ಬೆಂಗಳೂರು; ಆದಾಯಕ್ಕಿಂತ ಶೇಕಡ 207.11ರಷ್ಟು ಹೆಚ್ಚು ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿಗೊಳಗಾಗಿ ಸೇವೆಯಿಂದ ಅಮಾನತುಗೊಂಡಿದ್ದ ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರ್ (ಯೋಜನೆ-ಕೇಂದ್ರ) ಕೆ.ಟಿ.ನಾಗರಾಜ್ ಅವರನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾಗಿದ್ದ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಬಿ ಎಸ್ ಪ್ರಹ್ಲಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಇದೀಗ ಕೆ ಟಿ ನಾಗರಾಜ್ ಅವರನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರರಾಗಿರುವುದು ಅಧಿಕಾರಶಾಹಿಯೊಳಗೇ ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೆ ಕೆ ಟಿ ನಾಗರಾಜ್ ಅವರಿಗಾಗಿಯೇ ಉಪ ಮುಖ್ಯಮಂತ್ರಿಯವರ ಆಪ್ತ ಶಾಖೆಯಲ್ಲಿದ್ದ ಗ್ರೂಪ್ -ಸಿ ಹುದ್ದೆಯನ್ನು ಗ್ರೂಪ್-ಎ ಹುದ್ದೆಗೇರಿಸಿರುವುದು ಅಧಿಸೂಚನೆಯಿಂದ ತಿಳಿದು ಬಂದಿದೆ.
ಬಿಬಿಎಂಪಿಯ ತಾಂತ್ರಿಕ ವಿಭಾಗದ ಮುಖ್ಯ ಇಂಜನಿಯರ್ ಆಗಿದ್ದ ಕೆ ಟಿ ನಾಗರಾಜ ಅವರನ್ನು ಉಪ ಮುಖ್ಯಮಂತ್ರಿಯವರ ಆಪ್ತ ಶಾಖೆಯಲ್ಲಿ ಗ್ರೂಪ್ ಸಿ ಹುದ್ದೆಯನ್ನು ತಾತ್ಕಾಲಿಕವಾಗಿ ನಿಲಂಬನೆಯಲ್ಲಿರಿಸಿ ಈ ಗ್ರೂಪ್ ಸಿ ಹುದ್ದೆಯನ್ನು ತಾತ್ಕಾಲಿಕವಾಗಿ ತಾಂತ್ರಿಕ ಸಲಹೆಗಾರರು (ಗ್ರೂಪ್ ಎ) ಹುದ್ದೆಯನ್ನಾಗಿ ಉನ್ನತೀಕರಿಸಿ ಉಪ ಮುಖ್ಯಮಂತ್ರಿಯವರ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಇವರನ್ನು ಉಪ ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರನ್ನಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿ ಆದೇಶಿಸಿದೆ ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು 2023ರ ಜೂನ್ 19ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೆ.ಟಿ.ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದ ಎಸಿಬಿ ಅಧಿಕಾರಿಗಳ ಕೆ ಟಿ ನಾಗರಾಜ (ಎಸಿಬಿ/ಬೆಂ.ನ/ಮೊ.ಸಂ.08/2017) ತಂಡವು ಅವರ ನಿವಾಸದ ಮೇಲೆ 2017ರ ಫೆ. 28ರಂದು ದಾಳಿ ನಡೆಸಿತ್ತು. ಈ ವೇಳೆ 7.30 ಕೋಟಿ ರೂ. ಮೌಲ್ಯದ ಆಸ್ತಿ ಸಂಬಂಧ ದಾಖಲೆ ಪತ್ರ ವಶಪಡಿಸಿಕೊಳ್ಳಲಾಗಿತ್ತು. ಕೆ.ಟಿ.ನಾಗರಾಜ್ ಅಕ್ರಮವಾಗಿ ಆದಾಯಕ್ಕಿಂತ ಹೆಚ್ಚುವರಿಯಾಗಿ 5,28,13,998 ರೂ. ಆಸ್ತಿ ಹೊಂದಿದ್ದಾರೆ. ಇದು ಅವರ ಆದಾಯಕ್ಕಿಂತ 207.11ರಷ್ಟು ಜಾಸ್ತಿ ಇರುವುದು ತನಿಖೆಯಿಂದ ದೃಢಪಟ್ಟಿತ್ತು. ಆ ನಂತರ ಪ್ರಕರಣದಲ್ಲಿ ಹೈಕೋರ್ಟ್ ಎಂಟು ವಾರಗಳವರೆಗೆ ತಡೆಯಾಜ್ಞೆ ನೀಡಿತ್ತು ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಕೆ ಟಿ ನಾಗರಾಜ್ ಅವರ ಮನೆ ಮೇಲೆ ದಾಳಿ ನಡೆದು ಮತ್ತು ಇದೇ ಪ್ರಕರಣದಲ್ಲಿ ಅಮಾನತುಗೊಂಡಿದ್ದರೂ ಈಗ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ತಾಂತ್ರಿಕ ಸಲಹೆಗಾರರಾಗಿರುವುದು ವಿಶೇಷ.
ಎಸಿಬಿ ಪ್ರಾಥಮಿಕ ವರದಿಯು ಹೇಳಿದ್ದೇನು?
ಕೆ.ಟಿ.ನಾಗರಾಜ್ ಅಕ್ರಮವಾಗಿ ಆದಾಯಕ್ಕಿಂತ ಹೆಚ್ಚುವರಿಯಾಗಿ 5,28,13,998 ರೂ. ಆಸ್ತಿ ಹೊಂದಿದ್ದಾರೆ. ಇದು ಅವರ ಆದಾಯಕ್ಕಿಂತ 207.11ರಷ್ಟು ಜಾಸ್ತಿ ಇರುವುದು ತನಿಖೆಯಿಂದ ದೃಢಪಟ್ಟಿದೆ. ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿದರೆ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಜತೆಗೆ ಪ್ರಭಾವ ಬಳಸಿ ಸಾಕ್ಷ್ಯಾಧಾರ ನಾಶಪಡಿಸುವ ಅಥವಾ ಸಾಕ್ಷಿದಾರರಿಗೆ ಬೆದರಿಕೆಯೊಡ್ಡುವ ಸಾಧ್ಯತೆಗಳಿವೆ. ಹಾಗಾಗಿ ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿಡಬೇಕು ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪ್ರಾಥಮಿಕ ತನಿಖಾ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದರು. ತನಿಖಾ ವರದಿ ಆಧರಿಸಿ, ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಕೆ.ಎ.ಹಿದಾಯತ್-ಉಲ್ಲಾ ಅವರು ಕೆ.ಟಿ.ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಾ.31ರಂದು ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಸರ್ಕಾರದ ಹಂತದಲ್ಲಿ ಅಮಾನತುಗೊಳಿಸಲಾಗಿದ್ದು ನಂತರ ಸರ್ಕಾರದ ಆದೇಶದಂತೆ ಪಾಲಿಕೆಯಲ್ಲಿ ಕರ್ತವ್ಯದ ಮೇಲೆ ತೆಗೆದುಕೊಳ್ಳಲಾಗಿತ್ತು. ಪ್ರಕರಣವು ಎಸಿಬಿ ಹಂತದಲ್ಲಿ ಬಾಕಿ ಇರುತ್ತದೆ. ಪ್ರಸ್ತುತ ಇವರು ವಯೋ ನಿವೃತ್ತಿ ಹೊಂದಿರುತ್ತಾರೆ. ಭ್ರಷ್ಟಾಚಾರ ನಿಗ್ರಹ ದಳದ ವಿಚಾರಣೆ ಬಾಕಿ ಇದೆ ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023ರ ಮಾರ್ಚ್‌ನಲ್ಲಿ ವಿಧಾನಪರಿಷತ್‌ಗೆ ಲಿಖಿತ ಉತ್ತರ ಮಂಡಿಸಿದ್ದನ್ನು ಸ್ಮರಿಸಬಹುದು.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾಗಿದ್ದ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಬಿ ಎಸ್ ಪ್ರಹ್ಲಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.
ಸಿ ಎಂ ಟಿಪ್ಪಣಿ
ಬಿ ಎಸ್ ಪ್ರಹ್ಲಾದ್ ಪ್ರಧಾನ ಅಭಿಯಂತರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರನ್ನು ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಬೃಹತ್ ನೀರುಗಾಲುವೆ ಶಾಖೆಯ ನೇರ ಉಸ್ತುವಾರಿಯಲ್ಲಿ ನಿಯೋಜಿಸಿ ಆದೇಶಿಸಿಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಜೂನ್ 28ರಂದು ಟಿಪ್ಪಣಿ ಹೊರಡಿಸಿದ್ದರು.
ಕಾಸಿಗಾಗಿ ಪೋಸ್ಟಿಂಗ್ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍ಗೆ ಹೊಸ ಹುದ್ದೆ
ಟಿಪ್ಪಣಿ ಹೊರಡಿಸಿದ ದಿನದಂದೇ ಅವರನ್ನು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಇಂಜಿನಿಯರ್ ಹುದ್ದೆಗೆ ನಿಯೋಜಿಸಿರುವ ನಗರಾಭಿವೃದ್ಧಿ ಇಲಾಖೆಯು ಆದೇಶವನ್ನೂ ಹೊರಡಿಸಿದೆ.
ಬಿ ಎಸ್ ಪ್ರಹ್ಲಾದ್ ಅವರ ಮೇಲೆ ಎಸಿಬಿ ದಾಳಿ ನಡೆಸಿತ್ತು ಮತ್ತು ಈ ಪ್ರಕರಣವು ವಿಚಾರಣೆಗೆ ಬಾಕಿ ಇದೆ ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಮಾರ್ಚ್ 10ರಂದೇ ಕರ್ನಾಟಕ ವಿಧಾನಪರಿಷತ್‌ಗೆ ಲಿಖಿತ ಉತ್ತರ ಮಂಡಿಸಿದ್ದರು. ಈ ಪ್ರಶ್ನೆಯನ್ನು ವಿಧಾನಪರಿಷತ್ ಸದಸ್ಯ ಡಾಕೆ ಗೋವಿಂದರಾಜ್ ಅವರು ಕೇಳಿದ್ದರು. ವಿಶೇಷವೆಂದರೆ ಗೋವಿಂದರಾಜ್ ಅವರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.