Monday | March 23, 2026 |

ಉಲ್ಲಂಘನೆ, ಹೆಚ್ಚುವರಿ ಪ್ರವೇಶ ಆರೋಪ; ಉನ್ನತ ಶಿಕ್ಷಣ ಇಲಾಖೆಯ ಪರಿವೀಕ್ಷಣೆಗೆ ಖಾಸಗಿ ವಿವಿಗಳಿಂದ ಆಕ್ಷೇಪಣೆ

Support THE-FILE

spot_img

ಬೆಂಗಳೂರು; ಮೂಲಭೂತ ಸೌಕರ್ಯಗಳು, ವಿದ್ಯಾರ್ಥಿಗಳ ಪ್ರವೇಶಾತಿ, ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಗುಣಮಟ್ಟ, ಯುಜಿಸಿ, ಎಐಸಿಟಿಯು ಮಾರ್ಗಸೂಚಿಗಳು ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬುದೂ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಪರಿಷತ್‌ನ ನಿಯತಕಾಲಿಕ ಪರಿವೀಕ್ಷಣೆಗೆ ರಾಜ್ಯದ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ಆಕ್ಷೇಪಣೆ ವ್ಯಕ್ತಪಡಿಸಿರುವುದನ್ನು ‘ದಿ ಫೈಲ್‌’ ಇದೀಗ ಆರ್‌ಟಿಐ ದಾಖಲೆಗಳ ಸಹಿತ ಹೊರಗೆಡವುತ್ತಿದೆ.

 

2010ರಿಂದ 2014ರವರೆಗಿನ ಅವಧಿಯಲ್ಲಿ ಸ್ಥಾಪನೆಯಾಗಿದ್ದ ಅಜೀಮ್‌ ಪ್ರೇಮ್‌ ಜಿ, ಅಲಿಯನ್ಸ್‌, ರೇವಾ, ಎಂ ಎಸ್‌ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ಪಿಇಎಸ್‌, ಸಿಎಂಆರ್‌, ದಯಾನಂದ ಸಾಗರ, ದಿ ರೈ ತಾಂತ್ರಿಕ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳಲ್ಲಿ ನಡೆದಿರಬಹುದಾದ ಸಂಭಾವ್ಯ ಅಕ್ರಮಗಳ ಬಗ್ಗೆ ಇಂಜನಿಯರಿಂಗ್‌ ಕೋರ್ಸ್‌ಗಳಿಗೆ ನಿಗದಿತ ವಿದ್ಯಾರ್ಥಿ ಪ್ರಮಾಣಕ್ಕಿಂತಲೂ ಹೆಚ್ಚುವರಿ ಪ್ರವೇಶ ಮಾಡಿಕೊಂಡಿವೆ ಎಂದು ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ಮತ್ತು ರಾಜ್ಯದ ಇಂಜನಿಯರಿಂಗ್‌ ಕಾಲೇಜುಗಳ ಪ್ರಾಂಶುಪಾಲರು ದೂರು ನೀಡಿದ್ದರು.

 

ಈ ದೂರನ್ನಾಧರಿಸಿ ತನಿಖೆ ನಡೆಸಲು ಮುಂದಾಗಿದ್ದ ವೇಳೆಯಲ್ಲಿ ನಿಯತಕಾಲಿಕವಾಗಿ ಪರಿವೀಕ್ಷಣೆಗೆ ಖಾಸಗಿ ವಿಶ್ವವಿದ್ಯಾಲಯಗಳು ವ್ಯಕ್ತಪಡಿಸಿದ್ದ ಅಕ್ಷೇಪಣೆಯನ್ನು ಬಲವಾಗಿ ಪ್ರತಿರೋಧಿಸದ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸಮಿತಿಯು, ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳಿಗೆ ಕ್ಲೀನ್‌ಚಿಟ್‌ ನೀಡಿರುವುದು ಸಹ ದಾಖಲೆಗಳಿಂದ ಬಹಿರಂಗವಾಗಿದೆ. ಈ ಸಂಬಂಧ ‘ದಿ ಫೈಲ್‌’ 212 ಪುಟಗಳ ದಾಖಲೆಗಳನ್ನು ಆರ್‌ಟಿಐ ಮೂಲಕ ಪಡೆದಿದೆ.

 

ದೂರಿನಲ್ಲಿತ್ತು ಉಲ್ಲಂಘನೆಗಳ ಪಟ್ಟಿ

 

ಖಾಸಗಿ ವಿಶ್ವವಿದ್ಯಾಲಯಗಳು ಒಂದೊಂದು ವಿಭಾಗದಲ್ಲಿ 400ರಿಂದ 500ಕ್ಕಿಂತಲೂ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವೈಜ್ಞಾನಿಕವಾಗಿ ಪ್ರವೇಶ ನೀಡಿದೆ. ಹೀಗಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಈ ವಿಶ್ವವಿದ್ಯಾಲಯಗಳು ಯುಜಿಸಿ ಮತ್ತು ಎಐಸಿಟಿಇಯು ನಿಯಮಾವಳಿಗಳನ್ನು ಪದೇಪದೇ ಉಲ್ಲಂಘಿಸುತ್ತಿವೆ. ಈ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆದಿರುವ ಹಲವು ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು ಕಟ್ಟುನಿಟ್ಟಾಗಿ ನಿಯಮಗಳ ಪ್ರಕಾರ ಪರೀಕ್ಷೆಯನ್ನೂ ನಡೆಸುತ್ತಿಲ್ಲ. ಹಲವು ಸಂದರ್ಭಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಗುಣಮಟ್ಟದ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುತ್ತಿಲ್ಲ. ಈ ಎಲ್ಲವುಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟವು ಅಂದಿನ ಕೇಂದ್ರ ಉನ್ನತ ಶಿಕ್ಷಣ ಸಚಿವ, ಮತ್ತು 2018ರಲ್ಲಿದ್ದ ರಾಜ್ಯದ ಮುಖ್ಯಮಂತ್ರಿಗೆ ದೂರು ಸಲ್ಲಿಸಿತ್ತು.

 

ಈ ದೂರನ್ನಾಧರಿಸಿ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ತನಿಖೆ ನಡೆಸಲು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕ್ಲೀನ್‌ ಚಿಟ್‌ ನೀಡಿದೆ. ಆದರೆ ಈ ಸಮಿತಿಯು ಆರೋಪಕ್ಕೆ ಗುರಿಯಾಗಿರುವ ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳನ್ನು ಭೌತಿಕವಾಗಿ ಪರಿಶೀಲಿಸಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕಡತದಲ್ಲಿ ಯಾವುದೇ ದಾಖಲೆಗಳಿಲ್ಲ.

 

ವಿಚಾರಣೆಗೆ ನಿಗದಿಪಡಿಸಿದ್ದ ವಿಷಯಗಳ ಪಟ್ಟಿ

 

ತಾಂತ್ರಿಕ ಶಿಕ್ಷಣವನ್ನು ಬೋಧಿಸುತ್ತಿರುವ ರಾಜ್ಯದ ಪ್ರತಿಯೊಂದು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಬೋಧಿಸಲು ಎಐಸಿಟಿಯು ನಿಇಯಮಗಳು, ಮಾನದಂಡದಂತೆ ಮೂಲಭೂತ ಸೌಕರ್ಯಗಳನ್ನು ಹೊಂದಿದೆಯೇ ಅಥವಾ ಇಲ್ಲವೇ, ತಾಂತ್ರಿಕ ಶಿಕ್ಷಣವನ್ನ ಬೋಧಿಸಲು ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಗುಣವಾಗಿ ಅಗತ್ಯ ಮೂಲಭೂತ ಸೌಕರ್ಯಗಳು ಮತ್ತು ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ, ಬೋಧಕ, ಬೋಧಕೇತರ ಅನುಪಾತವು ಇದೆಯೇ ಅಥವಾ ಇಲ್ಲವೇ, ಪ್ರಸ್ತುತ ಹೊಂದಿರುವ ಮೂಲಭೂತ ಸೌಕರ್ಯಗಳು ಮತ್ತು ಬೋಧಕ, ಬೋಧಕೇತರರಿಗೆ ಹೋಲಿಕೆ ಮಾಡಿದಲ್ಲಿ ಆ ವಿಶ್ವವಿದ್ಯಾಲಯಕ್ಕೆ ನಿಗದಿಪಡಿಸಬಹುದಾದ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ, ಪ್ರವೇಶಾತಿ ರದ್ದುಪಡಿಸಿದಲ್ಲಿ ವಿಧಿಸುತ್ತಿರುವ ಶುಲ್ಕದ ಬಗ್ಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಶುಲ್ಕಗಳನ್ನು ಮತ್ತು ಸರ್ಕಾರಿ ಪ್ರಾಧಿಕಾರಗಳಿಂದ ಪಡೆದ ವಿದ್ಯಾರ್ಥಿ ವೇತನಗಳನ್ನು ಸಮರ್ಪಕವಾಗಿ ಸಂಬಂಧಿಸಿದ ಫಲಾನುಭವಿಗಳಿಗೆ ವರ್ಗಾಯಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸಲು ವಿಚಾರಣೆ ನಿಬಂಧನೆಗಳನ್ನು ಸಮಿತಿಗೆ ನೀಡಿತ್ತು.

 

ಈ ಎಲ್ಲದರ ಕುರಿತು ತನಿಖೆ ನಡೆಸಿರುವ ಸಮಿತಿಯು ವಿಚಾರಣೆ ನಿಬಂಧನೆಗಳಿಗೆ ಅನುಗುಣವಾಗಿ ಸಮಿತಿಯು ಷರಾ ಮಾತ್ರ ಬರೆದಿದೆ. ಆದರೆ ನಿರ್ದಿಷ್ಟವಾಗಿ ವಿಶ್ವವಿದ್ಯಾಲಯಗಳಲ್ಲಿ ನಿಗದಿತ ವಿದ್ಯಾರ್ಥಿ ಪ್ರಮಾಣ ಮತ್ತು ವಾಸ್ತವಿಕ ತರಗತಿಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಕುರಿತು ವರದಿಯಲ್ಲಿ ಎಲ್ಲಿಯೂ ನಮೂದಿಸಿಲ್ಲ. ಹಾಗೆಯೇ ನಿರ್ದಿಷ್ಟವಾಗಿ ಮೂಲಭೂತ ಸೌಕರ್ಯಗಳ ಕುರಿತು ಸಮಿತಿಯು ಭೌತಿಕವಾಗಿ ಪರಿಶೀಲನೆ ನಡೆಸಿದೆಯೇ ಇಲ್ಲವೇ ಎಂಬುದರ ಕುರಿತಾದ ಯಾವುದೇ ದಾಖಲೆಗಳು ಕಡತದಲ್ಲಿ ಇಲ್ಲ. ವಿಚಾರಣೆ ನಿಬಂಧನೆಗಳ ಪ್ರಶ್ನಾವಳಿಗಳಿಗೆ ಖಾಸಗಿ ವಿಶ್ವವಿದ್ಯಾಲಯಗಳಿಂದಲೇ ಮಾಹಿತಿ ಪಡೆದು ಉತ್ತರಗಳನ್ನೇ ಸಮಿತಿಯು ಪುರಸ್ಕರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

‘ಖಾಸಗಿ ವಿಶ್ವವಿದ್ಯಾಲಯಗಳು ಇಂಜನಿಯರಿಂಗ್‌ ಸೀಟುಗಳನ್ನು ನಿಯಮಾನುಸಾರ ಭರ್ತಿ ಮಾಡುತ್ತಿವೆಯೇ ಎಂಬ ಬಗ್ಗೆ ಪಾರದರ್ಶಕವಾಗಿ ಕ್ರಮ ಕೈಗೊಂಡು ಪ್ರತಿ ವರ್ಷವೂ ಈ ಮಾಹಿತಿಗಳನ್ನು ಸಾರ್ವಜನಿಕವಾಗಿ ತಿಳಿಯಪಡಿಸುವುದಕ್ಕಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಮೂಲಕ ಅವಶ್ಯ ಕ್ರಮ ಕೈಗೊಳ್ಳುವುದು ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2021ರ ಏಪ್ರಿಲ್‌ 20ರಂದು ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

 

 

ನಿಯತಕಾಲಿಕ ಪರಿವೀಕ್ಷಣೆಗೆ ಆಕ್ಷೇಪ

 

ಖಾಸಗಿ ವಿಶ್ವವಿದ್ಯಾಲಯಗಳು ಪ್ರಸ್ತುತ ಹೊಂದಿರುವ ಮೂಲಭೂತ ಸೌಕರ್ಯಗಳು ಮತ್ತು ಬೋಧಕ, ಬೋಧಕೇತರರಿಗೆ ಹೋಲಿಕೆ ಮಾಡಿದಲ್ಲಿ ಅ ವಿಶ್ವವಿದ್ಯಾಲಯಕ್ಕೆ ನಿಗದಿಪಡಿಸಬಹುದಾದ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯ ಕುರಿತು ಷರಾ ಬರೆದಿರುವ ಸಮಿತಿಯು ‘ ಖಾಸಗಿ ವಿಶ್ವವಿದ್ಯಾಲಯಗಳನ್ನು ನಿಯತಕಾಲಿಕ ಪರಿವೀಕ್ಷಣೆಯನ್ನು ನಡೆಸಲು ಸದರಿ ವಿಶ್ವವಿದ್ಯಾಲಯಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ತಪಾಸಣೆ ಕೈಗೊಂಡಿರುವುದಿಲ್ಲ,’ ಎಂಬ ಅಂಶವನ್ನೂ ಉಲ್ಲೇಖಿಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

 

ಖಾಸಗಿ ವಿಶ್ವವಿದ್ಯಾಲಯ ರಚನೆ ಮತ್ತು ಅದರ ಆಗುಹೋಗುಗಳನ್ನು ಪರಿಶೀಲಿಸಲು ಸರ್ಕಾರದಿಂದಲೇ ನಿಯಮಬದ್ಧವಾಗಿಯೇ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ವಿಶ್ವವಿದ್ಯಾಲಯಗಳಲ್ಲಿ ನಿಯತಕಾಲಿಕವಾಗಿ ಪರಿವೀಕ್ಷಣೆ ಮಾಡಿ ವರದಿ ನೀಡಬೇಕು. ಇದಕ್ಕೆ ನಿಯಮಗಳಲ್ಲಿ ಅವಕಾಶವಿದೆ. ಒಂದೊಮ್ಮೆ ಆಕ್ಷೇಪ ವ್ಯಕ್ತಪಡಿಸಿದರೆ ಅದು ನಿಯಮಬಾಹಿರವಾಗುತ್ತದೆ ತನಿಖೆಗೆ ಮತ್ತು ನಿಯತಕಾಲಿಕವಾಗಿ ಪರಿವೀಕ್ಷಣೆಗೆ ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳೂ ಒಳಪಡಲೇಬೇಕು ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದ ಆರ್‌ ಸೋಮಶೇಖರ್‌.

 

‘ಖಾಸಗಿ ವಲಯದ ಬಹುತೇಕ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಕೈಯಲ್ಲಿವೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಇಂತಹ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಅಂಕ ನೀಡಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪರಿವೀಕ್ಷಣೆ ನಡೆಸಿದರೆ ಅಲ್ಲಿ ನೀಡುತ್ತಿರುವ ಕಳಪೆ ಶಿಕ್ಷಣ ಬಹಿರಂಗವಾಗುತ್ತದೆ. ಆಗ ಮಾರುಕಟ್ಟೆಯಲ್ಲಿ ಅಂತಹ ವಿಶ್ವವಿದ್ಯಾಲಯಗಳಿಗೆ ಮೌಲ್ಯ ಇರುವುದಿಲ್ಲ. ಸೀಟುಗಳು ಮಾರಾಟವಾಗುವುದಿಲ್ಲ. ಹೀಗಾಗಿ ನಿಯತಕಾಲಿಕವಾಗಿ ಪರಿವೀಕ್ಷಣೆಗೆ ಆಕ್ಷೇಪಣೆ ವ್ಯಕ್ತಪಡಿಸಲಾಗುತ್ತಿದೆ. ಖಾಸಗಿ ವಿಶ್ವವಿದ್ಯಾಲಯಗಳ ಇಂತಹ ದಾಷ್ಟ್ರ್ಯಕ್ಕೆ ಕಡಿವಾಣ ಹಾಕಬೇಕಾದರೆ ಸರ್ಕಾರವು ಇಂತಹ ವಿಶ್ವವಿದ್ಯಾಲಯಗಳಲ್ಲಿ ನೀಡುತ್ತಿರುವ ಶಿಕ್ಷಣ ಗುಣಮಟ್ಟವನ್ನು ಒರೆಗೆ ಹಚ್ಚುವ ಭಾಗವಾಗಿಯೇ ಪ್ರತಿ ವರ್ಷ ಸ್ವತಂತ್ರ ಸಮಿತಿಯನ್ನು ನೇಮಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎನ್ನುತ್ತಾರೆ ಶಿಕ್ಷಣ ತಜ್ಞ ಮುಜಾಫರ್‌ ಅಸ್ಸಾದಿ ಅವರು.

Hot this week

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

Topics

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

Related Articles

Popular Categories

error: Content is protected !!