ಮೂಲಸೌಕರ್ಯಕ್ಕೆ 93,226 ಕೋಟಿ, ಇಂಧನ ವಲಯಕ್ಕೆ 81,974 ಕೋಟಿ, ಕೃಷಿಗೆ ಕೇವಲ 1,053 ಕೋಟಿ ಹೂಡಿಕೆ

photo credit;kouravabcpatil officialtwitter account

ಬೆಂಗಳೂರು; ಮೂಲ ಸೌಕರ್ಯ ಕಲ್ಪಿಸುವ ಉದ್ದೇಶ ಮತ್ತು ಇಂಧನ ವಲಯದ ಸಾರ್ವಜನಿಕ ಉದ್ಯಮಗಳಲ್ಲಿಯೇ ಅತಿ ಹೆಚ್ಚು ಹೂಡಿಕೆ ಮಾಡಿರುವ ರಾಜ್ಯ ಸರ್ಕಾರವು ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳ ಉದ್ದಿಮೆಗಳಿಗೆ ಅತೀ ಕಡಿಮೆ ಪ್ರಮಾಣದ ಹೂಡಿಕೆ ಮಾಡಿದೆ.

 

ಕೃಷಿ ಚಟುವಟಿಕೆ ಮತ್ತು ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವು ಭರ್ಜರಿ ಪ್ರಚಾರ ಪಡೆದುಕೊಂಡಿತ್ತು. ಅಲ್ಲದೇ ವಿಧಾನಸಭೆ ಅಧಿವೇಶನದಲ್ಲಿಯೇ ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರೂ ಸಹ ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು  ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದರ  ಹೊತ್ತಿನಲ್ಲಿಯೇ ಸಾರ್ವಜನಿಕ ಉದ್ಯಮಗಳಲ್ಲಿನ ಹೂಡಿಕೆ ಕುರಿತಾಗಿ ಸಿಎಜಿ ಸಲ್ಲಿಸಿರುವ ವರದಿಯು ಮುನ್ನೆಲೆಗೆ ಬಂದಿದೆ.

 

2021ರ ಮಾರ್ಚ್‌ ಅಂತ್ಯದವರಿಗೆ ಮೂಲ ಸೌಕರ್ಯ ವಲಯದ ಸಾರ್ವಜನಿಕ ಉದ್ದಿಮೆಗಳಿಗೆ 93, 226.24 ಕೋಟಿ ರು. ಮತ್ತು ಇಂಧನ ವಲಯದ ಸಾರ್ವಜನಿಕ ಉದ್ದಿಮೆಗಳಿಗೆ 81,974.15 ಕೋಟಿ ರು. ಹೂಡಿಕೆ ಮಾಡಿದ್ದರೇ ಕೃ‍ಷಿ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ ಕೇವಲ 1,053.34 ಕೋಟಿ ರು. ಹೂಡಿಕೆ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಸಾರ್ವಜನಿಕ ಉದ್ದಿಮೆಗಳ ಪೈಕಿ ಮೂಲ ಸೌಕರ್ಯ ಹಾಗೂ ಇಂಧನ ವಲಯಗಳಲ್ಲಿ ಹೂಡಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಇದು ಕ್ರಮವಾಗಿ ಶೇ. 50.17, ಹಾಗೂ ಶೇ. 44.12ರಷ್ಟಾಗಿದೆ. 2016-17 ಹಾಗೂ 2020-21ರ ನಡುವೆ ಮೂಲ ಸೌಕರ್ಯ ಹಾಗೂ ಇಂಧನ ವಲಯಗಳಲ್ಲಿ ಹೂಡಿಕೆಗಳು ಕ್ರಮವಾಗಿ 39,667.67 ಕೋಟಿ ಹಾಗೂ 39,781.19 ಕೋಟಿ ಮೊತ್ತಗಳಷ್ಟು ಹೆಚ್ಚಳಗೊಂಡಿದ್ದವು ಎಂದು ವಿವರಿಸಿದೆ.

 

ಕೃಷಿ ಹಾಗೂ ಸಂಬಂಧಿತ, ಹಣಕಾಸು, ಮೂಲಸೌಕರ್ಯ, ಉತ್ಪಾದನೆ, ಇಂಧನ, ಸೇವೆಗಳು ಮತ್ತು ಇತರೆ ವಲಯಗಳಲ್ಲಿ ಒಟ್ಟು 105 ಸಾರ್ವಜನಿಕ ಉದ್ಯಮವು ಕಾರ್ಯನಿರತವಾಗಿವೆ. 13 ಸ್ಥಗಿತಗೊಂಡಿವೆ. ಈ ಉದ್ದಿಮೆಗಳಲ್ಲಿ 2021ರ ಮಾರ್ಚ್‌ ಅಂತ್ಯಕ್ಕೆ ಒಟ್ಟಾರೆ 1,85,804.43 ಕೋಟಿ ರು.ಹೂಡಿಕೆಯಾಗಿದೆ.
ಹಾಗೆಯೇ ಇದೇ ಅವಧಿಯಲ್ಲಿ 670.18 ಕೋಟಿ ಮೊತ್ತದಷ್ಟು ಹೂಡಿಕೆಗಳನ್ನು ಮಾಡಿದ್ದ 13 ಸಾರ್ವಜನಿಕ ಉದ್ಯಮಗಳು ಕಳೆದ ದ18 ವರ್ಷಗಳಿಂದ ಕಾರ್ಯ ಸ್ಥಗಿತಗೊಂಡಿವೆ. 27 ಸಾರ್ವಜನಿಕ ವಲಯದ ಉದ್ದಿಮೆಗಳು 2021ರ ಮಾರ್ಚ್‌ ಅಂತ್ಯದವರೆಗೂ ಹೂಡಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನೇ ಸಿಎಜಿಗೆ ಒದಗಿಸಿಲ್ಲ.

 

70 ಸಾರ್ವಜನಿಕ ವಲಯ ಉದ್ದಿಮೆಗಳ ಪೈಕಿ 36ರಲ್ಲಿ 18,319.38 ಕೋಟಿ ಮೊತ್ತದಷ್ಟು ಹೂಡಿಕೆಯಾಗಿದೆ. ಆದರೆ ಲೆಕ್ಕಪತ್ರಗಳನ್ನು ಅಂತಿಮ ರೂಪಕ್ಕೆ ತರುವಲ್ಲಿ ಹಾಗೂ ನಂತರದಲ್ಲಿ ಅವುಗಳ ಲೆಕ್ಕಪರಿಶೋಧನೆಯ ಅನುಪಸ್ಥಿತಿಯಲ್ಲಿ ಮಾಡಿರುವ ಹೂಡಿಕೆಗಳ ಹಾಗೂ ಭರಿಸಿರುವ ವೆಚ್ಚಗಳ ಕುರಿತು ಸಮರ್ಪಕ ಲೆಕ್ಕ ಇಡಲಾಗಿದೆಯೇ ಅಥವಾ ಮೊತ್ತವನ್ನು ಯಾವ ಉದ್ದೇಶಕ್ಕೆ ಹೂಡಿಕೆ ಮಾಡಲಾಗಿತ್ತೋ ಅಂತಹ ಉದ್ದೇಶವು ಈಡೇರಿರುವುದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

42 ಸಾರ್ವಜನಿಕ ವಲಯ ಉದ್ದಿಮೆಗಳು 2,986.47 ಕೋಟಿಯಷ್ಟು ನಷ್ಟ ಹೊಂದಿವೆ. ಕೆಎಸ್‌ಎಸ್‌ಡಿಸಿಎಲ್‌, ಕೆಎಂಎಂಡಿಸಿಎಲ್‌, ಕೆಎಎಡಿಸಿಎಲ್‌ ತಮ್ಮ ಮೊದಲ ಲೆಕ್ಕಪತ್ರಗಳನ್ನೇ ಇನ್ನೂ ಅಂತಿಮ ರೂಪಕ್ಕೆ ತಂದಿಲ್ಲ. ಲಾಭಕ್ಕೆ ಪ್ರಮುಖವಾಗಿ ಕೊಡುಗೆ ನೀಡಿರುವ ಕೆಪಿಸಿಎಲ್‌ 1,209.56 ಕೋಟಿ, ಕೆಪಿಟಿಸಿಎಲ್‌ 398.93 ಕೋಟಿ, ಹೆಸ್ಕಾಂ 2,490.26 ಕೋಟಿ, ಆರ್‌ಪಿಎಸಿಎಲ್‌ 1,431.84 ಕೋಟಿ ಗಮನಾರ್ಹ ಮೊತ್ತದ ನಷ್ಟವನ್ನು ಭರಿಸಿದ್ದವು.

 

ಕಾರ್ಯನಿರತ ಸಾರ್ವಜನಿಕ ಉದ್ದಿಮೆಗಳು 2016-17ರಲ್ಲಿ 155.12 ಕೋಟಿ ಮೊತ್ತದಷ್ಟು ನಿವ್ವಳ ಲಾಭ ತೋರಿಸಿದ್ದವು. 2017-18, 2018-19, 2019-20 ಹಾಗೂ 2020-21ನೇ ಸಾಲಿನಲ್ಲಿ ಕ್ರಮವಾಗಿ 2,099.69 ಕೋಟಿ, 2,340.99 ಕೋಟಿ, 3,374.05 ಕೋಟಿ, 5,137.65 ಕೋಟಿಯಷ್ಟು ನಿವ್ವಳ ನಷ್ಟ ಭರಿಸಿದ್ದವು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

the fil favicon

SUPPORT THE FILE

Latest News

Related Posts