3,092 ಎಕರೆ ಡಿನೋಟಿಫಿಕೇಷನ್‌; ಕಂದಾಯ ಇಲಾಖೆ ಪ್ರಸ್ತಾವನೆ ತಿರಸ್ಕರಿಸಿದ ಆರ್ಥಿಕ ಇಲಾಖೆ

photo credit;rashokofficialtwitter account

ಬೆಂಗಳೂರು; ರಾಜ್ಯದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಚಳ್ಳಕೆರೆ ಸೇರಿದಂತೆ ಇಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ 23,189 ಎಕರೆ 8 ಗುಂಟೆ ವಿಸ್ತೀರ್ಣದ ಅಮೃತ ಮಹಲ್‌ ಕಾವಲ್‌ ಜಮೀನುಗಳ ಪೈಕಿ ಅರಣ್ಯ ಜಮೀನಿನ ವ್ಯಾಪ್ತಿಗೆ ಒಳಪಡದ 3,092 ಎಕರೆ ವಿಸ್ತೀರ್ಣದ ಜಮೀನುಗಳನ್ನು ಡಿ ನೋಟಿಫಿಕೇಷನ್‌ ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ತಿರಸ್ಕರಿಸಿದೆ.

 

ಅಮೃತ್‌ ಮಹಲ್‌ ತಳಿಯ ರಾಸುಗಳ ಮೇವಿನ ಉದ್ದೇಶಕ್ಕಾಗಿ ಇರುವ ಜಮೀನುಗಳನ್ನೇ ಅಮೃತ್‌ ಮಹಲ್‌ ಕಾವಲು ಶೀರ್ಷಿಕೆಯಿಂದ ತಗ್ಗಿಸುವುದು ಮತ್ತು ಈ ಜಮೀನುಗಳನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಕಂದಾಯ ಇಲಾಖೆಗೆ ವರ್ಗಾಯಿಸುವ ಸಂಬಂಧದ ಕಡತಕ್ಕೆ ಚಿರತೆ ವೇಗ ದೊರೆತಿರುವ ಹೊತ್ತಿನಲ್ಲೇ ಆರ್ಥಿಕ ಇಲಾಖೆಯು ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಮುನ್ನೆಲೆಗೆ ಬಂದಿದೆ.

 

ಅರಣ್ಯ ಜಮೀನು ಎಂಬ ಪರಿಭಾಷೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದಾದಲ್ಲಿ ಮಾತ್ರ ಅತ್ಯಂತ ವಿಶೇಷ ಪ್ರಕರಣಗಳಲ್ಲಿ ಸರ್ಕಾರವು ತನಗಿರುವ ಅಧಿಕಾರವನ್ನು ಚಲಾಯಿಸಿ ಅಮೃತ್‌ ಮಹಲ್ ಕಾವಲು ಜಮೀನುಗಳನ್ನು ಡಿ ನೋಟಿಫೈ ಮಾಡಬಹುದು ಎಂದು ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದ ಬೆನ್ನಲ್ಲೇ ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯಕ್ಕೆ (ಆಇ217 ವೆಚ್ಚ-7/2023, ಆರ್‌ಡಿ 50 ಎಲ್‌ಜಿಸಿ 2022 ದಿನಾಂಕ 22-02-2023) ಹೆಚ್ಚು ಮಹತ್ವ ಬಂದಿದೆ. ಹೆಚ್ಚಿನ ಮಹತ್ವ ಬಂದಂತಾಗಿದೆ.

 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿನ 3,092 ಎಕರೆ ಅಮೃತ್‌ ಮಹಲ್‌ ಕಾವಲು ಜಮೀನುಗಳನ್ನು ಡಿನೋಟಿಫಿಕೇ‍ಷನ್‌ ಮಾಡುವ ಸಂಬಂಧ ಪಶುಪಾಲನೆ, ಮೀನುಗಾರಿಕೆ ಇಲಾಖೆ ಈಗಾಗಲೇ ಅಭಿಪ್ರಾಯ ನೀಡಿದೆ. ಈ ಹಿಂದೆ ಹೊರಡಿಸಿದ್ದ ಸುತ್ತೋಲೆ, ಹೈಕೋರ್ಟ್‌ ಹಲವು ಸಂದರ್ಭಗಳಲ್ಲಿ ನೀಡಿರುವ ನಿರ್ದೇಶನಗಳನ್ನೂ ಬದಿಗಿರಿಸಲು ಹೊರಟಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ನ್ಯಾಷನಲ್‌ ಗ್ರೀನ್‌ ಟ್ರಿಬ್ಯೂನಲ್‌ ಹಾಗೂ ಉಚ್ಛ ನ್ಯಾಯಾಲಯದ ಆದೇಶದನ್ವಯ ಅಮೃತ್‌ ಮಹಲ್‌ ಕಾವಲ್‌/ಜಮೀನುಗಳೆಂದು ನಮೂದಾಗಿರುವ ಯಾವುದೇ ಜಮೀನುಗಳನ್ನು ಬೇರಾವುದೇ ಉದ್ದೇಶಕ್ಕಾಗಿ ಮಂಜೂರು ಮಾಡುವುದಕ್ಕಾಗಿ ಅವಕಾಶವಿರುವುದಿಲ್ಲವಾದ್ದರಿಂದ ಸದರಿ ಪ್ರಸ್ತಾವನೆಗೆ ಆರ್ಥಿಕ ಸಹಮತಿ ಇಲ್ಲ,’ ಎಂದು ಆಡಳಿತ ಇಲಾಖೆಗೆ 2023ರ ಫೆ.22ರಂದು ತನ್ನ ಅಭಿಪ್ರಾಯವನ್ನು ತಿಳಿಸಿದೆ. ಈ ಅಭಿಪ್ರಾಯದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಾಮೂಹಿಕ ಬೇಸಾಯ ಸಹಕಾರಿ ಸಂಘಗಳಿಗೆ ಮಂಜೂರಾದ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರಿಗೇ ಮಂಜೂರು ಮಾಲು ಕ್ರಮ ಕೈಗೊಳ್ಳಬೇಕು ಎಂದು ಹೊಳಲ್ಕೆರೆ ಶಾಸಕರು ಮೌಖಿಕವಾಗಿ ಅಧಿಕಾರಿಗಳಿಗೆ ಸೂಚಿಸಿದ್ದರು.

 

ಅಮೃತ ಮಹಲ್ ಕಾವಲ್‌ ಜಮೀನುಗಳನ್ನು ಡಿನೋಟಿಫೈ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವಾದರೂ ಅಮೃತ್‌ ಮಹಲ್ ಕಾವಲು ಜಮೀನುಗಳು ಅರಣ್ಯ ಜಮೀನು ಎಂಬ ಪರಿಭಾಷೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದಾದಲ್ಲಿ ಮಾತ್ರ ಅತ್ಯಂತ ವಿಶೇಷ ಪ್ರಕರಣಗಳಲ್ಲಿ ಸರ್ಕಾರವು ತನಗಿರುವ ಅಧಿಕಾರವನ್ನು ಚಲಾಯಿಸಿ ಅಮೃತ್‌ ಮಹಲ್ ಕಾವಲು ಜಮೀನುಗಳನ್ನು ಡಿ ನೋಟಿಫೈ ಮಾಡಬಹುದು ಎಂದು ಕಾನೂನು ಇಲಾಖೆಯು ಅಭಿಪ್ರಾಯ ವ್ಯಕ್ತಪಡಿಸಿತ್ತು.

 

ಕಾನೂನು ಇಲಾಖೆಯು ನೀಡಿದ್ದ  ಅಭಿಪ್ರಾಯವನ್ನಾಧರಿಸಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ವ್ಯಾಪ್ತಿಯಲ್ಲಿನ ವಿವಿಧ ಸಾಮೂಹಿಕ ಬೇಸಾಯ ಸಹಕಾರ ಸಂಘಗಳ ಹೆಸರಿನಲ್ಲಿರುವ ಜಮೀನುಗಳನ್ನು ಸರ್ಕಾರಕ್ಕೆ ಹಿಂಪಡೆದು ಅದನ್ನು ಸಾಗುವಳಿದಾರರಿಗೆ ಮಂಜೂರು ಮಾಡುವ ಪ್ರಸ್ತಾವನೆಗೆ ಕಂದಾಯ ಸಚಿವರ ಆದೇಶ ಕೋರಿ ಕಡತ ಸಲ್ಲಿಸಿತ್ತು.

 

‘ಹೊಳಲ್ಕೆರೆ ತಾಲೂಕಿನ 4 ಗ್ರಾಮಗಳಲ್ಲಿ ಸೊಸೈಟಿಗೆ ಸೇರಿದ ಭೂಮಿಯನ್ನು ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಭಿಪ್ರಾಯ ಪಡೆದು ಸಚಿವ ಸಂಪುಟಕ್ಕೆ ಮಂಡಿಸಬೇಕು,’ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಪರಿಷತ್‌ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಅವರು ಇದನ್ನು ವಿರೋಧಿಸಿದ್ದರು.

 

ಈ ಮಧ್ಯೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಅವರು ಹೊಳಲ್ಕೆರೆ ತಾಲೂಕಿನ 4 ಗ್ರಾಮಗಳಲ್ಲಿನ ಸೊಸೈಟೆಗೆ ಸೇರಿದ ಜಮೀನುಗಳನ್ನು ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳಲು ಕಡತವನ್ನು (ಆರ್‌ಡಿ 50) ತಕ್ಷಣವೇ ಮುಖ್ಯಮಂತ್ರಿಗೆ ಮಂಡಿಸಬೇಕು ಎಂದೂ ಟಿಪ್ಪಣಿ ಹೊರಡಿಸಿದ್ದರು.

 

ಹೊಳಲ್ಕೆರೆ ತಾಲೂಕಿನ ಕಸಬಾ ಗುಂಡೇರಿ ಕಾವಲ್‌, ರಾಮಗಿರಿ ಹೋಬಳಿಯ ವನಕೆ ಮರಡಿಕಾವಲ್‌, ತಾಳಿಕಟ್ಟೆ ಕಾವಲ್‌, ಕಸಬಾ ಹೋಬಳಿಯ ಅರೇಹಳ್ಳಿ ಕಾವಲ್‌, ಆರ್‌ ನುಲೇನೂರು ಗ್ರಾಮಗಳಲ್ಲಿ ಒಟ್ಟಾರೆ 3,092.59 ಎಕರೆ ಜಮೀನು ಅಮೃತ್‌ ಮಹಲ್‌ ಕಾವಲ್‌ ಹೆಸರಿನಲ್ಲಿದೆ. ಈ ಜಮೀನುಗಳನ್ನು ವಿವಿಧ ಸಹಕಾರ ಸಂಘಗಳಿಗೆ 1956, 1960, 1967ರ ವಿವಿಧ ದಿನಾಂಕಗಳಲ್ಲಿ ಅಂದಿನ ಉಪ ವಿಭಾಗಾಧಿಕಾರಿಗಳು ಮಂಜೂರು ಮಾಡಿದ್ದಾರಾದರೂ ಯಾವ ನಿಯಮಗಳಡಿಯಲ್ಲಿ ಮಂಜೂರು ಮಾಡಿದ್ದರು ಎಂಬ ಕುರಿತು ಯಾವುದೇ ದಾಖಲೆಗಳು ಇಲ್ಲ.

 

ಗುಂಡೇರಿ ಕಾವಲ್‌ನ ಸರ್ವೇ ನಂಬರ್‌ 27/1ರಲ್ಲಿ 400 ಎಕರೆ (ಎಎಫ್‌23/59-60 ದಿನಾಂಕ 6-11-1960)ಯನ್ನು ಮಹಾತ್ಮಗಾಂಧಿ ಕೋ ಆಪರೇಟೀವ್‌ ಕಲೆಕ್ಷನ್‌ ಫಾರ್ಮಿಂಗ್ ಸೊಸೈಟಿ, ರಾಮಗಿರಿ ಹೋಬಳಿಯ ವನಕೆ ಮರಡಿ ಕಾವಲ್‌ನಲ್ಲಿ ಸರ್ವೆ ನಂಬರ್‌ 1ರಲ್ಲಿ 100 ಎಕರೆಯನ್ನು ಅನಾಥಸೇವಾ ಟ್ರಸ್ಟ್‌ ಮಲ್ಲಾಡಿಹಳ್ಳಿ, ವನಕೆ ಮರಡಿ ಕಾವಲ್‌ನ ಇದೇ ಸರ್ವೇ ನಂಬರ್‌ನಲ್ಲಿನ 1,125.25 ಎಕರೆಯನ್ನು ವನಕೆ ಮರಡಿ ಕಾವಲ್‌ ಸಾಮೂಹಿಕ ಸೇವಾ ಸಹಕಾರ ಸಂಘ, ರಾಮಗಿರಿ ಹೋಬಳಿಯ ತಾಳಿಕಟ್ಟೆ ಕಾವಲ್‌ನ ಸರ್ವೆ ನಂಬರ್‌ 41ರಲ್ಲಿ 807-34 ಎಕರೆಯನ್ನು ಕಾರ್ಯ ವಲ್ಲಭ ಸೇವಾ ಬೇಸಾಯ ಸಹಕಾರಿ ಸಂಘಕ್ಕೆ ಮಂಜೂರಾಗಿದೆ.

 

ಕಸಬಾ ಹೋಬಳಿಯ ಅರೇಹಳ್ಳಿ ಕಾವಲ್‌ನ ಸರ್ವೆ ನಂಬರ್‌ 1ರಲ್ಲಿನ 325 ಎಕರೆಯನ್ನು (ಎಎಫ್‌ 60 ವಿಎಲ್‌ಎಸ್‌ 67-68, ದಿನಾಂಕ 27-09-1967) ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ, ರಾಮಗಿರಿಯ ಆರ್‌ ನುಲೇನೂರು ಸರ್ವೇ ನಂಬರ್ 20ರಲ್ಲಿ 255 ಎಕರೆಯನ್ನು (ಎಎಫ್‌ 60, ವಿಎಲ್‌ಎಸ್‌ 67-68 ದಿನಾಂಕ 27-09-1967)ರಂದು ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ, ಇದೇ ಗ್ರಾಮದ ಸರ್ವೆ ನಂಬರ್‌ 19ರಲ್ಲಿ 80 ಎಕರೆ (ಎಎಫ್‌ 60 ವಿಎಲ್‌ಎಸ್‌ 67-68 ದಿನಾಂಕ 27-09-1967)ರಂದು ಮಂಜೂರಾಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

 

ಈ ಪೈಕಿ ಗುಂಡೇರಿಕಾವಲ್‌ನಲ್ಲಿರುವ ಮಹಾತ್ಮಗಾಂಧಿ ಕೋ ಆಪರೇಟೀವ್‌ ಕಲೆಕ್ಷನ್‌ ಫಾರ್ಮಿಂಗ್‌ ಸೊಸೈಟಿ ಲಿಮಿಟೆಡ್‌ನ್ನು 2014ರ ಸೆ.29ರಂದು ಸಮಾಪನೆಗೊಳಿಸಿದೆ. ವನಕೆ ಮರಡಿ ಕಾವಲ್‌ ಸಾಮೂಹಿಕ ಸೇವಾ ಸಹಕಾರ ಸಂಘವು 2021ರ ಏಪ್ರಿಲ್‌ 1ರಂದು ಸ್ಥಗಿತಗೊಂಡಿದ್ದು ನಷ್ಟದಲ್ಲಿದೆ. ಕಾರ್ಯವಲ್ಲಭ ಸೇವಾ ಬೇಸಾಯ ಸಹಕಾರಿ ಸಂಘ ಮತ್ತು ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘವು 2014ರ ಸೆ.29ರಂದು ಸಮಾಪನೆಗೊಂಡಿದೆ. ಆರ್‌ ನುಲೇನೂರಿನಲ್ಲಿರುವ ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘವು ನೋಂದಣಿಯೇ ಆಗಿಲ್ಲ ಎಂಬುದು ಗೊತ್ತಾಗಿದೆ.

 

ಸಮಾಪನೆಗೊಂಡಿರುವ ಸಹಕಾರ ಸಂಘಗಳಿಗೆ ಮಂಜೂರಾಗಿರುವ ಜಮೀನುಗಳಲ್ಲಿ ಕೆಲವು ಸಾಗುವಳಿದಾರರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಈ ಜಂಇನುಗಳು ಸಹಕಾರ ಸಂಘಗಳ ಹೆಸರಿನಲ್ಲಿರುವ ಇರುವದುರಿಂದ ನಮೂನೆ 50, 53 ಮತ್ತು 57ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

 

‘ಹೊಳಲ್ಕೆರೆ ತಾಲೂಕಿನ ಪ್ರಸ್ತಾಪಿತ ಜಮೀನುಗಳಲ್ಲಿ ಸಹಕಾರ ಸಂಘಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲದಿರುವುದು ಹಾಗೂ ಈ ಜಮೀನುಗಳಿಂದ ಸಂಘಗಳಿಗೆ/ಸರ್ಕಾರಕ್ಕೆ ಯಾವುದೇ ಕಂದಾಯ ಅಥವಾ ಆದಾಯ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಸದರಿ ಜಮೀನುಗಳನ್ನು ಸರ್ಕಾರಕ್ಕೆ ಹಿಂಪಡೆಯಲು ಕ್ರಮಕೈಗೊಳ್ಳಬಹುದು,’ ಎಂದು ಹೊಳಲ್ಕೆರೆ ತಹಶೀಲ್ದಾರ್‌ ವರದಿ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅಮೃತ್‌ ಮಹಲ್‌ ಕಾವಲ್‌ ಜಮೀನು ಅಮೃತ್‌ ಮಹಲ್‌ ತಳಿಯ ರಾಸುಗಳ ಮೇವಿನ ಉದ್ದೇಶಕ್ಕಾಗಿದೆ. ಈ ಜಮೀನಿನ ವಿಸ್ತೀರ್ಣ ಕಡಿಮೆಯಾಗುತ್ತಿರುವುದರಿಂದ ಉಳಿದ ಅಮೃತ್‌ ಮಹಲ್ ಕಾವಲ್‌ ಜಮೀನನ್ನು ಹುಲ್ಲುಗಾವಲು ಪ್ರದೇಶವಾಗಿ ಸಂರಕ್ಷಿಸಲು 1979ರ ಮಾರ್ಚ್‌ 22ರಂದೇ ಅಂದಿನ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ ನಿರ್ದೇಶಿಸಿದ್ದರು.

 

ಅದೇ ರೀತಿ ವಿಶೇಷ ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಿರುವ ಜಮೀನುಗಳಲ್ಲಿ ಆಗಿರುವ ಅತಿಕ್ರಮಣಗಳನ್ನು ಸಕ್ರಮಗೊಳಿಸುವುದು ನಿಯಮಗಳಿಗೆ ವಿರುದ್ಧವಾಗಿರುವ ಕಾರಣ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು ಇಂತಹ ಪ್ರಕರಣಗಳನ್ನು ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಕರ್ನಾಟಕ ಭೂ ಕಂದಾಯ ನಿಯಮ 108-ಕೆ ಅನ್ವಯ ನಿಯಮಗಳಿಗೆ ಅನುಸಾರವಾಗಿ ಸೂಕ್ತ ಕ್ರಮ ಕೈಗೊಂಡು ಒಂದು ವೇಳೆ ನಿಯಮಗಳಿಗೆ ವಿರುದ್ಧವಾಗಿ ಅಮೃತ್‌ ಮಹಲ್‌ ಕಾವಲ್‌ ಜಮೀನುಗಳನ್ನು ಸಕ್ರಮಗೊಳಿಸಿದ್ದರೇ ಅಂತಹ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು 1995ರ ಜನವರಿ 16ಮತ್ತು 17ರಂದು ಕಂದಾಯ ಇಲಾಖೆಯು ಸುತ್ತೋಲೆ ಹೊರಡಿಸಿತ್ತು.

SUPPORT THE FILE

Latest News

Related Posts