ಬೆಂಗಳೂರು; ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಆಧಾರ್ ಸೀಡಿಂಗ್‌ಗೆ ರಾಜ್ಯದಲ್ಲಿ ಇನ್ನೂ 69,745 ಪ್ರಕರಣಗಳು ಬಾಕಿ ಇದ್ದರೂ ಈ ಅಂಕಿ ಅಂಶಗಳ ಮಾಹಿತಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮುಚ್ಚಿಟ್ಟಿರುವುದು ಇದೀಗ ಬಹಿರಂಗವಾಗಿದೆ.
ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯ ಸಚಿವರಾದ ನಂತರ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ್ದ ಸಭೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಫಲಾನನುಭವಿಗಳಿಗೆ ಆಧಾರ್ ಸೀಡಿಂಗ್ ಮಾಡುವ ಮೂಲಕ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ. ಸಚಿವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ್ದ ಸಮಗ್ರ ಮಾಹಿತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಸಚಿವರಿಗೆ ನೀಡಿದ್ದ ಮಾಹಿತಿಯಲ್ಲೇನಿತ್ತು?
‘ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಆಧಾರ್ ಸಂಖ್ಯೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ 77.95 ಲಕ್ಷ ಫಲಾನುಭವಿಗಳಿದ್ದು, ಎಲ್ಲಾ ಫಲಾನುಭವಿಗಳಿಗೆ ಆಧಾರ್ ಸೀಡಿಂಗ್ ಮಾಡುವ ಮೂಲಕ ಶೇ.100ರಷ್ಟು ಪ್ರಗತಿ ಸಾಧಿಸಿದೆ,’ ಎಂದು ಮಾಹಿತಿ ನೀಡಿದ್ದರು.
ಆದರೆ ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಜೂನ್ 2ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ‘ರಾಜ್ಯದಲ್ಲಿ ಇನ್ನೂ 69,745 ಪ್ರಕರಣಗಳು ಆಧಾರ್ ಸೀಡಿಂಗ್‌ಗೆ ಬಾಕಿ ಇವೆ ಎಂದು ಹೇಳಿದೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ 69,745 ಪ್ರಕರಣಗಳು ಆಧಾರ್ ಸೀಡಿಂಗ್‌ಗೆ ಬಾಕಿ ಇವೆ ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಚಿವ ಕೃಷ್ಣಬೈರೇಗೌಡ ಅವರಿಗೆ ನೀಡಿರುವ ಮಾಹಿತಿಯಲ್ಲಿ ಬಾಕಿ ಇರುವ ಆಧಾರ್ ಸೀಡಿಂಗ್ ಪ್ರಕರಣಗಳನ್ನು ಮುಚ್ಚಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅದೇ ರೀತಿ ಪಾರದರ್ಶಕವಾಗಿ ಮತ್ತು ಸಕಾಲಿಕ ಪಿಂಚಣಿ ವಿತರಣೆಗಾಗಿ ನೇರ ಹಣ ಸಂದಾಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಎಲ್ಲಾ 77.95 ಲಕ್ಷ ಪಿಂಚಣಿದಾರರಿಗೆ ಬ್ಯಾಂಕ್, ಅಂಚೆ ಖಾತೆ ಮೂಲಕ ಪಿಂಚಣಿ ಪಾವತಿಸಲಾಗುತ್ತಿದೆ. ಈ ವಿಭಾಗದಲ್ಲೂ ಶೇ.100ರಷ್ಟು ಗುರಿ ಸಾಧಿಸಿದೆ ಎಂದೂ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ನವೋದಯ ಮೊಬೈಲ್ ಆಪ್ ಮೂಲಕ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ಅರ್ಹ ಫಲಾನುಭವಿಗಳನ್ನು ಸ್ವಯಂ ಪ್ರೇರಿತವಾಗಿ ಗುರುತಿಸಲಾಗುತ್ತಿದೆ. ಮನೆ ಬಾಗಿಲಿಗೆ ಮಾಸಾಶನ ಪಿಂಚಣಿ ಮಂಜೂರು ಮಾಡುವ ಅಭಿಯಾನ ಜಾರಿಯಾಗಿದ್ದು ಇದುದವರೆಗೆ 65,730 ಫಲಾನುಭವಿಗಳನ್ನು ಗುರುತಿಸಿ ಮಂಜೂರಾತಿ ನೀಡಲಾಗಿದೆ. ಇದರಿಂದ ಪ್ರತಿ ತಿಂಗಳಿಗೆ 3 ಕೋಟಿ ವೆಚ್ಚ ಮಾಡಿದೆ ಎಂದು ಮಾಹಿತಿ ನೀಡಿರುವುದು ಗೊತ್ತಾಗಿದೆ.
ಇನ್ನು ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆಯನ್ನು ಸ್ವೀಕರಿಸಿ 72 ಗಂಟೆಯಲ್ಲಿ ನವೋದಯ ಮೊಬೈಲ್ ಆಪ್ ಮೂಲಕ ಪಿಂಚಣಿ ಮಂಜೂರಾತಿ ಮಾಡುವ ವಿನೂತನ ಕಾಗದ ರಹಿತ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸಿದೆ. ಈ ಸಹಾಯವಾಣಿ ಮೂಲಕ ಹೊಸದಾಗಿ 1,40,047 ಅರ್ಜಿಗಳನ್ನು ಸ್ವೀಕರಿಸಿದೆ. ಈ ಪೈಕಿ 1,37,839 ಅರ್ಜಿಗಳನ್ನು ವಿಲೇವಾರಿ ಮಾಡಿ 1,13,087 ಪಿಂಚಣಿ ಮಂಜೂರಾತಿ ಆದೇಶಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಸಚಿವರಿಗೆ ಮಾಹಿತಿ ಒದಗಿಸಿದ್ದಾರೆ.
‘ರಾಜ್ಯದಲ್ಲಿ 39,689 ಡ್ಯೂಪ್ಲಿಕೇಟ್ ಆಧಾರ್ ಪ್ರಕರಣಗಳಿವೆ. ಈ ಪ್ರಕರಣಗಳ ಸಂಬಂಧ ಜಿಲ್ಲೆಗಳಲ್ಲಿ ಪರಿಶೀಲಿಸಿ ಒಬ್ಬ ಫಲಾನುಭವಿ ಎರಡೆರಡು ಪಿಂಚಣಿ ಪಡೆಯುತ್ತಿದ್ದಲ್ಲಿ ಸರಿಯಾದ ಮಾಹಿತಿಯುಳ್ಳ ಪ್ರಕರಣವನ್ನು ಉಳಿಸಿಕೊಂಡು ಇನ್ನೊಂದು ಪ್ರಕರಣವನ್ನು ರದ್ದುಪಡಿಸಬೇಕು. ಒಂದೇ ಆಧಾರ್ ಸಂಖ್ಯೆಯನ್ನು ಒಬ್ಬರು ಹಾಗೂ ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಜೋಡಣೆಯಾಗಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಫಲಾನುಭವಿಗಳ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ಸರಿಯಾದ ಆಧಾರ್ ಮಾಹಿತಿಯನ್ನು ಫಲಾನುಭವಿಗೆ ಜೋಡಣೆ ಮಾಡಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ. ಈ ಕುರಿತು ‘ದಿ ಫೈಲ್’ 2023ರ ಜೂನ್ 5ರಂದೇ ವರದಿ ಪ್ರಕಟಿಸಿತ್ತು.
36,689 ನಕಲಿ ಆಧಾರ್ ಪ್ರಕರಣ ಪತ್ತೆ; ಸಾಮಾಜಿಕ ಭದ್ರತೆ ಪಿಂಚಣಿ ಪಾವತಿಯಲ್ಲೂ ಅಕ್ರಮ?
ನಿರ್ದೇಶನಾಲಯದ ನಿರ್ದೇಶಕರು ಬರೆದಿರುವ ಪತ್ರದ ಪ್ರಕಾರ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿಯಾಗುತ್ತಿರುವ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆಯೇ ಎಂಬ ಅನುಮಾನಗಳಿಗೂ ದಾರಿಮಾಡಿಕೊಟ್ಟಂತಾಗಿರುವುದನ್ನು ಸ್ಮರಿಸಬಹುದು.