ಆನೆ – ಮಾನವ ಸಂಘರ್ಷ; ಬಂಡೀಪುರದಲ್ಲಿ ಗರಿಷ್ಠ ಹಾನಿ, ಬೇಸಾಯವನ್ನೇ ನಿಲ್ಲಿಸಿದ ರೈತರು

ಬೆಂಗಳೂರು; ಆನೆಗಳ ದಾಳಿಯಿಂದಾಗಿ ಬೆಳೆ ಹಾನಿ ಅನುಭವಿಸಿರುವ ರೈತರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಬಂಡಿಪುರದಲ್ಲಿಯೇ ಗರಿಷ್ಠ ಹಾನಿಯಾಗಿದೆ.ಆನೆಗಳ ನಿರಂತರ ದಾಳಿಯಿಂದ ಬೇಸತ್ತ ಕೆಲವು ರೈತರು ಬೇಸಾಯವನ್ನೇ ನಿಲ್ಲಿಸಿದ್ದಾರೆ ಎಂದು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯು ನಡೆಸಿದ್ದ ಮೌಲ್ಯಮಾಪನ ವರದಿಯು ಬಹಿರಂಗಗೊಳಿಸಿದೆ.

 

ಮಾನವ ಆನೆ ಸಂಘರ್ಷ, ಉಪಶಮನ ಕ್ರಮಗಳು ಮತ್ತು ಸಂಘರ್ಷ ತಗ್ಗಿಸುವಲ್ಲಿ ಅದರ ಪರಿಣಾಮ ಕುರಿತು ಪ್ರಾಧಿಕಾರಕ್ಕೆ 2022ರ ನವೆಂಬರ್‍‌ನಲ್ಲಿ ಸಲ್ಲಿಸಿರುವ ವರದಿಯು ಮಾನವ ಆನೆ ಸಂಘರ್ಷದ ವಿವಿಧ ಆಯಾಮಗಳನ್ನು ತೆರೆದಿಟ್ಟಿದೆ. ಹಾಗೆಯೇ 2023ರಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಸ್ತಿತ್ವಕ್ಕೆ ಬಂದಿರುವ ಬೆನ್ನಲ್ಲೇ ಈ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಬಂಡೀಪುರದಲ್ಲಿ ಅತಿ ಹೆಚ್ಚು ಎಂದರೆ ಗರಿಷ್ಠ ಸೇ. 65ರಷ್ಟು ಹಾನಿಯಾಗಿರುವ ರೈತರ ಸಂಖ್ಯೆ ಇದೆ. ಹುಣಸೂರು, ಮಂಡ್ಯ, ರಾಮನಗರ, ನಾಗರಹೊಳೆ ಮತ್ತು ವಿರಾಜಪೇಟೆ ವಿಭಾಗಳಲ್ಲಿ 0.5ರಿಂದ 1.0 ಎಕರೆ ವಿಸ್ತೀರ್ಣದಲ್ಲಿ ಬೆಳೆ ಹಾನಿ ಅನುಭವಿಸಿರುವ ರೈತರ ಸಂಖ್ಯೆ ದೊಡ್ಡದಿದೆ. ಈ ಪ್ರಮಾಣವು ವಿರಾಜಪೇಟೆಯಲ್ಲಿ ಶೇ.31.4ರಿಂದ ಹುಣಸೂರಿನಲ್ಲಿ ಶೇ.100ರಷ್ಟರವೆಗೆ ವ್ಯತ್ಯಯವಾಗಿದೆ. ಮಡಿಕೇರಿ, ಮೈಸೂರು, ವಿರಾಜಪೇಟೆ,, ಚಾಮರಾಜನಗರ ಮತ್ತು ನಾಗರಹೊಳೆ ವಿಭಾಗಗಳಲ್ಲಿ 1.0 ಎಕರೆಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆ ಹಾನಿ ಅನುಭವಿಸಿರುವ ರೈತರ ಸಂಖ್ಯೆ ಹೆಚ್ಚಿದೆ. ಬಳೆ ಹಾನಿ ಪ್ರಮಾಣ 0.5 ಎಕರೆ ಮತ್ತು ಜಾಸ್ತಿ ಇರುವ ರೈತರ ಸಂಖ್ಯೆಯೇ ದೊಡ್ಡದಿದೆ,’ ಎಂದು ಅಧ್ಯಯನ ತಂಡವು ವರದಿಯಲ್ಲಿ ಉಲ್ಲೇಖಿಸಿದೆ.

 

ಎಲ್ಲಾ ವಿಭಾಗಗಳನ್ನು ಸಮಗ್ರವಾಗಿ ಪರಿಗಣಿಸಿದರೆ ಕೊನೆಯ ಎರಡು ಶ್ರೇಣಿಗಳಲ್ಲಿ ಇರುವವರ ಪ್ರಮಾಣ ಶೇ.80.40ರಷ್ಟಿದೆ. ಅತಿ ಸಣ್ಣ ರೈತರ ಹೊಲದಲ್ಲಿ ಬೆಳೆ ಹಾನಿ ಸಂಭವಿಸಿದರೆ ಅದು ಕೇವಲ ಆರ್ಥಿಕ ನಷ್ಟದ ವಿಚಾರ ಮಾತ್ರವಲ್ಲ ಅದು ಅವರ ಬದುಕಿನ ಪ್ರಶ್ನೆಯೂ ಹೌದು ಎಂದಿರುವ ಅಧ್ಯಯನ ತಂಡವು ಸಣ್ಣ ಮತ್ತು ಅತಿ ಸಣ್ಣ ರೈತರು ಮುಂಗಾರಿನಲ್ಲಿ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಅದಕ್ಕೆ ನಷ್ಟ ಸಂಭವಿಸಿದರೆ ಅವರ ಇಡೀ ವರ್ಷದ ದುಡಿಮೆ ವ್ಯರ್ಥವಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಆನೆಗಳ ನಿರಂತರ ಬೆಳೆ ದಾಳಿ ಕುರಿತು ಅಧ್ಯಯನ ನಡೆಸಿರುವ ತಂಡವು ಇದನ್ನು ಆರ್ಥಿಕ ದೃಷ್ಟಿಕೋನದಿಂದಲೂ ಗಮನಿಸಿದೆ. ಆನೆಗಳ ನಿರಂತರ ದಾಳಿಯಂದಾಗಿ ಆಹಾರ ಬೆಳೆಗಳ ಇಳುವರಿ ಕಡಿಮೆಯಾಗುವುದು ಮಾತ್ರವಲ್ಲ ವಾಣಿಜ್ಯೇತರ ಬೆಳೆಗಾದರೇ  ಅದು ದೀರ್ಘಾವಧಿಯಲ್ಲಿ ನಷ್ಟ ಉಂಟು ಮಾಡುತ್ತದೆ. ಇಳುವರಿ ಕುಸಿತವು ಅಂತಿಮವಾಗಿ ಆಹಾರ ಶೇಖರಣೆ ಮತ್ತು ಪೌಷ್ಠಿಕ ಆಹಾರ ಕೊರತೆಯ ಒತ್ತಡವನ್ನೂ ಸೃಷ್ಟಿಸುತ್ತದೆ. ರೈತರ ಆಹಾರ ಮತ್ತು ಜೀವನದ ಮೇಲೆ ಪರಿಣಾಮ ಬೀರಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

‘ಆನೆಗಳು ಬೆಳೆ ದಾಳಿ ನಡೆಸಿದಾಗ ಆಹಾರ ಸೇವನೆಯಿಂದ ಮಾತ್ರವೇ ನಷ್ಟ ಉಂಟಾಗುವುದಿಲ್ಲ ಆ ಪ್ರದೇಶದಲ್ಲಿ ಅವುಗಳ ಸಂಚಾರ ಮತ್ತು ಕಾಲ್ತುಳಿತದಿಂದಲೂ ಹಾನಿ ಸಂಭವಿಸುತ್ತದೆ. ಆ ಇಡೀ ಪ್ರದೇಶದಲ್ಲಿ ಹಾನಿ ಉಂಟಾಗಿರುತತದೆ. ಕೃಷಿ ಬೆಳೆಗಳಾದ ರಾಗಿ ಭತ್ತ, ಜೋಳದ ಬೆಳೆಗಳು ಮೇಲಿಂದ ಮೇಲೆ ಹಾನಿಗೆ ಒಳಗಾಗುತ್ತವೆ. ಮತ್ತು ಹಾನಿ ಪ್ರಮಾಣವು ಬದಲಾಗುತ್ತದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ವಾಸ್ತವಿಕ ಹಾನಿ ಸಂಭವಿಸಿದ ಪ್ರದೇಶ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶ ಸಹ ಬಳಕೆಗೆ ಅಯೋಗ್ಯವಾಗುತ್ತದೆ. ಆನೆಗಳ ದೊಡ್ಡ ಹಿಂಡು ತೀವ್ರ ಸ್ವರೂಪದ ಹಾನಿ ಉಂಟು ಮಾಡುತ್ತದೆ. ಇದು ರೈತರಿಗೆ ಆರ್ಥಿಕ ನಷ್ಟ ಮಾತ್ರವಲ್ಲದೇ ಮಾನಸಿಕ ಕ್ಷೋಭೆ ಮತ್ತು ಆತಂಕವನ್ನು ಸಹ ಉಂಟು ಮಾಡುತ್ತದೆ. ಇದು ರೈತರ ಸಾಮಾಜಿಕ ಆರ್ಥಿಕ ಭದ್ರತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಸಂರಕ್ಷಣೆ ದೃಷ್ಟಿಯಿಂದಲೂ ಸವಾಲು ಒಡ್ಡುತ್ತದೆ ಎಂದು ವರದಿಯು ಹೇಳಿದೆ.

 

ರಾಮನಗರ, ಮೈಸೂರು, ಹುಣಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿ, ವಿರಾಜಪೇಟೆ, ಬಂಡೀಇಪುರ ನಾಗರಹೊಳೆಗಳಲ್ಲಿ ಒಟ್ಟಾರೆ 1 ಎಕರೆಗಿಂತಲೂ ಮೇಲ್ಪಟ್ಟು ಅಂದರೆ 44.60 ಎಕರೆ ಹಾನಿಯಾಗಿದೆ. ವಾಣಿಜ್ಯ ಬೆಳೆ ಬೆಳೆಯುವ 48.70 ಎಕರೆ ಮತ್ತು ವಾಣಿಜ್ಯೇತರ ಬೆಳೆ ಬೆಳೆಯುವ 51.30 ಎಕರೆ ಹಾನಿಯಾಗಿದೆ ಎಂದು ಅಧ್ಯಯನ ತಂಡವು ಅಂಕಿ ಅಂಶವನ್ನು ಉಲ್ಲೇಖಿಸಿದೆ.

 

ಸಾಮಾನ್ಯವಾಗಿ ರಾಗಿ, ಜೋಳ, ಮೆಕ್ಕ ಜೋಳ, ಬೇಳೆಕಾಳುಗಳನ್ನು ಬೆಳೆಯುವ ಒಂದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಶೇ.55ರಷ್ಟು ಮತ್ತು ಗಡಿ ಅಂಚಿನ ಗ್ರಾಮಗಳಲ್ಲೇ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬುದು ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts