬೇತಿ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿರುವುದು ಇಲಾಖೆಯೊಳಗೇ ಅಪಸ್ವರ ಕೇಳಿ ಬಂದಿದೆ.

 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಸೇರಿದಂತೆ ಹಲವು ಉಪಕರಣಗಳ ಖರೀದಿಯಲ್ಲಿ ಹಲವು ನಿಯಮಾವಳಿಗಳನ್ನು ಅಧಿಕಾರಿಗಳು ಗಾಳಿಗೆ ತೂರಿದ್ದರು. ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಮಾಡಲು ಗುತ್ತಿಗೆ ನೀಡಿರುವ ಕಂಪನಿ ಜತೆ ಅಧಿಕಾರಿಗಳು ಶಾಮೀಲಾಗಿರುವ ಕಾರಣ ಸರ್ಕಾರಕ್ಕೆ ಅಂದಾಜು 47.07 ಕೋಟಿ ನಷ್ಟ ಸಂಭವಿಸಿತ್ತು.

 

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಆಪ್ತ ಕಾರ್ಯದರ್ಶಿಯಾಗಿದ್ದ  ಸಿ ನಾಗರಾಜ್‌ ಅವರು (ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರಗಾಗಿದ್ದ ಅವಧಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಕಾರ್ಯಾಕ್ರಮಾಧಿಕಾರಿಯೂ ಆಗಿದ್ದ ಉಪ ನಿರ್ದೇಶಕ ಸ್ವತಂತ್ರಕುಮಾರ್‌ ಬಣಕರ್‌ ಅವರು 47.07 ಕೋಟಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.  ಈ ಪ್ರಕರಣದ ಬಗ್ಗೆ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದ್ದ  ‘ದಿ ಫೈಲ್‌’, ಸರಣಿ ರೂಪದಲ್ಲಿ ಅಕ್ರಮದ ವಿವಿಧ ಮಗ್ಗುಲುಗಳನ್ನು ಮುಂದಿಟ್ಟಿತ್ತು.

 

ಸ್ವತಂತ್ರಕುಮಾರ್‍‌ ಬಣಕರ್‍‌ ಅವರ ವಿರುದ್ಧ ವರದಿ ಸಲ್ಲಿಕೆಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಡಾ ಕೆ ಸುಧಾಕರ್‍‌ ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ.  ಆದರೆ  ಸಚಿವ ದಿನೇಶ್‌ ಗುಂಡೂರಾವ್‌ ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಅವರನ್ನು ಡಾ ಸ್ವತಂತ್ರಕುಮಾರ್‍‌ ಬಣಕಾರ್‍‌ ಅವರನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯ ತರಬೇತಿ ಅಧಿಕಾರಿಯನ್ನಾಗಿ 2023ರ ಜುಲೈ 3ರಂದು ವರ್ಗಾವಣೆಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಜುಲೈ 3, 2023ರಂದು ಆರೋಗ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರತಿ

 

 

 

ನಷ್ಟ ತಪ್ಪಿಸಲು ಮುಂದಾಗಲಿಲ್ಲವೇಕೆ?

 

ವಿವಿಧ ಆಸ್ಪತ್ರೆಗಳಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಿಂದ ಸರಬರಾಜಾಗಿರುವ ಉಪಕರಣಗಳ ಮಾಹಿತಿ ಪಡೆಯದ ಲಂಚಕೋರ ಅಧಿಕಾರಿಗಳು, ಉಪಕರಣಗಳ ನಿರ್ವಹಣೆಯ ವಸ್ತುಸ್ಥಿತಿ, ಮೌಲ್ಯವನ್ನೂ ಕರಾರುವಕ್ಕಾಗಿ ನಿರ್ಣಯಿಸಿಲ್ಲ. ಅಧಿಕಾರಿಗಳ ಈ ಲೋಪದಿಂದಾಗಿ ಬಿಡ್‌ದಾರರು ಸರಿಯಾದ ದರ ಸೂಚಿಸಿಲ್ಲ. ಸರಿಯಾದ ದರ ಸೂಚಿಸಲು ಮೌಲ್ಯ ನಿರ್ಣಯಿಸಿದ್ದರೆ ಸರ್ಕಾರಕ್ಕೆ ಸಂಭವಿಸಬಹುದಾಗಿದ್ದ ನಷ್ಟವನ್ನು ತಪ್ಪಿಸಬಹುದಾಗಿತ್ತು. ಆದರೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಉಪಕರಣಗಳ ಮೌಲ್ಯವನ್ನು ಕರಾರುವಕ್ಕಾಗಿ ನಿರ್ಣಯಿಸದಿರುವ ಹಲವು ಪ್ರಕರಣಗಳು ವರದಿಯಾಗಿವೆ.

 

 

ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಟೆಂಡರ್‌ ಪ್ರಕ್ರಿಯೆಗಳೇ ಇದಕ್ಕೊಂದು ಉತ್ತಮ ನಿದರ್ಶನ. ಈ ಉಪಕರಣ ನಿರ್ವಹಣೆ ಸಂಬಂಧ ನಡೆದಿದ್ದ ಟೆಂಡರ್‌ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳಲ್ಲಿ ಲೋಪಗಳನ್ನು ಎಸಗಿದ್ದಾರೆ ಎಂಬ ಆರೋಪದ ಮೇರೆಗೆ ಉಪ ನಿರ್ದೇಶಕ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವರನ್ನು ಅಮಾನತುಗೊಳಿಸಲಾಗಿದೆಯಾದರೂ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮ ಕೈಗೊಂಡಿರಲಿಲ್ಲ.

 

 

2017ರ ಆಗಸ್ಟ್‌ 18ರಂದು ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರು ಬಯೋ ಮೆಡಿಕಲ್‌ ಉಪಕರಣಗಳ 3 ವರ್ಷಗಳ ಅವಧಿಗೆ ನಿರ್ವಹಣೆಗೆ ಸೇವಾದಾರರನ್ನು ಆಯ್ಕೆ ಮಾಡಲು ಆರ್‌ಎಫ್‌ಪಿ ಆಹ್ವಾನಿಸಿದ್ದರು. ಮೊದಲ ವರ್ಷದಲ್ಲಿ 9.6 ಕೋಟಿ, ಎರಡನೇ ವರ್ಷದಲ್ಲಿ 22.18 ಕೋಟಿ, ಮೂರನೇ ವರ್ಷದಲ್ಲಿ 22.18 ಕೋಟಿ ರೂ.ಗೆ ಅನುಮೋದನೆ ದೊರೆತಿತ್ತು. 2017ರಲ್ಲಿ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ 3 ಬಿಡ್‌ದಾರರಲ್ಲಿ ಒಬ್ಬರ ಬಿಡ್‌ ತಿರಸ್ಕೃತಗೊಂಡಿತ್ತು. ಇದರ ಮೇಲ್ಮನವಿ ಸಲ್ಲಿಸಿದ್ದ ಕಾರಣ ಟೆಂಡರ್‌ ರದ್ದುಗೊಳಿಸಲಾಗಿತ್ತು. ಹೀಗಾಗಿ 2018ರಲ್ಲಿ ಮತ್ತೊಮ್ಮೆ ಟೆಂಡರ್‌ ಕರೆಯಲಾಗಿತ್ತು.

 

 

74.98 ಕೋಟಿಗೆ ಕಾರ್ಯಾದೇಶ

 

 

ಟಿ ವಿ ಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌, ಜನಾರ್ಕ್ ಹೆಲ್ತ್‌ ಸಲ್ಯೂಷನ್ಸ್‌ ಮತ್ತು ಟ್ರಾನ್ಸ್‌ಕಾಲ್‌ ಇಂಜಿನಿಯರ್ಸ್ ಇಂಡಿಯಾ ಪ್ರೈ ಲಿ., ಮೂರು ಸಂಸ್ಥೆಯ ಕನ್‌ಸಾಸಿರ್ಯಮ್‌ ಪಾರ್ಟನರ್ಸ್‌ರವರೊಂದಿಗೆ 2019ರ ಫೆ.26ರಂದು ಕರಾರು ಸಹಿ ಮಾಡಲಾಗಿತ್ತು. 2019ರ ಮಾರ್ಚ್‌ 8ರಂದು 3 ವರ್ಷದ ಅವಧಿಗೆ ನಿರ್ವಹಣೆ ಮಾಡಲು 74.98 ಕೋಟಿ ರು.ಗೆ ಕಾರ್ಯಾದೇಶ ನೀಡಲಾಗಿತ್ತು.

 

ಮೂಲ ಪರಿಶೀಲಿಸದ ಬಣಕರ್‌?

 

 

ಬಯೋ ಮೆಡಿಕಲ್‌ ಉಪಕರಣದ ನಿರ್ವಹಣೆಯ ರಾಜ್ಯಮಟ್ಟದ ನೋಡಲ್‌ ಅಧಿಕಾರಿಯಾದ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವರು ಆರೋಗ್ಯ ಇಲಾಖೆಯ ಯಾವುದೇ ವಿಭಾಗ, ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿರುವ ಬಯೋ ಮೆಡಿಕಲ್‌ ಉಪಕರಣಗಳ ಪಟ್ಟಿ ಮತ್ತು ಅವುಗಳ ಮೂಲವನ್ನು ಪರಿಶೀಲಿಸಿರಲಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ. ಆರೋಗ್ಯ ಇಲಾಖೆಯಲ್ಲಿ 215 ಮಾದರಿ ಉಪಕರಣಗಳು, 1,13,560 ಒಟ್ಟು ಉಪಕರಣಗಳು, ಈ ಪೈಕಿ 34,280 ಉಪಕರಣಗಳಿಗೆ ನಿರ್ವಹಣೆ ಬೇಕಾಗಿದೆ. ಇವುಗಳ ಆಸ್ತಿಯ ಅಂದಾಜು ಮೌಲ್ಯ 582 ಕೋಟಿ ಎಂದು ಘೋಷಿಸಿದ್ದರು.

 

 

ಆಸ್ತಿ ಮೌಲ್ಯ ತಪ್ಪಾಗಿ ಅಂದಾಜಿಸಿದ್ದೇಕೆ?

 

 

ಮೊದಲ ವರ್ಷದಲ್ಲಿ ಒಟ್ಟು 34,280 ಉಪಕರಣಗಳಿಗೆ ನಿರ್ವಹಣೆ ಅಗತ್ಯವಿದೆ ಎಂದು ಘೋಷಿಸಿದ್ದ ಬಣಕರ್‌, ಈ ಪೈಕಿ 4,465 ಉಪಕರಣಗಳು ವಾರೆಂಟಿಯಲ್ಲಿದ್ದವು. 1,796 ಉಪಕರಣಗಳು ವಾರ್ಷಿಕ ನಿರ್ವಹಣೆಯಲ್ಲಿವೆ ಎಂದು ಹೇಳಿದ್ದರು. ಉಳಿದ 28,019 ಉಪಕರಣಗಳ ನಿರ್ವಹಣೆ ಮತ್ತು ಈ ಉಪಕರಣಗಳ ಆಸ್ತಿ ಮೌಲ್ಯ 137.20 ಕೋಟಿ, 2 ಮತ್ತು 3 ನೇ ವರ್ಷದಲ್ಲಿ ನಿರ್ವಹಣೆ ಮಾಡಬೇಕಾದ ಉಪಕರಣಗಳ ಆಸ್ತಿ ಮೌಲ್ಯ 316.83 ಕೋಟಿ ಎಂದು ಬಣಕರ್‌ ಅವರು ವರದಿ ಮಾಡಿದ್ದರು ಎಂಬುದು ತಿಳಿದು ಬಂದಿದೆ.

 

 

ನಿರ್ವಹಣೆ ಮೊತ್ತದ ಏರಿಕೆ ಹಿಂದಿತ್ತು ಪಿತೂರಿ

 

 

ಮೊದಲ ವರ್ಷದಲ್ಲಿ ಉಪಕರಣಗಳ ಆಸ್ತಿ ಮೌಲ್ಯ 137.20 ಕೋಟಿ ಇದ್ದದ್ದು 2 ಮತ್ತು 3ನೇ ವರ್ಷಕ್ಕೆ 316.83 ಕೋಟಿ ಏರಿಕೆಯಾಗಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಉಪಕರಣಗಳ ನಿರ್ವಹಣೆಯ ಸೇವಾದಾರರಿಗೆ ಅನುಕೂಲ ಮಾಡಿಕೊಡುವ ಒಂದೇ ಉದ್ದೇಶದಿಂದ ಉಪಕರಣಗಳ ಸಂಖ್ಯೆ ಮತ್ತು ಆಸ್ತಿ ಮೌಲ್ಯದಲ್ಲಿ ಏರಿಕೆ ಮಾಡಿದ್ದರು. ಆದರೆ ಬಣಕರ್‌ ಅವರ ಲೆಕ್ಕಾಚಾರವನ್ನು ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಸೇರಿದಂತೆ ಮೇಲಾಧಿಕಾರಿಗಳ್ಯಾರು ಪರಿಶೀಲಿಸದಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

 

ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಮಾಡಲು ಗುತ್ತಿಗೆ ನೀಡಿರುವ ಕಂಪನಿ ಜತೆ ಅಧಿಕಾರಿಗಳು ಶಾಮೀಲಾಗಿರುವ ಕಾರಣ ಸರ್ಕಾರಕ್ಕೆ ಅಂದಾಜು 47.07 ಕೋಟಿ ನಷ್ಟ ಸಂಭವಿಸಿರುವುದೂ ಸೇರಿದಂತೆ ಇಡೀ ಪ್ರಕರಣದ ಸುತ್ತ ‘ದಿ ಫೈಲ್‌’ ದಾಖಲೆ ಸಮೇತ 5 ವರದಿಗಳನ್ನು ಪ್ರಕಟಿಸಿತ್ತು.

 

ಸರ್ಕಾರಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವರದಿ ಸಲ್ಲಿಸಿ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸುವುದು ಸೂಕ್ತವೆಂದು ಹೇಳಿರುವುದು ‘ದಿ ಫೈಲ್‌’ ವರದಿಯನ್ನು ಮತ್ತೊಮ್ಮೆ ಬಲಪಡಿಸಿದಂತಾಗಿದೆ. ಈ ಪ್ರಕರಣದ ಸುತ್ತ ಪ್ರಕಟಿಸಿದ್ದ ವರದಿಗಳನ್ನು ಕ್ರೋಢೀಕರಿಸಿ ಇಲ್ಲಿ ಕೊಡಲಾಗಿದೆ.

 

 

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಆಪ್ತ ಕಾರ್ಯದರ್ಶಿಯಾಗಿರುವ ಸಿ ನಾಗರಾಜ್‌ ಅವರು (ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರಗಾಗಿದ್ದ ಅವಧಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಕಾರ್ಯಾಕ್ರಮಾಧಿಕಾರಿಯೂ ಆಗಿದ್ದ ಉಪ ನಿರ್ದೇಶಕ ಸ್ವತಂತ್ರಕುಮಾರ್‌ ಬಣಕರ್‌ ಅವರು 47.07 ಕೋಟಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ‘ದಿ ಫೈಲ್‌’ ಡಿಸೆಂಬರ್‌ 14, 2020 ರಂದು ವರದಿ ಪ್ರಕಟಿಸಿತ್ತು.

ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ;ಲಂಚಕೋರ ಅಧಿಕಾರಿಗಳ ಪಿತೂರಿಗೆ 47.07 ಕೋಟಿ ನಷ್ಟ

ಬಯೋ ಮೆಡಿಕಲ್‌ ಉಪಕರಣ ನಿರ್ವಹಣೆ ಸಂಬಂಧ ನಡೆದಿದ್ದ ಟೆಂಡರ್‌ ಪರಿಶೀಲನಾ ಸಭೆ, ಮೌಲ್ಯಮಾಪನ ಪ್ರಕ್ರಿಯೆ ಮತ್ತು ಅಂಕ ನೀಡಿಕೆಯಲ್ಲೇ ಸಂಚು ಹೂಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಆಯುಕ್ತ ಪಂಕಜಕುಮಾರ್‌ ಪಾಂಡೆ ಮತ್ತು ಉಪ ನಿರ್ದೇಶಕ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವರು ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಕಂಪನಿಗೆ ಲಾಭ ಮಾಡಿಕೊಟ್ಟಿದ್ದರು. ಈ ಕುರಿತು ಡಿಸೆಂಬರ್‌ 15, 2020ರಂದು ವರದಿ ಪ್ರಕಟಿಸಿತ್ತು.

ಟಿವಿಎಸ್‌ ಕಂಪನಿಗೆ 47.70 ಕೋಟಿ ಅಕ್ರಮ ಲಾಭ?; ಮೌಲ್ಯಮಾಪನದಲ್ಲೇ ನಿಯಮೋಲ್ಲಂಘನೆ

ಬಯೋಮೆಡಿಕಲ್‌ ಉಪಕರಣ ನಿರ್ವಹಣೆ ಸಂಬಂಧ ಆರೋಗ್ಯ ಇಲಾಖೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಲಂಚಕೋರ ಅಧಿಕಾರಿಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟದ ವಿವರಗಳು ಬಹಿರಂಗವಾಗುತ್ತಿರುವ ಬೆನ್ನಲ್ಲೇ ಹಲವು ಅಧಿಕಾರಿಗಳ ಚಾಣಾಕ್ಷತೆಯಿಂದ ಕೂಡಿದ್ದ ಲೋಪಗಳು ಬಯಲಾಗಿವೆ. ಟೆಂಡರ್‌ ಪರಿಶೀಲನಾ ಸಮಿತಿಯ ಸದಸ್ಯರು ಸಭೆ ನಡವಳಿಗಳ ಕೊನೆಯ 5 ಮತ್ತು 6ನೇ ಪುಟಗಳಿಗಷ್ಟೇ ಸಹಿ ಮಾಡಿದ್ದಾರೆಯೇ ವಿನಃ, ಉಳಿದ ನಿರ್ಣಯಗಳಿಗೆ ಯಾರೂ ಸಹಿ ಮಾಡದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ಕುರಿತು ಡಿಸೆಂಬರ್‌ 16, 2020ರಂದು ವರದಿ ಪ್ರಕಟಿಸಿತ್ತು.

ಬಯೋಮೆಡಿಕಲ್‌ ನಿರ್ವಹಣೆ; 21 ಕೋಟಿ ಹೆಚ್ಚಳದ ಹಿಂದೆ ಅಧಿಕಾರಿಗಳ ಚಾಣಾಕ್ಷ ನಡೆ

 

ಉಪಕರಣಗಳ ನಿರ್ವಹಣೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದ ಮೊತ್ತ ಮತ್ತು ಕರಾರಿಗೆ ಸಹಿ ಹಾಕುವಾಗ 47.7 ಕೋಟಿ ಹೆಚ್ಚಳ ಮಾಡಿದ್ದ ಅಧಿಕಾರಿಗಳು ಉಪಕರಣಗಳ ಆಸ್ತಿ ಮೌಲ್ಯದಲ್ಲಿಯೂ ಹೆಚ್ಚಳ ಮಾಡಿ ಕಂಪನಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿರುವುದು ಇದೀಗ ಮುನ್ನೆಲೆಗೆ ಬಂದಿತ್ತು. ಈ ಕುರಿತು ಡಿಸೆಂಬರ್‌ 17,2020ರಂದು ವರದಿ ಪ್ರಕಟಿಸಿತ್ತು.

ಬಯೋ ಮೆಡಿಕಲ್‌ ಉಪಕರಣದ ಆಸ್ತಿ ಮೌಲ್ಯದಲ್ಲೂ ಹೆಚ್ಚಳ; ಟಿವಿಎಸ್‌ ಕಂಪನಿಗೆ ಮತ್ತಷ್ಟು ಲಾಭ?

 

 

ಬಯೋ ಮೆಡಿಕಲ್‌ ಉಪಕರಣಗಳ ನಿರ್ವಹಣೆ ಸಂಬಂಧ ಕೆಡಿಎಲ್‌ಡಬ್ಲ್ಯೂಎಸ್‌ನ ಅಧಿಕಾರಿಗಳು ಹೆಜ್ಜೆ ಹೆಜ್ಜೆಯಲ್ಲೂ ಅಕ್ರಮ ನಡೆಸಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ. ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ ಸಲ್ಲಿಸಿದ್ದ ಪ್ರೊಫ್ರಾಮಾ ಇನ್‌ವಾಯ್ಸ್‌ನಲ್ಲಿ ಒದಗಿಸಿದ್ದ ಜಿಎಸ್‌ಟಿ ನಂಬರ್‌ ನಕಲಿಯಾಗಿದ್ದರೂ ಪರಿಶೀಲಿಸದ ಅಧಿಕಾರಿಗಳಿಂದ ಸರ್ಕಾರಕ್ಕೆ ನಷ್ಟ ಉಂಟಾಗಿದೆ.

 

ಉಪಕರಣಗಳ ನಿರ್ವಹಣೆ ಗುತ್ತಿಗೆ ಪಡೆದಿರುವ ಟಿವಿಎಸ್‌ ಲಾಜಿಸ್ಟಿಕ್ಸ್‌ ಸರ್ವಿಸ್‌ಗೆ ನೀಡಿರುವ ಮುಂಗಡದಲ್ಲೂ ಅವ್ಯವಹಾರದ ವಾಸನೆ ಹಬ್ಬಿದೆ. ನೋಟಿಫಿಕೇಷನ್‌ ಅವಾರ್ಡ್‌ನ ಆಧಾರದ ಮೇಲೆ 5.41 ಕೋಟಿ ರು. ಮುಂಗಡ ನೀಡಿರುವ ಇಲಾಖೆ, ಕಂಪನಿ ನೀಡಿದ್ದ ಜಿಎಸ್‌ಟಿ ನಂಬರ್‌ನ್ನು ಪರಿಶೀಲಿಸದೆಯೇ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಇದರಿಂದ ಸರ್ಕಾರಕ್ಕೆ ಜಿಎಸ್‌ಟಿಯೂ ವಂಚನೆಯಾಗಿದೆ ಎಂದು ತಿಳಿದು ಬಂದಿತ್ತು. ಈ ಕುರಿತು ಡಿಸೆಂಬರ್‌ 18,2020ರಂದು ವರದಿ ಪ್ರಕಟಿಸಿತ್ತು.

ಬಯೋ ಮೆಡಿಕಲ್‌; ಮುಂಗಡ ನೀಡಿಕೆಯಲ್ಲೂ ಅವ್ಯವಹಾರ, ಜಿಎಸ್‌ಟಿಯಲ್ಲೂ ವಂಚನೆ

ಒಟ್ಟಾರೆ ಈ ಪ್ರಕರಣದಲ್ಲಿ 47 ಕೋಟಿ ರೂ.ಗೂ ಅಧಿಕ ಮೊತ್ತದಲ್ಲಿ ನಷ್ಟವಾಗಿತ್ತು. ಆದರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ವರದಿ ಪ್ರಕಾರ ಕೇವಲ 12.51 ಕೋಟಿ ಮಾತ್ರ ಎಂದು ಹೇಳಲಾಗಿದೆ. ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಇದು ಹಿಂದಿ ಸರ್ಕಾರದ ಅವಧಿಯಲ್ಲಿ ನೀಡಿದ್ದ ಗುತ್ತಿಗೆ ಪ್ರಕರಣ. ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸದ ಕಾರಣಕ್ಕೆ ಕಂಪನಿಗೆ ನೀಡಬೇಕಾದ ಹಣವನ್ನು ತಡೆಹಿಡಿಯಲಾಗಿದೆ ಎಂದು ಪ್ರಜಾವಾಣಿಗೆ ಅಭಿಪ್ರಾಯ ನೀಡಿದ್ದಾರೆ.

SUPPORT THE FILE

Latest News

Related Posts