ಮೇಕೆದಾಟು; ಬಿಜೆಪಿ ಸರ್ಕಾರ ನಿರ್ಲಕ್ಷ್ಯಿಸಿದ್ದ ದೇವೇಗೌಡರ 23 ಅಂಶಗಳ ಸೂತ್ರವನ್ನು ಕಾಂಗ್ರೆಸ್‌ ಪಾಲಿಸುವುದೇ?

ಬೆಂಗಳೂರು; ಬೆಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೂಲ ಉದ್ದೇಶ ಹೊಂದಿರುವ ಮೇಕೆದಾಟು ಯೋಜನೆಯನ್ನು ಈಗಿರುವಂತೆಯೇ ಅನುಷ್ಠಾನಗೊಳಿಸಲು ಮುಂದಾದಲ್ಲಿ ಹತ್ತು ಹಲವು ವರ್ಷಗಳಾದರೂ ಕೇಂದ್ರದ ಅರಣ್ಯ ಸಚಿವಾಲಯ ಸೇರಿದಂತೆ ಇನ್ನಿತರೆ ನಿರ್ದೇಶನಾಲಯಗಳಿಂದ ಅನುಮೋದನೆ ದೊರಕುವುದು ಕಷ್ಟ ಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು, ನೀರಾವರಿ ಮತ್ತು ತಾಂತ್ರಿಕ ತಜ್ಞರು ಮಂಡಿಸಿರುವ ಪ್ರತಿಪಾದನೆಯು ಮುನ್ನೆಲೆಗೆ ಬಂದಿದೆ.

 

ಮೇಕೆದಾಟು ಯೋಜನೆ ಕುರಿತು ಆಕ್ರಮಣಕಾರಿ ವರ್ತನೆ ಬಿಡಿ ಎಂದು ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಕರ್ನಾಟಕ ಸರ್ಕಾರಕ್ಕೆ ಹೇಳಿದ್ದರ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡರ ಪತ್ರ ಮತ್ತು ಆ ಪತ್ರದಲ್ಲಿದ್ದ ಸೂತ್ರವು ನೀರಾವರಿ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದೆ.

 

ಅಲ್ಲದೇ ಈ ಯೋಜನೆಯ ಅನುಷ್ಠಾನದಲ್ಲಿನ ಹಂತಗಳನ್ನು ಮಾರ್ಪಾಡುಗೊಳಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು ನೀಡಿದ್ದ ಮಹತ್ವವಾದ 23 ಅಂಶಗಳ ಸಲಹೆಗಳನ್ನು ಹಿಂದಿನ ಬಿಜೆಪಿ ಸರ್ಕಾರವು ನಿರ್ಲಕ್ಷ್ಯ ವಹಿಸಿರುವುದೂ ಬಹಿರಂಗವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರ ತಾಂತ್ರಿಕ ಸಲಹೆಗಾರರರಾಗಿದ್ದ ವೆಂಕಟರಾಮ್‌ ಅವರು ಇದೀಗ ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‍‌ ಅವರಿಗೂ ಸಲಹೆಗಳನ್ನು ಪತ್ರ ಮುಖೇನ ನೀಡುವ ಮೂಲಕ ದೇವೇಗೌಡರ ಸೂತ್ರವನ್ನು ವಿಸ್ತರಿಸಿದ್ದಾರೆ.

 

ಮಾಜಿ ಪ್ರಧಾನಿ ದೇವೇಗೌಡರು ಮತ್ತು ವೆಂಕಟರಾಮ್‌ ಅವರು ಬರೆದಿರುವ ಪತ್ರಗಳೆರಡೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರೂಪಿತಗೊಂಡ ಪ್ರತಿಷ್ಠಿತ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯು ನಾಲ್ಕು ವರ್ಷಗಳಿಗೂ ಹೆಚ್ಚು ಅವಧಿಯಿಂದ ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ಚರ್ಚೆಗೆ ಬರದೇ ನೆನೆಗುದಿಗೆ ಬಿದ್ದಿರುವ ವಾಸ್ತವಾಂಶವನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2021ರ ಸೆ. 23ರಂದು ಪತ್ರ ಮುಖೇನ ನೆನಪಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಈ ಯೋಜನೆಗೆ ಸುಲಭವಾಗಿ ಹೇಗೆ ಅನುಮೋದನೆ ಪಡೆದುಕೊಳ್ಳಬಹುದು ಎಂದೂ ಸೂತ್ರವೊಂದನ್ನು ಹಾಕಿಕೊಟ್ಟಿದ್ದರು. ಆದರೆ ಈ ಬಗ್ಗೆ ಹಿಂದಿನ ಸರ್ಕಾರವು ನಿರ್ಲಕ್ಷ್ಯ ವಹಿಸಿತ್ತು ಎಂದು ತಿಳಿದು ಬಂದಿದೆ.

 

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿದ್ದ ಪತ್ರದ ಪ್ರತಿ

 

ಮೇಕೆದಾಟು ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸುವುದೇ ಈಗಿನ ಸಂದರ್ಭದಲ್ಲಿ ಸೂಕ್ತ. ಈಗ ವಿನ್ಯಾಸಗೊಳಿಸಿರುವ ಅಂತಿಮ ಶೇಖರಣಾ ಸಾಮರ್ಥ್ಯಕ್ಕೆ ಯಾವುದೇ ಬಾಧಕವಾಗದಿರುವಂತೆ ಎರಡು ಹಂತಗಳಲ್ಲಿ ನಿರ್ಮಿಸುವುದೇ ಸರಿಯಾದ ಕ್ರಮ ಎಂದಿದ್ದ ದೇವೇಗೌಡರು ಈ ರೀತಿಯ ನಿರ್ಮಾಣ ಕಾರ್ಯವನ್ನು ಈಗಾಗಲೇ ಆಲಮಟ್ಟಿ ಆಣೆಕಟ್ಟಿನ ನಿರ್ಮಾಣವನ್ನು ನಿರ್ವಹಿಸಿರುವ ಉದಾಹರಣೆಯನ್ನೂ ಒದಗಿಸಿದ್ದರು.

 

ದೇವೇಗೌಡರು ಕೊಟ್ಟಿದ್ದ ಕಾರಣ ಮತ್ತು ಮುಂದಿನ ಹಾದಿ ಕುರಿತು ನೀರಾವರಿ ತಜ್ಞ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರ ತಾಂತ್ರಿಕ ಸಲಹೆಗಾರರಾಗಿದ್ದ ವೆಂಕಟರಾಮ್‌ ಅವರು ಡಿ ಕೆ ಶಿವಕುಮಾರ್‍‌ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಥೂಲವಾಗಿ ವಿವರಿಸಿದ್ದಾರೆ.

 

ಮಾಜಿ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ವೆಂಕಟರಾಮ್‌ ಅವರು ಬರೆದಿರುವ ಪತ್ರದ ಪ್ರತಿ

 

1. ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುವ ಸ್ವಾಭಾವಿಕ ಹರಿವಿಗೆ ಯಾವುದೇ ರೀತಿಯ ತಡೆಯೊಡ್ಡಲಾಗದು ಎಂದು ನ್ಯಾಯಾಧೀಕರಣವು ಷರತ್ತು ವಿಧಿಸಿರುತ್ತದೆ ಎಂಬುದು ತಮಿಳುನಾಡಿನ ಪ್ರಬಲ ಆಕ್ಷೇಪಣೆಯಾಗಿದೆ.

 

2. ತಮಿಳುನಾಡಿನ ದೃಷ್ಟಿಯಿಂದ ಕೃಷ್ಣರಾಜ ಸಾಗರ ಅಣೆಕಟ್ಟಿನ ಕೆಳಗೆ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟನ್ನು ಕಟ್ಟುವ ಹಾಗಿಲ್ಲ. ಮೇಲಾಗಿ ಸರ್ವೋಚ್ಛ ನ್ಯಾಯಾಲಯುವು ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಕೇವಲ 4.75 ಟಿಎಂಸಿ ನೀರನ್ನು ಹಂಚಿಸಿದ್ದು ಇದರ ಬಳಕೆಗಾಗಿ 67 ಟಿಎಂಸಿ ಬೃಹತ್‌ ಗಾತ್ರದ ಜಲಾಶಯ ನಿರ್ಮಿಸುವುದು ಅವಶ್ಯಕತೆಯೇ ಎಂದು ತಮಿಳುನಾಡು ಪ್ರಶ್ನಿಸಿದೆ.

 

3. ಅರಬ್ಬಿ ಸಮುದ್ರಕ್ಕೆ ಪೋಲಾಗಿ ಸೇರುತ್ತಿರುವ ಪ್ರವಾಹದ ನೀರನ್ನು ಮೇಕೆದಾಟು ಜಲಾಶಯದಲ್ಲಿ ಶೇಖರಿಸಲು ಉದ್ದೇಶಿಸಿರುವುದಾಗಿ ಕರ್ನಾಟಕದ ಸಮರ್ಥನೆಯಾಗಿರುತ್ತದೆ. ಆದರೆ ‘ಪ್ರವಾಹ’ವನ್ನು ‘ಹೆಚ್ಚುವರಿ’ ನೀರಿನಿಂದ ನಿಖರವಾಗಿ ಬೇರ್ಪಡಿಸಲು ಸಾಧ್ಯವಾಗದಿರುವುದರಿಂದ, ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯಾವುದೇ ರಾಜ್ಯಕ್ಕೆ ಹಕ್ಕು ಇರುವುದಿಲ್ಲ. ಹೀಗಾಗಿ ಯೋಜನೆಯ ವಿಸ್ತೃತ ವರದಿಗೆ ಅನುಮೋದನೆ ದೊರಕುವುದು ಅಷ್ಟು ಸುಲಭ ಸಾಧ್ಯದ ಮಾತಲ್ಲ.

 

4. ಯೋಜನೆಗೆ ಬೃಹತ್‌ ಪ್ರಮಾಣದ ಅರಣ್ಯ ಭೂಮಿ ವಶಪಡಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ 4,617 ಎಕರೆ ಅರಣ್ಯ ಭೂಮಿ ಮತ್ತು 7,859 ಎಕರೆ ವನ್ಯಜೀವಿ ಪ್ರದೇಶ ಒಳಗೊಂಡಿರುತ್ತದೆ. ಆದರೆ ಈ ಅಂಕಿ ಅಂಶಗಳನ್ನು ಸರ್ಕಾರವು ಪುನರ್‍‌ ವಿಮರ್ಶಿಸಿ ಒಟ್ಟು ವನ್ಯಜೀವಿ ಪ್ರದೇಶವೇ 12,019 ಎಕರೆ ಎಂದು ಅಂದಾಜಿಸಿರುತ್ತದೆ. ಪರಿಹಾರಾತ್ಮಕ ಅರಣ್ಯ ಭೂಮಿಯನ್ನು ಎಷ್ಟೇ ಪ್ರಮಾಣದಲ್ಲಿ ಗುರುತಿಸಿದ್ದರೂ ಕೂಡ ವನ್ಯಜೀವಿಗಳ ಸ್ಥಳಾಂತರವೂ ಊಹಿಸಲು ಅಸಾಧ್ಯ. ಹೀಗಾಗಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಯೋಜನೆಗೆ ಅನುಮತಿ ಸಿಗುವುದು ಕಷ್ಟ ಸಾಧ್ಯ.

 

5. ವಿಸ್ತೃತ ಯೋಜನಾ ವರದಿಯನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಪರಿಶೀಲನೆಗಾಗಿ ಕಳಿಸುವ ಸಂದರ್ಭದಲ್ಲಿ ಕೇಂದ್ರ ಜಲ ಆಯೋಗದ ಹೈಡ್ರಾಲಜಿ ನಿರ್ದೇಶನಾಲಯವು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ವಾಸ್ತವಿಕವಾಗಿ ಈಗಾಗಲೇ ಬಳಸಿಕೊಂಡಿರುವ ನೀರಿನ ಪ್ರಮಾಣವನ್ನು ಕಳೆದು, ಕರ್ನಾಟಕಕ್ಕೆ ಹಂಚಿಕೆ ಮಾಡಲಾದ ನೀರಿನ ಒಟ್ಟು ಪ್ರಮಾಣದಲ್ಲಿ ಮೇಕೆದಾಟು ಯೋಜನೆಗಾಗಿ 30.65 ಟಿಎಂಸಿ ನೀರು ಲಭ್ಯವಿರುತ್ತದೆ ಎಂಬುದಾಗಿ ತನ್ನ ವರದಿಯಲ್ಲಿ ತಿಳಿಸಿರುತ್ತದೆ.

 

5. ಈ ಕಾರಣಗಳಿಂದಾಗಿ ಯೋಜನೆಯನ್ನು ಎರಡು ಹಂತದಲ್ಲಿ ನಿರ್ಮಿಸುವುದು ಸೂಕ್ತ. ಮೊದಲ ಹಂತದಲ್ಲಿ 30.65 ಟಿಎಂಸಿ ನೀರಿನ ಬಳಕೆಗೆ ಬೇಕಾಗುವ ಶೇಖರಣಾ ಸಾಮರ್ಥ್ಯಕ್ಕೆ ಮಿತಿಗೊಳಿಸಬೇಕು. ಎರಡನೇ ಹಂತದಲ್ಲಿ ಅಂದರೆ ಹೆಚ್ಚುವರಿ ನೀರು ದೊರಕಿದಾಗ ಅಥವಾ ಗೋದಾವರಿ ನದಿಯ ನೀರನ್ನು ಕಾವೇರಿ ನದಿ ಪಾತ್ರಕ್ಕೆ ತಿರುಗಿಸುವ ಕೇಂದ್ರ ಸರ್ಕಾರದ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚಿನ ನೀರು ಕರ್ನಾಟಕಕ್ಕೆ ದೊರಕಿದಾಗ ಮೇಕೆದಾಟು ಜಲಾಶಯದ ಸಾಮರ್ಥ್ಯವನ್ನು ಈಗ ರೂಪಿಸಿರುವ ವಿನ್ಯಾಸಕ್ಕೆ ಹೆಚ್ಚಿಸಬಹುದು.

 

6. ಮೊದಲನೇ ಹಂತದಲ್ಲಿ, ಕ್ಯಾರಿ ಓವರ್‍‌ ಸಂಗ್ರಹಣ, ಆವಿಯಿಂದಾಗುವ ನಷ್ಟದ ಪ್ರಮಾಣ, ನದಿಗೆ ಪರಿಸರ ದೃಷ್ಟಿಯಿಂದ ಬಿಡಲೇಬೇಕಾದ ಪ್ರಮಾಣ ಇತ್ಯಾದಿಗಳನ್ನು ಪರಿಗಣಿಸಿ 47.27  ಟಿಎಂಸಿ ಸಾಮರ್ಥ್ಯಕ್ಕೆ ಮಿತಿಗೊಳಿಸಬಹುದೆಂಬುದು ದೇವೇಗೌಡರ ಸಲಹೆಯಾಗಿರುತ್ತದೆ. ಮೇಲಾಗಿ ಯೋಜನೆಗೆ ಬೇಕಾದ ಅರಣ್ಯ ಪ್ರದೇಶದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಲಿದ್ದು ಈ ರೀತಿಯ ಕ್ರಮದಿಂದ ಯೋಜನೆಯ ಮೊದಲ ಹಂತದ ವಿಸ್ತೃತ ವರದಿಗೆ ಕೇಂದ್ರದಿಂದ ಅನುಮತಿ ದೊರಕಿಸಿಕೊಳ್ಳುವುದು ಸುಲಭ ಸಾಧ್ಯವಾಗಬಹುದು ಮತ್ತು ಅರಣ್ಯ ಮತ್ತು ಪರಿಸರ ಇಲಾಖೆಯಿಂದಲೂ ಕೂಡ ಅನುಮೋದನೆ ಪಡೆದುಕೊಳ್ಳಲು ಸುಲಭ ಸಾಧ್ಯವಾಗಲಿದೆ.

 

ಈ ಎಲ್ಲಾ ಕಾರಣಗಳಿಂದಾಗಿ ದೇವೇಗೌಡರ ಸಲಹೆಯಂತೆ ಮೇಕೆದಾಟು ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸುವುದೇ ಈಗಿನ ಸಂದರ್ಭದಲ್ಲಿ ಅತ್ಯಂತ ಸೂಕ್ತವಾಗಿರುತ್ತದೆ ಎಂಬುದಾಗಿ ವೆಂಕಟರಾಮ್‌ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

 

ಮೇಕೆದಾಟು ಯೋಜನೆ ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸದಸ್ಯ ಹೆಚ್‌ ಎಂ ರಮೇಶ್‌ ಗೌಡ ಅವರು 2021ರ ಡಿಸೆಂಬರ್‍‌ 23ರಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಹಿಂದಿನ ಸರ್ಕಾರದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಈ ಯೋಜನೆ ನೆನೆಗುದಿಗೆ ಬಿದ್ದಿರುವುದನ್ನು ಒಪ್ಪಿಕೊಂಡಿದ್ದರು.

 

ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇವೆ ಎಂದು ಉತ್ತರಿಸಿದ್ದ ಕಾರಜೋಳ ಅವರು ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿರುವ ಕಾವೇರಿ ಜಲಾನಯನದಲ್ಲಿನ ಪ್ರದೇಶಗಳ ಕುಡಿಯುವ ಹಾಗೂ ಗೃಹಪಯೋಗಿ ಬಳಕೆಗಾಗಿ 4.75 ಟಿಎಂಸಿ ನೀರನ್ನು ಬಳಸಲು ಅವಕಾಶ ಕಲ್ಪಿಸಲಾಗಿದ್ದು ವ್ಯವಸಾಯಕ್ಕೆ ನೀರಿನ ಹಂಚಿಕೆ ಇರುವುದಿಲ್ಲ ಎಂದೂ ವಿವರಿಸಿದ್ದರು.

 

ಪ್ರಸ್ತಾಪಿತ ಯೋಜನೆಗೆ ಒಟ್ಟಾರೆಯಾಗಿ 5257.03 ಹೆಕ್ಟೇರ್‍‌ ಪ್ರದೇಶ ಅಗತ್ಯವಿದ್ದು ಇದರಲ್ಲಿ ಅರಣ್ಯ ಪ್ರದೇಶದಲ್ಲಿ 5,096.21 ಹೆಕ್ಟೇರ್‍‌, ವನ್ಯಜೀವಿ ಪ್ರದೇಶವು 4,866.62 ಹೆಕ್ಟೇರ್‍‌, ಮೀಸಲು ಅರಣ್ಯ ಪ್ರದೇಶ 229.60 ಹೆಕ್ಟೇರ್‍‌ ಇದೆ. ಯೋಜನೆಯ ಪ್ರಸ್ತಾವನೆಗಳಿಗೆ ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವಾಲಯಗಳಿಂದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ವಿವರಿಸಿದ್ದರು.

 

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಕಾವೇರಿ ನದಿಗೆ ಅಡ್ಡಲಾಗಿ ಅರ್ಕಾವತಿ ಹಾಗೂ ಕಾವೇರಿ ನದಿಯ ಸಂಗಮದ ಸಮೀಪದಲ್ಲಿ ನಿರ್ಮಿಸಿ 67.16 ಟಿಎಂಸಿ ನೀರನ್ನು ಶೇಖರಿಸಲು 9,000 ಕೋಟಿ ಮೊತ್ತದ ಡಿಪಿಆರ್‍‌ ತಯಾರಿಸಲಾಗಿದೆ. ಈ ಯೋಜನೆಯ ಪಿಎಫ್‌ರ್‍‌ನ್ನು ಅನುಮೋದನೆ ಕೋರಿ ಕೇಂದ್ರ ಜಲ ಆಯೋಗಕ್ಕೆ 2018ರ ಆಗಸ್ಟ್‌ 4ರಂದು ಸಲ್ಲಿಸಲಾಗಿತ್ತು. ಕೇಂದ್ರ ಜಲ ಆಯೋಗದ 2018ರ ನವೆಂಬರ್‍‌ 22ರ ಪತ್ರದಲ್ಲಿ ಈ ಯೋಜನೆಯ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಅನುಮೋದನೆ ನೀಡಿತ್ತು. ಈ ಯೋಜನೆಯ ವಿವರವಾದ ಯೋಜನಾ ವರದಿಯನ್ನು 9,000 ಕೋಟಿ ರು ಮೊತ್ತಕ್ಕೆ ತಯಾರಿಸಿ 2019ರ ಜನವರಿ 18ರಂದು ಕೇಂದ್ರ ಜಲ ಆಯೋಗದ ಅನುಮೋದನೆ ಕೋರಿ ಸಲ್ಲಿಸಲಾಗಿದೆ. ಇದಿನ್ನೂ ವಿವಿಧ ನಿರ್ದೇಶನಾಲಯಗಳ ಪರಿಶೀಲನೆಯಲ್ಲಿದೆ ಎಂದು ಗೊತ್ತಾಗಿದೆ.

 

ಕಾವೇರಿ ನ್ಯಾಯಾಧೀಕರಣದ 2007ರ ಫೆ.5ರ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದ 2018ರ ಫೆ.16ರ ಆದೇಶದಲ್ಲಿ ಮಾರ್ಪಾಡಿಸಿರುವಂತೆ ತಮಿಳುನಾಡು ರಾಜ್ಯಕ್ಕೆ ಸಾಮಾನ್ಯ ಮಳೆ ವರ್ಷದಲ್ಲಿ 177.25 ಟಿಎಂಸಿ ನೀರನ್ನು ಮಾಸಿಕವಾರು ನಿಯಂತ್ರಿಸಲು, ಸರ್ವೋಚ್ಛ ನ್ಯಾಯಾಲಯದಿಂದ ಹಂಚಿಕೆಯಾಗಿರು 4.75 ಟಿಎಂಸಿ ನೀರನ್ನು ಬೆಂಗಳೂರು ನಗರವೂ ಸೇರಿದಂತೆ ಕುಡಿಯುವ ಹಾಗೂ ಗೃಹಪಯೋಗಿ ಉದ್ದೇಶಕ್ಕೆ ಬಳಸಿಕೊಳ್ಳಲು ಮತ್ತು 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.

 

ಈ ಯೋಜನೆ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗಾಗಿ 2021ರ ಡಿಸೆಂಬರ್‍‌ ಅಂತ್ಯದವರೆಗೆ 11,90,000 ರು. ವೆಚ್ಚವಾಗಿದೆ. ಈ ಯೋಜನೆಯ ಪೂರ್ವ ಕಾರ್ಯ ಸಾಧ್ಯತಾ ವರದಿ, ವಿವರವಾದ ಯೋಜನಾ ವರದಿ ತಯಾರಿಸಲು 8.86 ಕೋಟಿ ರು. ವೆಚ್ಚವಾಗಿದೆ ಎಂದು ತಿಳಿದು ಬಂದಿದೆ.

 

ಮೇಕೆದಾಟು ಯೋಜನೆ ಕುರಿತು ಆಕ್ರಮಣಕಾರಿ ವರ್ತನೆ ಬಿಡಿ ಎಂದು ತಮಿಳುನಾಡಿ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಉದ್ಧಟತನದ ಹೇಳಿಕೆ ಬೆನ್ನಲ್ಲೆ ಕರ್ನಾಟಕದ ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts