ವರ್ಗಾವಣೆಗೆ ಚಿರತೆ ವೇಗ; ಬಕ್ರೀದ್‌ ಹಬ್ಬವಿದ್ದರೂ ಮಾಹಿತಿ ಕ್ರೋಢೀಕರಿಸಲು ಕರ್ತವ್ಯಕ್ಕೆ ಹಾಜರಾಗಿ,ಇಲ್ಲವೇ ಶಿಸ್ತುಕ್ರಮ

photo credit;dineshgundurao official twitter page

ಬೆಂಗಳೂರು; ಸರ್ಕಾರಿ ಅಧಿಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಇದೇ ಜೂನ್‌ 30 ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಸಚಿವರಾದಿಯಾಗಿ ಇಲಾಖೆ ಮುಖ್ಯಸ್ಥರು ವರ್ಗಾವಣೆ ಪ್ರಕ್ರಿಯೆಗೆ ಚಿರತೆ ವೇಗ ನೀಡಿದ್ದಾರೆ. ಈ ಮಧ್ಯೆ ನಾಳೆ ಬಕ್ರಿದ್‌ ಹಬ್ಬದ ಕಾರಣ ಸಾರ್ವಜನಿಕ ರಜಾ ದಿನ ಎಂದು ಘೋಷಿಸಿದ್ದರೂ  ರಜಾ ದಿನದಂದೇ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿ ಸಚಿವಾಲಯವು ಕೋರಿರುವ ಮಾಹಿತಿಗಳನ್ನು ಕ್ರೋಢೀಕರಿಸಲು ಬಹುತೇಕ ಇಲಾಖೆಗಳ ಮುಖ್ಯಸ್ಥರು ಕೆಳ ಹಂತದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

 

ವರ್ಗಾವಣೆ ಪ್ರಕ್ರಿಯೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್‌ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬೆನ್ನಲ್ಲೇ ಸಾರ್ವಜನಿಕ ರಜಾ ದಿನದಲ್ಲೂ ಕರ್ತವ್ಯಕ್ಕೆ ಹಾಜರಾಗಿ ವರ್ಗಾವಣೆ ಪ್ರಕ್ರಿಯೆ ಸಂಬಂಧ ಸಚಿವಾಲಯವು ಕೋರಿರುವ ಮಾಹಿತಿಯನ್ನು ಕ್ರೋಢೀಕರಿಸಿಕೊಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ನಿರ್ದೇಶಕರು 2023ರ ಜೂನ್‌ 28ರಂದು ತರಾತುರಿಯ ಸುತ್ತೋಲೆಯು ಮುನ್ನೆಲೆಗೆ ಬಂದಿದೆ. ಈ ಸುತ್ತೋಲೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸುತ್ತೋಲೆಯಲ್ಲೇನಿದೆ?

 

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ಚಾಲನೆಯಲ್ಲಿದ್ದು ಸರ್ಕಾರದ ಆದೇಶ (ಸಂಖ್ಯೆ ಸಿಆಸುಇ 07 ಸೇನೌವ 2023-24, ದಿನಾಂಕ 16.06.2023 ಅನ್ವಯ ದಿನಾಂಕ 30.06.2023) ಅಂತಿಮ ದಿನಾಂಕವಾಗಿರುವುದರಿಂದ ಸದರಿ ವಿಷಯವಾಗಿ ಸಿಬ್ಬಂದಿಗಳ ಸೇವಾ ವಿವರವನ್ನು ತುರ್ತಾಗಿ ಸರ್ಕಾರಕ್ಕೆ ಒದಗಿಸಬೇಕಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಆಡಳಿತಾಧಿಕಾರಿಗಳು ಮತ್ತು ಅವರ ಅಧೀನದ ವಿಭಾಗದ ಸಿಬ್ಬಂದಿಗಳು ದಿನಾಂಕ 29.06.2023ರ ಸಾರ್ವಜನಿಕ ರಜಾ ದಿನದಂದು ಕಡ್ಡಾಯವಾಗಿ ಕಚೇರಿಗೆ ಹಾಜರಾಗಿ ಸಚಿವಾಲಯದಿಂದ ಕೋರಲಾಗಿರುವ ಮಾಹಿತಿಯನ್ನು ಆಯಾ ವಿಭಾಗದ ಆಡಳಿತಾಧಿಕಾರಿಗಳು ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದೆ. ಒಂದು ವೇಳೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲು ವಿಫಲವಾದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು,’ ಎಂದು ಸುತ್ತೋಲೆಯಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ಈ ಸುತ್ತೋಲೆಗೆ ಸಚಿವ ದಿನೇಶ್‌ ಗುಂಡೂರಾವ್‌ ಸಹ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಶಿಫಾರಸ್ಸಿನ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್‌ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

 

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು “ಪಂಚಗ್ಯಾರಂಟಿಗಳ ಕಾಂಗ್ರೆಸ್‌ ಸರ್ಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು; ʼಕಾಸಿಗಾಗಿ ಪೋಸ್ಟಿಂಗ್ʼ ಹೆಸರಿನಲ್ಲಿ ‘ದಿ ಫೈಲ್‌’ ವರದಿಯನ್ನು ತಮ್ಮ ಟ್ವಿಟರ್‍‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತರಾಟೆಗೆ ತೆಗೆದುಕೊಂಡು ಸರಣಿ ಟ್ವೀಟ್‌ ಮಾಡಿದ್ದರು

 

‘ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ”. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ವಿರುದ್ಧವೂ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಎಂದು ಎಚ್‌ ಡಿ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಆರೋಪಿಸಿದ್ದರು.

 

“ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವರ್ಗಿ ದಂಧೆಗೆ ʼಹುಂಡಿʼ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಟಾಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? ಸಿಎಂಒ ಎಂದರೆ ಸಿಎಂ ಆಫ್‌ ಕರ್ನಾಟಕವೋ ಅಥವಾ ಕರಪ್ಷನ್‌ ಆಫ್‌ ಕರ್ನಾಟಕವೋ” ಎಂದೂ ಪ್ರಶ್ನಿಸಿದ್ದರು.

 

“ನಾಲ್ಕು ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು? ಮೂರೊಪ್ಪತ್ತೂ ಶಿಫಾರಸು ಪತ್ರಗಳನ್ನು ಟೈಪಿಸಿ, ಸಿಎಂ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಧಿಕಾರಿಗಳು ತಲ್ಲೀನರಾಗಿದ್ದಾರೆನ್ನುವುದು ಖಾತ್ರಿ. ವರ್ಗಾವರ್ಗಿಯ ಪೇಮೆಂಟ್‌ ಕೋಟಾ ನಿಯಂತ್ರಣ ಮಾಡುತ್ತಿರುವ ಆ ʼರಿಮೋಟ್‌ ಕಂಟ್ರೋಲ್‌ʼ ಬಗ್ಗೆ ಜನಕ್ಕೆ ಅರ್ಥವಾಗುತ್ತಿದೆ” ಎಂದು ಟ್ವೀಟ್‌ ಮಾಡುವ ಮೂಲಕ ಆರೋಪಿಸಿದ್ದರು.

 

“ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ʼಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ ಶುರುವಾಗಿದೆ. ʼಸರ್ಕಾರದ ಕೆಲಸ ದೇವರ ಕೆಲಸʼ ಎನ್ನುವುದರ ಬದಲು ʼಬಂದಿದ್ದನ್ನು ಬಿಡದೇ ಬಾಚಿಕೋ..ʼ ಎಂಬುದು ಈ ಸರ್ಕಾರದ ಧ್ಯೇಯನೀತಿ ಆಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ, ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ” ಎಂದು ಕಿಡಿಕಾರಿದ್ದರು.

 

ಅದೇ ರೀತಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೂ ಸಹ ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿರುವ ಮುಖ್ಯಮಂತ್ರಿಗಳು! ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಸಿದ್ದರಾಮಯ್ಯನವರು ನಾಲ್ಕು ಅಧಿಕಾರಿಗಳನ್ನು ವರ್ಗಾಯಿಸಲು ಶಿಫಾರಸ್ಸು ಮಾಡಿದ್ದಾರೆ. ಯಾರ ಒತ್ತಡ? ಯಾವ ಕಾಣದ “ಕೈ” ಸಿದ್ದರಾಮಯ್ಯನವರ ಸಹಿ ಮಾಡಿಸುತ್ತಿದೆ ಎಂದು ‘ದಿ ಫೈಲ್‌’ ಪ್ರಕಟಿಸಿರುವ ದಾಖಲೆಗಳನ್ನು ಟ್ವೀಟ್‌ ಮಾಡಿದ್ದರು.

 

ಈ ಎಟಿಎಂ ಸರ್ಕಾರದಲ್ಲಿ ಸ್ವತಃ ಮುಖ್ಯಮಂತ್ರಿರವರೇ ವ್ಯವಹಾರಕ್ಕೆ ಇಳಿದುಬಿಟ್ಟಿದ್ದಾರೆ. ಮೋಸ ಮಾಡುವುದಕ್ಕೇ ನಿಂತ ಏಜೆಂಟರು ಒಂದೇ ಸೈಟನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡುವಂತೆ, ಸಿಎಂ ಸಿದ್ದರಾಮಯ್ಯ ಹಾಗೂ #ShadowCM ಯತೀಂದ್ರ ಅವರು ಒಂದೇ ಹುದ್ದೆಗೆ ನಾಲ್ಕು ಮಂದಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ. ಶಿಫಾರಸ್ಸು ಪತ್ರಗಳ ಹೊಸ ದಂಧೆ ಆರಂಭಿಸಿದೆ ಎಂದು ಬಿಜೆಪಿ ಕರ್ನಾಟಕವು ಸಹ ‘ದಿ ಫೈಲ್‌’ ವರದಿಯನ್ನು ಹಂಚಿಕೊಳ್ಳುವ ಮೂಲಕ  ಟ್ವೀಟ್‌ ಮಾಡಿತ್ತು.

 

ಏನದು ಪ್ರಕರಣ?

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದ್ದರು.

 

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿ ಒಂದು ವರ್ಷ 4 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯೋಜನಾ ಮುಖ್ಯಸ್ಥರು, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದರು ಸಹ ಇವರ ಹುದ್ದೆಗೆ ನಾಲ್ವರು ಲೆಕ್ಕಪರಿಶೋಧನಾಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿರುವುದು ನಾಲ್ವರು ಅಧಿಕಾರಿಗಳ ಮಧ್ಯೆಯೇ ಪೈಪೋಟಿ ಸೃಷ್ಟಿಸಿದಂತಾಗಿತ್ತು.

 

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಅದೇ ರೀತಿ ಪೊಲೀಸ್‌ ಮಹಾನಿರ್ದೇಶಕರ ಕಚೇರಿಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ ನಾಗರಾಜು ಅವರು ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಮಂಜುನಾಥ್‌ ಅವರ ಜಾಗಕ್ಕೆ ಪರಿಗಣಿಸಿ ಎಂದು 2023ರ ಜೂನ್‌ 8ರಂದು ಷರಾ ಬರೆದಿದ್ದರು.

the fil favicon

SUPPORT THE FILE

Latest News

Related Posts