ಸಬ್‌ ರಿಜಿಸ್ಟ್ರಾರ್‍‌ ಕಚೇರಿಗಳಲ್ಲಿ ಅಕ್ರಮ; ಖಜಾನೆಗೆ ಜಮೆಯಾಗದ ರಾಜಸ್ವ, ಕೋಟ್ಯಂತರ ರು. ದುರುಪಯೋಗ

ಬೆಂಗಳೂರು; ರಾಜ್ಯದ ಸಬ್‌ ರಿಜಿಸ್ಟ್ರಾರ್‍‌ಗಳ ಕಚೇರಿಯಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಿ ವಸೂಲಾಗುತ್ತಿರುವ ಕೋಟ್ಯಂತರ ರುಪಾಯಿ ಮೊತ್ತದ ರಾಜಸ್ವವು ಸರ್ಕಾರದ ಖಜಾನೆಗೆ ನಿಗದಿತ ಅವಧಿಯೊಳಗೆ ಜಮೆಯಾಗುತ್ತಿಲ್ಲ. ಸರ್ಕಾರದ ಖಜಾನೆಗೆ ಜಮೆ ಆಗಬೇಕಿದ್ದ ರಾಜಸ್ವವನ್ನು ಉಪ ನೋಂದಣಾಧಿಕಾರಿ ಮತ್ತು ಅವರ ಕಚೇರಿಗಳಲ್ಲಿನ ಸಿಬ್ಬಂದಿ ವಿಳಂಬವಾಗಿ ಜಮೆ ಮಾಡುತ್ತಿದ್ದಾರಲ್ಲದೇ ಹಲವು ಉಪ ನೋಂದಾಣಾಧಿಕಾರಿಗಳು ರಾಜಸ್ವದ ಮೊತ್ತವನ್ನು ದುರುಪಯೋಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ.

 

ಕೋಲಾರ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 2018-19 ಮತ್ತು 2019-20 ರವರೆಗೆ ದಸ್ತಾವೇಜುಗಳನ್ನು ನೋಂದಾಯಿಸಿದ ವಸೂಲಾದ ರಾಜಸ್ವವು ಸರ್ಕಾರದ ಖಜಾನೆಗೆ ಜಮೆ ಮಾಡದೇ ಸಬ್‌ ರಿಜಿಸ್ಟ್ರಾರ್‍‌ ಮತ್ತು ಇತರೆ ನೌಕರರು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳು ಸೇರಿದಂತೆ ಇನ್ನಿತರೆ ನಾಲ್ವರು ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸಲು ಸರ್ಕಾರವು ಆದೇಶಿಸಿದೆ.

 

ಕೋಲಾರ ಜಿಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ 2018-19 ಮತ್ತು 2019-20ನೇ ಸಾಲಿಗೆ ಸಂಬಂಧಿಸಿದಂತೆ ಇರಸಾಲು ಮಾಡಿರುವ ಬಗ್ಗೆ ಉನ್ನತ ಅಧಿಕಾರಿಗಳು ಪರಿವೀಕ್ಷಣೆ ನಡೆಸಿದ ವೇಳೆಯಲ್ಲಿ ಒಟ್ಟು 116 ಚಲನ್‌ಗಳಿಂದ 68, 24, 305 ರು.ಗಳನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡದೇ ದುರುಪಯೋಗಪಡಿಸಿಕೊಂಡಿರುವುದನ್ನು ವಿಚಾರಣಾಧಿಕಾರಿಗಳು ತನಿಖೆ ವೇಳೆ ರುಜುವಾತುಪಡಿಸಿದ್ದಾರೆ.

 

ಈ ಸಂಬಂಧ ಶಿಸ್ತು ಪ್ರಾಧಿಕಾರಿ ಹಾಗೂ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ 2023ರ ಜೂನ್‌ 2ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೋಲಾರದ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿಯಿಂದ ವಸೂಲಾದ ಲಕ್ಷಾಂತರ ರುಪಾಯಿಗಳನ್ನು ಸರ್ಕಾರದ ಖಜಾನೆಗೆ ಜಮೆ ಮಾಡದೇ ದುರುಪಯೋಗಪಡಿಸಿಕೊಂಡಿರುವುದನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್‌ ಸಿ ಇಂಗಳಗಿ ಅವರು ವಿಚಾರಣೆ ನಡೆಸಿ ಮಂಜುಳ, ನವೀನ್‌, ಚೌಡಾರೆಡ್ಡಿ ಎಂಬುವರ ವಿರುದ್ಧದ ಆರೋಪವನ್ನು ರುಜುವಾತುಗೊಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

‘ದಸ್ತಾವೇಜುಗಳನ್ನು ನೋಂದಾಯಿಸುವ ವೇಳೆ ವಸೂಲಾದ ಸರ್ಕಾರದ ರಾಜಸ್ವಕ್ಕೆ ಸಂಬಂಧಿಸಿದಂತೆ 2018-19ನೇ ಸಾಲಿನ 67 ಚಲನ್‌ಗಳನ್ನು ಪರಿಶೀಲಿಸಿದಾಗ 37,88,965 ರು ಹಾಗೂ 2019-20ನೇ ಸಾಲಿನಲ್ಲಿ 49 ಚಲನ್‌ಗಳನ್ನು ಪರಿಶೀಲಿಸಿದಾಗ 30,35,340 ರು.ಗಳಷ್ಟು ಹೀಗೆ ಎರಡು ವರ್ಷಗಳಲ್ಲಿ 116 ಚಲನ್‌ಗಳಿಂದ ಒಟ್ಟು 68,24,305 ರು.ಗಳಷ್ಟು ವಸೂಲಾದ ಸರ್ಕಾರದ ರಾಜಸ್ವವು ಕೆಟಿಸಿ 25ರಲ್ಲಿ ಪ್ರತಿಬಿಂಬಿಸಿಲ್ಲ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಅಲ್ಲದೇ ಡಿ ಗ್ರೂಪ್‌ ನೌಕರರಾದ ಲಕ್ಷ್ಮಿ ಎಂಬುವರು ಕೋಲಾರ ಉಪ ನೋಂದಣಿ ಕಚೇರಿಯಲ್ಲಿ ವಸೂಲಾದ ಸರ್ಕಾರದ ರಾಜಸ್ವ 76,73,782 ರು.ಗಳನ್ನು ಬ್ಯಾಂಕ್‌ಗೆ ಇರಸಾಲು ಮಾಡಲು ವಹಿಸಿದ್ದರೂ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿದ್ದರು. ಹೀಗಾಗಿ ಕರ್ನಾಟಕ ಆರ್ಥಿಕ ಸಂಹಿತೆ ನಿಯಮ 4(ಎ) ಹಾಗೂ ಕರ್ನಾಟಕ ನೋಂದಣಿನಯಮಗಳು 1965ರ ನಿಯಮ 197ನ್ನು ಉಲ್ಲಂಘಿಸಿದ್ದರಿಂದಾಗಿ ಅವರನ್ನು ಅಮಾನತಿನಲ್ಲಿಟ್ಟು ಆದೇಶ ಹೊರಡಿಸಲಾಗಿತ್ತು.

 

ಕೋಲಾರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 2018-19ನೇ ಸಾಲಿನಲ್ಲಿ ಹಿರಿಯ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್ ದಿನೇಶ್‌ ಎಂಬುವರು ದಸ್ತಾವೇಜುಗಳ ನೋಂದಣಿಯಿಂದ 8,40,539 ರು.ಗಳಷ್ಟು ಮೊತ್ತವು ಕೆಟಿಸಿ 25ರಲ್ಲಿ ಪ್ರತಿಬಿಂಬಿತವಾಗಿರಲಿಲ್ಲ. ನೋಂದಣಿ ಸಮಯದಲ್ಲಿ ವಸೂಲಾದ ರಾಜಸ್ವವನ್ನು ಸರ್ಕಾರದ ಖಾತೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದನ್ನು ತಪಾಸಣೆ ವರದಿಯಿಂದ ಸಾಬೀತಾಗಿತ್ತು. ಈ ಹಣವನ್ನು ಮರುದಿನವೇ ಸರ್ಕಾರಿ ಖಜಾನೆಗೆ ಜಮಾ ಮಾಡಬೇಕು ಎಂದು ಸೂಚಿಸಿದ್ದರೂ ಸಹ ಮರು ದಿನ ಖಜಾನೆಗೆ ಜಮಾ ಮಾಡಿರಲಿಲ್ಲ.

 

ಮತ್ತೊಬ್ಬ ಉಪ ನೋಂದಣಾಧಿಕಾರಿ ಮಂಜುಳಾ ಎಂಬುವರು 2018-19ರಿಂದ 2019-20ರವರೆಗೆ ಕೋಲಾರದ ಉಪ ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ವಸೂಲಾದ 53,29,450 ರುಗ.ಳಷ್ಟು ಮೊತ್ತವು ಕೆಟಿಸಿ 25ರಲ್ಲಿ ಪ್ರತಿಬಿಂಬಿತವಾಗಿರಲಿಲ್ಲ. ಈ ಹಣವನ್ನೂ ಮಂಜುಳ ಅವರು ಸರ್ಕಾರದ ಖಜಾನೆಗೆ ಜಮೆ ಮಾಡದೇ ದುರುಪಯೋಗಪಡಿಸಿಕೊಂಡಿದ್ದರು.

 

ಎಂ ನವೀನ್‌ ಎಂಬುವರು ಇದೇ ಕಚೇರಿಯಲ್ಲಿ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಸ್ತಾವೇಜುಗಳ ನೋಂದಣಿಯಿಂದ ವಸೂಲಾಗಿದ್ದ 3,58,288 ರು.ಗಳಷ್ಟು ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿದ್ದರು. ಅಲ್ಲದೇ ಇದೇ ಅಧಿಕಾರಿ 3,83,433 ರು.ಗಳ ರಾಜಸ್ವವನ್ನು ಮರುದಿನವೇ ಖಜಾನೆಗೆ ಜಮಾ ಮಾಡಬೇಕಿದ್ದರೂ ಸಹ ವಿಳಂಬವಾಗಿ ಸರ್ಕಾರದ ಖಜಾನೆಗೆ ಜಮೆ ಮಾಡಿದ್ದನ್ನೂ ತಪಾಸಣೆ ವೇಳೆಯಲ್ಲಿ ಕಂಡು ಬಂದಿತ್ತು.

 

ದ್ವಿತೀಯ ದರ್ಜೆ ಸಹಾಯಕ ಚೌಡಾರೆಡ್ಡಿ ಅವರು 2018-19, 2019-20ನೇ ಸಾಲಿನಲ್ಲಿ ಪ್ರಭಾರ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ದಸ್ತಾವೇಜುಗಳ ನೋಂದಣಿಯಿಂದ ವಸೂಲಾಗಿದ್ದ 9,61,559 ರು.ಗಳಷ್ಟು ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡಿರಲಿಲ್ಲ. ಈ ಎಲ್ಲಾ ಪ್ರಕರಣಗಳ ಕುರಿತು ನಿವೃತ್ತ ನ್ಯಾಯಾಧೀಶ ಹಾಗೂ ವಿಚಾರಣಾಧಿಕಾರಿಯಾಗಿದ್ದ ಎಸ್‌ ಸಿ ಇಂಗಳಗಿ ಅವರು ವಿಚಾರಣೆ ವರದಿ ಸಲ್ಲಿಸಿದ್ದರು.

 

‘ಆಪಾದಿತರಾದ ಮಂಜುಳ ಅವರ ಹೇಳಿಕೆ ಮತ್ತು ಲಿಖಿತವಾದವನ್ನು ಪರಿಶೀಲಿಸಿದಾಗ ಇವರು ಪ್ರತಿ ತಿಂಗಳು ತಮ್ಮ ಕಚೇರಿಯ ಸ್ಟೇಟ್‌ಮೆಂಟ್‌ಗೂ ಮತ್ತು ಖಜಾನೆಯ ಸ್ಟೇಟ್‌ಮೆಂಟ್‌ಗೂ ಸಮನ್ವಯ ಮಾಡಲು ಕ್ರಮ ಜರುಗಿಸಿದ್ದಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ವರ್ಷಗಟ್ಟಲೇ ಇಂತಹ ಕ್ರಮ ಜರುಗಿಸದೇ ಇರುವುದು ಇವರ ಕರ್ತವ್ಯದಲ್ಲಿ ಶ್ರದ್ಧೆ ಮತ್ತು ನಿಷ್ಟೆ ಇಲ್ಲದೇ ಇರುವುದು ಸೂಚಿಸುತ್ತದೆ. ಇವರ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ನಿರ್ಧರಿಸಿದ್ದೇನೆ,’ ಎಂದು ಇಂಗಳಗಿ ಅವರು ವರದಿಯಲ್ಲಿ ದಾಖಲಿಸಿದ್ದಾರೆ.

 

ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳನ್ನು ನಗದು ರೂಪದಲ್ಲಿ ವಸೂಲು ಮಾಡಬಾರದು ಎಂದು 2012ರ ಏಪ್ರಿಲ್‌ 30ರಂದು ಸುತ್ತೋಲೆ ಹೊರಡಿಸಲಾಗಿತ್ತು. ಅಲ್ಲದೇ 2008ರ ಮಾರ್ಚ್‌ 3ರ ಎಸ್‌ಟಿಪಿ 220/05-06 ಅಡಿಯಲ್ಲಿ ನಿರ್ದೇಶನವನ್ನೂ ನೀಡಲಾಗಿತ್ತು. ಈ ನಿಯಮಗಳ ಅನ್ವಯ ಉಪ ನೋಂದಣಿ ಕಚೇರಿಗಳಲ್ಲಿ ವಸೂಲಾದ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಸರ್ಕಾರಿ ಲೆಕ್ಕಕ್ಕೆ ಜಮೆ ಮಾಡುವ ಕುರಿತು ಮತ್ತು ಪ್ರತಿ ತಿಂಗಳು ಮರು ಹೊಂದಾಣಿಕೆ ಮಾಡಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿತ್ತು.

 

ಆದರೆ ಕೋಲಾರ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಉಪ ನೋಂದಣಾಧಿಕಾರಿಗಳು ಈ ಎಲ್ಲವನ್ನೂ ಗಾಳಿಗೆ ತೂರಿ ದಸ್ತಾವೇಜುಗಳನ್ನು ನೋಂದಣಿಯಿಂದ ವಸೂಲಾದ ಲಕ್ಷಾಂತರರ ರುಪಾಯಿ ಮೊತ್ತವನ್ನು ಸರ್ಕಾರದ ಖಜಾನೆಗೆ ಜಮೆ ಮಾಡದೇ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರು.

 

ಉಪ ನೋಂದಣಿ ಕಚೇರಿಗಳಲ್ಲಿನ ಸರ್ಕಾರದ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿರುವ ಹಣವು ಖಾಸಗಿ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದೆ. ಈ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಖುದ್ದು ಹಾಜರಾಗಬೇಕು ಎಂದು ಅಂದಿನ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ಕುರಿತು ‘ದಿ ಫೈಲ್‌’ 2021ರ ಫೆ.22ರಂದು ವರದಿ ಪ್ರಕಟಿಸಿತ್ತು.

 

ಸರ್ಕಾರಿ ಹಣ ಖಾಸಗಿ ಖಾತೆಗೆ ವರ್ಗಾವಣೆ; ಮುಖ್ಯಕಾರ್ಯದರ್ಶಿ ಖುದ್ದು ಹಾಜರಿಗೆ ಸೂಚನೆ

 

ಅಲ್ಲದೇ ಈ ಸಂಬಂಧ ಶೃಂಗೇರಿ ಸಬ್‌ ರಿಜಿಸ್ಟ್ರಾರ್‍‌ ಚೆಲುವರಾಜು ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ‘ದಿ ಫೈಲ್‌’ 2021ರ ಜೂನ್‌ 6ರಂದು ವಿಸ್ತೃತ ವರದಿ ಪ್ರಕಟಿಸಿತ್ತು.

 

ಖಜಾನೆ ಗೋಲ್ಮಾಲ್‌; ಹವಾಲಾ ವ್ಯವಹಾರಕ್ಕೆ ಸರ್ಕಾರಿ ಹಣ ದುರ್ಬಳಕೆ ಒಪ್ಪಿಕೊಂಡ ಸರ್ಕಾರ

 

ಅಲ್ಲದೇ ಸರ್ಕಾರದ ಖಜಾನೆಗೆ ವಿಳಂಬವಾಗಿ ಹಣ ಜಮೆಯಾಗುತ್ತಿದೆ ಎಂದು ಆರ್ಥಿಕ ಇಲಾಖೆಯೂ ಒಪ್ಪಿಕೊಂಡಿತ್ತು. ಈ ಕುರಿತೂ ‘ದಿ ಫೈಲ್‌’ 2021ರ ಡಿಸೆಂಬರ್‍‌ 17ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಸರ್ಕಾರದ ಲೆಕ್ಕಕ್ಕೆ ವಿಳಂಬ ಜಮೆ ಒಪ್ಪಿಕೊಂಡ ಸರ್ಕಾರ; ಅಕ್ರಮ ವರ್ಗಾವಣೆಗಳಿಗಿಲ್ಲ ಕಡಿವಾಣ

 

ಖಜಾನೆ ಇಲಾಖೆಯಲ್ಲಿ ಬಹುದೊಡ್ಡ ಅಕ್ರಮಗಳು ಮತ್ತು ಸರ್ಕಾರದ ಖಜಾನೆಗೆ ಜಮೆಯಾಗಬೇಕಾದ ಹಣವು  ಹವಾಲ ವ್ಯವಹಾರಕ್ಕೆ ಬಳಕೆಯಾಗುತ್ತಿದೆ ಎಂದು ಪ್ರಾಮಾಣಿಕ ಸಬ್‌ ರಿಜಿಸ್ಟ್ರಾರ್‍‌ಗಳು ಸರ್ಕಾರದ ಗಮನ ಸೆಳೆದಿದ್ದರೂ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಕ್ರಮ ವಹಿಸಿರಲಿಲ್ಲ. ಹಾಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಎಲ್ಲಾ ಅಕ್ರಮಗಳ ಕುರಿತು ಕ್ರಮ ವಹಿಸಲು ಮುಂದಾದಲ್ಲಿ ಮಾತ್ರ ಸರ್ಕಾರದ ಖಜಾನೆಯಿಂದ ಕೋಟ್ಯಂತರ ರುಪಾಯಿ ಸೋರಿಕೆಯಾಗುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts