ಆನೆ ದಾಳಿ; ಪರಿಹಾರ ಮೊತ್ತಕ್ಕಾಗಿ ಕಾಂಗ್ರೆಸ್‌ ಸರ್ಕಾರದಲ್ಲಿ ವರ್ಷಗಟ್ಟಲೇ ಅಲೆದಿದ್ದ ರೈತರು, ಬೆಳೆಗಾರರು

ಬೆಂಗಳೂರು; ಆನೆ ದಾಳಿಗೆ ಒಳಗಾದ ರೈತರು, ಬೆಳೆಗಾರರ ಪೈಕಿ ಶೇ. 62.4ರಷ್ಟು ರೈತರು ಸಕಾಲದಲ್ಲಿ ಎಕ್ಸ್‌ಗ್ರೇಷಿಯಾ ಪಡೆದಿಲ್ಲ. ಶೇ. 37.6ರಷ್ಟು ರೈತರು ಮಾತ್ರ ಸಕಾಲದಲ್ಲಿ ಅಂದರೆ ಮೂರು ತಿಂಗಳ ಒಳಗೇ ಎಕ್ಸ್‌ಗ್ರೇಷಿಯಾ ಮೊತ್ತ ಪಡೆದಿದ್ದಾರೆ. ಇನ್ನುಳಿದ ರೈತರು ಬೆಳೆಗಾರರು ಪರಿಹಾರ ಪಡೆಯಲು ವರ್ಷಗಟ್ಟಲೇ ಅಲೆದಿದ್ದಾರೆ. ಚಾಮರಾಜನಗರ ಮತ್ತು ವಿರಾಜಪೇಟೆ ಹೊರತುಪಡಿಸಿದರೆ ಉಳಿದೆಲ್ಲಾ ವಿಭಾಗಗಳಲ್ಲಿಯೂ ರೈತರಿಗೆ ಪರಿಹಾರ ವಿಳಂಬವಾಗಿ ತಲುಪಿದೆ ಎಂದು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯು ನಡೆಸಿದ್ದ ಮೌಲ್ಯಮಾಪನ ವರದಿಯು ಬಹಿರಂಗಗೊಳಿಸಿದೆ.

 

ಮಾನವ ಆನೆ ಸಂಘರ್ಷ, ಉಪಶಮನ ಕ್ರಮಗಳು ಮತ್ತು ಸಂಘರ್ಷ ತಗ್ಗಿಸುವಲ್ಲಿ ಅದರ ಪರಿಣಾಮ ಕುರಿತು ಪ್ರಾಧಿಕಾರಕ್ಕೆ 2022ರ ನವೆಂಬರ್‍‌ನಲ್ಲಿ ಸಲ್ಲಿಸಿರುವ ವರದಿಯು ಮಾನವ ಆನೆ ಸಂಘರ್ಷದ ವಿವಿಧ ಆಯಾಮಗಳನ್ನು ತೆರೆದಿಟ್ಟಿದೆ.  ಹಾಗೆಯೇ 2023ರಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಸ್ತಿತ್ವಕ್ಕೆ ಬಂದಿರುವ ಬೆನ್ನಲ್ಲೇ ಈ ವರದಿಯು ಮುನ್ನೆಲೆಗೆ ಬಂದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅನುದಾನ ಲಭ್ಯತೆ ಇಲ್ಲದಿರುವುದೇ ಅಸಮರ್ಥನೀಯ ವಿಳಂಬಕ್ಕೆ ಸಾಮಾನ್ಯ ಕಾರಣ ಎಂದಿರುವ ಅಧ್ಯಯನ ತಂಡವು ಮೂರು ತಿಂಗಳಿಗಿಂತಲೂ ಹೆಚ್ಚಿನ ಅವಧಿ ತೆಗೆದುಕೊಂಡರೆ ಅದನ್ನು ಇಲಾಖೆಯ ವಿಳಂಬ ಎಂದೇ ಪರಿಗಣಿಸಬೇಕಾಗುತ್ತದೆ. ಆರ್ಥಿಕ ನಷ್ಟ ಮತ್ತು ಭಾವನಾತ್ಮಕವಾಗಿಯೂ ಕ್ಷೋಭೆ ಅನುಭವಿಸುವುದರಿಂದ ರೈತ ಈಗಾಗಲೇ ಸಂಕಷ್ಟದಲ್ಲಿದ್ದಾನೆ ಎನ್ನುವುದನ್ನು ಮರೆಯಬಾರದು ಎಂದು ಸರ್ಕಾರದ ಗಮನ ಸೆಳೆದಿದೆ.

 

ಚಾಮರಾಜನಗರ ಮತ್ತು ವಿರಾಜಪೇಟೆ ಹೊರತುಪಡಿಸಿದರೆ ಉಳಿದೆಲ್ಲಾ ವಿಭಾಗಗಳಲ್ಲಿಯೂ ರೈತರಿಗೆ ಪರಿಹಾರವು ವಿಳಂಬವಾಗಿ ತಲುಪಿದೆ. ಮೈಸೂರು, ಮಂಡ್ಯ, ಮಡಿಕೇರಿ ಮತ್ತು ಬಂಡಿಪುರ ಮತ್ತು ನಾಗರಹೊಳೆ ರೈತರು ಸಕಾಲದಲ್ಲಿ ಎಕ್ಸ್‌ಗ್ರೇಷಿಯಾ ಪಡೆದಿಲ್ಲ. ರೈತರು ಎಕ್ಸ್‌ಗ್ರೇಷಿಯಾ ಪಡೆದುಕೊಳ್ಳುವಲ್ಲಿನ ವಿಳಂಬದ ಅವಧಿಯು ಕೆಲವು ತಿಂಗಳುಗಳಿಂದ ವರ್ಷಗಳವೆರೆಗೂ ಇದೆ. ಶೇ.62.4ರಷ್ಟು ರೈತರಿಗೆ ಘಟನೆ ನಡೆದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯ ಬಳಿಕ ಪರಿಹಾರ ಮೊತ್ತ ಸಂದಾಯವಾಗಿದೆ. ಈ ಶ್ರೇಣಿಯಲ್ಲಿ ಶೆ.9.8ರಷ್ಟು ರೈತರು ಆರು ತಿಂಗಳ ಬಳಿಕ ಪರಿಹಾರ ಪಡೆದಿದ್ದಾರೆ.

 

ರಾಮನಗರ ಮತ್ತು ಮಡಿಕೇರಿ ವಿಭಾಗಗಳಲ್ಲಿಯೂ ವಿಳಂಬ ಪಾವತಿಯ ಅತಿ ಹೆಚ್ಚು ಪ್ರಕರಣಗಳಿವೆ. ಈ ವಿಭಾಗಗಳಲ್ಲಿ ವಿಳಂಬಕ್ಕೆ ಮತ್ತೊಂದು ಕಾರಣ ಎಂದರೆ ಆನೆ ದಾಳಿಗೆ ತುತ್ತಾದ ಪ್ರಕರಣಗಳು ಜಾಸ್ತಿ ಇದೆ ಎನ್ನವುದು ಮತ್ತು ಪಾವತಿಸಬೇಕಾದ ಪರಿಹಾರ ಮೊತ್ತವೂ ಸಹ ಜಾಸ್ತಿ ಇರುವುದಾಗಿದೆ. ವಿಳಂಬಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದು ಅಥವಾ ಸಂಬಂಧಿಸಿದ ಜಿಲ್ಲಾ ಅಥವಾ ವಿಭಾಗಕ್ಕೆ ಸಕಾಲದಲ್ಲಿ ಅನುದಾನ ಹಂಚಿಕೆಯಾಗದೇ ಇರುವುದು ಕಾರಣವಾಗಿರಬಹುದು ಎಂದು ಅಧ್ಯಯನ ತಂಡವು ವರದಿಯಲ್ಲಿ ಅಭಿಪ್ರಾಯಿಸಿದೆ.

 

ಎಕ್ಸ್‌ಗ್ರೇಷಿಯಾ ಸಮಸ್ಯೆಗಳ ಪೈಕಿ ವಿಳಂಬ ಪರಿಹಾರ ಮಾತ್ರವಲ್ಲದೇ ರೈತರ ದೃಷ್ಟಿಕೋನದಲ್ಲಿ ಕಡಿಮೆ ಪರಿಹಾರ ಪಾವತಿಯು ಸಾಮಾನ್ಯ ಲಕ್ಷಣವಾಗಿದೆ. ತಮ್ಮ ಎಲ್ಲಾ ಕ್ಲೇಮುಗಳನ್ನು ಪಾವತಿಸಲಾದ ಎಕ್ಸ್‌ಗ್ರೇಷಿಯಾ ಒಳಗೊಂಡಿಲ್ಲ ಎನ್ನುವುದು ರೈತರ ಭಾವನೆಯಾಗಿದೆ. ಸುಮಾರು ಶೇ.71.7ರಷ್ಟು ರೈತರು ಎಕ್ಸ್‌ಗ್ರೇಷಿಯಾ ಪಾವತಿಯು ಸಮರ್ಪಕವಾಗಿಲ್ಲ ಮತ್ತು ಆರ್ಥಿಕ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಹಾಗೂ ಸಾಮಾಜಿಕ ವೆಚ್ಚದ ಕುರಿತು ಇದರಲ್ಲಿ ಉಲ್ಲೇಖವೂ ಇಲ್ಲ. ಸುಮಾರು ಶೇ.28.3ರಷ್ಟು ರೈತರು ಮಾತ್ರ ಪರಿಹಾರ ಮೊತ್ತವು ಸಮರ್ಪಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಯನ ತಂಡವು ವರದಿಯಲ್ಲಿ ಉಲ್ಲೇಖಿಸಿದೆ.

 

ರಾಮನಗರ ಮತ್ತು ಚಾಮರಾಜನಗರದ ಕೆಲವು ಭಾಗ, ಮಂಡ್ಯ ಮತ್ತು ಹುಣಸೂರಿನ ಹೆಚ್ಚಿನ ಪ್ರದೇಶಗಳನ್ನು ಹೊರತುಪಡಿಸಿದರೇ ಉಳಿದೆಲ್ಲಾ ಕಡೆ ರೈತರು ಪರಿಹಾರ ಅಸಮರ್ಪಕವಾಗಿದೆ. ಮೈಸೂರು, ಮಡಿಕೇರಿ, ಬಂಡೀಪುರ ಮತ್ತು ನಾಗರಹೊಳೆ ಸುತ್ತಮುತ್ತಲಿನ ಸಂತ್ರಸ್ತ ರೈತರು ತಾವು ಅನುಭವಿಸಿದ ನಷ್ಟಕ್ಕೆ ನೀಡಿದ ಎಕ್ಸ್‌ಗ್ರೇಷಿಯಾ ಅಸರ್ಮಪಕವಾಗಿದೆ. ಬೆಳೆ ಪರಿಹಾರದ ಮೊತ್ತವನ್ನೂ ಪರಿಷ್ಕರಿಸಿದ್ದರೂ ಸಹ ಮೌಲ್ಯಮಾಪನವು ವಾಸ್ತವಿಕತೆಗೆ ಹತ್ತಿರವಾಗಿರದ ಕಾರಣ ಅದು ಅವಕಾಶದ ವೆಚ್ಚವನ್ನು ಒಳಗೊಂಡಿಲ್ಲ.

 

ಬಹುತೇಕ ರೈತರು ಬೆಳೆದು ನಿಂತ ತೆಂಗು, ಮಾವು ಮತ್ತು ಇತರೆ ಮರಗಳಿಗೆ ಹಾನಿಯಾದಾಗ ನಷ್ಟ ಮೌಲ್ಯಮಾಪನ ಮಾಡುವಾಗ ಮರವನ್ನು ಬೆಳೆಸಲು ಆದ ವೆಚ್ಚವನ್ನು ಪರಿಗಣಿಸುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಬೆಳೆಯುವ ಹಂತದಲ್ಲಿರುವ ತೆಂಗಿಗೆ 2,000 ಪರಿಹಾರ ನೀಡಲಾಗಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆಧ್ದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜತೆ ಚರ್ಚಿಸಿ ಪರಿಹಾರದ ಮೊತ್ತವನ್ನು ಪರಿಷ್ಕರಿಸುವುದು ಅಗತ್ಯವಾಗಿದೆ. ಎಲ್ಲಾ ನಷ್ಟಕ್ಕೂ ಪರಿಹಾರ ನೀಡುವುದು ಕಷ್ಟವಾದರೂ ಪರಿಹಾರ ಮೊತ್ತ ಸ್ವಲ್ಪವಾದರೂ ಸಮಂಜಸವಾಗಿರಬೇಕು ಎಂದು ಅಧ್ಯಯನ ತಂಡವು ಸಲಹೆ ನೀಡಿದೆ.

the fil favicon

SUPPORT THE FILE

Latest News

Related Posts