ಆನೆ ದಾಳಿ ಪ್ರಕರಣ ಸಂಖ್ಯೆ ಹೆಚ್ಚಳ; ತಡೆಗೋಡೆಗಳ ನಿರ್ಮಾಣದಲ್ಲಿ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯ ಬಹಿರಂಗ

ಬೆಂಗಳೂರು; ಆನೆ ದಾಳಿಗಳ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದರೂ ರಾಮನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯು ನಡೆಸಿದ್ದ ಮೌಲ್ಯಮಾಪನ ವರದಿಯು ಬಹಿರಂಗಗೊಳಿಸಿದೆ.

 

ಮಾನವ ಆನೆ ಸಂಘರ್ಷ, ಉಪಶಮನ ಕ್ರಮಗಳು ಮತ್ತು ಸಂಘರ್ಷ ತಗ್ಗಿಸುವಲ್ಲಿ ಅದರ ಪರಿಣಾಮ ಕುರಿತು ಪ್ರಾಧಿಕಾರಕ್ಕೆ 2022ರ ನವೆಂಬರ್‍‌ನಲ್ಲಿ ಸಲ್ಲಿಸಿರುವ ವರದಿಯು ಮಾನವ ಆನೆ ಸಂಘರ್ಷದ ವಿವಿಧ ಆಯಾಮಗಳನ್ನು ತೆರೆದಿಟ್ಟಿದೆ. 2016-17ರಿಂದ 2017-2018ರ ಅವಧಿಯವರೆಗಿನ ದತ್ತಾಂಶ ಮತ್ತು ಭೌತಿಕ ಪರಿಶೀಲನೆ ನಡೆಸಿರುವ ಅಧ್ಯಯನ ತಂಡವು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ  ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯವನ್ನೂ  ಬಹಿರಂಗಗೊಳಿಸಿದೆ.

 

ಹಾಗೆಯೇ 2023ರಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಸ್ತಿತ್ವಕ್ಕೆ ಬಂದಿರುವ ಬೆನ್ನಲ್ಲೇ ಈ ವರದಿಯು ಮುನ್ನೆಲೆಗೆ ಬಂದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೈಸೂರಿನಲ್ಲಿ 2017-18 ಮತ್ತು 2018-19ರಲ್ಲಿ ಕೇವಲ 39.1 ಕಿ ಮೀ ತಡೆಗೋಡೆ ನಿರ್ಮಿಸಿದ್ದರೇ ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 382 ಕಿ ಮೀ ತಡೆಗೋಡೆ ನಿರ್ಮಿಸಲಾಘಿದೆ. ಹುಣಸೂರು ಮತ್ತು ವಿರಾಜಪೇಟೆ ವಿಭಾಗಗಳಲ್ಲಿಯೂ ತಡೆಗೋಡೆ ನಿರ್ಮಾಣದ ಪ್ರಮಾಣ ಅತ್ಯಂತ ಕಡಿಮೆ ಇದೆ. 16.3 ಕಿ ಮೀ ಮತ್ತು 9.14 ಕಿ ಮೀ ಉದ್ದದ ಎಲ್ಲಾ ರೀತಿಯ ತಡೆಗೋಡೆ ನಿರ್ಮಿಸಲಾಗಿದೆ ಎಂದು ವರದಿ ವಿವರಿಸಿದೆ.

 

ಅಧ್ಯಯನ ಅವಧಿಯಲ್ಲಿ ರಾಮನಗರದಲ್ಲಿ ಕೇವಲ 9.86 ಕಿ ಮೀ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಮತ್ತು ಸಂಘರ್ಷದ ಪ್ರಕರಣಗಳು 2016-17ರಲ್ಲಿ 1,441 ಇದ್ದದ್ದು 2017-18ರಲ್ಲಿ 3,095ಕ್ಕೆ ಏರಿಕೆಯಾಗಿವೆ. ಮೈಸೂರಿನಲ್ಲಿ 40.10ಕಿ ಮೀ ಮಾತ್ರ ತಡೆಗೋಡೆ ಇದ್ದರೂ ಪ್ರಕರಣಗಳ ಸಂಖ್ಯೆ 767ರಿಂದ 1,248ವರೆಗೆ ಇದೆ.

 

ಚಾಮರಾಜನಗರ ಎಲ್ಲಾ ವಿಧಧ ತಡೆಗೋಡೆಗಳು ಸೇರಿ ಒಟ್ಟು 386 ಕಿ ಮೀ ಇದೆ. ಇಲ್ಲಿ ಸಂಘರ್ಷದ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. 2015-16ರಲ್ಲಿ ಅತ್ಯಂತ ಕಡಿಮೆ ಎಂದರೆ 419 ಪ್ರಕರಣಗಳು ದಾಖಲಾಗಿದ್ದರೆ 2017-18ರಲ್ಲಿ 1,569 ಪ್ರಕರಣಗಳು ವರದಿಯಾಗಿವೆ. ಕೊಡಗು ಜಿಲ್ಲೆಯ ಮಡಿಕೇರಿ ಪ್ರಾದೇಶಿಕ ವಿಭಾಗದಲ್ಲಿ ಅರಣ್ಯ ಸುತ್ತ 110 ಕಿ ಮೀ ತಡೆಗೋಡೆ ಇದೆ. ಮತ್ತು 2018-19ರಲ್ಲಿ 1139 ಪ್ರಕರಣಗಳು ದಾಖಲಾಗಿವೆ. 2014-15ರಲ್ಲಿ ಗರಿಷ್ಠ 1,755 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ವಿರಾಜಪೇಟೆಯಲ್ಲಿಯೂ ಕೇವಲ 9.14 ಕಿ ಮೀ ತಡೆಗೋಡೆ ಇದೆ. ಮತ್ತು ಪ್ರಕರಣಗಳ ಸಂಖ್ಯೆ 910ರಿಂದ 1,739ರವರೆಗೆ ಇದೆ. ಬಂಡಿಪುರವು 243.65 ಕಿ ಮೀ ತಡೆಗೋಡೆ ಇದ್ದು ಪ್ರಕರಣಗಳು ಜಾಸ್ತಿ ಇವೆ. ದಟ್ಟವಾದ ಅರಣ್ಯ ಪ್ರದೇಶ, ವಿಸ್ತರಿತ ಗಡಿ ಮತ್ತು ಹಳ್ಳಿಗಳು ಈ ಗಡಿಗಳ ಸಮೀಪೇ ಇರುವುದು ಅದಕ್ಕೆ ಕಾರಣವಾಗಿರಬಹುದು. 265 ಕಿ ಮೀ ತಡೆಗೋಡೆ ಹೊಂದಿರುವ ನಾಗರಹೊಳೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿವೆ. 2017-18ರ ಅವಧಿಯಲ್ಲಿ ಕನಿಷ್ಠ 712 ಪ್ರಕರಣಗಳು ದಾಖಲಾಗಿವೆ.

 

ರಾಮನಗರ, ಮೈಸೂರು ವಿರಾಜಪೇಟೆಗಳಲ್ಲಿ ಅಧ್ಯಯನ ಅವಧಿಯಲ್ಲಿ ನಿರ್ಮಿಸಲಾದ ತಡೆಗೋಡೆಗಳ ವಿಸ್ತಾರವು 9.14 ಕಿ ಮೀನಿಂದ 40.10 ಕಿ ಮಿ ವರೆಗೆ ಇವೆ ಮತ್ತು ಪ್ರಕರಣಗಳು ಜಾಸ್ತಿ ಇವೆ.

 

ಕರ್ನಾಟಕ ಅರಣ್ಯ ಇಲಾಖೆಯಿಂದ ಲಭ್ಯವಾದ ಮಾಹಿತಿಯಂತೆ ಅಧ್ಯಯನ ಅವಧಿಯ 5 ವರ್ಷದಗಳಲ್ಲಿ ಒಟ್ಟು 935.16 ಕಿ ಮೀ ಎಲ್ಲಾ ವಿಧದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಈ ತಡೆಗೋಡೆಗಳ ನಿರ್ಮಾಣಕ್ಕೆ 12525.7 ಲಕ್ಷ ವೆಚ್ಚವಾಗಿದೆ. ರಾಮನಗರ ವಿಚಾರದಲ್ಲಿ ವನ್ಯಜೀವಿ ವಿಭಾಗವನ್ನು ಪ್ರತ್ಯೇಕಿಸಿದ್ದರಿಂದಾಗಿ ವನ್ಯಜೀವಿ ವಿಭಾಗವು 2017-18 ಮತ್ತು 2018-19ರಲ್ಲಿ ಯಾವುದೇ ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಮೈಸೂರು ವಿಚಾರವಾಗಿ 2014-15ರಲ್ಲಿ 1.2 ಕಿ ಮೀ ಇದ್ದದ್ದು 2018-19ರಲ್ಲಿ 30.8 ಕಿ ಮೀಗೆ ಹೆಚ್ಚಳವಾಗಿದೆ.

 

ತಡೆಗೋಡೆ ನಿರ್ಮಾಣದ ಮೇಲೆ ಮಾಡಲಾದ ವೆಚ್ಚವು 2.12 ಲಕ್ಷ ರು ಗಳಿಂದ 125.42 ಲಕ್ಷ ರು.ಗಳಿಗೆ ಏರಿಕೆ ಅಗಿದೆ. ಚಾಮರಾಜನಗರದಲ್ಲಿ ತಡೆಗೋಡೆಗಳ ನಿರ್ಮಾಣ ವೇಗವು ಸ್ಥಿರವಾಗಿದೆ. ಐದು ವರ್ಷಗಳಲ್ಲಿ ಒಟ್ಟು 576.24 ಕಿ ಮೀ ತಡೆಗೋಡೆ ನಿರ್ಮಿಸಲಾಗಿದೆ. ಮಡಿಕೇರಿ ವಿಭಾಗದಲ್ಲಿ 110.45 ಕಿ ಮೀ ತಡೆಗೋಡೆಯನ್ನು 656.54 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಂಡಿಪುರದಲ್ಲಿ 177.7 ಉದ್ದದ ತಡೆಗೋಡೆಯನ್ನು 1913.1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಐದು ವರ್ಷಗಳಲ್ಲಿ ಒಟ್ಟಾರೆ ವೆಚ್ಚವು 1929.87 ಲಕ್ಷ ಹೆಚ್ಚಳವಾಗಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ.

 

‘ಹೀಗಾಗಿ ಈ ವಿಭಾಗಗಳಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳೊಂದಿಗೆ ಬೆಸೆದುಕೊಂಡಿರುವ ಛಿದ್ರಗೊಂಡ ಅರಣ್ಯ ಪ್ರದೇಶಗಳು ಮತ್ತು ತಡೆಗೋಡೆಗಳ ನಿರ್ಮಾಣ ಇಲ್ಲಿ ಕಷ್ಟವಾಗಿರುವುದರಿಂದ ಸಹಜವಾಗಿಯೇ ಪ್ರಕರಣಗಳ ಸಂಖ್ಯೆ ಜಾಸ್ತಿ ಇರಬಹುದು ಎಂಬ ತೀರ್ಮಾನಕ್ಕೆ ಬರಬಹುದು,’ ಎಂದು ಅಧ್ಯಯನ ತಂಡವು ಅಭಿಪ್ರಾಯಿಸಿದೆ.

SUPPORT THE FILE

Latest News

Related Posts