ಮಾನವ ಆನೆ ಸಂಘರ್ಷ; ಕಾಂಗ್ರೆಸ್‌ ಸರ್ಕಾರದಲ್ಲಿ ನಿರ್ಮಾಣವಾದ ತಡೆಗೋಡೆಗಳು ಅತ್ಯಂತ ಕಳಪೆ

photo credit;indiatoday

ಬೆಂಗಳೂರು; ಮಾನವ-ಆನೆ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ   ರಾಮನಗರ ಜಿಲ್ಲೆ ಸೇರಿದಂತೆ ಹಲವೆಡೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ( 2014-15ರಿಂದ 2018ರವರೆಗೆ)  ನಿರ್ಮಿಸಿದ್ದ ತಡೆಗೋಡೆಗಳು ಅತ್ಯಂತ ಕಳಪೆಯಿಂದ ಕೂಡಿವೆ. ನಿರ್ವಹಣೆಗೆ ಅನುದಾನ ಬಿಡುಗಡೆ ಆಗದೇ ಇರುವುದು ಅಥವಾ ಅನುದಾನ ಬಳಕೆಗೆ ಅವಕಾಶವೂ ಇರಲಿಲ್ಲ ಎಂದು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯು ನಡೆಸಿದ್ದ ಮೌಲ್ಯಮಾಪನ ವರದಿಯು ಬಹಿರಂಗಗೊಳಿಸಿದೆ.

 

ಮಾನವ ಆನೆ ಸಂಘರ್ಷ, ಉಪಶಮನ ಕ್ರಮಗಳು ಮತ್ತು ಸಂಘರ್ಷ ತಗ್ಗಿಸುವಲ್ಲಿ ಅದರ ಪರಿಣಾಮ ಕುರಿತು ಪ್ರಾಧಿಕಾರಕ್ಕೆ 2022ರ ನವೆಂಬರ್‌ನಲ್ಲಿ ಸಲ್ಲಿಸಿರುವ ವರದಿಯು ಮಾನವ ಆನೆ ಸಂಘರ್ಷದ ವಿವಿಧ ಆಯಾಮಗಳನ್ನು ತೆರೆದಿಟ್ಟಿದೆ. ಹಾಗೆಯೇ 2023ರಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಸ್ತಿತ್ವಕ್ಕೆ ಬಂದಿರುವ ಬೆನ್ನಲ್ಲೇ ಈ ವರದಿಯು ಮುನ್ನೆಲೆಗೆ ಬಂದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘2014-15ರಿಂದ 2018-19ರ ಅವಧಿಯಲ್ಲಿ ರಾಮನಗರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ತಡೆಗೋಡೆಗಳು ಅತ್ಯಂತ ಕಳಪೆಯಿಂದ ಕೂಡಿವೆ. ಅವುಗಳನ್ನು ನಿರ್ವಹಣೆ ಮಾಡಿಲ್ಲ. ಶೇ.50ಕ್ಕಿಂತಲೂ ಹೆಚ್ಚು ಅಧಿಕ ಹಾನಿಗೆ ಒಳಗಾಗಿವೆ. ಕಾರ್ಯನಿರ್ವಹಣೆ ಸ್ಥಿತಿಯಲ್ಲಿಲ್ಲ. ಅವುಗಳನ್ನು ಮತ್ತೆ ಕಾರ್ಯನಿರ್ವಹಿಸುವ ರೀತಿಯಲ್ಲಿ ಪುನಶ್ಚೇತನಗೊಳಿಸುವುದು ಸಾಧ್ಯವೇ ಇಲ್ಲ. ಬಹುತೇಕ ತಡೆಗೋಡೆಗಳನ್ನು 2014-15ರಲ್ಲಿ ನಿರ್ಮಿಸಲಾಗಿದ್ದು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ,’ ಎಂದು ಅಧ್ಯಯನ ತಂಡವು ವಿವರಿಸಿದೆ.

 

ರಾಮನಗರದಲ್ಲಿ ಕಳಪೆ ಪ್ರಮಾಣ ಶೇ.67ರಷ್ಟು ಇದ್ದರೆ ಮಡಿಕೇರಿಯಲ್ಲಿ ಅದು ಶೇ.100ರಷ್ಟಿದೆ. ಚಾಮರಾಜನಗರದಲ್ಲಿ ಶೇ.40ರಷ್ಟಿದೆ. ಅವುಗಳಲ್ಲಿ ಕೆಲವು ನಿರ್ವಹಣೆ ಅಗತ್ಯವಿರುವ ಮಧ್ಯಮ ಶ್ರೇಣಿಯವೂ ಇದೆ. 2014-15ರಲ್ಲಿ ನಿರ್ಮಾಣಗೊಂಡವನ್ನು ಹೊರತುಪಡಿಸಿ ಕೆಲವು ಇಪಿಟಿಗಳು ಬಹುಶಃ ಉತ್ತಮ ನಿರ್ವಹಣೆಯಿಂದ ಕೂಡಿವೆ ಎಂದು ವರದಿಯಿಂದ ತಿಳಿದು ಬಂದಿದೆ.

 

ಚಾಮರಾಜನಗರ, ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಕೆಲವು ಮಧ್ಯಮ ಶ್ರೇಣಿಯಲ್ಲಿವೆ. ಸ್ವಲ್ಪ ಮಟ್ಟಿನ ನಿರ್ವಹಣೆ ಅಗತ್ಯವಿದೆ. 2014-15ರಲ್ಲಿ ನಿರ್ಮಾಣವಾಗಿರುವ ತಡೆಗೋಡೆಗಳ ನಿರ್ವಹಣೆಗೆ ಅನುದಾನದ ಕೊರತೆ ಕಂಡು ಬಂದಿದೆ. ಮೈಸೂರಿನಲ್ಲಿ ಶೇ.75ರಷ್ಟು ಇಪಿಟಿಗಳು ಮಧ್ಯಮ ಶ್ರೇಣಿಯಲ್ಲಿದ್ದರೆ ಶೇ.25ರಷ್ಟು ಕಳಪೆಯಿಂದ ಕೂಡಿವೆ. 2017-18 ಮತ್ತು 2018-19ರಲ್ಲಿ ನಿರ್ಮಿಸಿರುವ ತಡೆಗೋಡೆಗಳ ನಿರ್ವಹಣೆಗಾಗಿ ಯಾವುದೇ ಅನುದಾನವನ್ನೂ ಹಂಚಿಕೆ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

ಮಡಿಕೇರಿ (ಪ್ರಾದೇಶಿಕ) ವಿಭಾಗದಲ್ಲಿ ಅಧ್ಯಯನ ಅವಧಿಯಲ್ಲಿ ನಿರ್ಮಿಸಿರುವ ಇಪಿಟಿಗಳ ಪೈಕಿ ಕೆಲವನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಬಹುತೇಕ ತಡೆಗೋಡೆಗಳಲ್ಲಿ ಪೊದೆಗಳು ಬೆಳೆದುಕೊಂಡಿದ್ದು ಹೂಳು ತುಂಬಿಕೊಂಡಿವೆ. ಅವುಗಲಣ್ನು ನಿರ್ವಹಣೆ ಮಾಡಿಲ್ಲ. ಶೇ. 87 ರಷ್ಟು ತಡೆಗೋಡೆಗಳು ಅತ್ಯಂತ ಕಳಪೆ ಸ್ಥಿತಿಯಲ್ಲಿವೆ. ನಿರ್ವಹಣೆಯನ್ನೇ ಮಾಡಿಲ್ಲ ಎಂಬ ಸಂಗತಿಯು ವರದಿಯಿಂದ ಗೊತ್ತಾಗಿದೆ.

 

‘ಕಾಡು ಹಂದಿಗಳಂತಹ ಕಾಡು ಪ್ರಾಣಿಗಳು ಮತ್ತು ಜಿಂಕೆಗಳು ಅನೆಗಳಿಗೆ ಕಂದಕ ದಾಟುವ ಸುಲಭ ದಾರಿಯನ್ನು ತೋರಿಸಿಕೊಡುತ್ತವೆ. ಅಲ್ಲದೆ ಇಪಿಟಿಗಳನ್ನು ಹೂಳು ಸಂಗ್ರಹ, ಕಳೆ, ಪೊದೆಗಳು ಬೆಳೆದುಕೊಂಡು ಅನೆಗಳ ದಾರಿಯನ್ನು ಸುಲಭಗೊಳಿಸುವುದು ಮಾತ್ರವಲ್ಲದೇ ಇಪಿಟಿಯ ಬಾಳಿಕೆ ಅವಧಿ ಮತ್ತು ಸಾಮರ್ಥ್ಯವನ್ನು ಕುಂದಿಸಲಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ನಿರ್ವಹಣೆಗೆ ಅನುದಾನ ಬಿಡುಗಡೆ ಆಗದೇ ಇರುವುದು ಅಥವಾ ಅನುದಾನ ಬಳಕೆಗೆ ಅವಕಾಶ ಇಲ್ಲದ ಕಾರಣದಿಂದ ಇಪಿಟಿಗಳನ್ನು ನಿರ್ವಹಣೆ ಮಾಢದೇ ಇದ್ದರೆ ಕೆಲವು ವರ್ಷಗಳಲ್ಲಿ ಹೂಳು ತುಂಬಿಕೊಂಡು ಇಪಿಟಿಗಳು ಬಳಕೆಗೆ ಅಯೋಗ್ಯವಾಗುತ್ತವೆ. ‘ಒಟ್ಟಾರೆಯಾಗಿ ಹೇಳುವುದಾದರೇ ಆರಂಭದ ವರ್ಷಗಳಾದ 2014-15, 2015-16, 2016-17ರ ಅವಧಿಯಲ್ಲಿ ನಿರ್ಮಾಣವಾಗಿರುವ ತಡೆಗೋಡೆಗಳು ನಿರ್ವಹಣೆ ಕೊರತೆ, ಅನುದಾನದ ಅಲಭ್ಯತೆ ಮತ್ತು ಸೂಕ್ತ ನಿಗಾ ಇಲ್ಲದ ಕಾರಣ ಕಳಪೆ ಸ್ಥಿತಿಯಲ್ಲಿವೆ,’ ಎಂದು ವರದಿಯಿಂದ ಗೊತ್ತಾಗಿದೆ.

 

‘ಅನುದಾನದ ಕೊರತೆ ಅಥವಾ ನಿರ್ವಹಣಾ ವೆಚ್ಚಕ್ಕೆ ನಿಧಿಯನ್ನು ಒದಗಿಸದ ಕಾರಣ ನಿರ್ವಹಣೆ ಮಾಡಲಾಗಿಲ್ಲ. ಹೀಗಾಗಿ ಹೂಳು, ಕಲ್ಲು ಮಣ್ಣುಗಳು ಮತ್ತು  ಕಳೆ ತುಂಬಿಕೊಂಡು ನಿರೀಕ್ಷಿತ ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಿತಿ ತಲುಪಿವೆ,’ ಎಂದು ವರದಿಯು ವಿವರಿಸಿದೆ.

the fil favicon

SUPPORT THE FILE

Latest News

Related Posts