ಹೊಳಪು ಕಳೆದುಕೊಂಡವೇ ವಜ್ರಾಭರಣಗಳು, ಸೀರೆಗಳಿಗೆ ಮೆತ್ತಿಕೊಂಡ ಧೂಳು;ವಿಲೇವಾರಿಗೇಕೆ ವಿಳಂಬ?

photo credit;barandbenchkannada

ಬೆಂಗಳೂರು; ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ ವಜ್ರ ಖಚಿತ ಆಭರಣಗಳು ಸೇರಿದಂತೆ ಅಪಾರ ಮೌಲ್ಯ ಬೆಲೆಬಾಳುವ ವಸ್ತುಗಳನ್ನು ಜಫ್ತಿ ಮಾಡಿದ ನಂತರ ವಿಲೇವಾರಿ ಮಾಡುವ ಸಂಬಂಧ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿ ಮೂರ್ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರವು ಇದುವರೆಗೂ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ.

 

ಜಯಲಲಿತಾ ಅವರಿಂದ ಜಫ್ತಿ ಮಾಡಿದ ಆಭರಣಗಳು, ನಗದು, ಮತ್ತಿತರ ಉಪಕರಣಗಳನ್ನು ವಿಧಾನಸೌಧದ ನೆಲಮಹಡಿಯಲ್ಲಿರುವ ಖಜಾನೆ ಶಾಖೆಯಲ್ಲಿ ಹಲವು ವರ್ಷಗಳಿಂದಲೂ ಇರಿಸಲಾಗಿದೆ. ಈ ಎಲ್ಲಾ ಆಭರಣ ಮತ್ತು ಉಪಕರಣಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡದಿರುವ ರಾಜ್ಯ ಸರ್ಕಾರದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಸೀರೆ, ಶಾಲು ಹಾಗೂ ಚಪ್ಪಲಿಗಳನ್ನು ಬಳಸದೇ ಇಟ್ಟರೆ ಅವುಗಳ ಗುಣಮಟ್ಟ ಕುಸಿಯಲಿದ್ದು, ಉಪಯೋಗಕ್ಕೆ ಬರುವುದಿಲ್ಲ ಎಂದು ಜವಳಿ ತಜ್ಞರು ಅಭಿಪ್ರಾಯಟ್ಟಿದ್ದಾರೆ. ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಈ ಎಲ್ಲಾ ವಸ್ತುಗಳು ಕಳೆದ 26 ವರ್ಷಗಳಿಂದ ನ್ಯಾಯಾಲಯದ ವಶದಲ್ಲಿವೆ.

 

ಈ ವಸ್ತುಗಳು ನ್ಯಾಯಾಲಯಕ್ಕೆ ಸಾಕ್ಷಿ ಅಥವಾ ಮತ್ತಿತರ ರೂಪದಲ್ಲಿ ಅವಶ್ಯಕತೆ ಇಲ್ಲದಿದ್ದರೆ ಅವುಗಳನ್ನು ವಿಲೇವಾರಿ ಮಾಡಿ, ಅದರಿಂದ ಬರುವ ಹಣವನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬಹುದಿತ್ತು. ವಿಲೇವಾರಿಗೆ ಯಾವುದೇ ಕ್ರಮಕೈಗೊಳ್ಳದ ಕಾರಣ ಖಜಾನೆ ಭಂಡಾರದಲ್ಲಿರುವ ಸೀರೆ ಮತ್ತಿತರೆ ವಸ್ತುಗಳ ಗುಣಮಟ್ಟವೂ ಕುಸಿಯಲಿದೆ. ಅಲ್ಲದೇ ವಜ್ರಖಚಿತ ಅಭರಣಗಳ ಹೊಳಪು ಕೂಡ ದಿನೇದಿನೇ ಕಣ್ಮರೆಯಾಗಲಿದೆ. ಆದರೂ ರಾಜ್ಯ ಸರ್ಕಾರವು ಯಾವುದೇ ಕ್ರಮವಹಿಸುತ್ತಿಲ್ಲ.

 

ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ ಮಾಡುವ ಸಂಬಂಧ 2021ರಲ್ಲೇ ಸೆಷನ್ಸ್‌ ನ್ಯಾಯಾಧೀಶರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಈ ನಿರ್ದೇಶನವನ್ನು ಸರ್ಕಾರವು ಪಾಲಿಸದ ಕಾರಣ ಮಾಹಿತಿ ಹಕ್ಕು ಕಾರ್ಯಕರ್ತ ಟಿ ನರಸಿಂಹಮೂರ್ತಿ ಅವರು ರಾಜ್ಯ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹಲವು ಬಾರಿ ಪತ್ರ ಬರೆದು ಗಮನಸೆಳೆದಿದ್ದರು. ಆದರೂ ಕಾನೂನು ಇಲಾಖೆಯು ಈ ಬಗ್ಗೆ ಗಮನಹರಿಸದ ಕಾರಣ 2023ರ ಮಾರ್ಚ್‌ 9ರಂದು ಮತ್ತೊಂದು ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ವಿಶೇಷ ನ್ಯಾಯಾಲಯ (ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ) ಕರ್ನಾಟಕ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿತ್ತು.

 

ಸಿಬಿಐ ಪ್ರಕರಣಗಳ ನ್ಯಾಯಾಲಯದ ನ್ಯಾಯಾಧೀಶರಾದ ಶಿವರಾಮ್‌ ಅವರು 2021ರ ಜೂನ್‌ 28, ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು 2021ರ ಜುಲೈ 8, ಮತ್ತು ಆಗಸ್ಟ್‌ 19ರಂದು, ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ಅವರು 2021ರ ನವೆಂಬರ್‌ 11 ಮತ್ತು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು 2021ರ ಡಿಸೆಂಬರ್‌ 17, ಎಚ್‌ ಎಕ ಮೋಹನ್‌ ಅವರು 2022ರ ಅಕ್ಟೋಬರ್‌ 12, ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು 2022ರ ಅಕ್ಟೊಬರ್‌ 21ರಂದು ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು. ಆದರೆ ಈ ಯಾವ ನಿರ್ದೇಶನವನ್ನೂ ರಾಜ್ಯ ಸರ್ಕಾರವು ಪಾಲಿಸಿಲ್ಲ ಎಂದು ತಿಳಿದು ಬಂದಿದೆ.

 

ಜಪ್ತಿ ಮಾಡಿರುವ ಜಯಲಲಿತಾ ಅವರ ವಸ್ತುಗಳ ವಿಲೇವಾರಿಗೆ ವಿಚಾರಣಾಧೀನ ನ್ಯಾಯಾಲಯವು ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು. ಪ್ರಕರಣದ ದಾಖಲೆ ಪರಿಶೀಲಿಸಿದಾಗ ವಿಶೇಷ ನ್ಯಾಯಾಲಯವು ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು ಎಂದು ಕೋರಿತ್ತು.

 

‘ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಯಾಗಿದ್ದ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾಗಿರುವ ಸಾವಿರಾರು ಸೀರೆಗಳು, ವಜ್ರ-ವೈಢೂರ್ಯ, ಬೆಳ್ಳಿ-ಬಂಗಾರ, ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಕಾನೂನು ಪ್ರಕಾರ ಅಥವಾ ನ್ಯಾಯಾಲಯದ ವಿವೇಚನೆಯ ಪ್ರಕಾರ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಬೇಕು. ಇದನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬಹುದಾಗಿದೆ,’ ಎಂದು ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಅವರು ಪತ್ರದಲ್ಲಿ ಕೋರಿದ್ದರು.

 

ಜಯಲಲಿತಾ ಅವರ ಚೆನ್ನೈನ ಪೋಯಸ್‌ ಗಾರ್ಡನ್‌ ನಿವಾಸದಿಂದ 11,344 ದುಬಾರಿ ಮೌಲ್ಯದ ಸೀರೆಗಳು, 44 ಹವಾನಿಯಂತ್ರಕಗಳು, 33 ಟೆಲಿಫೋನ್‌/ಇಂಟರ್‌ಕಾಮ್‌, 131 ಸೂಟ್‌ಕೇಸ್‌, 91 ವಾಚ್‌, 27 ಗಡಿಯಾರ, 86 ಫ್ಯಾನ್, 146 ಆಲಂಕಾರಿಕ ಕುರ್ಚಿ, 34 ಟೀಪಾಯಿ, 31 ಟೇಬಲ್‌, 24 ಮಂಚ, 9 ಡ್ರೆಸಿಂಗ್‌ ಟೇಬಲ್‌, ನೇತಾಡುವ 81 ವರ್ಣರಂಜಿತ ದೀಪಗಳು, 20 ಸೋಫಾ ಸೆಟ್‌, 750 ಚಪ್ಪಲಿ, 31 ಡ್ರೆಸ್ಸಿಂಗ್‌ ಟೇಬಲ್‌ ಮಿರರ್‌, 215 ಕ್ರಿಸ್ಟಲ್‌ ಕಟ್‌ ಗ್ಲಾಸ್‌, 3 ಐರಾನ್‌ ಲಾಕರ್‌, 250 ಶಾಲು, 12 ರೆಫ್ರಿಜರೇಟರ್‌, 10 ಟಿವಿ, 8 ವಿಸಿಆರ್‌, 1 ವಿಡಿಯೊ ಕ್ಯಾಮೆರಾ, 4 ಸಿ ಡಿ ಪ್ಲೇಯರ್‌, 2 ಆಡಿಯೊ ಡೆಕ್‌, 24 ಟು ಇನ್‌ ಒನ್‌ ಟೇಪ್‌ರೆಕಾರ್ಡರ್‌, 1,020 ವಿಡಿಯೊ ಕ್ಯಾಸೆಟ್‌ ವಶಪಡಿಸಿಕೊಳ್ಳಲಾಗಿತ್ತು.

 

ಇವುಗಳಲ್ಲದೇ, ಬೆಲೆಬಾಳುವ ಬಳೆ, ಬ್ರೇಸ್‌ಲೆಟ್‌, ಕಿವಿ ಓಲೆ, ಡ್ರಾಪ್ಸ್‌, ನೆಕ್ಲೇಸ್‌, ಮೂಗುತಿ, ಕತ್ತಿ, ಪೀಕಾಕ್‌, ಪನ್ನೀರ್‌ ಸೋಂಬು, ರೋಪ್‌ ಚೈನ್‌, ಸಂದನ ಕಿನ್ನಮ್‌, ಚಿನ್ನದ ಲೇಖನಿ, ಗೋಲ್ಡ್‌ ಶೀಟ್‌, ಗೋಲ್ಡ್‌ ಟ್ರೇ, ಕುಂಕುಮ ಚಿಮಿಲಿ, ಡಾಬು, ಉಂಗುರಗಳು, ಗೋಲ್ಡ್‌ ಕುಸುಮಾಲೈ, ಬೋಲ್ಡ್‌ ಬೆಲ್ಟ್‌, ದೇವರು-ದೇವತೆಗಳ ಚಿನ್ನದ ಮೂರ್ತಿಗಳು, ಕಾಮಾಕ್ಷಿ ವಿಲಕು, ಗೋಲ್ಡ್‌ ಕೀ ಚೈನ್‌, ಗೋಲ್ಡ್‌ ಮ್ಯಾಂಗೊ, ಚಿನ್ನದ ವಾಚು ಸೇರಿದಂತೆ 468 ದುಬಾರಿ ಬೆಲೆಬಾಳುವ ವಸ್ತುಗಳು ಹಾಗೂ 700 ಕೆ ಜಿ ಬೆಳ್ಳಿ ಪದಾರ್ಥಗಳು ಹಾಗೂ 1.93 ಲಕ್ಷ ರೂಪಾಯಿಯನ್ನೂ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದವು.

 

ಈ ಎಲ್ಲಾ ವಸ್ತುಗಳು ಕಳೆದ 26 ವರ್ಷಗಳಿಂದ ನ್ಯಾಯಾಲಯದ ವಶದಲ್ಲಿವೆ. ಈ ವಸ್ತುಗಳು ನ್ಯಾಯಾಲಯಕ್ಕೆ ಸಾಕ್ಷಿ ಅಥವಾ ಮತ್ತಿತರ ರೂಪದಲ್ಲಿ ಅವಶ್ಯಕತೆ ಇಲ್ಲದಿದ್ದರೆ ಅವುಗಳನ್ನು ವಿಲೇವಾರಿ ಮಾಡಿ, ಅದರಿಂದ ಬರುವ ಹಣವನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬಹುದು. ಜಯಲಲಿತಾ ಅವರಿಂದ ಜಫ್ತಿ ಮಾಡಲಾದ ವಸ್ತುಗಳನ್ನು ಹರಾಜಿಗೆ ಇಡುವುದರಿಂದ ಜಯಲಲಿತಾ ಅವರನ್ನು ಅಪಾರವಾಗಿ ಪ್ರೀತಿಸುವ, ಭಾವನಾತ್ಮಕವಾದ ಸಂಬಂಧ ಹೊಂದಿರುವ ಅವರ ಅಭಿಮಾನಿಗಳು ಅವುಗಳನ್ನು ಖರೀದಿಸಬಹುದು. ಇದರಿಂದ ಸಾರ್ವಜನಿಕ ಬಿಡ್‌ ಹಣ ಸಂಗ್ರಹವಾಗಲಿದೆ ಎಂದು ನರಸಿಂಹಮೂರ್ತಿ ಅವರು ಪತ್ರದಲ್ಲಿ ವಿವರಿಸಿದ್ದರು.

 

2014ರ ಸೆಪ್ಟೆಂಬರ್‌ 27ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾ, ಅವರ ಗೆಳತಿ ವಿ ಕೆ ಶಶಿಕಲಾ, ಇಳವರಿಸಿ ಮತ್ತು ಜಯಲಲಿತಾ ಅವರ ಒಂದು ಕಾಲದ ದತ್ತು ಪುತ್ರ ಸುಧಾಕರನ್‌ ಅವರನ್ನು ಭ್ರಷ್ಟಾಚಾರ ಅಪರಾಧಿಗಳು ಎಂದು ಘೋಷಿಸಿತ್ತು. ಅಧೀನ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು.

 

 

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಗರದ ವಿಶೇಷ ನ್ಯಾಯಾಲಯವು ಜಯಲಲಿತಾಗೆ 4 ವರ್ಷ ಜೈಲು ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ 27ರಂದು ಆದೇಶಿಸಿತ್ತು. ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಭಾರತೀಯ ರಿಸರ್ವ್‌ ಬ್ಯಾಕ್‌ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ಆದೇಶ ಮಾಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts