ಬ್ರಾಹ್ಮಣ ಸಂಘ‍ರ್ಷ ಸಮಿತಿಗೆ ಸಿ ಎ ನಿವೇಶನ; ನಿಯಮ ಉಲ್ಲಂಘಿಸಿ ದರ ಇಳಿಕೆ, 78 ಲಕ್ಷ ನಷ್ಟದ ಹೊರೆ

ಬೆಂಗಳೂರು; ಸಂಘ ಪರಿವಾರ ಹಿನ್ನೆಲೆ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ಗೆ ರಿಯಾಯತಿ ದರದಲ್ಲಿ ಗೋಮಾಳ, ನಾಗರಿಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣಗಳ ಬೆನ್ನಲ್ಲೇ ಇದೀಗ ಬಳ್ಳಾರಿಯ ಬ್ರಾಹ್ಮಣ ಸಂಘರ್ಷ ಸಮಿತಿಗೂ ಶೇ.10 ರ ದರದಲ್ಲಿ ನಾಗರಿಕ ಸೌಲಭ್ಯ ನಿವೇಶನ ಮಂಜೂರು ಮಾಡಲು ಅನುಮೋದಿಸಿದ್ದ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಧಿಕಾರದ ಬೊಕ್ಕಸಕ್ಕೆ 78.00 ಲಕ್ಷ ರು. ನಷ್ಟ ಹೊರೆಸಿರುವುದು  ಇದೀಗ ಬಹಿರಂಗವಾಗಿದೆ.

 

ಹಿಂದಿನ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ ಶ್ರೀರಾಮುಲು, ಶಿವರಾಮ ಹೆಬ್ಬಾರ, ಎಸ್‌ ಸುರೇಶ್‌ಕುಮಾರ್‍‌, ಶಾಸಕ ಜಿ ಸೋಮಶೇಖರ ರೆಡ್ಡಿ ಮತ್ತು ವಿಧಾನಪರಿಷತ್‌ನ ಕಾಂಗ್ರೆಸ್‌ನ ಸದಸ್ಯ ಯು ಬಿ ವೆಂಕಟೇಶ್‌ ಅವರು ನೀಡಿದ್ದ ಮನವಿಯನ್ನು ಪುರಸ್ಕರಿಸಿರುವ ನಗರಾಭಿವೃದ್ಧಿ ಇಲಾಖೆಯು ಅರ್ಥಿಕ ಇಲಾಖೆಯ ಅಭಿಪ್ರಾಯವನ್ನು ಬದಿಗೊತ್ತಿ  ಶೇ.10ರ ದರವನ್ನಷ್ಟೇ ವಿಧಿಸಿ 1,275.16 ಚ ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ಮಂಜೂರು ಮಾಡಿದೆ. ಇದರಿಂದ 78.00 ಲಕ್ಷ ರು. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ.  ಈ ಸಂಬಂಧ ಸಚಿವ ಸಂಪುಟದ ನಡವಳಿ ಮತ್ತು ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ಅನ್ವಯ ಗುತ್ತಿಗೆ ಹಣವನ್ನು ಕಡಿಮೆ ಮಾಡಲು ನಿಯಮಗಳಲ್ಲಿ ಅವಕಾಶಗಳಿಲ್ಲ. ಆದರೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಕಡತವನ್ನು ಮಂಡಿಸಿತ್ತು ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

 

ನಾಗರಿಕ ಸೌಲಭ್ಯ ನಿವೇಶವನ್ನು ಮಂಜೂರು ಮಾಡಿಸಿಕೊಂಡ ನಂತರ ಬ್ರಾಹ್ಮಣ ಸಂಘರ್ಷ ಸಮಿತಿಯು ಈ ದರವನ್ನು ಪರಿಷ್ಕರಿಸಿ ಶೇ.10ರ ದರದಲ್ಲಿ ರಿಯಾಯಿತಿ ದರವನ್ನು ಮಂಜೂರು ಮಾಡಬೇಕು ಎಂದು ಕೋರಿತ್ತು. ಇದೇ ಪ್ರಸ್ತಾವನೆ ಆಧರಿಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ ಶ್ರೀರಾಮುಲು, ಶಿವರಾಮ ಹೆಬ್ಬಾರ, ಎಸ್‌ ಸುರೇಶ್‌ಕುಮಾರ್‍‌ ಮತ್ತಿತರರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

 

ಪ್ರಕರಣದ ಹಿನ್ನೆಲೆ

 

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಬಳ್ಳಾರಿ ನಗರದ ಟಿಎಸ್‌ನಂ 766 ಮತ್ತು 839ರಲ್ಲಿ  1,275.16 ಚ ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನವನ್ನು ಮಂಜೂರು ಮಾಡಲು ನಂಬರ್‍‌ ಬ್ರಾಹ್ಮಣ ಸಂಘರ್ಷ ಸಮಿತಿಯು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ 86,71,088 ರು.ಗಳಿಗೆ  ಮಂಜೂರು ಮಾಡಲಾಗಿತ್ತು. ಈ ಸಂಬಂಧ ಬ್ರಾಹ್ಮಣ ಸಂಘರ್ಷ ಸಮಿತಿಯು 8,67,109 ರು.ಗಳನ್ನು ಪಾವತಿಸಿತ್ತು. ಬಾಕಿ ಮೊತ್ತ 78,03,979 ರು.ಗಳನ್ನು ಪಾವತಿಸಬೇಕಿತ್ತು. ಆದರೆ ಈ ಹಣವನ್ನು ಪಾವತಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು.

 

 

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ)ನಿಯಮಗಳು 1991ರ ನಿಯಮ 8(1)ರಲ್ಲಿ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಹಣವನ್ನು ನಿಗದಿಪಡಿಸಲಾಗಿದೆ. ಈ ನಿಯಮಗಳಲ್ಲಿ ಅವಕಾಶ ಕಲ್ಪಿಸಿರುವಂತೆ ಪ್ರಸ್ತಾಪಿತ ಸಿ ಎ ನಿವೇಶನಕ್ಕೆ ರಿಯಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೂ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಶೇ.10ರ ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಕಡತವನ್ನು ಮಂಡಿಸಲಾಗಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.

 

ಅರ್ಥಿಕ ಇಲಾಖೆ ಅಭಿಪ್ರಾಯ ಬದಿಗೊತ್ತಿದ ಹಿಂದಿನ ಸಿಎಂ

 

ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸರ್ಕಾರದಿಂದ ಯಾವುದೇ ಅನುದಾನವನ್ನು ನೀಡುವುದಿಲ್ಲ. ಪ್ರಾಧಿಕಾರಗಳು ಸ್ವ-ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸಿಕೊಂಡು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ 1,275.16 ಚ ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನಕ್ಕೆ ರಿಯಾಯಿತಿ ನೀಡಿದರೆ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗುತ್ತದೆ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ನೀಡಿತ್ತು.

 

ಆದರೂ ಈ ಅಭಿಪ್ರಾಯವನ್ನು ಬದಿಗೊತ್ತಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.10ರ ದರದಲ್ಲಿ ಮಂಜೂರು ಮಾಡಿ ಸರ್ಕಾರಕ್ಕೆ 78,03,979 ರು. ನಷ್ಟಕ್ಕೆ ಕಾರಣವಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts