15ನೇ ಹಣಕಾಸು ಆಯೋಗ; ರಾಜ್ಯ ವಿಪತ್ತು ನಿರ್ವಹಣೆಗೆ ಈವರೆಗೂ ಬಿಡುಗಡೆಯಾಗದ ಅನುದಾನ

photo credit; rediffmail

ಬೆಂಗಳೂರು; ಜಿಲ್ಲಾ ಪಂಚಾಯ್ತಿ ಸೇರಿದಂತೆ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆರೋಗ್ಯ ಸೇರಿದಂತೆ ಇನ್ನಿತರೆ ವಲಯಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಅನುದಾನ ಬಿಡುಗಡೆಗೆ ಬಾಕಿ ಉಳಿಸಿಕೊಂಡಿದ್ದ ಕೇಂದ್ರ ಸರ್ಕಾರವು ಇದೀಗ ರಾಜ್ಯ ವಿಪತ್ತು ನಿರ್ವಹಣೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಅಷ್ಟೇ ಅಲ್ಲದೇ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ್ವಯ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಸ್‌ಡಿಎಂಎಫ್‌ ಮಾರ್ಗಸೂಚಿಗಳನ್ನೂ ಹೊರಡಿಸಿಲ್ಲ ಎಂಬುದನ್ನು ಖುದ್ದು ಆರ್ಥಿಕ ಇಲಾಖೆಯೇ ಬಹಿರಂಗಪಡಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯು 2023ರ ಮೇ 5ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕಂದಾಯ ಇಲಾಖೆಯು ವಿಪತ್ತು ನಿರ್ವಹಣೆಗೆ ಕೈಗೊಂಡ ಕ್ರಮಗಳ ಮಾಹಿತಿಯನ್ನು ಒದಗಿಸುವಂತೆ ಕೋರಲಾಗಿತ್ತು. ಈ ಸಂಬಂಧ ಕಡತ ಸಂಖ್ಯೆ ಕಂಇ 63 ಟಿಎನ್‌ ಆರ್‌ 2023ರಲ್ಲಿನ ಟಿಪ್ಪಣಿಯಲ್ಲಿನ ಮಾಹಿತಿಯಂತೆ 2022-23ನೇ ಸಾಲಿನ 15ನೇ ಕೇಂದ್ರೀಯ ಹಣಕಾಸು ಆಯೋಗದ ಶಿಫಾರಸ್ಸಿನ್ವಯ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಸ್‌ಡಿಎಂಎಫ್‌ಗೆ ಮಾರ್ಗಸೂಚಿಗಳನ್ನು ಹೊರಡಿಸಿರುವುದಿಲ್ಲವೆಂದು ಹಾಗೂ ಎಸ್‌ಡಿಎಂಎಫ್‌ ಅನುದಾನ ಬಿಡುಗಡೆಯಾಗಿಲ್ಲ,’ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ.

 

ಜಿಲ್ಲಾ ಪಂಚಾಯ್ತಿ ಸೇರಿದಂತೆ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆರೋಗ್ಯ, ವಿಪತ್ತು ನಿರ್ವಹಣೆ ಸೇರಿದಂತೆ ಇನ್ನಿತರೆ ವಲಯಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ 15ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸ್ಸಿನ ಒಟ್ಟು ಮೊತ್ತದ ಎರಡನೇ ಕಂತಿನ ಅನುದಾನ ಪೈಕಿ 2021ರ ಡಿಸೆಂಬರ್‌ 10ರ ಅಂತ್ಯಕ್ಕೆ ಒಟ್ಟು 2,142.70 ಕೋಟಿ ರು. ಗಳನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿತ್ತು.
15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಒಟ್ಟು 4,890.53 ಕೋಟಿ ರು. ಪೈಕಿ 2021ರ ನವೆಂಬರ್‌ ಅಂತ್ಯಕ್ಕೆ ಒಟ್ಟು 2,747.83 ಕೋಟಿ ರು.ಗಳನ್ನು ರಾಜ್ಯ ಸರ್ಕಾರವು ಸ್ವೀಕರಿಸಿತ್ತು. ಆದರೆ 2,142.70 ಕೋಟಿ ರು. ಅನುದಾನ ಬಾಕಿ ಉಳಿಸಿಕೊಂಡಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

15ನೇ ಹಣಕಾಸು ಆಯೋಗ; 2,142 ಕೋಟಿ ಬಾಕಿ ಉಳಿಸಿಕೊಂಡರೂ ತುಟಿಬಿಚ್ಚದ ಈಶ್ವರಪ್ಪ

 

2021ರ ಜೂನ್‌ ತಿಂಗಳಿನಿಂದಲೂ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡುವಲ್ಲಿನ ವಿಳಂಬದ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರು ಹಲವು ಬಾರಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆದಿದ್ದರೂ 5 ತಿಂಗಳಾದರೂ ಬಾಕಿ ಬರಬೇಕಿರುವ ಒಟ್ಟು 2,142.70 ಕೋಟಿ ರು.ನಲ್ಲಿ ಬಿಡಿಗಾಸೂ ಬಂದಿರಲಿಲ್ಲ.

 

ರಾಜ್ಯಕ್ಕೆ 4,891.00 ಕೋಟಿ ರು. ಅನುದಾನ ಒದಗಿಸಲು ಶಿಫಾರಸ್ಸು ಮಾಡಿತ್ತು. ಇದರಲ್ಲಿ ಮೊದಲನೇ ಕಂತಿನಲ್ಲಿ 2,445.50 ಕೋಟಿ ಹಂಚಿಕೆಯಾಗಿತ್ತು. ಈ ಪೈಕಿ 2021ರ ಜೂನ್‌ ಅಂತ್ಯಕ್ಕೆ ರಾಜ್ಯ ಸರ್ಕಾರಕ್ಕೆ ಕೇವಲ 941.80 ಕೋಟಿ ರು. ಬಿಡುಗಡೆ ಮಾಡಿ ಇನ್ನೂ 1,503.70 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಕುರಿತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ’15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 2021-22ನೇ ಸಾಲಿನ ಮೊದಲ ಕಂತಿನಲ್ಲಿ ಬಾಕಿ ಉಳಿದಿರುವ 1,503.70 ಕೋಟಿ ರು. ಬಿಡುಗಡೆಗೆ ಗಮನಹರಿಸಬೇಕು,’ ಎಂದು ಕೋರಿದ್ದರು.

 

ಡಿಸೆಂಬರ್‌ 10ರ ಅಂತ್ಯಕ್ಕೆ ಬಾಕಿ ಎಷ್ಟಿತ್ತು?

 

2021ರ ಜೂನ್‌ ಅಂತ್ಯಕ್ಕೆ 945 ಕೋಟಿ ರು.ಮಾತ್ರ ಸರ್ಕಾರ ಸ್ವೀಕರಿಸಿತ್ತು . 2021ರ ಡಿಸೆಂಬರ್‌ 10ರ ಅಂತ್ಯಕ್ಕೆ 2,142.70 ಕೋಟಿ ರು. ಬಾಕಿ ಉಳಿದಿತ್ತು. ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ 2,377 ಕೋಟಿ ರು.ಗಳನ್ನು 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿತ್ತು. ಈ ಪೈಕಿ ನವಂಬರ್‌ ಅಂತ್ಯಕ್ಕೆ 1,188.05 ಕೋಟಿ ರು.ಗಳನ್ನಷ್ಟೇ ರಾಜ್ಯ ಸರ್ಕಾರವು ಸ್ವೀಕರಿಸಿದೆ. 1,188.5 ಕೋಟಿ ರು. ಬಿಡುಗಡೆಗೆ ಬಾಕಿ ಇರಿಸಿಕೊಂಡಿತ್ತು.
ಅದೇ ರೀತಿ ಗ್ರಾಮೀಣ ನೈರ್ಮಲ್ಯೀಕರಣ ಮತ್ತು ವಾಯುಗುಣಮಟ್ಟ ವೃದ್ಧಿಸಲು ಒಟ್ಟು 421 ಕೋಟಿ ರು.ಗಳನ್ನು ಶಿಫಾರಸ್ಸು ಮಾಡಿತ್ತು. ಡಿಸೆಂಬರ್‌ 10ರವರೆಗೆ ಈ ಬಾಬ್ತಿನಲ್ಲಿ ಬಿಡಿಗಾಸನ್ನೂ ರಾಜ್ಯ ಸರ್ಕಾರವು ಸ್ವೀಕರಿಸಿರಲಿಲ್ಲ.

 

ಹಾಗೆಯೇ ನಾನ್‌ ಮಿಲಿಯನ್‌ ಪ್ಲಸ್‌ ಸಿಟಿ ಯೋಜನೆಯಡಿಯಲ್ಲಿ ಒಟ್ಟು 750 ಕೋಟಿ ರು.ಗಳಿಗೆ ಶಿಫಾರಸ್ಸು ಮಾಡಿತ್ತು. ಈ ಪೈಕಿ ನವೆಂಬರ್‌ ಅಂತ್ಯಕ್ಕೆ 375 ಕೋಟಿ ರು. ಗಳನ್ನು ಸ್ವೀಕರಿಸಿದೆಯಾದರೂ ಡಿಸೆಂಬರ್‌ 10ರ ಅಂತ್ಯಕ್ಕೆ ಇನ್ನು 375 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ವಿಪತ್ತು ನಿರ್ವಹಣೆಗೆ 395.5 ಕೋಟಿ ಪೈಕಿ 79.10 ಕೋಟಿ ರು.ಗಳನ್ನು ಜೂನ್‌ನಲ್ಲಿ ಬಾಕಿ ಉಳಿಸಿಕೊಂಡಿತ್ತು. ಆದರೆ ಡಿಸೆಂಬರ್‌ 10ರ ತನಕ ಇನ್ನೂ 158.20 ಕೋಟಿ ರು.ಗಳು ಬಿಡುಗಡೆಗೆ ಬಾಕಿ ಇತ್ತು.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು 15ನೇ ಹಣಕಾಸು ಆಯೋಗದ ಅನುದಾನಕ್ಕೆ 2021-22ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಲು 2021ರ ಜುಲೈ 6ರಂದು ಸುತ್ತೋಲೆ ಹೊರಡಿಸಿತ್ತು. ’15ನೇ ಹಣಕಾಸು ಆಯೋಗದ ಅನುದಾನದಲ್ಲಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 2,377.00 ಕೋಟಿ ನಿಗದಿಪಡಿಸಿದೆ. ಈ ಅನುದಾನದಲ್ಲಿ ರಾಜ್ಯ ಸರ್ಕಾರವು ಶೇ.85ರಷ್ಟು ಅನುದಾನವನ್ನು ಗ್ರಾಮ ಪಂಚಾಯ್ತಿಗಳಿಗೆ ಶೇ.10ರಷ್ಟು ಅನುದಾನವನ್ನು ತಾಲೂಕು ಪಂಚಾಯ್ತಿಗಳಿಗೆ ಮತ್ತು ಶೇ.5ರಷ್ಟು ಅನುದಾನವನ್ನು ಜಿಲ್ಲಾ ಪಂಚಾಯ್ತಿಗಳಿಗೆ ನಿಗದಿಪಡಿಸಬೇಕಿದೆ,’ ಎಂದು ಸುತ್ತೋಲೆ ಹೊರಡಿಸಿತ್ತು.

the fil favicon

SUPPORT THE FILE

Latest News

Related Posts