ಕಲ್ಲಿದ್ದಲು ಗಣಿ ಬ್ಲಾಕ್‌; ವಿಶೇಷ ಅನುಕೂಲ ಕಲ್ಪಿಸಿ ಅದಾನಿಯ ಮರು ಸ್ಥಾಪನೆ

photo credit;finacialtimes

ಬೆಂಗಳೂರು; ನಿಯಮಾವಳಿಗಳನ್ನು ಬದಿಗಿಟ್ಟು ಖಾಸಗಿ ಕಂಪೆನಿಗಳು ಕಲ್ಲಿದ್ದಲು ಗಣಿ ಲೂಟಿ ಮಾಡಲು ನೆರವಾಗಿದೆ ಎಂಬುದನ್ನು ಹೊರಗೆಡವಿರುವ  ರಿಪೋರ್ಟರ್ಸ್‌ ಕಲೆಕ್ಟಿವ್‌ನ ತನಿಖಾ ಪತ್ರಕರ್ತರ ತಂಡವು  ಗೋಯೆಂಕಾ ಅವರ ಕಂಪೆನಿ ಹೇಗೆ ಈ ಕಲ್ಲಿದ್ದಲು ಗಣಿಯ ನಿಯಂತ್ರಣ ಪಡೆಯಿತು ಎಂಬುದನ್ನು ದಾಖಲೆ ಸಹಿತ  ಬಹಿರಂಗಗೊಳಿಸಿದ್ದ ಬೆನ್ನಲ್ಲೇ ಗೌತಮ್‌ ಅದಾನಿ ಅವರಿಗೆ ಮೋದಿ ಸರಕಾರ  ಹೇಗೆ  ನೆರವಾಯಿತು ಎಂಬುದನ್ನೂ ವಿವರಿಸಿದೆ. ಈ ತನಿಖಾ ವರದಿಯನ್ನು ರಿಪೋಟರ್ಸ್‌ ಕಲೆಕ್ಟಿವ್‌ ಸಹಯೋಗದಲ್ಲಿ ‘ದಿ ಫೈಲ್‌’ ಎರಡನೇ ಕಂತಿನ ತನಿಖಾ ವರದಿಯನ್ನು ಪ್ರಕಟಿಸಿದೆ.

……………………………………………………………………………………………………………………………………………….

ಖಾಸಗಿ ಕಂಪೆನಿಗಳಿಗೆ ಕಲ್ಲಿದ್ದಲು ಗಣಿ ಲೈಸನ್ಸ್‌ ನೀಡಲು ನಿರ್ದಿಷ್ಟ ನಿಯಮಾವಳಿ ಅಡ್ಡಿ ಬರುತ್ತದೆ ಎಂದು ಗೊತ್ತಿದ್ದೂ ಅದಾನಿ ಕಂಪೆನಿಗೆ ೪೫೦ ಮಿಲಿಯನ್‌ಟನ್‌ ಅದಿರು ಹೊಂದಿದ್ದ ಕಲ್ಲಿದ್ದಲು ಗಣಿಯ ಗಣಿಗಾರಿಕೆಗೆ ಮೋದಿ ಸರಕಾರ ಅನುಮತಿ ನೀಡಿತು; ಅದೂ ದಟ್ಟ ಅರಣ್ಯದಲ್ಲಿ ಎಂಬ ಬಗ್ಗೆ ದಾಖಲೆಗಳು ಮಾತಾಡುತ್ತಿವೆ.
ಅದಾನಿಗೆ ಯಾಕೆ ಈ ವಿನಾಯಿತಿ ನೀಡಲಾಯಿತು ಎಂಬ ಬಗ್ಗೆ ಸರಕಾರದಿಂದ ಯಾವ ವಿವರಗಳೂ ಇಲ್ಲ.

 

 

2014 ರ ಕಲ್ಲಿದ್ದಲು ಹಗರಣದ ತೀರ್ಪಿನ ಮುಖಾಂತರ ಸುಪ್ರೀಂ ಕೋರ್ಟ್‌204  ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯನ್ನು ರದ್ದುಗೊಳಿಸಿತು. ಹೆಚ್ಚಿನ ಕಲ್ಲಿದ್ದಲು ಬ್ಲಾಕುಗಳನ್ನು ಅಕ್ರಮವಾಗಿ ರಾಜ್ಯ ಸ್ವಾಧೀನದ ಕಂಪೆನಿಗಳಿಗೆ ನೀಡಲಾಗಿತ್ತು. ಈ ರಾಜ್ಯಸರಕಾರ ನಿಯಂತ್ರಿತ ಕಂಪೆನಿಗಳು ಈ ಬ್ಲಾಕುಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಿಕೊಂಡಿದ್ದವು. ಇದರ ಬೆಲೆ ಎಷ್ಟೆಂಬುದೂ ರಹಸ್ಯವಾಗಿತ್ತು. ಅದಾನಿ ಜುಲೈ 2008 ರಲ್ಲಿ ಇಂಥಾ ಒಂದು ಕಲ್ಲಿದ್ದಲು ಬ್ಲಾಕ್‌ಪಡೆದಿದ್ದರು.

 

 

ಆದರೆ ತದನಂತರ ಉಳಿದ ಕಂಪೆನಿಗಳು ಹಂಚಿಕೆ ರದ್ದಾದ ಕಾರಣ ನಷ್ಟ ಅನುಭವಿಸಿದರೂ ಅದಾನಿ ಮಾತ್ರಾ ಗಣಿಗಾರಿಕೆ ಮುಂದುವರಿಸುತ್ತಾ ಬಂದರು. ಮೋದಿ ಸರಕಾರ ಅದಾನಿಗೆ ಮಾತ್ರಾ ವಿನಾಯಿತಿ ನೀಡಿದ್ದರು. ಇಂದಿನವರೆಗೆ ಅದಾನಿ ಕಂಪೆನಿ ಅಂದಾಜು ೮೦ ಮಿಲಿಯ ಟನ್ನುಗಳಷ್ಟು ಕಲ್ಲಿದ್ದಲು ಗಣಿಗಾರಿಕೆ ನಡೆಸಿದೆ.
2014 ರಲ್ಲಿ ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂತು. ಯುಪಿಎ ಸರಕಾರ ಭ್ರಷ್ಟಾಚಾರದ ವರದಿಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಎರಡು ಕ್ಷೇತ್ರಗಳಲ್ಲಿ ಈ ಭ್ರಷ್ಟಾಚಾರದ ಸುಳಿ ಆಳವಾಗಿತ್ತು. ಕಲ್ಲಿದ್ದಲು ಗಣಿ ಹಂಚಿಕೆ ಇವುಗಳಲ್ಲೊಂದು.

 

 

ಸರಿಯಾದ ರೀತಿಯಲ್ಲಿ ಹರಾಜು ಹಾಕುವ ಬದಲು ಯುಪಿಎ ಸರಕಾರ ನಿಗೂಢ ವಿಧಾನಗಳ ಮೂಲಕ ಕನಿಷ್ಠ ರಾಯಧನಕ್ಕೆ ಖಾಸಗಿ ಕಂಪೆನಿಗಳಿಗೆ ಕಲ್ಲಿದ್ದಲು ಗಣಿಗಳನ್ನು ನೀಡಿತು. ಸಿಎಜಿ ಪ್ರಕಾರ ಅಂದಾಜು 22 ಬಿಲಿಯನ್‌  ಡಾಲರುಗಳಷ್ಟು ಆದಾಯ ಈ ವಿಧಾನದ ಕಾರಣಕ್ಕೆ ನಷ್ಟವಾಗಿದೆ. ಅಂದರೆ ಅತ್ಯಧಿಕ ಬೆಲೆ ನೀಡುವ ಬಿಡ್ಡರುಗಳಿಗೆ ಹರಾಜಿನಲ್ಲಿ ಈ ಗಣಿಗಳು ಪ್ರಾಪ್ತವಾಗಿದ್ದರೆ ಇಷ್ಟು ಆದಾಯ ಬರುತ್ತಿತ್ತು.

 

 

2014 ರ ಚುನಾವಣಾ ಆಖಾಡದಲ್ಲಿ ಕಲ್ಲಿದ್ದಲು ಗಣಿ ಹಗರಣ ದೇಶಕ್ಕೇ ಮಸಿಬಳಿದಿದೆ ಎಂದು ಮೋದಿಯವರು ಯುಪಿಎ ಸರಕಾರವನ್ನು ಟೀಕಿಸಿದರು. ಎಐಸಿಸಿಯನ್ನು ಆಲ್‌ ಇಂಡಿಯಾ ಕೋಲ್‌ ಕಾಂಗ್ರೆಸ್‌ ಎಂದು ಕರೆದರು.  ಆದರೆ ಮೋದಿಯ ಸರಕಾರವೂ ನಿಯಮಾವಳಿಗಳನ್ನು ಬದಿಗಿಟ್ಟು ಖಾಸಗಿ ಕಂಪೆನಿಗಳು ಕಲ್ಲಿದ್ದಲು ಗಣಿ ಲೂಟಿ ಮಾಡಲು ನೆರವಾಗಿದೆ. ಭಾಗ 1 ರಲ್ಲಿ ಗೋಯೆಂಕಾ ಅವರ ಕಂಪೆನಿ ಹೇಗೆ ಈ ಕಲ್ಲಿದ್ದಲು ಗಣಿಯ ನಿಯಂತ್ರಣ ಪಡೆಯಿತು ಎಂಬುದನ್ನು ದಾಖಲೆ ಸಹಿತ ವಿವರಿಸಿದ್ದೇವೆ. ಈ 2 ನೇ ಭಾಗದಲ್ಲಿ ಗೌತಮ್‌ ಅದಾನಿ ಅವರಿಗೆ ಸರಕಾರ  ಹೇಗೆ  ನೆರವಾಯಿತು ಎಂಬುದನ್ನು ವಿವರಿಸಿದ್ದೇವೆ

 

 

ಅಡ್ಡ ದಾರಿಯ ನಕ್ಷೆ

 

 

ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಬ್ಲಾಕುಗಳನ್ನು ಖಾಸಗಿ ಕಂಪೆನಿಗಳಿಗಷ್ಟೇ ಸರಕಾರೀ ಸಂಸ್ಥೆಗಳಿಗೂ ನೀಡಲಾಗಿತ್ತು. ಈ ಸರಕಾರೀ ಸಂಸ್ಥೆಗಳು ಗುಪ್ತ ಕರಾರಿನ ಮೂಲಕ ಇವುಗಳನ್ನು ಖಾಸಗಿ ಕಂಪೆನಿಗಳಿಗೆ ಮಾರುತ್ತಿದ್ದವು. ಹೀಗೆ ಧಾರೆ ಎರೆದು ಕೊಡುವಾಗ ಈ ಕಂಪೆನಿಗಳನ್ನು “ಗಣಿ ಅಭಿವೃದ್ಧಿ & ನಿರ್ವಹಣಾ ಗುತ್ತಿಗೆದಾರ” ಎಂದು ಕರೆಯಲಾಗುತ್ತಿತ್ತು.

 

 

ಅದಾನಿ ಕಂಪೆನಿಗೆ ಅತ್ಯಂತ ಲಾಭದಾಯಕ ಗಣಿಗಳನ್ನು ಹೀಗೆ ಗುತ್ತಿಗೆ ಉಡುಗೊರೆ ಮೂಲಕ ನೀಡಲಾಗಿತ್ತು. ಹೀಗೆ ಅದಾನಿ ದೇಶದ ಅತೀ ದೊಡ್ಡ ಕಲ್ಲಿದ್ದಲು ಪೂರೈಕೆದಾರನಾಗಿ ಬೆಳೆದರು. ಇಂದು ಅದಾನಿ ಕೈಲಿ 9  ಅತಿ ದೊಡ್ಡ ಕಲ್ಲಿದ್ದಲು ಬ್ಲಾಕುಗಳಿವೆ. ಅಂದಾಜು 2,800  ಮಿಲಿಯನ್‌ ಟನ್‌ ಕಲ್ಲಿದ್ದಲು ! 2014 ರ ವೇಳೆಗೆ ಅದಾನಿ ಇಂಥಾ 5 ಗುತ್ತಿಗೆ  ಪಡೆದುಕೊಂಡಿದ್ದರು. ಇವುಗಳಲ್ಲಿ ಎರಡು ಭಾಜಪ ಆಳ್ವಿಕೆಯ ರಾಜ್ಯಗಳು. ಒಂದು ಕಾಂಗ್ರೆಸ್‌ ಆಳ್ವಿಕೆಯ ರಾಜ್ಯ. ಇನ್ನೆರಡರಲ್ಲಿ ವಿವಿಧ ರಾಜ್ಯ ಸಂಸ್ಥೆಗಳ ಜಂಟಿ ಉದ್ಯಮ.

 

 

ಆಗ ಸುಪ್ರೀಂ ಕೋರ್ಟು ಪ್ರವೇಶವಾಗಿ ಈ ಭೋಜನವನ್ನು ಕೆಡಿಸಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟು ಈ ಕಲ್ಲಿದ್ದಲು ಗಣಿ ವಿತರಣೆ ಸಂಪೂರ್ಣ ಅಕ್ರಮ ಎಂದು ತೀರ್ಪು ನೀಡಿತು. ಈ ವಿತರಣಾ ವ್ಯವಸ್ಥೆಯು ಹಿಂಬಾಗಿಲ ವಿಧಾನದ ಮೂಲಕ ಖಾಸಗಿ ಕಂಪೆನಿಗಳ ವ್ಯಾವಹಾರಿಕ ಲಾಭಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿತು. 204 ಕಲ್ಲಿದ್ದಲು ಗಣಿಗಳ ವಿತರಣೆಯನ್ನು ಸುಪ್ರೀಂ ಕೋರ್ಟು ರದ್ದುಪಡಿಸಿತು. ಅಸ್ತಿತ್ವದಲ್ಲಿರುವ ಕಾನೂನು, ಕೇಂದ್ರ ಸರಕಾರದ ಕಂಪೆನಿಗಳಿಗೆ ಹಂಚುವ ಅವಕಾಶ ನೀಡಿದೆಯಷ್ಟೇ ಹೊರತು ರಾಜ್ಯ ಸರಕಾರಗಳ ಕಂಪೆನಿಗಳಿಗಲ್ಲ ಎಂದು ಹೇಳಿತು. ಈ 2014 ರಲ್ಲಿ ರಾಜ್ಯ ಸರಕಾರಗಳ 101  ಕಂಪೆನಿಗಳಿಗೆ ವಿತರಣೆಯಾಗಿತ್ತು. ಹಲವು ಕಂಪೆನಿಗಳು ಆಗಲೇ ಈ ಹಂಚಿಕೆಯನ್ನು ಖಾಸಗಿ ಕಂಪೆನಿಗಳಿಗೆ ಧಾರೆ ಎರೆದಾಗಿತ್ತು.

 

 

ಮೂಲ ಹಂಚಿಕೆಯೇ ರದ್ದಾದ ಕಾರಣಕ್ಕೆ ಈ ಕಂಪೆನಿಗಳು ಖಾಸಗಿ ಕಂಪೆನಿಗಳ ಜೊತೆ ಮಾಡಿದ್ದ ಒಪ್ಪಂದವೂ ತನ್ನಿಂದ ತಾನೇ ರದ್ದಾಯಿತು. ಮೋದಿ ಸರಕಾರಕ್ಕೆ ಮತ್ತೆ ಪರಿಶುದ್ಧವಾಗಿ ಕಾರ್ಯವೆಸಗುವ ಅವಕಾಶವಿತ್ತು. ಸುಪ್ರೀಂ ಕೋರ್ಟು ತೀರ್ಪಿನ ಕಾರಣಕ್ಕೆ ಈ 204  ಕಲ್ಲಿದ್ದಲು ಗಣಿಗಳನ್ನು ಮತ್ತೆ ಹರಾಜು ಹಾಕುವ ಅವಕಾಶವಿತ್ತು. “ನಾವು ಕಲ್ಲಿದ್ದಲೂ ಸೇರಿ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ತರುತ್ತೇವೆ” ಎಂದು ರಾಜನಾಥ್‌ಸಿಂಗ್‌ ಜನವರಿ, ೨೦೧೫ರಲ್ಲಿ ಘೋಷಿಸಿದರು. ಕೇಂದ್ರ ಸರಕಾರವು ಅತೀ ಹೆಚ್ಚು ಬಿಡ್‌ ಮಾಡಿದವರಿಗೆ ಹಂಚಿಕೆ ಮಾಡುವ ಹರಾಜು ನಿಯಮಾವಳಿಗಳನ್ನು ಮಾಡಿತು.

 

 

ಆದರೆ ಇದು ಅರ್ಧ ಸತ್ಯ.

 

ಸರಕಾರವು ವಿವೇಚನಾ ಅಧಿಕಾರದ ಕಿಂಡಿಯನ್ನೂ ಮುಕ್ತವಾಗಿರಿಸಿತ್ತು. ಯಾವುದು ಹರಾಜು ಮಾಡಬಹುದು, ಯಾವುದನ್ನು ರಾಜ್ಯಗಳಿಗೆ ನೀಡಬಹುದು ಎಂಬ ವಿವೇಚನಾ ಅಧಿಕಾರವನ್ನು ಕೇಂದ್ರ ಸರಕಾರ ಇಟ್ಟುಕೊಂಡಿತು. ಅಂದರೆ ಯಾವುದನ್ನು ಸುಪ್ರೀಂ ಕೋರ್ಟು ಅಕ್ರಮ ಎಂದಿತೋ ಆ ಹಾದಿಗೆ ಕೇಂದ್ರ ಸರಕಾರ ಕಾನೂನಿನ ಮಾನ್ಯತೆ ಮತ್ತು ಶಕ್ತಿಯನ್ನು ನೀಡಿತು.

 

 

ಮಾದರಿ ಕರಾರು ಪ್ರತಿಯನ್ನೂ ಕೇಂದ್ರ ಸರಕಾರ ಮುಂದಿಟ್ಟಿತು. ಇದರಲ್ಲಿ ಒಂದು ಭಾಗವನ್ನು ನಾಗರಿಕ ಅವಗಾಹನೆಯಿಂದ ಹೊರಗಿಟ್ಟಿತು. ರಾಜ್ಯ ಸರಕಾರವು ಯಾವ ಮೊತ್ತಕ್ಕೆ ಖಾಸಗಿ ಕಂಪೆನಿಗೆ ನೀಡಿತು ಎಂಬುದು ಗುಪ್ತವಾಗಿಯೇ ಇರುವಂತೆ ಈ ಕರಾರು ಇತ್ತು.

 

 

ಇದಾದ ಮೇಲೆ ಸರಕಾರ ಅದಾನಿಗೆ ನೆರವು ನೀಡುವ ಕಾರ್ಯಾಚರಣೆಗೆ ಇಳಿಯಿತು. ಹೊಸತಾಗಿ ಹಂಚಿಕೆ ಪಡೆದ ರಾಜ್ಯಗಳು ಈ ಹಿಂದೆ ಒಪ್ಪಂದ ಮಾಡಿಕೊಂಡಿದ್ದ ಗಣಿ ಅಭಿವೃದ್ಧಿ ಮತ್ತು ನಿರ್ವಹಣಾ ಕಂಪೆನಿಯೊಂದಿಗೆ ವ್ಯವಹಾರ ಮುಂದುವರಿಸಲು ಅನುಮತಿ ನೀಡಿತು! ಅಂದರೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ರದ್ದಾಗಿದ್ದ ಒಪ್ಪಂದದ ಫಲಾನುಭವಿಯಾಗಿದ್ದ ಕಂಪೆನಿಗಳ ವ್ಯವಹಾರ ಊರ್ಜಿತಗೊಂಡಿತು. ಈ ಮೂಲಕ ಮೋದಿ ಸರಕಾರ ಅದಾನಿಯನ್ನು ಮರು ಸ್ಥಾಪಿಸಿತು. ಭಾಜಪ ಆಳ್ವಿಕೆ ಇದ್ದ ಎರಡು ರಾಜ್ಯಗಳಿಗೆ ಅದಾನಿಯನ್ನುಮತ್ತೆ ಮರುಸ್ಥಾಪಿಸಲು ಈ ನಿಯಮ ನೆರವಾಯಿತು.

 

 

2007 ರಲ್ಲಿ 450 ಮಿಲಿಯನ್   ಟನ್‌ ಸಂಗ್ರಹವಿದ್ದ ಪಾರ್ಸಾ ಪೂರ್ವ ದ ಕಲ್ಲಿದ್ದಲು ಗಣಿಯನ್ನು ರಾಜಸ್ತಾನದ ರಾಜ್ಯ ವಿದ್ಯುತ್‌ಉತ್ಪಾದನಾ ನಿಗಮಕ್ಕೆ ಹಂಚಲಾಯಿತು. ಈ ನಿಗಮ ಅದಕ್ಕೆ ಒಂದು ವರ್ಷ ಮೊದಲೇ ಅದಾನಿಯನ್ನು ತನ್ನ ಪಾಲುದಾರನ್ನಾಗಿ ಆಯ್ಕೆ ಮಾಡಿತ್ತು! ಪಾರ್ಸಾ ಕೆಂಟ್‌ ಕೊಲರಿ ಲಿಮಿಟೆಡ್‌ ಕಂಪೆನಿ ಎಂಬುದನ್ನು ಸ್ಥಾಪಿಸಲಾಯಿತು. ಇದರಲ್ಲಿ ಅದಾನಿ 74 % ಪಾಲುದಾರಿಕೆ ಹೊಂದಿದ್ದರು. ರಾಜ್ಯ ನಿಗಮ 26 % ಪಾಲು ಬಂಡವಾಳ ಹೊಂದಿತ್ತು. ರಾಜಸ್ತಾನದ ಭಾಜಪ ಸರಕಾರದ ಕೊಡುಗೆ ಇದು.

 

 

ಜುಲೈ 2008ರಲ್ಲಿ ಛತ್ತೀಸಗಢದ ಈ ಗಣಿಯನ್ನು ಪಡೆಯಲಾಯಿತು. ರಾಜಸ್ತಾನ ಮತ್ತು ಛತ್ತೀಸಗಢ ಎರಡರಲ್ಲೂ ಭಾಜಪ ಸರಕಾರವಿದ್ದವು. ಮಾರ್ಚ್‌26 , 2015 ರಂದು ರಾಜಸ್ತಾನದ ವಿದ್ಯುತ್‌ ನಿಗಮಕ್ಕೆ ಈ ಗಣಿ ಮರುಹಂಚಿಕೆಯಾಯಿತು. ಈ ನಿಗಮ ಅದಾನಿ ಪಾಲುದಾರಿಕೆಯ ಸಂಸ್ಥೆಯೊಂದಿಗೆ ವ್ಯವಹಾರ ಮುಂದುವರಿಸಿತು. “ ಈಗಾಗಲೇ ಚಾಲ್ತಿಯಲ್ಲಿರುವ ಕರಾರನ್ನು ಮುಂದುವರಿಸಲು ತೀರ್ಮಾನಿಸಲಾಯಿತು” ಎಂದು ಅದಾನಿ ಎಂಟರ್‌ಪ್ರೈಸಸ್‌ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ

 

ಆದರೆ ಸುಪ್ರೀಂ ಕೋರ್ಟಿನ ತೀರ್ಪಿನನ್ವಯ ಹಂಚಿಕೆಯಷ್ಟೇ ಅಲ್ಲ ಆದರ ಆಧಾರದ ಇತರ ಒಪ್ಪಂದಗಳು ತನ್ನಿಂದ ತಾನೇ ರದ್ದಾಗಿದ್ದವಷ್ಟೇ?!

 

ನೀತಿ ಆಯೋಗವು ದಿನಾಂಕ ಲಭ್ಯವಿಲ್ಲದ ಗುಪ್ತ ವರದಿಯೊಂದನ್ನು ಕ್ಯಾಬಿನೆಟ್‌ ಸೆಕ್ರೆಟರಿ ಅವರಿಗೆ 2020 ರಲ್ಲಿ ಕಳಿಸಿತ್ತು. ಈ ವರದಿಯ ಹೂರಣವನ್ನು ಸಾರ್ವಜನಿಕಗೊಳಿಸಲೇ ಇಲ್ಲ. ಮಾಹಿತಿ ಹಕ್ಕಿನ ಮೂಲಕದ ಪ್ರಯತ್ನಗಳಿಗೂ ಸರಕಾರ ತಡೆಯೊಡ್ಡಿತು. ಆದರೆ ರಿಪೋರ್ಟರ್ಸ್‌ಕಲೆಕ್ಟಿವ್‌ ಈ ವರದಿಯ ಸುತ್ತ ಇದ್ದ ಇತರೇ ಪತ್ರವ್ಯವಹಾರದ ವಿವರಗಳನ್ನು ಸರಕಾರದ ವಿವಿಧ ಕೈಗಳ ಮೂಲಕ ಪಡೆಯಿತು.

 

 

ಆಗ ಉಪಕಾರ್ಯದರ್ಶಿಯಾಗಿದ್ದು ಈಗ ಪ್ರಧಾನ ಮಂತ್ರಿ ಕಾರ್ಯಾಲಯದ ಆಪ್ತ ಕಾರ್ಯದರ್ಶಿಯಾಗಿರುವ ಡಾ. ಹಾರ್ದಿಕ್‌ಶಾ ಅವರು ನೀತಿ ಆಯೋಗಕ್ಕೆ ಮಾರ್ಚ್‌೪, 2020ರಂದು ಬರೆದ ಪತ್ರದಲ್ಲಿ ಈಗಿರುವ ಗಣಿ ಅಭಿವೃದ್ಧಿ ಮತ್ತು ನಿರ್ವಹಣಾ ನೇಮಕವು ದೋಷಪೂರಿತವಾಗಿದ್ದು ಅದು ಪಾರದರ್ಶಕವಾಗಿಲ್ಲ ಈ ರೀತಿಯ MDO ( ಗಣಿ ಅಭಿವೃದ್ಧಿ ಮತ್ತು ನಿರ್ವಹಣೆ) ಗುತ್ತಿಗೆ ನೇಮಕಾತಿಯನ್ನು ಭವಿಷ್ಯದಲ್ಲಿ ಮುಂದುವರಿಯಲು ಬಿಡಬಾರದು ಎಂದಿದ್ದಾರೆ.

 

 

ಸರಳವಾಗಿ ಹೇಳುವುದಾದರೆ ಭವಿಷ್ಯದಲ್ಲಿ ಇಂಥಾ ಕರಾರಿಗೆ ಅವಕಾಶ ಕೊಡಕೂಡದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ, ನೀತಿ ಆಯೋಗ ಮತ್ತು ಇತರೇ ಸಚಿವಾಲಯಗಳು ಏಕಾಭಿಪ್ರಾಯ ಹೊಂದಿದ್ದವು.

 

 

ಇದಕ್ಕೆ ಪರಿಹಾರವೇನು ಎಂದು ಚರ್ಚಿಸಿದ ಅಧಿಕಾರಿ ಗಣ, ಈ ಹೊಸ ಕಲ್ಲಿದ್ದಲು ಕಾನೂನಿನ ಸೆಕ್ಷನ್‌ 11 ನ್ನು ಗಮನಿಸಿತು. ಈ ಸೆಕ್ಷನ್ನಿನ ಪ್ರಕಾರ ರಾಜ್ಯ ಕಂಪೆನಿಗಳು ಕಲ್ಲಿದ್ದಲು ಹಗರಣದ ಕಾಲದ ಗಣಿ ಅಭಿವೃದ್ಧಿ, ನಿರ್ವಹಣಾ  ಕಂಪೆನಿಗಳನ್ನೇ ಪುನರ್‌ ನೇಮಿಸುವ ಅಧಿಕಾರ ಹೊಂದಿದ್ದವು. ಆದರೆ ಹೀಗೆ ಮುಂದುವರಿದ ಗುತ್ತಿಗೆ ಪಡೆದ ಏಕೈಕ ಉದಾಹರಣೆ ಅದಾನಿ ಮತ್ತು ರಾಜಸ್ತಾನ ವಿದ್ಯುತ್‌ನಿಗಮದ್ದಾಗಿತ್ತು.

 

ಹೀಗಾಗಿ ಅಧಿಕಾರಿಗಳು “ಈ ಕಾನೂನನ್ನು ಬದಲಾಯಿಸಬೇಕಿಲ್ಲ; ಆದರೆ ಭವಿಷ್ಯದ ಒಪ್ಪಂದಗಳಲ್ಲಿ ಇದನ್ನು ನಿಷೇಧಿಸುವ” ಒಂದು ಷರತ್ತನ್ನು ಸೇರಿಸಿದರು! ಅಂದರೆ ಅದಾನಿಯ ವ್ಯವಹಾರಕ್ಕೆ ತೊಂದರೆಯಾಗದಂತೆ ಈ ಷರತ್ತನ್ನು ಸೇರಿಸಲಾಯಿತು. ಈ ಬಗ್ಗೆ ಯಾವುದೇ ಸಮರ್ಥನೆಯೂ ಸರಕಾರದಿಂದ ಬರಲಿಲ್ಲ!

 

 

ಆದರೆ ಪ್ರಧಾನ ಮಂತ್ರಿ ಕಾರ್ಯಾಲಯದ ಪಾರದರ್ಶಕತೆಯ ಕಾಳಜಿಗೆ ಸ್ಪಂದಿಸಲು ಈ ಅಧಿಕಾರಿಗಳು, “ ಹೊಸ ಒಪ್ಪಂದಗಳಲ್ಲಿ ಗಣಿ ಅಭಿವೃದ್ಧಿ ನಿರ್ವಹಣಾ ಗುತ್ತಿಗೆಯು ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ನಡೆಯಬೇಕು” ಎಂದು ಹೇಳಿ ತಿಪ್ಪೆ ಸಾರಿಸಿತು. ಅದಾನಿಯವರಿಗೆ ವಿಶೇಷ ರಿಯಾಯಿತಿ ತೋರಿಸಲಾಯಿತು.

 

 

ಈ ಬಗ್ಗೆ ಅದಾನಿ ಕಂಪೆನಿಗೆ ಕೇಳಲಾದ ಪ್ರಶ್ನೆಗಳಿಗೆ ಅದಾನಿ ಕಂಪೆನಿಯ ವಕ್ತಾರರು ಎಲ್ಲವೂ ಪಾರದರ್ಶಕವಾಗಿ ನಿಯಮಾನುಸಾರ ನಡೆದಿದೆ. ಈ ಪ್ರಕ್ರಿಯೆ ಬಗ್ಗೆ ಇನ್ನೇನಾದರೂ ಕೇಳುವುದಿದ್ದರೆ ಸಂಬಂಧಿಸಿದ ಇಲಾಖೆಯಲ್ಲಿ ಕೇಳಿ ಎಂದು ಉತ್ತರ ಕೊಟ್ಟರು. ಕಲ್ಲಿದ್ದಲು ಸಚಿವಾಲಯವಾಗಲೀ, ಪ್ರಧಾನ ಮಂತ್ರಿ ಕಾರ್ಯಾಲಯವಾಗಲೀ, ನೀತಿ ಆಯೋಗವಾಗಲೀ ಇದಕ್ಕೆ ಉತ್ತರ ಕೊಡುವ ಗೋಜಿಗೇ ಹೋಗಲಿಲ್ಲ!
ಅದಾನಿಗೆ ಇನ್ನೊಂದು ವಿಶೇಷ ಅನುಕೂಲ!

 

ಈ ವಿಶೇಷ “ ನಿರ್ಲಕ್ಷ್ಯ”ದಲ್ಲಿ ಅದಾನಿಗೆ ಹಂಚಿಕೆ ಮಾಡಿದ ಇನ್ನೊಂದು ಗಣಿ ವಿವರವನ್ನು ಕಲ್ಲಿದ್ದಲು ಸಚಿವಾಲಯ ನೀಡಲೇ ಇಲ್ಲ! ವಸುಂಧರಾ ರಾಜೇ ಸರಕಾರ ಇನ್ನೊಂದು ಕಲ್ಲಿದ್ದಲು ಬ್ಲಾಕನ್ನು ಅದಾನಿಗೆ ನೀಡಲು ತಾಂತ್ರಿಕ ಅಡ್ಡದಾರಿ ಬಳಸಿತು. ಪರ್ಸಾ ಈಸ್ಟ್‌ಬ್ಲಾಕ್‌ನ ಪಕ್ಕದಲ್ಲೇ ಇದ್ದ ಪರ್ಸಾಕಲ್ಲಿದ್ದಲು ಪ್ರದೇಶದಲ್ಲಿ ಅಂದಾಜು 200 ಮಿಲಿಯನ್‌ಟನ್‌ ಕಲ್ಲಿದ್ದಲು ಇದ್ದು, ಇದನ್ನು ಮೂಲದಲ್ಲಿ ಛತ್ತೀಸಗಡದ ವಿದ್ಯುತ್‌ ಉತ್ಪಾದನಾ ಕಂಪೆನಿಗೆ ನೀಡಲಾಗಿತ್ತು. ಛತ್ತೀಸಗಡದ ಸರಕಾರದ ಮಾಲಿಕತ್ವದ ಕಂಪೆನಿ ಇದು. ಆಗ ಆಡಳಿತ ನಡೆಸುತ್ತಿದ್ದ ಭಾಜಪ ಸರಕಾರ 2010 ರಲ್ಲಿ ಅದಾನಿ ಜೊತೆ ಜಂಟಿ ಕಂಪೆನಿ ಸೃಷ್ಟಿಸಿತು. ಈ ಕಂಪೆನಿ ಕಲ್ಲಿದ್ದಲು ಅಭಿವೃದ್ಧಿ ಮತ್ತು ನಿರ್ವಹಣೆಯ ಪಾತ್ರ ವಹಿಸಿತು.

 

ಸುಪ್ರೀಂ ಕೋರ್ಟ್‌ಈ ಹಂಚಿಕೆಗಳನ್ನು ರದ್ದು ಮಾಡಿದ ಮೇಲೆ ಈ ಬ್ಲಾಕ್‌ಹರಾಜು/ ಹಂಚಿಕೆಗೆ ಮುಕ್ತವಾಗಿತ್ತು. ಅದಾನಿ ಎಂಟರ್‌ಪ್ರೈಸಸ್‌ ಈ ಬ್ಲಾಕ್‌ ಹಂಚಿಕೆಗೆ ಅರ್ಜಿ ಹಾಕುವಂತೆ ರಾಜಸ್ತಾನ ಸರಕಾರ ವಿದ್ಯುತ್‌ಸರಬರಾಜು ಕಂಪೆನಿಗೆ ಶಿಫಾರಸು ಮಾಡಿತು. ಈ “ ಶಿಫಾರಸ್ಸಿನ ಆಧಾರದ” ಮೇಲೆ ರಾಜಸ್ತಾನ ವಿದ್ಯುತ್‌ವಿತರಣಾ ನಿಗಮ ಈ ಬ್ಲಾಕ್‌ನ್ನು ತನಗೆ ಹಂಚಿಕೆ ಮಾಡುವಂತೆ ಅರ್ಜಿ ಹಾಕಿತು.

 

ಮಾರ್ಚ್‌2015 ಕ್ಕೆ ರಾಜಸ್ತಾನದ ನಿಗಮ ಈ ಬ್ಲಾಕನ್ನು ಪಡೆಯಿತು. ಈ ಅವಧಿಯಲ್ಲೂ ರಾಜಸ್ತಾನ ಮತ್ತು ಛತ್ತೀಸಗಢಗಳಲ್ಲಿ ಭಾಜಪ ಸರಕಾರಗಳಿದ್ದವು. ಪ್ರಧಾನ ಮಂತ್ರಿ ಕಾರ್ಯಾಲಯದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಯಾವುದೇ ಹರಾಜು ಪ್ರಕ್ರಿಯೆ ಇಲ್ಲದೇ ರಾಜಸ್ತಾನ ವಿದ್ಯುತ್‌ ಸರಬರಾಜು ನಿಗಮ ಅದಾನಿ ನಿಯಂತ್ರಿತ ಜಂಟಿ ಕಂಪೆನಿಗೆ ಈ MDO ಗುತ್ತಿಗೆ ವಹಿಸಿತು.

 

ಒಂದು ಸರಕಾರದಿಂದ ಇನ್ನೊಂದು ಸರಕಾರದ ನಿಗಮಕ್ಕೆ ಈ ಕಲ್ಲಿದ್ದಲು ಬ್ಲಾಕ್‌ಕೈ ಬದಲಾಯಿಸಿದಾಗಲೂ ಅದಾನಿ ಕಂಪೆನಿ ಅಭಿವೃದ್ಧಿ& ನಿರ್ವಹಣೆ ಗುತ್ತಿಗೆದಾರನಾಗಿ ಮುಂದುವರಿಯಿತು!

 

ಈ  ಅಭೂತಪೂರ್ವ ನಿಯಮದ ಏಕೈಕ ಲಾಭಾರ್ಥಿ 2021 ಮಾರ್ಚ ವರೆಗೆ ಅದಾನಿ ಮಾತ್ರ ಎಂಬುದು ಗಮನಿಸಬೇಕು. ಭವಿಷ್ಯದಲ್ಲಿ ಇಂಥಾ ಒಪ್ಪಂದ ಕೂಡದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದಾಗಲೂ ಅದಾನಿಗೆ ಮಾತ್ರ  ಈ ನಿಯಮದಿಂದ ವಿನಾಯತಿ ನೀಡಲಾಗಿತ್ತು.

 

ಅಕ್ಟೋಬರ್‌ 2020 ರಲ್ಲಿ ಮೋದಿ ಸರಕಾರದ ಅಧಿಕಾರಿಗಳು ಈಗಾಗಲೇ ಇರುವ ಅದಾನಿ ಗುತ್ತಿಗೆ ಹೊರತುಪಡಿಸಿ ಹೊಸ ಒಪ್ಪಂದಗಳೆಲ್ಲಾ ಹರಾಜು ಮೂಲಕವೇ ನಡೆಯಬೇಕು ಎಂದು ನಿರ್ಧರಿಸಿದ್ದರು. ಆದರೆ ಭಾಜಪ ಆಳ್ವಿಕೆಯ ರಾಜ್ಯಗಳಲ್ಲೇ ಇದರ ಉಲ್ಲಂಘನೆಯಾಗಿ ಅದಾನಿಗೆ ಇನ್ನೊಂದು ಗೊತ್ತಿಗೆ ನೀಡಲಾಯಿತು.

 

ಮಾರ್ಚ್‌2021 ರಂದು ಭಾಜಪ ಆಡಳಿತ ನಡೆಸುತ್ತಿರುವ ಕರ್ನಾಟಕದಲ್ಲಿ ಇಂಥಾದ್ದೇ ಉಲ್ಲಂಘನೆಯ ಪ್ರಸ್ತಾಪವಾಯಿತು. ಕರ್ನಾಟಕ ಸರಕಾರದ ಕರ್ನಾಟಕ ಪವರ್‌ಕಾರ್ಪೋರೇಶನ್‌ಗೆ ದಕ್ಕಿದ್ದ ಕಲ್ಲಿದ್ದಲು ಬ್ಲಾಕನ್ನು ಈ ಹಿಂದೆ ಕೊಲ್ಕತ್ತಾದ EMTA ಎಂಬ ಕಂಪೆನಿಗೆ ಅಭಿವೃದ್ಧಿ & ನಿರ್ವಹಣೆ ಗುತ್ತಿಗೆ ನೀಡಲಾಗಿತ್ತು. ಈಗ ಮತ್ತೆ ಅದೇ ಕಂಪೆನಿಯನ್ನು ಗುತ್ತಿಗೆದಾರನನ್ನಾಗಿಸಲು ಕರ್ನಾಟಕ ಸರಕಾರ ಹೊರಟಿದೆ.

 

ಅಚ್ಚರಿ ಎಂದರೆ ಕಲ್ಲಿದ್ದಲು ಹಗರಣದಲ್ಲಿ ಅಪಾರ ಅವ್ಯವಹಾರ ನಡೆಸಿದೆ ಎಂದು ಜಾರಿ ನಿರ್ದೇಶನಾಲಯವು ಈ ಕಂಪೆನಿಯ ಮೇಲೆ ಧಾಳಿ ನಡೆಸಿ ೨೦೦ ಕೋಟಿ ರೂ. ಸ್ವತ್ತನ್ನು ಅಮಾನತುಗೊಳಿಸಿ, ಜಫ್ತಿ ಮಾಡಿತ್ತು. ಇಂಥಾ ಕಂಪೆನಿ ಜೊತೆ ಕರ್ನಾಟಕದ ಭಾಜಪ ಸರಕಾರ ಮತ್ತೆ ವ್ಯವಹಾರ ಕುದುರಿಸಿದೆ!

 

ಈ ಪ್ರಸ್ತಾಪಕ್ಕೂ ತನಗೂ ಯಾವ ಸಂಬಂಧವೂ ಇಲ್ಲ ಎಂದು ಕೇಂದ್ರ ಸರಕಾರವು ಕೈ ತೊಳೆದುಕೊಂಡು, ಇದು ರಾಜ್ಯ ಸರಕಾರದ ವಿವೇಚನೆ ಎಂದಿತು.!!!

 

                                                                                                          ಅನುವಾದ; ಸುರೇಶ್‌ ಕಂಜರ್ಪಣೆ

the fil favicon

SUPPORT THE FILE

Latest News

Related Posts