702 ಕೋಟಿ ವೆಚ್ಚ ಹಗರಣ; ಸಮ್ಮಿಶ್ರ ಸರ್ಕಾರದಲ್ಲಿ ಬಾಕಿ ಇದ್ದ ಪ್ರಸ್ತಾವನೆಗೆ ಬಿಜೆಪಿ ಸರ್ಕಾರದಲ್ಲಿ ಅನುಮೋದನೆ

photo credit;vijayakarnataka

ಬೆಂಗಳೂರು; ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಅನುಮೋದನೆ ಮತ್ತು ಅನುಮತಿಯಿಲ್ಲದೆಯೇ ಹೆಚ್ಚುವರಿ ಖರ್ಚು ಮಾಡಿದ್ದ 702 ಕೋಟಿ ರು. ಮೊತ್ತದ ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಿಂದಿನ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿನ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ರಾಜ್ಯ ಬಿಜೆಪಿ ಸರ್ಕಾರದ ಅವಧಿಯ ಕೊನೆ ದಿನಗಳಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವ ಕುರಿತು ಪ್ರತಿಪಕ್ಷ ಕಾಂಗ್ರೆಸ್‌ ಆಕ್ಷೇಪಿಸಿರುವ ಬೆನ್ನಲ್ಲೇ   ಹಿಂದಿನ ಸರ್ಕಾರದ ಸಚಿವ ಸಂಪುಟದ ನಡವಳಿಗಳು ಮುನ್ನೆಲೆಗೆ ಬಂದಿವೆ.

 

ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ ಕೆ ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ 702 ಕೋಟಿ ರು. ಹೆಚ್ಚುವರಿ ಖರ್ಚಾಗಿತ್ತು ಎಂದು ಟ್ವೀಟ್‌ ಮಾಡಿದ್ದರು. ಆದರೆ ದಾಖಲೆಗಳ ಪ್ರಕಾರ ಹಿಂದಿನ ಸರ್ಕಾರವು ಅನುಮೋದನೆ ನೀಡದೆಯೇ ಬಾಕಿ ಇರಿಸಿದ್ದ ಪ್ರಸ್ತಾವನೆಗೆ  ಬಿಜೆಪಿ ಸರ್ಕಾರವು ತನ್ನ ಅಧಿಕಾರದ ಕೊನೆ ದಿನಗಳಲ್ಲಿ ಅಸ್ತು ಎಂದಿದೆ. ಡಿ ಕೆ ಶಿವಕುಮಾರ್‌ ಅವಧಿಯಲ್ಲಿ ಈ ವೆಚ್ಚವಾಗಿದೆ ಎಂದು ಪ್ರತಿಪಕ್ಷವನ್ನು ಕುಟುಕಿದ್ದ ಬಸವರಾಜ ಬೊಮ್ಮಾಯಿ ಅವರು ವಾಸ್ತವವನ್ನೇ ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.  ಈ ಸಂಬಂಧ ‘ದಿ ಫೈಲ್‌’ ಸಮಗ್ರ ದಾಖಲೆಗಳನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಜಲ ಸಂಪನ್ಮೂಲ ಇಲಾಖೆಯು 3,395.02 ಕೋಟಿ ರು. ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲು 2018ರ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡಿಸಲಾಗಿತ್ತು.

 

2018ರಲ್ಲಿದ್ದ ಸರ್ಕಾರದ ಮುಂದೆ ಈ ಪ್ರಸ್ತಾವನೆ ಇದ್ದರೂ ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. ಹೀಗಾಗಿ ಮತ್ತೊಮ್ಮೆ  2019ರಲ್ಲಿ ಎರಡು ಬಾರಿ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಎರಡೂ ಅವಧಿಯಲ್ಲಿ ಒಂದೇ ರೀತಿಯ ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

 

2012-13ರ ದರಗಳನ್ವಯ ಅಂದಾಜನ್ನು 2,651.37 ಕೋಟಿಗಳಿಗೆ ಪರಿಷ್ಕರಿಸಿದ್ದು ಕೇಂದ್ರ ಜಲ ಆಯೋಗವು (B C Ratio 1;03;1 (Benfefits drought prone area)ದೊಂದಿಗೆ ಅಂದಾಜು ಮೊತ್ತವನ್ನು 2,561.88 ಕೋಟಿಗಳಿಗೆ ಅಂತಿಮಗೊಳಿಸಿತ್ತು. 2014-15ರಿಂದ 2017-18ರವರೆಗೆ ಎಐಬಿಪಿ ಅಡಿಯಲ್ಲಿ ಸೇರಿಸಿದ್ದು 2018ರ ಅಂತ್ಯಕ್ಕೆ 410.28 ಕೋಟಿ ರು. ಕೇಂದ್ರ ಸಹಾಯ ಧನ ಪಡೆದಿತ್ತು.

 

‘ಕೇಂದ್ರ ಜಲ ಆಯೋಗವು 2016ರ ಅಕ್ಟೋಬರ್‌ 20ರಂದು ಬರೆದಿದ್ದ ಪತ್ರದಲ್ಲಿ Fast Track Proforma clearnceಗಾಗಿ ಯೋಜನೆಯ ಪರಿಷ್ಕೃತ ಅಂದಾಜನ್ನು ರಾಜ್ಯದ ತಾಂತ್ರಿಕ ಸಲಹಾ ಸಮಿತಿ ಮತ್ತು ಆರ್ಥಿಕ ಇಲಾಖೆಯ ತೀರವಳಿ ಪಡೆದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲು ಸೂಚಿಸಿದ್ದರು.

 

ಈ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ವಲಯದ ಮುಖ್ಯ ಇಂಜಿನಿಯರ್‌ ಅವರು ಯೋಜನೆಯ ಭೂ ಸ್ವಾಧೀನಕ್ಕೆ ಪರಿಹಾಋ ನೀಡುವುದರಲ್ಲಿ, ಹೆಚ್ಚುವರಿ ಲೈನಿಂಗ್‌ ಕಾಮಗಾರಿಗಳು, ವಿತರಣಾ ನಾಲಾ ಕಾಮಗಾರಿಗಳು ಮತ್ತು ಯೋಜನೆಯ ನಿರ್ವಹಣಾ ವೆಚ್ಚಗಳ ಕಾರಣದಿಂದ 2017-18ರ ದರಗಳ ಅನ್ವಯ ತುಂಗಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜನ್ನು 3,395.02 ಕೋಟಿ ರು.ಗಳಿಗೆ ಪರಿಷ್ಕರಿಸಿ ಸಲ್ಲಿಸಿರುತ್ತಾರೆ ಎಂದು ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಸಮರ್ಥನೆ ಮಾಡಿಕೊಂಡಿತ್ತು ಎಂಬುದು ಗೊತ್ತಾಗಿದೆ.

 

ಅಲ್ಲದೇ ಯೋಜನೆ ಅಂದಾಜನ್ನು 2018ರ ಆಗಸ್ಟ್‌ 27ರಂದು ನಡೆದ ಕರ್ನಾಟಕ ನೀರಾವರಿ ನಿಗಮದ ಮಂಡಳಿಯ 85ನೇ ಸಭೆಯಲ್ಲಿಯೂ ಮಂಡಿಸಲಾಗಿತ್ತು. ಚರ್ಚೆ ನಂತರ ಈ ಯೋಜನೆಯ ಅಂದಾಜಿಗೆ ಅನುಮೋದನೆ ನೀಡಿ ಅಂದಾಜಿಗೆ ರಾಜ್ಯ ಆರ್ಥಿಕ ಇಲಾಖೆಯ ಸಹಮತಿ ಪಡೆದು ಸರ್ಕಾರದ ಆಡಳಿತಾತ್ಮಕ ಅನುಮೋದನೆಗಾಗಿ ಸಲ್ಲಿಸಬೇಕು ಎಂದು ಶಿಫಾರಸ್ಸು ಮಾಡಲಾಗಿತ್ತು ಎಂದು ಸಚಿವ ಸಂಪುಟ ಕಡತದಿಂದ ತಿಳಿದು ಬಂದಿದೆ.

 

‘ಈ ಯೋಜನೆಯ 2,561.88 ಕೋಟಿ ರು ಪರಿಷ್ಕೃತ ಅಂದಾಜು ಮೊತ್ತವನ್ನು 3,395.00 ಕೋಟಿ ರು.ಗಳಿಗೆ ಮರು ಪರಿಷ್ಕೃತಗೊಳಿಸಲಾಗಿದ್ದು 833.14 ಕೋಟಿ ರು. ಹೆಚ್ಚುವರಿಯಾಗಿರುತ್ತದೆ. ಯೋಜನೆಯನ್ನು 2019ರ ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಲು ಯೋಜಿಸಲಾಗಿದೆ,’ ಎಂಬ ಮಾಹಿತಿಯನ್ನೂ ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿತ್ತು.

 

2018ರಲ್ಲಿ (ಜಸಂಇ 64 ಎಂಎಂಬಿ 2018) ಸಚಿವ ಸಂಪುಟ ಟಿಪ್ಪಣಿಯಲ್ಲಿದ್ದ ವಿವರಗಳನ್ನೇ 2019ರ ಅವಧಿಯಲ್ಲಿನ ಸಚಿವ ಸಂಪುಟಕ್ಕೆ ಮಂಡಿಸಿತ್ತು. ಆದರೆ ಈ ಎರಡೂ ಅವಧಿಯಲ್ಲಿನ ಸಚಿವ ಸಂಪುಟವು ಜಲ ಸಂಪನ್ಮೂಲ ಇಲಾಖೆಯು ಮಂಡಿಸಿದ್ದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರಲಿಲ್ಲ ಎಂಬುದು ಸಚಿವ ಸಂಪುಟದ ಕಡತದ ದಾಖಲೆಗಳಿಂದ ಗೊತ್ತಾಗಿದೆ.

 

2020, 2021 ಮತ್ತು 2022ರಲ್ಲಿ ಸಚಿವ ಸಂಪುಟದ ಮುಂದೆ ಈ ಪ್ರಸ್ತಾವನೆ ಸಲ್ಲಿಸಿದ್ದರ ಬಗ್ಗೆ ಆರ್‌ಟಿಐ ಅಡಿ ನೀಡಿರುವ ದಾಖಲೆಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ 2022ರ ಜನವರಿ 29ರಂದು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದ ಪತ್ರದಲ್ಲಿ 702.12 ಕೋಟಿ ರು. ಹೆಚ್ಚುವರಿಯಾಗಿ ಭರಿಸಿರುವುದಕ್ಕೆ ಸ್ಪಷ್ಟೀಕರಣ ಬಯಸಿದ್ದರು. ಹೀಗಾಗಿ ಈ ಅವಧಿಯಲ್ಲಿಯೂ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಇದೇ ಪ್ರಸ್ತಾವನೆಯು 2023ರ ಮಾರ್ಚ್‌ 8ರಂದು (ಪ್ರಕರಣ ಸಂಖ್ಯೆ ಸಿ;157/2023) (ಕಡತ ಸಂಖ್ಯೆ ಜಸಂಇ 138 ಎಂಎಂಬಿ 2020) ಮಂಡಿಸಲಾಗಿತ್ತು. ಕೇಂದ್ರದ ಸಹಾಯ ಧನ 33.72 ಕೋಟಿ ರು.ಗಳ ಬಾಕಿ ಇರುತ್ತದೆ ಎಂಬ ಮಾಹಿತಿಯನ್ನು ಹೊರತುಪಡಿಸಿದರೆ ಉಳಿದಂತೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿನ ಸಚಿವ ಸಂಪುಟಕ್ಕೆ ಮಂಡಿಸಿದ್ದ ಪ್ರಸ್ತಾವನೆಯನ್ನೇ ಮರು ಮಂಡಿಸಿತ್ತು.

 

2023ರ ಮಾರ್ಚ್‌ 8ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ‘ತುಂಗಾ ಮೇಲ್ದಂಡೆ ಯೋಜನೆಯ 3,395.2 ಕೋಟಿ ರು. ಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಟಿಪ್ಪಣಿಯ ಕಂಡಿಕೆ 7ರಲ್ಲಿ ಒಳಗೊಂಡಿರುವ ಪ್ರಸ್ತಾವನೆಗಳನ್ನು ಅನುಮೋದಿಸಿದ್ದ ಸಚಿವ ಸಂಪುಟವು ಈ ಕುರಿತು ನಿರ್ಣಯವನ್ನೂ ಕೈಗೊಂಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಸಹಿ ಹಾಕಿರುವುದು ಟಿಪ್ಪಣಿಯ ವಿಷಯ ಹಾಳೆಯಿಂದ ತಿಳಿದು ಬಂದಿದೆ.

 

702 ಕೋಟಿ ರು.ಗಳನ್ನು ಸರ್ಕಾರದ ಅನುಮೋದನೆ ಮತ್ತು ಅನುಮತಿ ಇಲ್ಲದೆಯೇ ಹೆಚ್ಚುವರಿಯಾಗಿ ಖರ್ಚು ಮಾಡಿರುವುದು ನಿಗಮದ ಕರ್ತವ್ಯಲೋಪವಾಗಿದೆ ಎಂದು ಇಲಾಖೆಯ ಶಾಖಾಧಿಕಾರಿ ಪತ್ತೆ ಹಚ್ಚಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟವು ಪರಿಷ್ಕೃತ ಅಂದಾಜು ಮೊತ್ತದ ಪ್ರಸ್ತಾವನೆಗೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts